ವೃತ್ತಿಪರ ಕೃಷಿಕರನ್ನು ರೂಪಿಸುವ ಯತ್ನ ಶ್ಲಾಘನೀಯ
ನಮ್ಮ ಶಿಕ್ಷಣ ವ್ಯವಸ್ಥೆ, ಪಠ್ಯಕ್ರಮಗಳು ನಮ್ಮನ್ನು ದ್ವಿತೀಯ ಮತ್ತು ತೃತೀಯ ವಲಯದ ಔದ್ಯೋಗಿಕ ಪರಿಸರಕ್ಕೆ ತಳ್ಳುತ್ತಿದೆ. ಪ್ರಾಥಮಿಕ ವಲಯವಾಗಿರುವ ಕೃಷಿಯಿಂದ ದೂರ ಮಾಡುತ್ತಿದೆ ಎಂಬ ಸ್ಥಿತಿಯ ನಡುವೆಯೇ ಇದೀಗ ರಾಜ್ಯ ಸರಕಾರ ಪ್ರೌಢಶಾಲಾ ಮಕ್ಕಳಿಗೆ ಕೃಷಿ ಪಾಠ ಮಾಡಲು ಮುಂದಾಗಿ ಗಮನ ಸೆಳೆದಿದೆ. ಈ ನಿಟ್ಟಿನಲ್ಲಿ ಸರಕಾರದ ಹೆಜ್ಜೆ ನಿಜಕ್ಕೂ ಸ್ವಾಗತಾರ್ಹ.
ಶಿಕ್ಷಣದಿಂದ ಮೌಲ್ಯಗಳು, ವೈಜ್ಞಾನಿಕ ಮನೋಭಾವ, ಚಿಂತನಶೀಲತೆ, ಜ್ಞಾನ ಸೃಜಿಸಬೇಕು ಎಂಬ ಮೂಲ ಪರಿಕಲ್ಪನೆಗಳಿದ್ದರೂ ಸಹ ಉದ್ಯೋಗವೇ ನಮ್ಮಲ್ಲಿ ಶಿಕ್ಷಣದ ಮಹತ್ವ ಪ್ರಭಾವ ಮತ್ತು ಯಶಸ್ಸನ್ನು ಅಳೆಯುವ ಮಾನದಂಡವಾಗಿ ಬದಲಾಗಿದೆ. ಕಳೆದ ಐದಾರು ದಶಕಗಳಿಂದ ಆಳವಾಗಿ ಬೇರೂರಿರುವ ಶಿಕ್ಷಣದ ಈ ಯಶಸ್ಸಿನ ಮಾಪಕದಲ್ಲಿ ಕೃಷಿಗೆ ಸ್ಥಾನವೇ ಇರಲಿಲ್ಲ. ಓದಿ ಕೃಷಿಕನಾಗುವುದು ಎಂದರೆ ಶಿಕ್ಷಣದ ವೈಫಲ್ಯ ಎಂಬ ರೀತಿಯ ಮೂಢನಂಬಿಕೆಯೇ ಸೃಷ್ಟಿಯಾಗಿದೆ. ಇಂತಹ ಕಾಲಘಟ್ಟದಲ್ಲಿ ಕೃಷಿಯನ್ನು ಶಿಕ್ಷಣದ ವ್ಯಾಪ್ತಿಗೆ ತರುವ ಮೂಲಕ ವೃತ್ತಿಪರ ಕೃಷಿಕರನ್ನು ರೂಪಿಸಲು ಸರಕಾರ ಮುಂದಾಗುತ್ತಿರುವುದು ಪ್ರಶಂಸನೀಯ.
ಹೇಗೆ ಸೇವಾ ಮತ್ತು ಉತ್ಪಾದನಾ ವಲಯದಲ್ಲಿ ವೃತ್ತಿಪರತೆ ತರುವಲ್ಲಿ ಶಿಕ್ಷಣ ಮಹತ್ವದ ಪಾತ್ರ ನಿರ್ವಹಿಸುತ್ತದೆಯೋ ಅದೇ ರೀತಿ ಕೃಷಿಯಲ್ಲಿಯೂ ವೃತ್ತಿಪರತೆ ಅಗತ್ಯವನ್ನು ಮನಗಂಡಿರುವ ಸರಕಾರ ಈ ನಿಟ್ಟಿನಲ್ಲಿ ಮೊದಲ ಹೆಜ್ಜೆಯನ್ನಿಡಲು ಸಿದ್ಧತೆ ನಡೆಸಿದೆ. ಆಧುನಿಕ ಕಾಲದಲ್ಲಿ ‘ಕೃಷಿಕ್’ ನ ವ್ಯಾಖ್ಯಾನ ಬದಲಾಗಿದೆ. ಓರ್ವ ಕೃಷಿಕನಿಗೆ ಸಾಂಪ್ರದಾಯಿಕ ಕೃಷಿಯ ಅನುಭವದ ಜತೆಗೆ ನೀರಿನ ನಿರ್ವಹಣೆ, ಮಣ್ಣಿನ ಪೌಷ್ಟಿಕಾಂಶ, ಯಂತ್ರೋಪಕರಣಗಳ ಬಳಕೆ, ಬಿತ್ತನೆ, ಗೊಬ್ಬರಗಳ ಬಳಕೆ, ಹವಾಮಾನ ವೈಪರೀತ್ಯದ ಆಗುಹೋಗುಗಳ ಜತೆಗೆ ಮಾರುಕಟ್ಟೆಯ ಅರಿವು ಅತಿ ಮುಖ್ಯವಾಗಿದೆ.
ಈ ಎಲ್ಲ ಅಂಶಗಳನ್ನು ಗಮನಿಸಿ, ರಾಜ್ಯದ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ವೃತ್ತಿ ಶಿಕ್ಷಣ ಕೌಶಲ ಚೌಕಟ್ಟು (ಎಸ್ ಎಸ್ ಕ್ಯೂ ಎಫ್) ನಡಿ ತೃತೀಯ ಭಾಷೆಯ ಬದಲು ಕೃಷಿಯನ್ನು ಒಂದು ವಿಷಯವನ್ನಾಗಿ ಕಲಿಸಲು ಮುಂದಾಗುವ ಮೂಲಕ ರಾಜ್ಯದ ಶಿಕ್ಷಣಿಕ ವ್ಯವಸ್ಥೆಯಲ್ಲಿ ಕೃಷಿ ಶಿಕ್ಷಣದ ಮೊದಲ ಬೀಜ ಬಿತ್ತುವ ಪ್ರಯತ್ನ ನಡೆದಿದೆ. ಈ ಹಿನ್ನಲೆಯಲ್ಲಿ ಕೃಷಿ ಪಠ್ಯ ಕ್ರಮವನ್ನು ಒಂಬತ್ತರಿಂದ ಹನ್ನೆರಡನೇ ತರಗತಿ ತನಕ ಅಂದರೆ ನಾಲ್ಕು ವರ್ಷಗಳ ಕಾಲ ಬೋಧಿಸಿ ಪ್ರಮಾಣ ಪತ್ರವನ್ನು ನೀಡುವ ಸರಕಾರದ ಪ್ರಯತ್ನಕ್ಕೆ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹೆಚ್ಚಿನ ಮಹತ್ವವಿದೆ.
ಆಸಕ್ತ ಮಕ್ಕಳಿಗೆ ಕೈತೋಟ, ಸಾಂಪ್ರದಾಯಿಕ ಕೃಷಿಯ ಜತೆಗೆ ಆಧುನಿಕ ಕೃಷಿ ಪದ್ಧತಿ, ಕೃಷಿ ಪರಿಸರದ ಸುತ್ತಲಿನ ಬೆಳವಣಿಗೆಗಳ ಶಿಕ್ಷಣವು ದೊರೆಯುವಂತೆ ಆಗಲಿ. ಜತೆಗೆ ಮುಂದಿನ ದಿನಗಳಲ್ಲಿ ಹೈನುಗಾರಿಕೆ, ಮೀನುಗಾರಿಕೆ, ಜೇನು ಸಾಕಣೆ, ಕೋಳಿ ಸಾಕಣೆ ಮುಂತಾದ ಗ್ರಾಮೀಣ ಪರಿಸರ ಆಧಾರಿತ ಜೀವನೋಪಾಯ ಸಾಧ್ಯತೆ, ಅವಕಾಶಗಳ ಬಗೆಗಿನ ಶಿಕ್ಷಣವು ಸಹ ದೊರೆಯುವಂತಹ ಪಠ್ಯಕ್ರಮವನ್ನು ರೂಪಿಸುವತ್ತ ಸರಕಾರ ಚಿಂತನೆ ನಡೆಸಬೇಕು.
ಕೃಪೆ: ಉದಯವಾಣಿ, ಸಂಪಾದಕೀಯ, ದಿ: ೧೪-೧೧-೨೦೨೩
ಚಿತ್ರ ಕೃಪೆ: ಅಂತರ್ಜಾಲ ತಾಣ