ವೃದ್ದೆಯ ಕಲಾಕುಂಚ

ವೃದ್ದೆಯ ಕಲಾಕುಂಚ

ಕವನ

ಅರಳಿದೆ ಪಟದಲಿ ಕುಂಚದ ಕಲೆಯದು

ತಳೆದಿದೆ ನೂತನ ಭಾವವದು|

ಕರೆದಿದೆ ಸಹೃದಯ ಮನವನು ತಣಿಸುತ

ವೃದ್ದೆಯ ಬಿಡಿಸಿದ ಚಿತ್ರವದು||

 

ಹಾಳೆಯ ಮೇಲೆಯೆ ರಂಗಿನ ಕುಂಚವು

ಬಿಡಿಸಿದೆ ಚಿತ್ರದ ಪುಷ್ಪವಿದು|

ನಾಳೆಯ ಜೀವನ ನೋಡುವ ವಯಸದು

ತೋರಿಸಿ ನಿಂತಿದೆ ಕುಂಚವಿದು||

 

ವೃದ್ದೆಯ ಆಸೆಯ ನೋಡುತ ನಿಂತರು

ಹಾದಿಗೆ ಹೋಗುವ ಲೋಗರದು|

ಸುದ್ದಿಯ ಮಾಡದೆ ಎತ್ತರ ಬೆಳೆಯುತ 

ಕನಸದು ಕಮರದ ಹೃದಯವದು||

 

ಬಣ್ಣಿಸೆ ನಿಲ್ಲಲು ಪದಗಳೆ ಇಲ್ಲವು

ಅದ್ಬುತ ಕಾವ್ಯದ ಲಹರಿಯದು|

ಕಣ್ಣಲಿ ಕುಣಿದಿದೆ ನೀಲಿಯ ಪುಷ್ಪವು

ಸೌರಭ ಸೂಸುತ ನಿಲ್ಲುವದು||

 

ಮೆಚ್ಚಿದೆ ಕಲೆಯನು ಹೃದಯದಿ ನಾನಲಿ

ಎಂತಹ ಮೋಹಕ ಕೈಚಳಕ|

ಹೆಚ್ಚಿದೆ ಬೆಲೆಯದು ಬಣ್ಣದ ಕುಂಚಕೆ

ನೋಡಿದ ಚಣದಲಿ ಮೈಪುಳಕ||

 

-ಶಂಕರಾನಂದ ಹೆಬ್ಬಾಳ

 

ಚಿತ್ರ್