ವೆನಿಲ್ಲಾ ಕೃಷಿ

ವೆನಿಲ್ಲಾ ಕೃಷಿ

ಪುಸ್ತಕದ ಲೇಖಕ/ಕವಿಯ ಹೆಸರು
ಡಾ॥ ಬಿ.ಸಿ.ಸೂರ್ಯನಾರಾಯಣ
ಪ್ರಕಾಶಕರು
ಸುರಭಿ ಪ್ರಕಾಶನ, ಚಿಕ್ಕಲಸಂದ್ರ, ಬೆಂಗಳೂರು-೫೬೦೦೬೧
ಪುಸ್ತಕದ ಬೆಲೆ
ರೂ.೮೦.೦೦, ಮುದ್ರಣ: ಎಪ್ರಿಲ್ ೨೦೦೪

“ಭಾರತದಲ್ಲಿ ವೆನಿಲ್ಲಾ ಬೆಳೆಯ ವಾಣಿಜ್ಯ ಕೃಷಿ ಈಗ್ಗೆ ಕೆಲವು ವರ್ಷಗಳಿಂದ ಮಾತ್ರ ನಡೆಯುತ್ತಿದೆ. ವೆನಿಲ್ಲಾ ಬೆಳೆಗಾರರಿಗೆ ಈ ಬೆಳೆಯ ಕೃಷಿಯ ಬಗ್ಗೆ ಉಪಯುಕ್ತ ತಾಂತ್ರಿಕ ಮಾಹಿತಿಯ ಕೊರತೆಯನ್ನು ಈ ಪುಸ್ತಕ ನಿವಾರಿಸಿದೆ. ವೆನಿಲ್ಲಾ ಕೃಷಿಯನ್ನು ಆರಂಭಿಸಲು ಆಸಕ್ತರಿರುವ ರೈತರಿಗೆ ಇದು ಒಂದು ಉತ್ತಮ ಕೈಪಿಡಿ. ವೆನಿಲ್ಲಾ ಕೃಷಿಗೆ ತಗಲುವ ವೆಚ್ಚ, ಅದರ ಲಾಭ ಮುಂತಾದ ಉಪಯುಕ್ತ ಮಾಹಿತಿಯಿರುವ ಈ ಪುಸ್ತಕ ವೆನಿಲ್ಲಾ ಬೆಳೆಗೆ ಸಾಲವ್ಯವಸ್ಥೆಯನ್ನು ಯೋಜಿಸಲು ಬ್ಯಾಂಕುಗಳಿಗೆ ಅತ್ಯವಶ್ಯ. ತಾಂತ್ರಿಕ ಸಲಹೆ ಕೊಡಲು ತೋಟಗಾರಿಕೆ ಇಲಾಖೆಯ ಅಧಿಕಾರಿಗಳಿಗೆ ಇದು ಉತ್ತಮ ಮಾರ್ಗದರ್ಶಿ. ಒಟ್ಟಿನಲ್ಲಿ ವೆನಿಲ್ಲಾ ಬೆಳೆಯ ಬಗ್ಗೆ ಆಸಕ್ತರಿಗೆ ಇದು ಒಂದು ಭಗವದ್ಗೀತೆ” ಎಂದು ಪುಸ್ತಕದ ಬೆನ್ನುಡಿಯಲ್ಲಿ ಉಲ್ಲೇಖಿಸಲಾಗಿದೆ.

ಬೆಂಗಳೂರಿನ ಲಾಲ್ ಬಾಗ್ ನಲ್ಲಿರುವ ತೋಟಗಾರಿಕಾ ಇಲಾಖೆಯ ನಿರ್ದೇಶಕರಾದ ಡಾ. ಜಿ.ಕೆ.ವಸಂತ ಕುಮಾರ್ ಅವರು ತಮ್ಮ ಮುನ್ನುಡಿಯಲ್ಲಿ " ಮೆಕ್ಸಿಕೋ ಮೂಲದ ವೆನಿಲ್ಲಾ ಬೆಳೆಯ ಕೃಷಿ ಇಂದು ವಿಶ್ವದ ಕೆಲವೇ ದೇಶಗಳಲ್ಲಿ ಪ್ರಚಲಿತದಲ್ಲಿದೆ. ವೆನಿಲ್ಲಾ ಬಳ್ಳಿಗಳಲ್ಲಿ ಉತ್ಪಾದನೆಯಾಗುವ ಕೋಡುಗಳಲ್ಲಿರುವ ಬೀಜದಲ್ಲಿ ವೆನಿಲಿನ್ ಎಂಬ ರಾಸಾಯನಿಕ ದ್ರವ್ಯವಿರುತ್ತದೆ. ಈ ದ್ರವ್ಯವು ಸುವಾಸನಭರಿತವಾಗಿರುತ್ತದೆ. ಖಾದ್ಯ ಪದಾರ್ಥಗಳ ಸ್ವಾದತೆ ಹೆಚ್ಚಿಸಲು ಹಾಗೂ ಅವುಗಳ ಸೇವನೆಯಿಂದ ಆಹ್ಲಾದಕರ ಸಂತೃಪ್ತಿ ಪಡೆಯಲು ಹಲವು ಶತಮಾನಗಳಿಂದ ವೆನಿಲಿನ್ ಬಳಕೆ ರೂಢಿಯಲ್ಲಿದೆ. ವೆನಿಲಿನ್ ಬಳಕೆ ಹೆಚ್ಚಾದಂತೆ, ಅದರ ಉತ್ಪಾದನೆ ಹೆಚ್ಚಾಗದ ಪರಿಣಾಮವಾಗಿ ಕೃತಕ ವೆನಿಲಿನ್ ಉತ್ಪಾದನೆಯನ್ನು ಸಂಶೋಧಿಸಲಾಗಿರುತ್ತದೆ. ಇಂದು ವಿಶ್ವದಲ್ಲಿ ಶೇ.೯೯ ಕೃತಕ ವೆನಿಲಿನ್. 

ವಿಶ್ವದಲ್ಲಿ ಅಂದಾಜು ೩೦,೦೦೦ ಟನ್ ವೆನಿಲಿನ್ ಬೇಡಿಕೆ ಇರುತ್ತದೆ. ಆದರೆ ವಿಶ್ವದಾದ್ಯಂತ ಉತ್ಪಾದನೆಯಾಗುವ ಸಾಂದ್ರಿತ ನೈಸರ್ಗಿಕ ವಿನಿಲಿನ್ ಪ್ರಮಾಣ ಕೇವಲ ನೂರು ಟನ್ ಗಳೆನ್ನಬಹುದು. ಈಗಿರುವ ಬೇಡಿಕೆಯಿಲ್ಲದೆ ಮುಂಬರುವ ವರ್ಷಗಳಲ್ಲಿ ನೈಸರ್ಗಿಕ ವೆನಿಲಿನ್ ಗೆ ಬೇಡಿಕೆ ಹೆಚ್ಚಾಗುವ ಸಾಧ್ಯತೆಗಳನ್ನು ಮನಗಂಡು ಹಲವು ದೇಶಗಳು ವೆನಿಲ್ಲಾ ಬೆಳೆಯನ್ನು ಪ್ರಚುರಪಡಿಸಲು ಸನ್ನದ್ಧಗೊಳ್ಳುತ್ತಿವೆ." ಎಂದಿದ್ದಾರೆ. 

ಈ ವೆನಿಲ್ಲಾ ಕೃಷಿ ಕೃತಿಯ ಲೇಖಕರಾದ ಡಾ. ಬಿ ಸಿ ಸೂರ್ಯನಾರಾಯಣ ಇವರು ತಮ್ಮ 'ಪ್ರಸ್ತಾವನೆ' ಯಲ್ಲಿ " ರೈತರಿಗೆ ವೆನಿಲ್ಲಾ ಕೃಷಿಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಒದಗಿಸಲು ಮತ್ತು ಅವರಿಗೆ ವೆನಿಲ್ಲಾದ ವೈಜ್ಞಾನಿಕ ಕೃಷಿಯ ಬಗ್ಗೆ ತಿಳಿಸಿಕೊಡಲು ಕನ್ನಡದಲ್ಲಿ ಸೂಕ್ತ ಪುಸ್ತಕದ ಕೊರತೆ ಎದ್ದು ಕಾಣುತ್ತಿದೆ. ಈ ಕೊರತೆಯನ್ನು ನೀಗುವುದು ವೆನಿಲ್ಲಾ ಕೃಷಿಯ ಈ ಪುಸ್ತಕದ ಪ್ರೇರಣೆಯಾಗಿದೆ. ವೆನಿಲ್ಲಾ ಕೃಷಿಯ ಬಗ್ಗೆ ಇತ್ತೀಚಿನ ಬೆಳವಣಿಗೆಗಳು, ವೆನಿಲ್ಲಾ ಕೃಷಿಯಲ್ಲಿ ಕಳೆದ ಕೆಲವು ವರ್ಷಗಳಲ್ಲಿ ಕಂಡು ಬಂದಿರುವ ಬದಲಾವಣೆಗಳು, ನೈಸರ್ಗಿಕ ಮತ್ತು ಕೃತಕ ನೆರಳಿನಡಿಯಲ್ಲಿ ವೆನಿಲ್ಲಾ ಕೃಷಿಗೆ ತಗಲುವ ವೆಚ್ಚ ಮತ್ತು ಈ ವಿಧಾನಗಳ ಲಾಭಗಳು ಮುಂತಾದ ವಿಷಯಗಳ ಬಗ್ಗೆ ವಿವರವಾಗಿ ಮೊತ್ತಮೊದಲ ಬಾರಿಗೆ ಈ ಪುಸ್ತಕದಲ್ಲಿ ಚರ್ಚಿಸಲಾಗಿದೆ. ಇವು ಈ ಪುಸ್ತಕದ ವೈಶಿಷ್ಟ್ಯಗಳು." ಎಂದಿದ್ದಾರೆ.

ಪುಸ್ತಕದಲ್ಲಿ ವೆನಿಲ್ಲಾ ಕೃಷಿಯ ಬಗ್ಗೆ ಸಮಗ್ರ ಮಾಹಿತಿ ಇದೆ. ಪರಿವಿಡಿಯಲ್ಲಿ ೧೬ ಅಧ್ಯಾಯಗಳಿವೆ. ವೆನಿಲ್ಲಾದ ಇತಿಹಾಸದಿಂದ ಪ್ರಾರಂಭಿಸಿ, ವೆನಿಲ್ಲಾ ಗಿಡ ಪರಿಚಯ, ವಿಶ್ವದಲ್ಲಿ ವೆನಿಲ್ಲಾ ಕೃಷಿ, ವೆನಿಲ್ಲಾ ಕೋಡುಗಳ ಸಂಸ್ಕರಣೆ, ಸಾವಯವ ವೆನಿಲ್ಲ ಹೀಗೆ ಹಲವಾರು ಮಾಹಿತಿಪೂರ್ಣ ಅಧ್ಯಾಯಗಳಿವೆ. ಪುಸ್ತಕದ ತುಂಬೆಲ್ಲಾ ವೆನಿಲ್ಲಾ ಕುರಿತ ವರ್ಣರಂಜಿತ ಚಿತ್ರಗಳಿವೆ. ಸುಮಾರು ೬೦ ಪುಟಗಳಿರುವ ಈ ಪುಸ್ತಕ ಹೊಸದಾಗಿ ವೆನಿಲ್ಲಾ ಕೃಷಿ ಮಾಡುವವರಿಗೆ ಬಹು ಉಪಯುಕ್ತವಾಗಿದೆ.