ವೆಸ್ಟ್ ಇಂಡೀಸ್ ಕ್ರಿಕೆಟ್ ದೈತ್ಯ- ಸರ್ ಎವರ್ಟನ್ ವೀಕ್ಸ್
ಸರ್ ಎವರ್ಟನ್ ಡಿ'ಕೊರ್ಸಿ ವೀಕ್ಸ್ ಇನ್ನಿಲ್ಲ ಎಂಬ ಮಾಹಿತಿಯೊಂದನ್ನು ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಅಂತರ್ಜಾಲ ತಾಣದಲ್ಲಿ ಹಂಚಿಕೊಂಡಿದ್ದರು. ಯಾರಿದು ಎವರ್ಟನ್ ವೀಕ್ಸ್? ಈಗಿನ ಕ್ರೀಡಾಭಿಮಾನಿಗಳಿಗೆ ಅವರ ಗೊತ್ತಿರುವುದು ಕಮ್ಮಿ. ಇವರು ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ಹಿಟ್ಟರ್ ಬ್ಯಾಟ್ಸ್ ಮನ್ ಆಗಿದ್ದರು. ಆಗ ಇನ್ನೂ ಕ್ರಿಕೆಟ್ ಅಷ್ಟೊಂದು ಹುಚ್ಚು ಹಿಡಿಸುವ ಆಟವಾಗಿರಲಿಲ್ಲ. ಪಂದ್ಯಾಟಗಳ ವಿವರಗಳೂ ಸರಿಯಾಗಿ ಸಿಗುತ್ತಿರಲಿಲ್ಲ. ಆ ಸಮಯದಲ್ಲಿ ಖ್ಯಾತರಾಗಿದ್ದ ಕ್ರಿಕೆಟ್ ನ ಮೂರು ‘W’ ಗಳು ( The three W’s) ಎಂದು ಹೆಸರಾಗಿದ್ದ ಫ್ರಾಂಕ್ ವಾರೆಲ್ (Frank Worrel), ಕ್ಲೈಡ್ ವಾಲ್ಕಾಟ್ (Clyde Walcott) ಎವರ್ಟನ್ ವೀಕ್ಸ್ (Everton Weekes) ಆಗಿದ್ದರು. ಬಲಗೈ ದಾಂಡಿಗರಾಗಿದ್ದ ಇವರು ತಮ್ಮ ಹೊಡಿಬಡಿಯ ಆಟಕ್ಕೆ ಬಹಳ ಪ್ರಸಿದ್ಧರಾಗಿದ್ದರು.
ಅತ್ಯಂತ ಬಡತನದ ಮೂಲದಿಂದ ಬಂದ ವೀಕ್ಸ್ ಅವರು ವೆಸ್ಟ್ ಇಂಡೀಸ್ ನ ಬಾರ್ಬಡೋಸ್ ನಲ್ಲಿ ಹುಟ್ಟಿದರು. ಅವರ ತಂದೆಗೆ ಒಳ್ಳೆಯ ಕೆಲಸವಾಗಲೀ, ಸಂಬಳವಾಗಲೀ ಇರಲಿಲ್ಲ. ಆದರೆ ಅವರ ತಂದೆಗೆ ಫುಟ್ ಬಾಲ್ ಆಟದ ಮೇಲೆ ತುಂಬಾ ಪ್ರೀತಿ ಇತ್ತು. ಅದೇ ಕಾರಣದಿಂದ ವೀಕ್ಸ್ ಅವರಿಗೆ ಬ್ರಿಟೀಷ್ ಫುಟ್ ಬಾಲ್ ತಂಡವಾದ ಎವರ್ಟನ್ ಇದರ ಹೆಸರನ್ನೇ ಇರಿಸಿದರು. ಅದರೆ ಮಗ ಫುಟ್ ಬಾಲ್ ಬಗ್ಗೆ ಹೆಚ್ಚು ಆಸಕ್ತಿ ತೆಗೆದುಕೊಳ್ಳದೇ ವೆಸ್ಟ್ ಇಂಡೀಸ್ ಜನರಿಗೆ ಪ್ರಿಯವಾದ ಕ್ರಿಕೆಟ್ ಆಟವನ್ನೇ ಅಪ್ಪಿಕೊಂಡರು. ಇವರ ಬಾಲ್ಯ ಅತ್ಯಂತ ಬಡತನದಿಂದ ಕೂಡಿತ್ತು. ಅವರಿದ್ದ ಸ್ಥಳದಲ್ಲಿ ಉದ್ಯೋಗದ ಕೊರತೆ ಇದ್ದುದರಿಂದ ಅವರ ತಂದೆ ಕೆಲಸ ಹುಡುಕಿಕೊಂಡು ದೂರದ ಟ್ರಿನಿಡಾಡ್ ನ ತೈಲಾಗಾರದಲ್ಲಿ ಕೆಲಸಕ್ಕೆ ಸೇರುತ್ತಾರೆ. ಆಗ ಎವರ್ಟನ್ ಅವರಿಗೆ ಬರೀ ಎಂಟು ವರ್ಷ. ಹೀಗೆ ಕೆಲಸವನ್ನು ಹುಡುಕಿಕೊಂಡು ಹೋದ ತಂದೆ ೧೧ ವರ್ಷಗಳವರೆಗೆ ಮರಳಿ ಮನೆಗೆ ಬರುವುದೇ ಇಲ್ಲ. ಅವರ ಮತ್ತು ಸಹೋದರಿಯ ಲಾಲನೆ ಪಾಲನೆಯನ್ನು ವೀಕ್ಸ್ ಅವರ ತಾಯಿ ಲೆನೋರ್ ಮತ್ತು ಚಿಕ್ಕಮ್ಮ ಮಾಡುತ್ತಾರೆ. ವೀಕ್ಸ್ ಅವರು ತಮ್ಮ ಚಿಕ್ಕಮ್ಮನನ್ನು ತುಂಬಾ ನೆನಪಿಸಿಕೊಳ್ಳುತ್ತಾರೆ. ತಮ್ಮ ಬಾಲ್ಯದಲ್ಲಿನ ಸವಿನೆನಪು ಹಾಗೂ ತಾವು ಭವಿಷ್ಯದಲ್ಲಿ ತಾವು ಉತ್ತಮ ಆಟಗಾರನಾಗಲು ತಮ್ಮ ಚಿಕ್ಕಮ್ಮನ ಪಾಲು ತುಂಬಾ ಇದೆ ಎಂದು ವೀಕ್ಸ್ ತಿಳಿದಿರುತ್ತಾರೆ. ಶಾಲೆಯಲ್ಲಿ ಅವರು ಉತ್ತ,ಮ ವಿದ್ಯಾರ್ಥಿಯಾಗಿರುವುದಿಲ್ಲ. ತಮ್ಮ ವಿದ್ಯಾಭ್ಯಾಸವನ್ನು ೧೪ನೇ ವಯಸ್ಸಿಗೇ ಮೊಟಕುಗೊಳಿಸಿ ಕ್ರಿಕೆಟ್ ಮತ್ತು ಫುಟ್ ಬಾಲ್ ಆಡುವುದರಲ್ಲೇ ಕಳೆಯುತ್ತಾರೆ. ಇವರ ಮನೆಯ ಬಳಿಯೇ ಕಿಂಗ್ಸ್ ಟನ್ ಓವಲ್ ಕ್ರೀಡಾಂಗಣ ಇದ್ದುದರಿಂದ ಮತ್ತು ಇವರು ತಮ್ಮ ಚಾಣಾಕ್ಷತನದಿಂದ ಅಲ್ಲಿ ಬಾಲ್ ಹೆಕ್ಕುವ ಹುಡುಗನಾಗಿ ಸೇರಿಕೊಳ್ಳುತ್ತಾರೆ. ಇದರಿಂದ ಅವರಿಗೆ ಹಲವಾರು ಅಂತರಾಷ್ಟ್ರೀಯ ಪಂದ್ಯಗಳನ್ನು ನೋಡುವ ಅವಕಾಶ ಲಭಿಸುತ್ತದೆ.
೧೯೪೩ರಲ್ಲಿ ಅವರು ಸೇನೆಗೆ ಸೇರಿ ಬಾರ್ಬಡೋಸ್ ರೆಜಿಮೆಂಟ್ ನಲ್ಲಿ ಸೇವೆ ಸಲ್ಲಿಸುತ್ತಾರೆ. ೧೯೪೭ರಲ್ಲಿ ಸೇವೆಯಿಂದ ಬಿಡುಗಡೆ ಹೊಂದುತ್ತಾರೆ. ವೀಕ್ಸ್ ಅವರು ಸೇನೆಗೆ ಸೇರಿದುದರಿಂದ ಅವರಿಗೆ ಒಂದು ಪ್ರಯೋಜನವಾಗುತ್ತದೆ. ಅದೇನೆಂದರೆ ಸೇನೆಯಲ್ಲಿ ಇದ್ದವರಿಗೆ ಗ್ಯಾರಿಸನ್ ಸ್ಪೋಟ್ಸ್ ಕ್ಲಬ್ ನಲ್ಲಿ ಆಡುವ ಅವಕಾಶವು ಮುಕ್ತವಾಗಿರುತ್ತದೆ. ಹೀಗೆ ದೊರೆತ ಅವಕಾಶವನ್ನು ಸದುಪಯೋಗ ಪಡಿಸಿಕೊಂಡ ವೀಕ್ಸ್ ೧೯೪೫ರಲ್ಲಿ ಪ್ರಥಮ ದರ್ಜೆ ಪಂದ್ಯವನ್ನಾಡುತ್ತಾರೆ. ತಮ್ಮ ಮೊದಲ ಪಂದ್ಯವನ್ನು ಟ್ರಿನಿಡಾಡ್ ಮತ್ತು ಟೊಬಾಗೋ ವಿರುದ್ಧ ಆಡುತ್ತಾರೆ. ಆದರೆ ಈ ಪಂದ್ಯದಲ್ಲಿ ಅವರು ಸೊನ್ನೆ ಮತ್ತು ಎಂಟು ರನ್ ಮಾಡಲಷ್ಟೇ ಶಕ್ತರಾಗುತ್ತಾರೆ. ಅವರ ತಂಡ ಬಾರ್ಬಡೋಸ್ ಹೀನಾಯವಾಗಿ ಸೋಲುತ್ತದೆ. ಇದರಿಂದ ಧೃತಿಗೆಡದ ವೀಕ್ಸ್ ಮುಂದಿನ ಪಂದ್ಯದಲ್ಲಿ ಓಪನರ್ ಆಗಿ ಬಂದು ಅರ್ಧ ಶತಕವೊಂದನ್ನು ದಾಖಲಿಸುತ್ತಾರೆ. ಈ ಪಂದ್ಯದ ನಂತರ ವೋಕ್ಸ್ ಕ್ರಿಕೆಟ್ ಜಗತ್ತಿಗೆ ನಿಧಾನವಾಗಿ ತೆರೆದುಕೊಳ್ಳುತ್ತಾ ಹೋಗುತ್ತಾರೆ.
೧೯೪೮ರಲ್ಲಿ ತಮ್ಮ ೨೨ನೇ ವಯಸ್ಸಿನಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಆಡುತ್ತಾರೆ. ಇಂಗ್ಲೆಂಡ್ ಎದುರು ತಮ್ಮ ಚೊಚ್ಚಲ ಪಂದ್ಯವನ್ನಾಡುವ ಎವರ್ಟನ್ ವೀಕ್ಸ್ ಈ ಪಂದ್ಯದಲ್ಲಿ ಹೆಚ್ಚು ರನ್ ಗಳಿಸುವುದಿಲ್ಲ. ಮುಂದಿನ ಎರಡು ಪಂದ್ಯಗಳಲ್ಲೂ ವಿಫಲರಾದ ವೀಕ್ಸ್ ಅವರನ್ನು ನಾಲ್ಕನೇ ಪಂದ್ಯಕ್ಕೆ ಪರಿಗಣಿಸುವುದಿಲ್ಲ. ಆದರೆ ಕೊನೇ ಕ್ಷಣದಲ್ಲಿ ತಂಡದ ಆಟಗಾರನೊಬ್ಬ ಗಾಯಾಳುವಾದ ಕಾರಣ ಇವರಿಗೆ ಅವಕಾಶ ದೊರೆಯುತ್ತದೆ ಮತ್ತು ಆ ಅವಕಾಶವನ್ನು ತಮ್ಮ ಪ್ರಥಮ ಶತಕ (೧೪೧ ರನ್)ವನ್ನು ದಾಖಲಿಸುವುದರ ಮೂಲಕ ಸಫಲಗೊಳಿಸುತ್ತಾರೆ. ಹೀಗೆ ದೊರೆತ ಅವಕಾಶವನ್ನು ಬಳಸಿಕೊಂಡ ಕಾರಣ ವೀಕ್ಸ್ ಅವರು ಮುಂದಿನ ಭಾರತ ಪ್ರವಾಸಕ್ಕೆ ಆಯ್ಕೆಯಾಗುತ್ತಾರೆ.
ಭಾರತದಲ್ಲಿ ಆಡಿದ ೫ ಟೆಸ್ಟ್ ಪಂದ್ಯಗಳಲ್ಲಿ ಮೊದಲ ಮೂರು ಪಂದ್ಯಗಳ ೪ ಇನ್ನಿಂಗ್ಸ್ ನಲ್ಲಿ ೪ ಶತಕ ದಾಖಲಿಸಿ, ನಿರಂತರ ೫ (ಒಂದು ಶತಕ ಇಂಗ್ಲೆಂಡ್ ವಿರುದ್ಧ) ಶತಕ ದಾಖಲಿಸಿದ ಹೊಸ ಇತಿಹಾಸ ನಿರ್ಮಿಸುತ್ತಾರೆ. ಟೆಸ್ಟ್ ಪಂದ್ಯವಾಗಿದ್ದರೂ ಎವರ್ಟನ್ ವೀಕ್ಸ್ ದೊಡ್ಡ ಹಿಟ್ಟರ್ ಆಗಿದ್ದರು. ಕ್ರಿಕೆಟ್ ದಂತ ಕಥೆ ಡೊನಾಲ್ಡ್ ಬ್ರಾಡ್ ಮನ್ ನಂತೆಯೇ ಚುರುಕಿನ ಪಾದಚಲನೆಯನ್ನು ಹೊಂದಿದ್ದ ಅವರು ಲೀಲಾಜಾಲವಾಗಿ ಹೊಡೆಯುತ್ತಿದ್ದ ಹೊಡೆತಗಳು ಅತ್ಯಂತ ಬಲಶಾಲಿಯಾಗಿರುತ್ತಿದ್ದವು ಹಾಗೂ ವೇಗವಾಗಿ ಬೌಂಡರಿ ರೇಖೆಯನ್ನು ದಾಟುತ್ತಿದ್ದವು ಎನ್ನುತ್ತದೆ ಅಂದಿನ ‘ದಿ ಟೈಮ್ಸ್’ ಪತ್ರಿಕೆಯ ವರದಿಗಳು . ಹೀಗೆ ೧೦ ವರ್ಷಗಳಲ್ಲಿ (೧೯೪೮-೫೮) ತಾವಾಡಿದ ೪೮ ಟೆಸ್ಟ್ ಪಂದ್ಯಗಳನ್ನು ಆಡಿ ೧೫ ಶತಕ ಹಾಗೂ ೧೯ ಅರ್ಧ ಶತಕಗಳನ್ನು ೫೮.೬೧ರ ಸರಾಸರಿಯಲ್ಲಿ ೪,೪೫೫ ರನ್ ದಾಖಲಿಸಿದ್ದಾರೆ. ಟೆಸ್ಟ್ ಪಂದ್ಯಗಳಲ್ಲಿ ೫೦ರ ಮೇಲಿನ ಸರಾಸರಿಯನ್ನು ಹೊಂದಿರುವುದು ಓರ್ವ ಉತ್ತಮ ದಾಂಡಿಗನ ಲಕ್ಷಣ. ಇವರು ಟೆಸ್ಟ್ ನಲ್ಲಿ ಗಳಿಸಿದ ಗರಿಷ್ಟ ರನ್ ೨೦೭. ೧೯೫೮ರಲ್ಲಿ ಟೆಸ್ಟ್ ಪಂದ್ಯಗಳಿಂದ ನಿವೃತ್ತಿಯಾದರೂ ೧೯೬೪ರವರೆಗೆ ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದರು. ಅಲ್ಲೂ ೫೦ರ ಮೇಲಿನ ಸರಾಸರಿಯನ್ನು ಇವರು ಹೊಂದಿದ್ದಾರೆ. ತಾವು ಆಡಿದ ೧೫೨ ಪ್ರಥಮ ದರ್ಜೆ ಪಂದ್ಯಗಳಿಂದ ೩೬ ಶತಕ ಹಾಗೂ ೫೪ ಅರ್ಧ ಶತಕಗಳನ್ನು ಹೊಡೆದಿದ್ದಾರೆ. ಪ್ರಥಮ ದರ್ಜೆ ಪಂದ್ಯದಲ್ಲಿ ಇವರ ಗರಿಷ್ಟ ರನ್ ಅಜೇಯ ೩೦೪. ಕೇವಲ ೧೨ ಪಂದ್ಯಗಳಲ್ಲಿ ೧೦೦೦ ರನ್ ಮಾಡಿದ ಖ್ಯಾತಿ ಇವರದ್ದು.
ಬಲಗೈ ಲೆಗ್ ಬ್ರೇಕ್ ಬೌಲರ್ ಆಗಿದ್ದ ಇವರು ಸ್ವಲ್ಪ ಸಮಯ ವಿಕೆಟ್ ಕೀಪಿಂಗ್ ಸಹಾ ಮಾಡಿದ್ದಾರೆ. ಟೆಸ್ಟ್ ನಲ್ಲಿ ಕೇವಲ ಒಂದು ವಿಕೆಟ್ ಮಾತ್ರ ಇವರು ಗಳಿಸಿದ್ದಾರೆ. ೧೯೬೪ರಲ್ಲಿ ತಮ್ಮ ಕ್ರಿಕೆಟ್ ಜೀವನದಿಂದ ನಿವೃತ್ತಿಯಾದರೂ ತರಭೇತುದಾರರಾಗಿ ಕ್ರಿಕೆಟ್ ಜಗತ್ತಿನಲ್ಲಿ ಶಿಶುವಾಗಿದ್ದ ಕೆನಡಾ ತಂಡಕ್ಕೆ ತರಭೇತಿ ನೀಡಿ ೧೯೭೯ರ ವಿಶ್ವಕಪ್ ನಲ್ಲಿ ಆಡುವ ಅರ್ಹತೆಯನ್ನು ಒದಗಿಸಿಕೊಟ್ಟಿದ್ದರು. ಮ್ಯಾಚ್ ರೆಫ್ರಿ ಆಗಿಯೂ ಸಾರ್ಥಕ ಸೇವೆ ಸಲ್ಲಿಸಿದ್ದ ಇವರು ತಮ್ಮ ೯೫ ನೇ ವಯಸ್ಸಿನಲ್ಲಿ ಜುಲೈ ೧, ೨೦೨೦ರಲ್ಲಿ ಬಾರ್ಬಡೋಸ್ ನಲ್ಲಿ ನಿಧನ ಹೊಂದಿದರು. ಇವರು ಕ್ರಿಕೆಟ್ ಆಟಕ್ಕೆ ಸಲ್ಲಿಸಿದ ಅಮೂಲ್ಯ ಸೇವೆಯನ್ನು ಪರಿಗಣಿಸಿ ೧೯೯೫ರಲ್ಲಿ ನೈಟ್ ಹುಡ್ ಪದವಿ ನೀಡಲಾಯಿತು. ಬಡತನದ ಬಾಲ್ಯವನ್ನು ಮೆಟ್ಟಿ ನಿಂತು ವೆಸ್ಟ್ ಇಂಡೀಸ್ ತಂಡದ ಸದಸ್ಯನಾಗಿದ್ದ ಅಂದಿನ ಕಾಲದ ಈ ಕ್ರೀಡಾ ಪಟು ಇಂದು ನೆನಪು ಮಾತ್ರ ಉಳಿಸಿ ಹೋಗಿದ್ದಾರೆ. ಅದರೂ ಅವರ ಕ್ರಿಕೆಟ್ ಪ್ರೀತಿ ಮತ್ತು ಸಾಧನೆಗಳು ಇಂದಿನ ಕ್ರೀಡಾಳುಗಳಿಗೆ ಪ್ರೇರಕವಾಗಲಿ ಎಂಬುದೇ ಈ ಲೇಖನದ ಸದಾಶಯ.
ಚಿತ್ರ: ಅಂತರ್ಜಾಲ ತಾಣ