ವೇದದ ಹಿತನುಡಿಗಳು - ಭಾಗ ೧

ವೇದದ ಹಿತನುಡಿಗಳು - ಭಾಗ ೧

ಬರಹ

೧. "ಕೇವಲಾಘೋ ಭವತಿ ಕೇವಲಾದೀ"||
(ಋಗ್: ೧೦.೧೧೭.೬.)

"ಒಬ್ಬನೇ ತಿನ್ನುವವನು ಶುದ್ಧ ಪಾಪಿಯೆನಿಸುತ್ತಾನೆ".

ತಿನ್ನುವುದು ತಪ್ಪಲ್ಲ, ಬದುಕಿರುವವರೆಲ್ಲರೂ, ಬದುಕ ಬಯಸುವವರೆಲ್ಲರೂ ತಿನ್ನಲೇಬೇಕು. ಆದರೆ, ಏಕೆ ತಿನ್ನಬೇಕು? (ಕಳೆದು ಹೋದ ಶಕ್ತಿಯನ್ನು ಪಡೆಯಲು); ಯಾವಾಗ ತಿನ್ನಬೇಕು? (ಹಸಿವಾದಾಗ ತಿನ್ನಬೇಕು); ಏನು ತಿನ್ನಬೇಕು? (ಜ್ಞಾನ, ಶಕ್ತಿಗಳನ್ನು ನೀಡುವ ಸಾತ್ವಿಕ ಆಹಾರವನ್ನು); ಎಷ್ಟು ತಿನ್ನಬೇಕು? (ಅರ್ಧ ಹೊಟ್ಟೆ ಆಹಾರ, ಕಾಲು ಹೊಟ್ಟೆ ನೀರು, ಕಾಲು ಹೊಟ್ಟೆ ಗಾಳೀ); ಹೇಗೆ ತಿನ್ನಬೇಕು? (ಚೆನ್ನಾಗಿ ಅಗಿದು); ಈ ಪ್ರಶ್ನೆಗಳಿಗೆ ಉತ್ತರ ತಿಳಿದು ತಿನ್ನಬೇಕು. ತಿನ್ನುವ ಮುಂಚೆ, ನೀಡಿದ ಭಗವಂತನನ್ನು, ದುಡಿದ ರೈತನನ್ನು ಕೃತಜ್ಞತೆಯಿಂದ ಸ್ಮ್ರರಿಸಿ, ಇತರರೊಡನೆ ಹಂಚಿಕೊಂಡು ತಿನ್ನಬೇಕು. ಮರೆತು ಚೀಲ ತುಂಬಿದರೆ ಅದು ಪಾಪ. ರೋಗ-ರುಜಿನಗಳು ನಿಶ್ಚಿತ.

೨. "ವಯಂ ಸ್ಯಾಮ ಪತಯೋ ರಯೀಣಾಮ್"||
(ಯಜು.೧೯.೪೪.)
"ನಾವು ಸಂಪತ್ತಿನ ಒಡೆಯರಾಗೋಣ".

ವೇದಗಳು ವೈರಾಗ್ಯವನ್ನು ಹೇಳುತ್ತವೆ. ನಮ್ಮ ದೈನಂದಿನ ಜೀವನದ ಬಗ್ಗೆ ಹೇಳುವುದಕ್ಕಿಂತ ಪರಲೋಕದ ಬಗ್ಗೆಯೇ ಹೇಳುತ್ತವೆ ಎಂಬುದು ಸಾಮಾನ್ಯವಾದ ತಿಳುವಳಿಕೆ. ಮೇಲಿನ ಮಾತು ಇದನ್ನು ಸುಳ್ಳೆಂದು ಸಾಧಿಸುತ್ತದೆ. ನಮ್ಮ ಜೀವನಕ್ಕೆ ಸಂಪತ್ತು ಅತ್ಯಾವಶ್ಯಕ. ಸಂಪತ್ತುಳ್ಳವರು ಸ್ವಾವಲಂಬಿಗಳಾಗಿರುತ್ತಾರೆ, ಸ್ವತಂತ್ರರಾಗಿರುತ್ತಾರೆ. ಧರ್ಮಾಚರಣೆ ಗುಲಾಮರಿಗೆ ಸಾಧ್ಯವಿಲ್ಲ. ಆದರೆ, ಆ ಸಂಪತ್ತಿಗೆ ನಾವು ದಾಸರಾಗದೆ ಒಡೆಯರಾಗಿರಬೇಕು. ಸಂಪತ್ತನ್ನು ಗಳಿಸಲು ಏನನ್ನಾದರೂ ಮಾಡುತ್ತೇವೆ ಎಂಬುದು ದಾಸತ್ವ. ಸನ್ಮಾರ್ಗದಲ್ಲೇ ಪಡೆಯುತ್ತೇವೆಂಬ ಸಂಕಲ್ಪ ನಾವು ಸಂಪತ್ತಿನ ಒಡಯರಾಗುವುದಕ್ಕೆ ಸಹಕಾರಿ. ಆಗಲೇ ಸಂಪತ್ತಿನ ಸದ್ವಿನಿಯೋಗವೂ ಸಾಧ್ಯ.

ಸಂಗ್ರಹ ಮತ್ತು ವ್ಯಾಖ್ಯೆ: ಸರಳಾ ನಿರ್ಮಲ್