ವೇದದ ಹಿತನುಡಿಗಳು - ಭಾಗ ೨

ವೇದದ ಹಿತನುಡಿಗಳು - ಭಾಗ ೨

ಬರಹ

೩. "ನ ಸ್ತೇಯಮದ್ಮಿ"||
(ಅಥರ್ವ.೧೪.೧.೫೭.)

"ಕಳ್ಳತನದಲ್ಲಿ ಭೋಗವನ್ನು ಅನುಭವಿಸುವುದಿಲ್ಲ".

ಒಂದು ಮಂತ್ರವನ್ನು ಸಾಮಾನ್ಯವಾಗಿ ವೈದಿಕ ವಿವಾಹ ಸಂಸ್ಕಾರದಲ್ಲಿ ವರನು ವಧುವಿಗೆ ನೀಡುವ ಪ್ರತಿಜ್ಞಾವಿಧಿಯಲ್ಲಿ ಸೇರಿಸಿರುತ್ತಾನೆ. ಆ ಮಂತ್ರದ ಭಾಗವಿದು. ವಿವಾಹ ಮಾಡಿಸುವ ಪುರೋಹಿತರಿಗೇ ತಾವು ಹೇಳುವ ಮಂತ್ರಗಳ ಅರ್ಥ ಗೊತ್ತಿಲ್ಲದಿರುವುದು ಶೋಚನೀಯ. ಅರ್ಥ ತಿಳಿದು ವರನು ಈ ಮಾತನ್ನಾಡಿದಾಗ, ಮುಂದಿನ ದಾಂಪತ್ಯ ಜೀವನದಲ್ಲಿ ವ್ಯಭಿಚಾರಾದಿ ದುಷ್ಟತನಗಳಿಗೆ ಸಿಕ್ಕಿಕೊಳ್ಳುವ ಸಂಭವವಿರುವುದಿಲ್ಲ. ವ್ಯಕ್ತಿಗೂ, ಸಮಾಜಕ್ಕೂ ಆರೋಗ್ಯಕರವಾದ ಏಕಪತ್ನೀವ್ರತವನ್ನು ಪಾಲಿಸಲು ಸತ್ಪ್ರೇರಣೆಯನ್ನು ನೀಡುತ್ತದೆ. ಪತಿ-ಪತ್ನಿಯರ ನಡುವಿನ "ಸ್ನೇಹ" ಬಿಗಿಯಾಗುತ್ತದೆ. ಈ ಹಿನ್ನಲೆಯಲ್ಲಿ ಹುಟ್ಟುವ ಸಂತಾನ ಶ್ರೇಷ್ಠವಾಗಿರುತ್ತದೆ. ಸುಭದ್ರ ಕುಟುಂಬಗಳೇ ಸುಭದ್ರ ಸಮಾಜದ ಅಡಿಪಾಯ.

೪. "ಆರೇ ಬಾಧಸ್ವ ದುಚ್ಛುನಾಮ್"||
(ಋಗ್.೯.೬೬.೧೯. ಸಾಮ.೬.೨೭.)

"ದುಷ್ಟ ವೇಗಗಳನ್ನು ದೂರಕ್ಕಟ್ಟಿರಿ".

ದುಷ್ಟಪ್ರವೃತ್ತಿಗಳೇ, ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯಗಳೇ ಈ ವೇಗಗಳು| ಇವುಗಳ ವೇಗವೆಷ್ಟಿರುತ್ತದೆಂದರೆ ಎಂತಹವರನ್ನೂ ಬಲುಬೇಗ ಸೆಳೆದುಬಿಡುತ್ತವೆ, ಆಕ್ರಮಿಸಿಕೊಂಡುಬಿಡುತ್ತವೆ. ಸ್ವಲ್ಪ ಅವಕಾಶಕೊಟ್ಟರೆ ಸಾಕು ಸಂಪೂರ್ಣ ಹಬ್ಬಿಕೊಂಡುಬಿಡುತ್ತವೆ. ದೂರದಲ್ಲೇ ನಿವಾರಿಸಿಕೊಂಡುಬೆಡಬೇಕು. ಈ ಕೆಲಸವನ್ನು ದೃಢಮನಸ್ಸಿನಿಂದ, ಕಠಿಣವಾಗಿ ಮಾಡಿದರೆ ಮಾತ್ರ ಜಯ ಸಾಧ್ಯ. ಈ ಕಾರ್ಯವನ್ನು ಸಮರ್ಪಕವಾಗಿ ಮಾಡಲ್ಲು ಬೇಕಾದ ಇಚ್ಛಾಶಕ್ತಿಯನ್ನು ಬಲ-ವೀರ್ಯಗಳನ್ನು, ಇವುಗಳನ್ನು ನೀಡುವಂತಹ ಸಾತ್ವಿಕ ಅನ್ನವನ್ನು ನಮಗೆ ನೀಡು ಎಂಬುದು ನಮ್ಮ ಪ್ರಾರ್ಥನೆಯಾಗಬೇಕು. ಅಂತೆಯೇ ಮಾಡುತ್ತೇನೆ ಎಂಬುದೇ ಸಂಕಲ್ಪವಾಗಬೇಕು. ಅದರಂತೆ ಅನುಷ್ಠಾನವಿಲ್ಲದಿದ್ದರೆ ಪ್ರಾರ್ಥನೆಯೆಂದಿಗೂ ಉತ್ತರಿಸಲ್ಪಡುವುದಿಲ್ಲ.

ಸಂಗ್ರಹ ಮತ್ತು ವ್ಯಾಖ್ಯೆ: ಸರಳಾ ನಿರ್ಮಲ್