ವೇದಸುಧೆ ಮತ್ತು ಮನೆಮನೆ ಕವಿಗೋಷ್ಠಿಯ ವಾರ್ಷಿಕೋತ್ಸವ - ಹಾಸನ - 30-01-2011 ಭಾನುವಾರ.
ಆತ್ಮೀಯ ಆಹ್ವಾನ
ಎಲ್ಲಾ ಸಂಪದಿಗ ಮಿತ್ರರಿಗೆ ದಿನಾಂಕ 30-01-2011ರಂದು ಹಾಸನದಲ್ಲಿ 'ವೇದಸುಧೆ' ಅಂತರ್ಜಾಲ ತಾಣದ ಪ್ರಥಮ ವಾರ್ಷಿಕೋತ್ಸವ (ಬೆ. 9-30ರಿಂದ ಮಧ್ಯಾಹ್ನ 1-30) ಹಾಗೂ 'ಮನೆಮನೆಕವಿಗೋಷ್ಠಿ'ಯ 14ನೆಯ ವಾರ್ಷಿಕೋತ್ಸವಕ್ಕೆ (ಮ.3-00ರಿಂದ ಸಾ. 6-00) ಆತ್ಮೀಯ ಮತ್ತು ಆದರದ ಸುಸ್ವಾಗತ. ಶ್ರೀ ಹರಿಹರಪುರ ಶ್ರೀಧರರು ಈಗಾಗಲೇ ಆಹ್ವಾನ ನೀಡಿದ್ದು ವಿವರಗಳನ್ನೂ ನೀಡಿದ್ದಾರೆ. ಈ ಲಿಂಕ್ ದಯಮಾಡಿ ಗಮನಿಸಿದರೆ ಪೂರ್ಣ ವಿವರ ತಿಳಿಯುವುದು. (http://sampada.net/blog/hariharapurasridhar/09/01/2011/29899)
ಬಂದ ಎಲ್ಲರಿಗೂ ಊಟೋಪಚಾರದ ವ್ಯವಸ್ಥೆಯಿದೆ.
ವೇದ ಎಂದರೆ ಪ್ರಚಲಿತ ರೂಢಿಗತ ತಿಳುವಳಿಕೆಯಂತೆ ಪೂಜೆ, ಪುನಸ್ಕಾರ, ಹವನ, ಹೋಮ, ಇತ್ಯಾದಿಗಳೆಂದು ಭಾವಿಸಿದರೆ ಸರಿಯಲ್ಲ ಎಂಬುದು 'ವೇದಸುಧೆ' ಅಂತರ್ಜಾಲ ತಾಣ ವೀಕ್ಷಿಸದವರಿಗೆ ಅರ್ಥವಾಗಿರಬಹುದು. ಇದುವರೆಗೆ ವೀಕ್ಷಿಸಿರದೆ ಇದ್ದವರು ಭೇಟಿ ನೀಡಿ ಅಭಿಪ್ರಾಯ ವ್ಯಕ್ತಪಡಿಸಬಹುದು. ಇದೊಂದು ಜಿಜ್ಞಾಸೆಯ, ಸತ್ಯದ ಅನ್ವೇಷಣೆಗೆ ಪ್ರಯತ್ನಿಸುವ ತಾಣವಾಗಿದೆ. ವಿಶೇಷವೆಂದರೆ ಸಂಪದಿಗರೇ ವೇದಸುಧೆ ಬಳಗದಲ್ಲಿ (ನಾನು, ಶ್ರೀಧರ್ , ಪ್ರಭಾಕರ್, ರಾಘವೇಂದ್ರ ನಾವಡ, ಬೆಳ್ಳಾಲ ಗೋಪಿನಾಥರಾವ್, ಡಾ.ಜ್ಞಾನದೇವ್, ಎಸ್.ಪಿ. ಪ್ರಸನ್ನ, ಕವಿ ಸುರೇಶ್, ಶ್ರೀನಾಥ್, ಹಂಸಾನಂದಿ, ಮೊದಲಾದವರು) ಸಕ್ರಿಯರಾಗಿರುವುದು! ವಾರ್ಷಿಕೋತ್ಸವದ ಸಮಯದಲ್ಲಿ ಬಿಡುಗಡೆಯಾಗಲಿರುವ ಶ್ರೀ ಸುಧಾಕರ ಶರ್ಮರ ಉಪನ್ಯಾಸಗಳ ಸಿ.ಡಿ. ಎಲ್ಲರೂ ಕೇಳಬಹುದಾದುದು. ಅವರ ಈ ಉಪನ್ಯಾಸಗಳನ್ನು ಕೇಳಿಯೇ ಮಿತ್ರ ಹರಿಹರಪುರ ಶ್ರೀಧರರು ಈ ತಾಣ ಆರಂಭಿಸಿದ್ದು ಮತ್ತು ನಾನೂ ಸಹ ಆಕರ್ಷಿತನಾದದ್ದು.
ಮನೆಮನೆಕವಿಗೋಷ್ಠಿ ಹಾಸನದಲ್ಲಿ ಕಳೆದ 14 ವರ್ಷಗಳಿಂದಲೂ ಪ್ರತಿ ತಿಂಗಳಿಗೊಮ್ಮೆ ನಡೆಯುತ್ತಿದ್ದು 171ನೆಯ ಮಾಸಿಕ ಕವಿಗೋಷ್ಠಿ ಹಾಸನದ ನನ್ನ ಮನೆಯಲ್ಲಿ ದಿನಾಂಕ 09-01-11ರಂದು ನಡೆಯಿತು. 30-01-11ರಂದು ನಡೆಯುವ 14ನೆಯ ವಾರ್ಷಿಕೋತ್ಸವದಲ್ಲಿ ನನ್ನ 'ಮೂಢ ಉವಾಚ'ದ ಪ್ರಥಮ ಸಂಗ್ರಹ ಪ್ರಕಟಿಸಲು ಉದ್ದೇಶಿಸಿದೆ. ಮೂಢ ಉವಾಚಕ್ಕೆ ಸಂಪದಿಗರು ನೀಡಿದ ಪ್ರತಿಕ್ರಿಯೆ ನನಗೆ ಪ್ರೇರಕವಾಗಿದೆಯೆಂದು ಈ ಸಂದರ್ಭದಲ್ಲಿ ಕೃತಜ್ಞತೆಯಿಂದ ನೆನೆಸಿಕೊಳ್ಳುವೆ. ಬೆಂಗಳೂರಿನಿಂದ ಸುಮಾರು 30-40 ಜನ ಬರುವವರಿದ್ದಾರೆ. ನೀವೂ ಬನ್ನಿ. ಆಸಕ್ತ ಮಿತ್ರರನ್ನೂ ಕರೆತನ್ನಿ. ಮೊದಲು ತಿಳಿಸಿದಲ್ಲಿ ವ್ಯವಸ್ಥೆಗೆ ಅನಕೂಲವಾಗುವುದು.
ನಿಮ್ಮವ, ಕವಿನಾಗರಾಜ್.