ವೇದ ನಾರಾಯಣಸ್ವಾಮಿ ದೇಗುಲದ ಅಪರೂಪದ ಸಂಗತಿ !

ವೇದ ನಾರಾಯಣಸ್ವಾಮಿ ದೇಗುಲದ ಅಪರೂಪದ ಸಂಗತಿ !

ಭಾರತದಲ್ಲಿ ಸಾವಿರಾರು ದೇವಾಲಯಗಳಿವೆ. ಪ್ರತಿಯೊಂದು ದೇವಾಲಯಕ್ಕೆ ಅದರದ್ದೇ ಆದ ಐತಿಹಾಸಿಕ ಮಹತ್ವ, ಚರಿತ್ರೆ, ಪರಂಪರೆ ಮತ್ತು ವಿಶೇಷತೆ ಇದ್ದೇ ಇದೆ. ನಾವಿಲ್ಲಿ ಹೇಳಲಿರುವ ವೇದ ನಾರಾಯಣಸ್ವಾಮಿ ದೇವಾಲಯಕ್ಕೂ ಅದರದ್ದೇ ಆದ ವಿಶೇಷತೆ ಇದೆ. ಅದೇನೆಂದು ತಿಳಿದುಕೊಳ್ಳುವ ಮೊದಲು ಈ ದೇಗುಲದ ಬಗ್ಗೆ ಕೊಂಚ ತಿಳಿದುಕೊಳ್ಳೋಣ.

ವೇದ ನಾರಾಯಣಸ್ವಾಮಿ ಅಥವಾ ಮತ್ಸ್ಯ ನಾರಾಯಣಸ್ವಾಮಿ ದೇವಸ್ಥಾನ ಇರುವುದು ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ನಾಗಲಾಪುರಂ ಪಟ್ಟಣದಲ್ಲಿ. ಇಲ್ಲಿ ವಿಷ್ಣುವಿನ ಮತ್ಸ್ಯಾವತಾರ (ಮೀನಿನ ಆಕಾರ)ದ ವಿಗ್ರಹ ಪೂಜಿಸಲ್ಪಡುತ್ತದೆ. ವಿಷ್ಣುವಿನ ದಶಾವತಾರಗಳಲ್ಲಿ ಮೊದಲ ಅವತಾರ ಮತ್ಸ್ಯ ಅವತಾರ. ಬ್ರಹ್ಮನ ಬಳಿಯಿದ್ದ ವೇದಗಳನ್ನು ಕದ್ದ ಸೋಮಾಸುರ ಎಂಬ ದಾನವ ಅವುಗಳನ್ನು ಸಾಗರದ ಆಳದಲ್ಲಿ ಅವಿತಿಡುತ್ತಾನೆ. ‘ವೇದಗಳ ಕಳವು ಸೃಷ್ಟಿಯ ನಾಶ’ ಎಂಬ ಭಯದಿಂದ ದೇವತೆಗಳು ಭಗವಾನ್ ವಿಷ್ಣುವಿನ ಬಳಿ ಸಹಾಯಕ್ಕಾಗಿ ಮೊರೆ ಇಟ್ಟಾಗ, ಆತ ಮತ್ಸ್ಯದ ಅವತಾರವನ್ನೆತ್ತಿ ಸಾಗರದ ತಳಕ್ಕೆ ಹೋಗಿ ಸೋಮಾಸುರನನ್ನು ಸಂಹಾರ ಮಾಡಿ ವೇದಗಳನ್ನು ತೆಗೆದುಕೊಂಡು ಬರುತ್ತಾನೆ. ವೇದಗಳನ್ನು ರಕ್ಷಣೆ ಮಾಡಿದ ಕಾರಣದಿಂದ ಇದನ್ನು ವೇದ ನಾರಾಯಣಸ್ವಾಮಿ ದೇವಸ್ಥಾನವೆಂದು ಕರೆಯುತ್ತಾರೆ. 

ಈ ದೇವಾಲಯವು ವೈಷ್ಣವ ಪರಂಪರೆಯನ್ನು ಹೊಂದಿದ ದೇವಾಲಯವಾಗಿದೆ. ನಾಗಲಾಪುರಂ ಪಟ್ಟಣವು ತಿರುಪತಿ ದೇವಾಲಯದಿಂದ ೭೦ ಕಿ.ಮೀ ದೂರವಿದೆ. ಚೆನ್ನೈ-ತಿರುಪತಿ ರಸ್ತೆಯಲ್ಲಿ ಈ ದೇವಸ್ಥಾನವು ಸಿಗುತ್ತದೆ. ಇಲ್ಲಿ ವಿಷ್ಣುವಿನ ವಿಗ್ರಹವಿದ್ದು, ಅದು ಮೇಲ್ಭಾಗ ಮಾನವನ ಆಕೃತಿಯಲ್ಲಿದ್ದು, ಕೆಳಭಾಗ ಮೀನಿನ ಆಕೃತಿಯಲ್ಲಿದೆ. ಈ ದೇವಸ್ಥಾನದ ನಿರ್ಮಾಣ ಶೈಲಿ ವಿಜಯನಗರ ಸಾಮ್ರಾಜ್ಯದ ಶೈಲಿಯದ್ದಾಗಿದೆ. ಇತಿಹಾಸದ ಪ್ರಕಾರ ಈ ದೇವಸ್ಥಾನವನ್ನು ವಿಜಯನಗರದ ಸಾಮ್ರ್ಯಾಜ್ಯದ ಅರಸನಾದ ಶ್ರೀಕೃಷ್ಣ ದೇವರಾಯನು ತನ್ನ ತಾಯಿಯಾದ ನಾಗಾಂಬಾರ ಅಪ್ಪಣೆಯ ಮೇರೆಗೆ ಮರು ನಿರ್ಮಾಣ ಮಾಡಿದ. ಆದರೆ ಮರು ನಿರ್ಮಾಣವನ್ನು ಆತನ ಜೀವಿತಾವಧಿಯಲ್ಲಿ ಪೂರ್ಣಗೊಳಿಸಲಾಗಲಿಲ್ಲವಂತೆ. 

ಈಗ ಈ ದೇವಾಲಯದ ಅಪರೂಪದ ವಿಶಿಷ್ಟ ಸಂಗತಿಯತ್ತ ಬರುವ. ಪ್ರತೀ ವರ್ಷ ಇಲ್ಲಿ ‘ಸೂರ್ಯ ಪೂಜೆ' ಎಂಬ ವಿಶೇಷ ಪೂಜೆ ನಡೆಯುತ್ತದೆ. ಇದರ ವಿಶೇಷತೆಯೆಂದರೆ ಈ ಪೂಜೆ ನಡೆಯುವುದು ವರ್ಷದಲ್ಲಿ ಕೇವಲ ಮೂರು ದಿನಗಳು ಮಾತ್ರ. ಆ ಮೂರು ದಿನಗಳಲ್ಲಿ ಮಾತ್ರ ಸೂರ್ಯನ ಕಿರಣವು ದೇವಾಲಯದ ಗರ್ಭಗುಡಿಯನ್ನು ಪ್ರವೇಶಿಸಿ ಮತ್ಸ್ಯ ನಾರಾಯಣಸ್ವಾಮಿಯ ವಿಗ್ರಹವನ್ನು ತಾಗುತ್ತದೆ. ಈ ದಿನಗಳಲ್ಲಿ ಪ್ರತೀ ದಿನ ಸಾಯಂಕಾಲ ಸೂರ್ಯನ ಕಿರಣವು ದೇವಾಲಯದ ಮುಖ್ಯ ಗೋಪುರದಿಂದ ಸುಮಾರು ೩೬೦ ಅಡಿಗಳಷ್ಟು ದೂರದಲ್ಲಿರುವ ವಿಗ್ರಹವನ್ನು ತಲುಪುತ್ತದೆ. ಮೊದಲ ದಿನ ವಿಗ್ರಹದ ಪಾದಕ್ಕೆ (ಮೀನಿನ ಬಾಲದ ಭಾಗ) ಬೀಳುವ ಸೂರ್ಯನ ಬೆಳಕು, ಎರಡನೇ ದಿನ ವಿಗ್ರಹದ ಹೊಕ್ಕಳು ಹಾಗೂ ಮೂರನೇ ದಿನ ವಿಷ್ಣುವಿನ ಶಿರ ಅಥವಾ ಕಿರೀಟದ ಭಾಗಕ್ಕೆ ತಾಗುತ್ತದೆ. 

ಸೂರ್ಯ ದೇವನೂ ಭಕ್ತಿಯಿಂದ ವಿಷ್ಣುವಿನ ಪಾದ ಸೇವೆ ಮಾಡಿದ ನಂತರವೇ ಶಿರ (ತಲೆ) ದ ಭಾಗಕ್ಕೆ ಬೆಳಕು ಚೆಲ್ಲುತ್ತಾನೆ ಎಂದು ಇಲ್ಲಿನ ಭಕ್ತಾದಿಗಳು ನಂಬುತ್ತಾರೆ. ಈ ರೀತಿ ಬೆಳಕು ಬೀಳುವುದು ಕೇವಲ ವರ್ಷದಲ್ಲಿ ಕೇವಲ ಮೂರೇ ದಿನ. ಆ ಸಮಯದಲ್ಲಿ ‘ಸೂರ್ಯ ಪೂಜಾ ಉತ್ಸವ’ ವಿಜೃಂಭಣೆಯಿಂದ ನಡೆಯುತ್ತದೆ. 

ವರ್ಷದಲ್ಲಿ ಒಂದೆರಡು ಸಲ ಮುಖ್ಯ ದೇವರನ್ನು ಸೂರ್ಯ ಕಿರಣ ತಗಲುವ ದೇವಾಲಯಗಳು ಭಾರತದಲ್ಲಿ ಇರುವುದು ಕೆಲವೇ ಕೆಲವು. ಬೆಂಗಳೂರಿನಲ್ಲಿರುವ ಗವಿ ಗಂಗಾಧರೇಶ್ವರ ದೇವಾಲಯದಲ್ಲೂ ವರ್ಷಕ್ಕೆ ಒಂದು ದಿನ ಮಾತ್ರ ಸೂರ್ಯನ ಕಿರಣ ಗಂಗಾಧರೇಶ್ವರನ (ಶಿವ) ಲಿಂಗವನ್ನು ಮುಟ್ಟುತ್ತದೆ. ಇದು ನಡೆಯುವುದು ಪ್ರತೀ ವರ್ಷ ಮಕರ ಸಂಗ್ರಾಂತಿಯ ದಿನದಂದು ಮಾತ್ರ. ಇದೇ ರೀತಿ ಕೊಲ್ಹಾಪುರದ ಲಕ್ಷ್ಮೀ ದೇವಸ್ಥಾನ, ಅರಿಸೇವಿಲಿ ಸೂರ್ಯನಾರಾಯಣ ದೇವಸ್ಥಾನ, ಕಡಪ ಜಿಲ್ಲೆಯ ಕೋದಂಡರಾಮ ದೇವಸ್ಥಾನದಲ್ಲಿ ವರ್ಷಕ್ಕೆ ಒಮ್ಮೆ ಮಾತ್ರ ಸೂರ್ಯ ಕಿರಣಗಳು ಗರ್ಭಗುಡಿಯನ್ನು ತಲುಪುತ್ತವೆ. ಹೀಗೇ ನಮಗೆ ತಿಳಿಯದ ಇನ್ನೂ ಅನೇಕ ದೇವಾಲಯಗಳು ಇರಬಹುದು. ದೇವಾಲಯದ ನಿರ್ಮಾಣದ ಸಮಯದಲ್ಲೇ ಸೂರ್ಯನ ಚಲನೆಯ ಬಗ್ಗೆ ಮಾಹಿತಿ ಹೊಂದಿದ್ದ ಪರಿಣಿತರು ಈ ರೀತಿಯಾಗಿ ವಿಗ್ರಹವನ್ನು ಪ್ರತಿಷ್ಟಾಪಿಸಿರಬಹುದು ಅಂದರೆ ಅವರೆಷ್ಟು ಜ್ಞಾನಿಗಳಾಗಿರಬಹುದು. ಅಲ್ಲವೇ?     

ಚಿತ್ರದಲ್ಲಿ: ಗರ್ಭಗುಡಿಯಲ್ಲಿರುವ ಮತ್ಸ್ಯಾವತಾರದ ವಿಗ್ರಹ ಮತ್ತು ವೇದ ನಾರಾಯಣಸ್ವಾಮಿ ದೇವಾಲಯದ ಹೊರನೋಟ.

ಕೃಪೆ: ಇಂಟರ್ನೆಟ್ ತಾಣ