ವೇದ - ಸ್ವಾಧ್ಯಾಯ

ವೇದ - ಸ್ವಾಧ್ಯಾಯ

ಪಾತಂಜಲ ಯೋಗ ಸೂತ್ರದ ಎರಡನೆಯ ಪಾದ, ಎರಡನೇ ಮೆಟ್ಟಿಲು, ನಾಲ್ಕನೇ ಉಪಾಂಗದಲ್ಲಿ ಬರುವ ಸ್ವಾಧ್ಯಾಯದಲ್ಲಿ ಈ ದಿನ ವೇದ ಸ್ವಾಧ್ಯಾಯದ ಬಗ್ಗೆ ತಿಳಿದುಕೊಳ್ಳೋಣ. ವೇದ ಅಂದರೆ ಜ್ಞಾನ. ಸತ್ಯ ಜ್ಞಾನಕ್ಕೆ ವೇದ ಎನ್ನುವರು. ಯಾರು ಸತ್ಯಜ್ಞಾನಿಗಳೋ, ಅಂತಹವರಿಂದ, ಅವರ ಮಾತುಗಳಿಂದ ಅಥವಾ ಅವರ ಕೃತಿಗಳಿಂದ ಪಡೆಯಬೇಕು. ಎಲ್ಲವನ್ನು ನಮ್ಮಷ್ಟಕ್ಕೆ ನಾವೇ ಕಲಿಯಲು ಆಗುವುದಿಲ್ಲ. ಉದಾಹರಣೆಗೆ, ಗಣಿತ, ತಿಳಿದವರಿಂದ ಕಲಿಯಬೇಕಾಗುತ್ತದೆ. ಒಂದೊಂದು ಕ್ಷೇತ್ರದಲ್ಲಿ ಒಬ್ಬೊಬ್ಬರು ಜಾಣ ಇರುತ್ತಾರೆ. ಅವರ ಬಳಿ ಹೋಗಿ ನಿಧಾನವಾಗಿ ಕಲಿಯಬೇಕು. ನಿಧಾನವಾಗಿ ಕಲಿಯುತ್ತಾ, ಕಲಿಯುತ್ತಾ ಜ್ಞಾನಿಯಾಗಬೇಕಾಗುತ್ತದೆ. ಮಂತ್ರದಿಂದ ಸ್ಮರಣ ಶಕ್ತಿ ಬರುವುದಿಲ್ಲ. ನಿರ್ದಿಷ್ಟ ಆಹಾರದಿಂದ ಸ್ಮರಣ ಶಕ್ತಿ ಬರೋದಿಲ್ಲ. ಸತ್ಯ ಜ್ಞಾನ ಮಾಡಿಕೊಳ್ಳಬೇಕಾದರೆ ಸತ್ಯಜ್ಞಾನಿಗಳ ಮಾತುಗಳನ್ನು ಮತ್ತೆ ಮತ್ತೆ ಓದಬೇಕು ಅಥವಾ ಕೇಳಬೇಕು. ಮನಸ್ಸಿನಲ್ಲಿ ಮತ್ತೆ ಮತ್ತೆ ಪುನರಾವರ್ತನೆ ಮಾಡಬೇಕು. ಹೀಗೆ ಮಾಡುತ್ತಾ ಹೋದರೆ ವೇದ ಸ್ವಾಧ್ಯಾಯ ಉಂಟಾಗುತ್ತದೆ. ಬಸವಣ್ಣನವರು ಅನುಭವ ಮಂಟಪ ಮಾಡಿದರು. ಕಟ್ಟಡ ಅಲ್ಲ ಸಂಘ. ಅವರು ಬದುಕಿರುವಷ್ಟು ಕಾಲ ಅನುಭವಿಗಳು ಕುಳಿತು ಚರ್ಚಿಸುತ್ತಿದ್ದರು. ಸತ್ಯದ ಮಾತುಗಳನ್ನು ಓದುತ್ತಾ ಕೇಳುತ್ತಾ ಹೋದರೆ, ಒಳಗೆ ಬೆಳಕು ಹರಿಯಲು ಶುರುವಾಗುತ್ತದೆ. ಜಗತ್ತು ಅಂದರೆ ಏನು? ಜಗತ್ತಿನ ಸ್ವರೂಪ ಏನು? ಜೀವನ ಅಂದರೆ ಏನು? ಜೀವನದಲ್ಲಿ ಏನನ್ನು ಸಾಧಿಸಬೇಕಾಗಿದೆ? ಜೀವನ ಸುಂದರ ಆಗಬೇಕಾದರೆ ಏನು ಮಾಡಬೇಕಾಗುತ್ತದೆ ? ಜಗತ್ತಿನ ಆಚೆ ಏನಾದರೂ ಇದೆಯೇ? ಎಲ್ಲವೂ ಹೀಗೆಯೇ ಇರುತ್ತದೆಯೋ ಹೇಗೆ..? ಇಂಥವುಗಳ ಕುರಿತು ತಿಳಿದವರಿಗೆ ಜ್ಞಾನಿಗಳು, ಸಂತರು, ಋಷಿಗಳು ಎನ್ನುವರು.

ಅಂತವರ ಮಾತೇ ವೇದ. ಇಂತಹ ಮಾತುಗಳನ್ನು ಮತ್ತೆ ಮತ್ತೆ ಓದಬೇಕು. ಚಿಂತನೆ ಮಾಡಬೇಕು. ಓದೋದಕ್ಕೆ ಸಾಧ್ಯವಾದರೆ ಓದುವುದು. ಕೇಳೋದಕ್ಕೆ ಸಾಧ್ಯವಾದರೆ ಕೇಳುವುದು. ಸರಿಯಾದದ್ದನ್ನ ಸರಿಯಾಗಿ ತಿಳಿದುಕೊಳ್ಳಬೇಕು. ಅಸತ್ಯದಲ್ಲಿ ಜಗಳವಾಗುತ್ತದೆ. ಸತ್ಯದಲ್ಲಿ ಜಗಳ ಇಲ್ಲ. ಅವರು ಬರೆದಿದ್ದು, ಇವರು ಬರೆದಿದ್ದು ಅಲ್ಲ. ಯಾರು ಬರೆದರೆ ಏನು?. ಸತ್ಯ ಮುಖ್ಯ. ಸ್ವೀಕರಿಸುವಾಗ ಸರಿಯಾಗಿ ಆಯ್ಕೆ ಮಾಡಿ ಒಳ್ಳೆಯದನ್ನೇ ಸ್ವೀಕರಿಸಬೇಕು. ಋಗ್ವೇದದಲ್ಲಿ ಒಂದು ಮಾತು, "ಎಲ್ಲಾ ದಿಕ್ಕುಗಳಿಂದ, ಎಲ್ಲಾ ದೇಶಗಳಿಂದ, ಜಗತ್ತಿನ ಮೂಲೆ ಮೂಲೆಗಳಿಂದ, ಜ್ಞಾನ, ನನಗೆ ಹರಿದು ಬರಲಿ". ಜ್ಞಾನದಲ್ಲಿ ಮಡಿವಂತಿಕೆ ಮಾಡಿಕೊಂಡರೆ ನಾವು ಕತ್ತಲೆಯಲ್ಲಿ ಬದುಕಬೇಕಾಗುತ್ತದೆ. ಮುಕ್ತವಾಗಿರಬೇಕು. ಜ್ಞಾನ ಯಾರದೋ ಅಲ್ಲ. ಜ್ಞಾನ ಜಗತ್ತಿಗೆ ಕೊಟ್ಟಂತಹ ಅದ್ಭುತ ಬೆಳಕು. ಜ್ಞಾನಿಗಳು ತಿಳಿದವರು, ಸ್ವಚ್ಛ ಮನಸ್ಸಿನವರು, ಮುಕ್ತ ಮನಸ್ಸಿನವರು ಬರೆದಿರಬೇಕು. ಯಾವ ಮಾತು ಒಳಗೆ ತೆಗೆದುಕೊಂಡರೆ ಮನಸ್ಸು ಅರಳುತ್ತದೆಯೋ ಅಂತ ಮಾತುಗಳನ್ನು ತೆಗೆದುಕೊಳ್ಳಬೇಕು. ನಾವು ಯಾವುದೋ ಒಂದಕ್ಕೆ ಗಂಟು ಬಿದ್ದಿರುತ್ತೇವೆ. ನಮ್ಮದು ಶ್ರೇಷ್ಠ. ನಮ್ಮೂರು ಶ್ರೇಷ್ಠ ಅಂತ ಇರುತ್ತೇವೆ. ಅದಕ್ಕಾಗಿ ಬಡಿದಾಡುತ್ತೇವೆ. ಜಗತ್ತಿನಲ್ಲಿ ನಮ್ಮದು ಶ್ರೇಷ್ಠ ಅಂತ ಇಲ್ಲ. ಶ್ರೇಷ್ಠ ಇದ್ದರೆ ಶ್ರೇಷ್ಠ ಜ್ಞಾನ ಮಾಡಿಕೊಳ್ಳಬೇಕು. ಮುಂಜಾನೆ ಒಂದು ಮಾತು, ಸಂಜೆ ಮಲಗುವ ಮುನ್ನ ಒಂದು ಮಾತು, ಓದಿಯೋ, ಕೇಳಿಯೋ, ಚಿಂತನೆ ಮಾಡಬೇಕು. ಜ್ಞಾನದ ಮಾತುಗಳನ್ನು ಓದಬೇಕು, ಕೇಳಬೇಕು ಮತ್ತು ಚಿಂತನೆ ಮಾಡಬೇಕು. ಇದಕ್ಕೆ ವೇದ ಸ್ವಾಧ್ಯಾಯ ಎನ್ನುವರು. ಭಾಷೆ ಮಹತ್ವದಲ್ಲ, ಜ್ಞಾನ ಮಹತ್ವದ್ದು. 

ಶಾಪೆನ್ ಹಾವೇರ್, ಯುರೋಪ್ ತತ್ವಜ್ಞಾನಿ, ಭಾರತ ದೇಶದ ಒಂದು ಸಣ್ಣ ಪುಸ್ತಕ, "ಈಶ ವಾಶೋಪನಿಷತ್". ಇದನ್ನ ನಾನು ಮಲಗುವ ಕೋಣೆಯ ಟೇಬಲ್ ಮೇಲೆ ಸದಾ ಇಟ್ಟುಕೊಂಡು ಮಲಗುವಾಗ, ಒಂದು ಶ್ಲೋಕ ಸಂಸ್ಕೃತದಲ್ಲಿ ಇರುವುದರಿಂದ ಭಾಷಾಂತರ ಮಾಡಿ ಓದಿ ಮಲಗುತ್ತಿದ್ದರು. ಬೆಳಗ್ಗೆ ನನಗೆ ಒಂದು ಹೊಸ ಚಿಂತನೆ ಬರುತ್ತದೆ ಅಂದಿದ್ದಾರೆ. ಈ ಗ್ರಂಥದಿಂದ ಸಾವಿನ ಕಡೆ ಕ್ಷಣದವರೆಗೆ ಸಮಾಧಾನ ಸಿಗುತ್ತದೆ ಎಂದಿದ್ದಾರೆ. ನಾವು ನಮ್ಮದಲ್ಲ, ಅವರದು, ಅಂತ ಹೋರಾಟ ಮಾಡುತ್ತಾನೆ ಇದ್ದೀವಿ. ಅವರದು, ಇವರದು, ಆ ಭಾಷೆ, ಈ ಭಾಷೆ, ಆ ದೇಶ, ಈ ದೇಶ, ಆ ಧರ್ಮ, ಈ ಧರ್ಮ, ಮಹತ್ವದಲ್ಲ ಜ್ಞಾನ ಮಹತ್ವದ್ದು. ಮಲ್ಲಿಗೆ ಹೂ ಅಮೆರಿಕದಲ್ಲಿದ್ದರೆ, ಚೀನಾದಲ್ಲಿದ್ದರೆ, ಜಪಾನ್ ನಲ್ಲಿ ಇದ್ದರೆ ಬೇರೆಯಾಗುತ್ತದೆ ಏನು? ಮಲ್ಲಿಗೆ ಮಲ್ಲಿಗೆಯೇ... ಸಾವಿರಾರು ವಚನಗಳು, ಉಪನಿಷತ್ತುಗಳು, ಅಬಂಗಗಳು, ದೋಹೆಗಳು ಇವುಗಳಿಂದ ಜ್ಞಾನ ಮಾಡಿಕೊಳ್ಳಬೇಕು. ಅಲ್ಲವೇ?

-ಎಂ.ಪಿ. ಜ್ಞಾನೇಶ್, ಮಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ