ವೇಲು ಮೇಲ್ ಅಲುಮೇಲು ಕೋಲು !

ವೇಲು ಮೇಲ್ ಅಲುಮೇಲು ಕೋಲು !

ಮೊನ್ನೆ ಹೀಗೆ ಒಂದು ಹಾಡು ಕೇಳುತ್ತಿದ್ದೆ "ಕೇಳು ಮಗುವೆ ಕಥೆಯ, ಆಸೆ ತಂದ ವ್ಯಥೆಯ" ಅಂತ. ಅದರ ಹಿಂದೆಯೇ ನೆನಪಾಗಿದ್ದು "ಕನ್ನಡ ನಾಡಿನ ವೀರ ರಮಣಿಯ", "ಕನ್ನಡ ನಾಡಿನ ರನ್ನದ ರತುನ ಕೇಳೋ ಕಥೆಯನ್ನ" ಎಂಬೆಲ್ಲ ಹಾಡುಗಳು. ದೊಡ್ಡ ಕಥೆಯ ಬದಲಿಗೆ ಒಂದು ಸಣ್ಣ ಪ್ರಸಂಗ ತೆಗೆದುಕೊಂಡು ಕವನ ರೂಪದಲ್ಲಿ ಪ್ರಯತ್ನಪಡಬಹುದು ಅನ್ನಿಸಿತು. ಮೊದಲಿಗೆ, ಬರಲಿರುವ halloween ಹಬ್ಬದ ಭಯದ ವಾತಾವರಣ ಸೃಷ್ಟಿಸಿ ನಂತರ ಪ್ರಣಯಕ್ಕೆ ತಿರುಗಿಸಿದ ಪ್ರಯತ್ನವಿದು.

 

ವಾರದೈದು ದಿನ ತಿರುಗೋದೇ ವೇಲುವಿನ ಪರದಾಟ

ವಾರಾಂತ್ಯ ಮಾತ್ರ ಅಲುಮೇಲು ಜೊತೆ ಚೆಲ್ಲಾಟ

mallಉ, ಸಿನಿಮಾ ಅಂತೆರಡು ದಿನ ತಿರುಗಾಟ

ಸೋಮವಾರ ಕೂಗಲು ಕೋಳಿ ಶುರು ಇವನ ಓಡಾಟ

 

halloween ಸಂಜೆಯಂತೂ ಆಕೆಗೆ ಮನೆಯೇ ಜೈಲು

ಮಕ್ಕಳೇ ಬಂದು ಬಾಗಿಲು ತಟ್ಟಿದರೂ, ತೆರೆಯಲವಳಿಗೆ ದಿಗಿಲು

ಗೋಳಾಡ್ಕೊಂಡೇ ಕೂತಿದ್ಲು ಬಾಗಿಲುಬಡ್ಕೊಂಡು ಅಲುಮೇಲು

ಮಾಸಾಂತ್ಯ ತಿರುಗಲೇಬೇಕು ಇರಲಾಗದು ಎಂದು ಹೋಗಿದ್ದ ವೇಲು

 

ಬೆಳಗ್ಗಿನಿಂದಲೇ ಏನೇನೋ ಕಸಿವಿಸಿ ಮೂಡೆಲ್ಲ ಔಟು

ಮನದಲ್ಲೆಲ್ಲ ಒಂದೇ ಸಮ ದುಗುಡ ಹಿಡೀಲಿಲ್ಲ ಸೌಟು

ಸಂಜೆಯಂತೂ ಬಾಗಿಲ ಬಳಿ ಯಾರೋ ಇದ್ದಾರಂತ್ಲೇ ಡೌಟು

ಎಂದೂ ಇಲ್ದೇ ಇಂದೇ ಹೋಗಬೇಕೆ ಸೂರ್ಯನ ಹಿಂದೇನೇ ಕರೆಂಟು?

 

ತಡ್ಕಾಡ್ಕೊಂಡು ಎಲ್ಲೆಡೆ ಹುಡುಕಾಡ್ತಿದ್ಲು ಹಚ್ಚೋಕಂತ ದೀಪ

IPhone’ನಲ್ಲಿ ಲೈಟ್ ಇರೋದು ಮರೆತೇ ಹೋಯ್ತು ಪಾಪ

ಕರ್ಟನ್ ಸಂದೀಲಿ ಕಂಡಂಗಾಯ್ತು ಮೂರು ಸಣ್ಣುರಿ ದೀಪ

ಬೆಂಕಿಗೋಳಗಳ ಕಂಡಂತಾಗವಳಿಗೆ ಕಿರುಚೋಕ್ಕೂ ಆಗ್ಲಿಲ್ಲ ಪಾಪ

 

ಮೈಯಲ್ಲೆಲ್ಲ ಹರದಾಡಿತ್ತು ಧಾರಾಕಾರವಾಗಿ ಬೆವರು

ನಾಳೆಗೆ ತಾನಿಲ್ಲವೆಂದುಕೊಂಡಾಗ ನೆನಪಾಗಿತ್ತು ತವರು

ವೇಲೂನ್ನ ಒಮ್ಮೆ ನೋಡಬೇಕೆನ್ನಿಸಿದೆ ನಿಲ್ಲೋ ಮುನ್ನ ಉಸಿರು

ಗುಟುಕ ಜೀವ ಇರುವವರೆಗೂ ಆಸೆಗಳೆಲ್ಲ ಹಸಿರೋ ಹಸಿರು

 

ಬಾಗಿಲ ಬಳಿ ಸಣ್ಣ ಸದ್ದು ಕೇಳಿ ನಿಮಿರಿತ್ತವಳ ಕಿವಿ

ಆಗಲೇ ಬಂದ ಕರೆಂಟಿನಿಂದ ಮೂಡಿತ್ತೆಲ್ಲೆಡೆ ಛವಿ

ಕರ್ಟನ್ ಸಂದಿಯಲ್ಲಿ ಕಂಡಿದ್ದೀಗ ಹಿಂದಿನ ಮನೆ ಭೂಪ

ಬೆಕ್ಕನ್ನು ಎತ್ಕೊಂಡ್ ಸಿಗರೇಟ್ ಸೇದುತ್ತ ನಿಂತಿದ್ದನಾ ಗಾಂಪ

 

ಬಾಗಿಲು ತೆರೆದ ಸದ್ದು ಕೇಳಿ ಬೆದರಿದ್ಲು ಅಲುಮೇಲು

ದೆವ್ವದ ಮುಂದೆ ತನಗಂತೂ ಕಟ್ಟಿಟ್ ಬುತ್ತಿ ಸೋಲು

ಕರೀ ಕೋಟು ಕ್ಯಾಪು ಧರಿಸಿ ಅಡಿಯಿರಿಸಿದ್ದ ವೇಲು

ಬೆದರಿದವಳಿಗಾಗಿ ಬಂದವನ ಬೆನ್ನ ಬಡಿದಿತ್ತು ಕೋಲು

 

ಸರ್ಪ್ರೈಸ್ ಕೊಡಲು ಬಂದವಗೆ ಬಿದ್ದಿತ್ತು ಸರ್ಪ್ರೈಸ್ ಪ್ರಹಾರ

ಬಿದ್ದವ ತಿರುಗಿ ನೋಡಿದಾಗ ಕಂಡಿದ್ದು ಓಬವ್ವನ ಅವತಾರ

ವೇಲು ಎಂದರಿತು ಬೆಚ್ಚಿ ಬಿಸುಟ ಕೋಲು ಬಡಿದಿತ್ತು ಮೂಗಿಗೆ ನೇರ

ಮರುಪೆಟ್ಟು ತಿಂದವಗೆ ಸಾಂತ್ವನ ನೀಡಿದ್ದು ಅಲುಮೇಲು ಕೈಗಳ ಹಾರ

 

ದೆವ್ವದ ಸಿನಿಮಾ ನೀ ನೋಡೋದ್ ಬೇಡ ಅಂತ ಹೇಳಲಿಲ್ವೇನೇ ಜಾಣೆ

ನೋಡೋವಾಗ ಇಲ್ಲದ ಭಯ ಈಗೆಲ್ಲಿಂದ ಬಂತೋ ನಾ ಬೇರೆ ಕಾಣೆ

ನನ್ ಮುದ್ದಿನ ಮಡದಿ ಹೆದರಿರ್ತಾಳೆ ಅಂತ ನಾ ಬಂದೆ ಮಲ್ಲ

ಮೆಲ್ಲಗೆ ಬಂದ ಮಲ್ಲನಿಗೆ ಬಡಿದಿದ್ದು ಮಾತ್ರ ದೇವರಾಣೆಗೂ ಸಲ್ಲ

 

ಆಹಹಹ! ಸಿನಿಮಾ ನೋಡ್ಬೇಕಾದ್ರೆ ದೆವ್ವ ಅಂತ ಕಿರುಚಿದ್ರಿ, ಕಚ್ಚಿದಾಗ ತಿಗಣೆ

ನೋಡಿದ್ರೇ ತಿಳಿಯುತ್ತೆ ಭಾನುವಾರದಿಂದ ಹೆದರ್ಕೊಂಡ್ ಮಾಡಿರೋ ಜಾಗರಣೆ

ತಿರುಗಬೇಕು ಬರಲಾಗದು ಅಂತ ಹೇಳಿದ್ದೇಕೋ ನಲ್ಲ?

ಬಿದ್ದಾಗ ತಿರುಗಿ ನೋಡ್ದೆ ಇದ್ದಿದ್ದ್ರೆ ಈಗ ಊದಿರೋದು ಗಲ್ಲ !

 

ನೀ ಕೇಳಿದ್ದೆಲ್ಲ ನಾ ತಂದು ಕೊಟ್ಟೆ, ನೀ ನನಗೆ ಪೆಟ್ಟು ಕೊಟ್ಟೆ

ಹುಸಿಮುನಿಸ್ಯಾಕೋ ನಲ್ಲ ನೀ ತಂದ ಕೋಲಿನಲ್ಲೆ ನಾ ಕೊಟ್ಟೆ !