ವೈಕುಂಠ ಏಕಾದಶಿ ದಿನದ ಮಹಿಮೆ ಗೊತ್ತೇ?

ವೈಕುಂಠ ಏಕಾದಶಿ ದಿನದ ಮಹಿಮೆ ಗೊತ್ತೇ?

ನಿನ್ನೆ ತಾನೇ ವೈಕುಂಠ ಏಕಾದಶಿ ದಿನವನ್ನು ಆಚರಿಸಿದೆವು. ಈ ದಿನವನ್ನು ಗೀತಾ ಜಯಂತಿ ಎಂದೂ ಕರೆಯುತ್ತಾರೆ. ನಮ್ಮ ಜೀವನದಲ್ಲಿ ಕಷ್ಟ-ಸುಖ ಸಾಮಾನ್ಯ. ಬಾ ಎಂದರೆ ಬಾರದು, ಬರಬೇಡ ಎಂದರೆ ಬಾರದೆ ಇರದು. ಒಂದೇ ನಾಣ್ಯದ ಎರಡು ಮುಖಗಳನ್ನು ನೀಡಿ ಒಂದನ್ನು ಆಯ್ಕೆ ಮಾಡು ಎಂದರೆ ಹೇಗೋ ಹಾಗೆ. ಇಲ್ಲಿ ಯಾವುದೂ ಶಾಶ್ವತವಲ್ಲ. ಹಾಗಾದರೆ ಶಾಶ್ವತವಾದದ್ದು ಯಾವುದು? ಅದೇ ವೈಕುಂಠ. ಭಗವಾನ್ ಮಹಾವಿಷ್ಣುವಿನ ದಿವ್ಯ ಸನ್ನಿಧಿ. ಅಲ್ಲಿ ಇರುವುದು ಒಂದೇ ತತ್ವ, ಒಂದೇ ನಿಯಮ.

ಹರಿ ನಾಮಸ್ಮರಣೆಯಿಂದ ನಮ್ಮ ಜೀವನ ಧನ್ಯ, ಮಾನ್ಯ ಮತ್ತು ಪಾವನ. ಉಪವಾಸ ಎಂದರೆ ಭಗವತ್ ಸ್ಮರಣೆಗೆ ಇಲ್ಲಿ ಆದ್ಯತೆ. ಮನೋನಿಗ್ರಹ, ಏಕಾಗ್ರತೆ, ನಿಷ್ಠೆ, ವ್ರತ ಇದೆಲ್ಲ ಉಪವಾಸದ ಮಜಲುಗಳು. ಕರ್ಮೇಂದ್ರಿಯ, ಜ್ಞಾನೇಂದ್ರಿಯಗಳನ್ನು ನಿಗ್ರಹಿಸಿ, ಭಗವತ್ ಚಿಂತನೆ ನಡೆಸುವುದು. ಈ ಉಪವಾಸದ ಸಮಯದಲ್ಲಿ ದುರಾಲೋಚನೆಗಳಿಗೆ ಆಸ್ಪದವಿಲ್ಲ, ಕೆಟ್ಟ ಯೋಚನೆಗಳು ಬರಲೇ ಬಾರದು.

ಪದ್ಮ ಪುರಾಣದ ಒಂದು ಮಾಹಿತಿಯಂತೆ ಮುರನೆಂಬ ದುಷ್ಟ ದಾನವನ ವಧೆಗಾಗಿ ಭಗವಾನ್ ಮಹಾವಿಷ್ಣುವಿನ ದಿವ್ಯ ತೇಜಸ್ಸಿನಿಂದ (ಮೊಗಕಮಲ) ಹೈನಮತಿ ನಾಮಾಂಕಿತ ಸ್ತ್ರೀರತ್ನವೊಂದು ಉದ್ಭವಿಸಿ, ದೇವಿಯಾಗಿ ದುಷ್ಟನ ವಧೆಗೈದು ಲೋಕಕ್ಷೇಮ ಉಂಟು ಮಾಡಿದಳೆಂದು ಪ್ರತೀತಿ. ಇದೇ ದಿನ ವೈಕುಂಠ ಏಕಾದಶಿಯಾದ್ದರಿಂದ, ಉಪವಾಸವಿದ್ದು, ಮಹಾವಿಷ್ಣುವಿನ ಆರಾಧನೆ, ಪೂಜೆ, ನೇಮ ನಿಷ್ಠೆಗಳಲ್ಲಿ ತೊಡಗಿದವರಿಗೆ ಮೋಕ್ಷ ಪ್ರಾಪ್ತಿಯಾಗುತ್ತದೆ ಹಾಗೂ ಹೈನವತಿ ದೇವಿ ಇನ್ನು ಮುಂದೆ ಏಕಾದಶೀ ದೇವಿಯಾಗಿ ಕರೆಯಲ್ಪಡುತ್ತಾಳೆ ಎಂಬಂತೆ ಬಿಂಬಿಸಲ್ಪಟ್ಟಿದೆ.

ಏಕಾದಶಿ ಉಪವಾಸವನ್ನು ನಿರ್ಲಕ್ಷಿಸಿಧರ್ಮವನ್ನು ಮೀರಿದ ರುಕ್ಮಾಂಗದನ ಕಣ್ಣು ತೆರೆಯಿಸಿ ಶ್ರೀ ಮಹಾವಿಷ್ಣು ವೈಕುಂಠಕ್ಕೆ ಕರೆಸಿಕೊಂಡ ಎಂಬ ಹಾಗೆಯೂ ಕಥೆ ಇದೆ. ಇದೇ ದಿನ ಕುರುಕ್ಷೇತ್ರ ಯುದ್ಧಭೂಮಿಯಲ್ಲಿ ಭಗವಾನ್ ವಾಸುದೇವನಿಂದ ಪಾರ್ಥನಿಗೆ *ಭಗವದ್ಗೀತೆ* ಬೋಧನೆಯಾದ ದಿನವಾದ ಕಾರಣ ‘ಗೀತಾಜಯಂತಿ’ ಎಂಬುದಾಗಿಯೂ ಆಚರಿಸುತ್ತಾರೆ.

ಧರ್ಮವು ಕಡಿಮೆಯಾದಾಗ, ಅಧರ್ಮ ತಾಂಡವವಾಡುತ್ತಿರುವಾಗ, ಧರ್ಮವನ್ನು ಉದ್ಧರಿಸಲು ಭಗವಾನ್ ಮಹಾವಿಷ್ಣು ನಾನಾ ಅವತಾರಗಳಲ್ಲಿ ಕಾಣಿಸಿಕೊಂಡು ಧರ್ಮದ ರಕ್ಷಣೆ ಮಾಡುತ್ತಾನೆ. ಇದನ್ನೆಲ್ಲ ಪುರಾಣ ಪುಣ್ಯ ಕಾವ್ಯಗಳಲ್ಲಿ ಓದಿ ತಿಳಿದವರು ನಾವುಗಳು.

ಈ ಶುಭದಿನದಂದು ಭಗವದ್ಗೀತೆ ಪಾರಾಯಣ, ವಿಷ್ಣುಸಹಸ್ರನಾಮ, ಶ್ಲೋಕಗಳು, ಪುರಾಣ ಕಾವ್ಯಗಳನ್ನು ಓದಿ ಪುನೀತರಾಗೋಣ. ಅಖಂಡ ಭಜನಾ ಕೈಂಕರ್ಯ ಸಹ ಮಾಡಿ ಮನಸ್ಸಿನ ಹತೋಟಿಯನ್ನು ಸಾಧಿಸಬಹುದು.

ಪಾರ್ಥಾಯ ಪ್ರತಿಬೋಧಿತಾಂ ಭಗವತಾ ನಾರಾಯಣೇನ ಸ್ವಯಂ ವ್ಯಾಸೇನ ಗ್ರಥಿತಾಂ ಪುರಾಣಮುನಿನಾ ಮಧ್ಯೇಮಹಾಭಾರತಮ್/

ಅದ್ವೈತಾಮೃತವರ್ಷಿಣೀಂ ಭಗವತೀಂ ಅಷ್ಟಾದಶಾಧ್ಯಾಯಿನೀಂ ಅಂಬ ತ್ವಾಮನುಸಂದಧಾಮಿ ಭಗವದ್-ಗೀತೇ ಭವದ್ವೇಷಿಣೀಮ್//

ಅಮ್ಮಾ, ಭಗವದ್ಗೀತೆ, ಭಗವಂತನಾದ ಶ್ರೀಮನ್ನಾರಾಯಣನಿಂದ ಪಾರ್ಥನಿಗೆ ಸ್ವತಃ ಉಪದೇಶಿಸಲ್ಪಟ್ಟ, ಪ್ರಾಚೀನ ಮಹರ್ಷಿಗಳಾದ ವ್ಯಾಸರಿಂದ ಮಹಾಭಾರತ ಮಧ್ಯದಲ್ಲಿ ಸೇರಿಸಲ್ಪಟ್ಟ, ಅದ್ವೈತಾಮೃತವನ್ನು ವರ್ಷಿಸುತ್ತಿರುವ, ಸಂಸಾರನಾಶಿನಿಯಾದ, ಅಷ್ಟಾದಶಾಧ್ಯಾಯಗಳುಳ್ಳ,ಭಗವತಿಯಾದ ನಿನ್ನನ್ನು ಧ್ಯಾನಿಸುತ್ತೇನೆ.

(ವಿವಿಧ ಮೂಲಗಳಿಂದ ಸಂಗ್ರಹ)

-ರತ್ನಾ ಭಟ್ ತಲಂಜೇರಿ

ಚಿತ್ರ ಕೃಪೆ : ಇಂಟರ್ನೆಟ್ ತಾಣ