ವೈಕುಂಠ ಏಕಾದಶಿ ವ್ರತ

ವೈಕುಂಠ ಏಕಾದಶಿ ವ್ರತ

ಶಾಂತಕಾರಂ ಭುಜಗಶಯನಂ ಪದ್ಮನಾಭಂ ಸುರೇಶಂ 

ವಿಶ್ವಾಕಾರಂ ಗಗನಸದೃಶಂ ಮೇಘವರ್ಣಂ ಶುಭಾಂಗಮ್/

ಲಕ್ಷ್ಮೀಕಾಂತಂ ಕಮಲನಯನಂ ಯೋಗಿಹೃದ್ಧಾನಗಮ್ಯಂ

ವಂದೇ ವಿಷ್ಣುಂ ಭವಭಯಹರಂ ಸರ್ವ ಲೋಕೈಕನಾಥಮ್//

 

ಓಂ ನಾರಾಯಣಾಯ ವಿದ್ಮಹೇ

ವಾಸುದೇವಾಯ ಧೀಮಹೀ/

ತನ್ನೋ ವಿಷ್ಣು ಪ್ರಚೋದಯಾತ್//

ಚಾಂದ್ರಮಾನ ಪುಷ್ಯಮಾಸ ಶುಕ್ಲಪಕ್ಷ ದಿನದಂದು ಬರುವುದೇ ಏಕಾದಶಿ. ಮಹಾವಿಷ್ಣುವಿನ ಆರಾಧನೆ. ವೈಕುಂಠ ದ್ವಾರ ಪ್ರವೇಶ ದಿನ. ಇದೇ ವೈಕುಂಠ ಏಕಾದಶಿ. ಜಗತ್ತಿನ ಬೆಳಕಿನ ಸೂರ್ಯದೇವನು ಉತ್ತರಾಯಣಕ್ಕೆ ಬದಲಾಗುವ ಮೊದಲು ಬರುವ ಧನುರ್ಮಾಸದ ಶುದ್ಧ ಏಕಾದಶಿ ದಿನ. ಈ ದಿನದ ಏಕಾದಶಿ ಉಪವಾಸ ಬಹಳ ಪಾವಿತ್ರ್ಯತೆಯಿಂದ ಕೂಡಿದ್ದು, ವಿಶೇಷ ಮಹತ್ವವಿದೆ.ನಾವು ಏನಾದರೂ ಸಾಧಿಸಬೇಕೆಂದಿದ್ದರೆ ಈ ಏಕಾದಶಿ ಉಪವಾಸ ರಹದಾರಿಯಿದ್ದಂತೆ. ಮನಸ್ಸಿಗೆ ಶಾಂತಿ, ಆನಂದ, ಆರೋಗ್ಯ ಸಿಗುವುದು.

ತ್ರಿಮೂರ್ತಿಗಳಲ್ಲಿ ವಿಷ್ಣು ಜಗದ ಜೀವರಾಶಿಗಳನ್ನು ಪೊರೆಯುವ ದೇವರು. ಅವನ ಆರಾಧನೆ ಕಷ್ಟಗಳು ಬಾರದಂತೆ ಮತ್ತು ಬಂದರೆ ಸಹಿಸುವ ಶಕ್ತಿಯನ್ನು ನೀಡುವುದಂತೆ. ಮಹಾಭಾರತದ ಶಾಂತಿಪರ್ವದಲ್ಲಿರುವಂತೆ ಮನ್ವಂತರದಲ್ಲಿ ಭಗವಾನ್  ವಿಷ್ಣು ವಿಕುಂಠೆಯೆಂಬ ಸ್ತ್ರೀರೂಪಧಾರಿಯಾಗಿದ್ದ ಕಾರಣ ವೈಕುಂಠ ಎಂಬ ಹೆಸರು ಬಂತೆಂದು ಇದೆ.

ಪುರಾಣದ ದಾಖಲೆಯೊಂದರಲ್ಲಿ ಭಾಗವತೋತ್ತಮನಾದ ನಂದಗೋಪನು ಶ್ರೀಕೃಷ್ಣನ ಹತ್ತಿರವೇ ಇದ್ದವನು. ಪೂಜೆ, ವ್ರತಗಳನ್ನು ಶ್ರದ್ಧಾಭಕ್ತಿಗಳಿಂದ ಮಾಡುವವನು. ಸ್ನಾನಕ್ಕಾಗಿ ಯಮುನೆಯ ಸಲಿಲಕ್ಕಿಳಿದವ ಮೇಲೆ ಬರಲೇ ಇಲ್ಲವಂತೆ. ಬೆಳಗಿನ ಸಮಯವಾದ ಕಾರಣ ರಾಕ್ಷಸರ ಸಂಚಾರದ ಕಾಲ. ವರುಣದೇವನ ಅಂಗರಕ್ಷಕನೋರ್ವ ಖಳನಾಗಿದ್ದು ನಂದಗೋಪನನ್ನು ಎಳೆದೊಯ್ದನಂತೆ. ವಿಷಯವರಿತ ಕೃಷ್ಣ ಆತನನ್ನು ಎದುರಿಸಿ ತನ್ನ ತಂದೆ ನಂದಗೋಪನನ್ನು ಪಾರು ಮಾಡಿದನಂತೆ. ನಂದಗೋಪನಿಗೆ ವೈಕುಂಠ ದರ್ಶನ ಭಾಗ್ಯವಾಯಿತು. ಹಿಂದಿರುಗಿ ಬಂದ ನಂದಗೋಪ ಗೋಪಾಲಕರಿಗೆ ಎಲ್ಲವನ್ನೂ ಅರುಹಿದ. ನಮಗೂ ವೈಕುಂಠ ತೋರಿಸೆಂದು ಭಗವಂತನಿಗೆ ಕೇಳಿಕೊಂಡಾಗ, ಯಮುನೆಯಲ್ಲಿರುವ ಬ್ರಹ್ಮಕುಂಡದಲ್ಲಿ ಮುಳುಗೆದ್ದು ಬನ್ನಿರೆಂದು ದೇವ ಆಜ್ಞಾಪಿಸಿದನಂತೆ. ವೈಕುಂಠ ದರುಶನ ಭಾಗ್ಯದಿಂದ ತೃಪ್ತರಾದರಂತೆ ಗೋಪಾಲಕರು.ಆ ದಿನವೇ ವೈಕುಂಠ ಏಕಾದಶಿ ಎಂದು ಪ್ರಸಿದ್ಧವಾಯಿತು.

ಭಗವಾನ್ ವಿಷ್ಣುವಿನ ಪೂಜೆ, ತಪ, ಧ್ಯಾನವನ್ನು ನಿಷ್ಠೆಯಿಂದ ಈ ದಿನ ಉಪವಾಸವಿದ್ದು ಮಾಡಿದವನಿಗೆ ವೈಕುಂಠ ಪ್ರಾಪ್ತಿ, ಮೋಕ್ಷದ ಹಾದಿ ಸಿಗುವುದೆಂಬ ನಂಬಿಕೆ. ಭಗವಂತನಲ್ಲಿ ಕಷ್ಟ ಕೊಡಬೇಡವೆಂದು ಕೇಳುವುದಲ್ಲ. ಕಷ್ಟ ಬಂದಾಗ ಎದುರಿಸಿ ಹೋರಾಡುವ ಶಕ್ತಿ ಕೊಡೆಂದು ಪ್ರಾರ್ಥಿಸಬೇಕು.

-ರತ್ನಾ ಕೆ ಭಟ್,ತಲಂಜೇರಿ

(ವಿವಿಧ ಪುರಾಣಗಳಿಂದ ಸಂಗ್ರಹ)

ಚಿತ್ರ ಕೃಪೆ: ಇಂಟರ್ನೆಟ್ ತಾಣ