ವೈಚಾರಿಕ ಕಿರು ಲೇಖನ - ಮನೆಯ ಮುಂದೆ ರಂಗವಲ್ಲಿ…

ವೈಚಾರಿಕ ಕಿರು ಲೇಖನ - ಮನೆಯ ಮುಂದೆ ರಂಗವಲ್ಲಿ…

ಹೆಚ್ಚಿನ ಮನೆಗಳಲ್ಲಿ ಮನೆಯ ಮುಂದೆ ಗುಡಿಸಿ, ನೀರು ಚಿಮುಕಿಸಿ, ಸಾರಿಸುವುದು ದಿನನಿತ್ಯದ ಬೆಳಗಿನ ಕೆಲಸ. ಚುಕ್ಕಿಗಳನಿಟ್ಟು, ವಿವಿಧ ರೀತಿಯ ರಂಗೋಲಿ ಬರೆಯುತ್ತಾರೆ. ಕೆಲವೊಂದು ಸಲ ಮನೆಯಲ್ಲಿ ಶುಭಸಮಾರಂಭಗಳಿರುವಾಗ, ಹಬ್ಬಹರಿದಿನಗಳಲ್ಲಿ ಬಣ್ಣಬಣ್ಣದ ರಂಗವಲ್ಲಿಗಳನ್ನು ಬಣ್ಣದ ರಂಗೋಲಿ ಹುಡಿಯಿಂದಲೂ ಹಾಕುವುದಿದೆ. ಹೂವಿನ ದಳಗಳಿಂದಲೂ ರಂಗವಲ್ಲಿ ರಚಿಸುತ್ತಾರೆ.

ಬಿಳಿ ಬಣ್ಣ ಎಂಬುದು ತ್ಯಾಗದ, ಶಾಂತಿಯ, ಸ್ವಚ್ಛತೆಯ, ಶುದ್ಧತೆಯ, ನಿರ್ಮಲತೆಯ ಸಂಕೇತ. ಬಿಳಿ ಬಣ್ಣ ಕಣ್ಣಿಗೆ ಅಂದ, ಮನಸ್ಸಿಗೆ ಮುದ ನೀಡುವುದು. ಸಾತ್ವಿಕ ಭಾವನೆಯ ಮೆಟ್ಟಿಲೆನ್ನಬಹುದು. ಮುಂಜಾನೆ ಸಮಯದಲ್ಲಿ ರಂಗವಲ್ಲಿ ಹಾಕುವಾಗ ಹಕ್ಕಿಗಳ ಚಿಲಿಪಿಲಿ ಕಲರವ, ದನಕರುಗಳ ಕೂಗು, ನಿರ್ಮಲವಾದ ಮನಸ್ಸು, ಗೃಹಿಣಿಯ ಕೈಬೆರಳುಗಳ ಚಮತ್ಕಾರದ ಸೊಗಸು ಚಂದ. ಮನೆಯ ಮುಂದೆ ವರ್ಣಮಯ ರಂಗವಲ್ಲಿ ಕಂಡಾಗ ಒಮ್ಮೆ ಪಾದಗಳು ಅಲ್ಲೇ ನಿಂತು ಬಿಡುವುದು ಸಾಮಾನ್ಯ. ಪ್ರಾಣಿ ಪಕ್ಷಿಗಳು, ಹೂವು ಹಣ್ಣು ತರಕಾರಿಗಳು, ವಿವಿಧ ಕಲಾಕೃತಿಗಳು, ನರ್ತಕಿಯರು, ಮರಗಳು, ದೇವ ದೇವತೆಯರು, ಪ್ರಕೃತಿ ಎಲ್ಲವನ್ನೂ ವಿವಿಧ ರೀತಿಯಲ್ಲಿ ರಂಗೋಲಿ ಹಾಕುವುದನ್ನು ನೋಡುತ್ತೇವೆ. ಇತ್ತೀಚೆಗೆ ರಂಗವಲ್ಲಿ ಸ್ಪರ್ಧೆಗಳನ್ನು ಸಹ ಏರ್ಪಡಿಸಿ ಬಹುಮಾನ ನೀಡಿ ಪ್ರೋತ್ಸಾಹಿಸುವುದಿದೆ. ಪುರಾಣ ಕಾವ್ಯ, ಕಥಾನಕಗಳಲ್ಲಿ ರಂಗವಲ್ಲಿಯನ್ನು ಕಾಣಬಹುದು. ಋಷಿಮುನಿಗಳ ಕುಟೀರದೆದುರು, ಸೆಗಣಿ ಸಾರಿಸಿ ರಂಗೋಲಿ ಹಾಕುತ್ತಿದ್ದರಂತೆ. ಅಲ್ಲಿ ಶುದ್ಧತೆಗೆ ಆದ್ಯತೆಯೆಂಬ ಸಂಕೇತವದು. ದೇವತೆಗಳು ಈ ರಂಗವಲ್ಲಿಯ ಮಂಡಲದೊಳಗೆ ನೆಲೆಸಿ ಹರಸುವರೆಂಬ ಪ್ರತೀತಿ ಇದೆ. ಹೆಂಗಳೆಯರ ಕೈಬೆರಳುಗಳಲ್ಲಿ ಅರಳುವ ಈ ರಂಗೋಲಿಯ ಚಮತ್ಕಾರ ಮನಮೋಹಕ.

ಪೂರಕ ಮಾಹಿತಿ: ಡಾ. ಭಾರತಿ ಮರವಂತೆ ಎನ್ನುವವರು ತಮಿಳುನಾಡಿನ ‘ಜಾಕಿ ಬುಕ್ ಆಫ್ ವರ್ಲ್ದ್ ರೆಕಾರ್ಡ್' ಸಂಸ್ಥೆಯವರು ಆಯೋಜಿಸಿದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಲುವಾಗಿ ೭೬ ನಿಮಿಷದಲ್ಲಿ ೭೬ ವಿಧದಲ್ಲಿ ಭಾರತದ ರಾಷ್ಟ್ರಧ್ವಜದ ರಂಗೋಲಿಯನ್ನು ಬಿಡಿಸಿದ್ದರು. 

-ರತ್ನಾ ಕೆ ಭಟ್,ತಲಂಜೇರಿ

ಆಕರ:ಸನಾತನ ಸಂಸ್ಕಾರ ಮತ್ತು ಉದಯವಾಣಿ ಸಂಗ್ರಹ