ವೈಚಾರಿಕ ( ವೈಜ್ಞಾನಿಕ ) ಅಧ್ಯಾತ್ಮ...

ವೈಚಾರಿಕ ( ವೈಜ್ಞಾನಿಕ ) ಅಧ್ಯಾತ್ಮ...

ತಿರುಪತಿ ತಿರುಮಲ ತಿಮ್ಮಪ್ಪನ ಸನ್ನಿಧಿಯಲ್ಲಿ ಕಾಲ್ತುಳಿತಕ್ಕೆ ಸಿಲುಕಿ ವೆಂಕಟೇಶ್ವರ ಸ್ವಾಮಿಯ ಪಾದ ಸೇರಿದ ಆ ಮುಗ್ಧ ಭಕ್ತರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಾ, ಇನ್ನು ಮುಂದಾದರೂ ನಾವುಗಳು ಮತ್ತು ನೀವುಗಳು ದೇವರು, ಧರ್ಮ, ಆಧ್ಯಾತ್ಮದ ವಿಷಯದಲ್ಲಿ ಒಂದಷ್ಟು ಅರಿವು ಮೂಡಿಸಿಕೊಂಡು ನೆಮ್ಮದಿಯ ಬದುಕು ಕಾಣಲಿ ಎಂದು ಆಶಿಸುತ್ತಾ.... 

ನಮ್ಮೊಳಗಿನ ಅರಿವೇ ನಿಜವಾದ ದೇವರು, ಧರ್ಮ ಮತ್ತು ಆಧ್ಯಾತ್ಮ. ಅದನ್ನು ದಯವಿಟ್ಟು ಧೈರ್ಯವಾಗಿ, ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಿ. ಇದೊಂದು ವಿಶಿಷ್ಟ ಕಲ್ಪನೆ. ಸಾಮಾನ್ಯವಾಗಿ ಆಧ್ಯಾತ್ಮಿಕತೆ ಎಂದರೆ ಧಾರ್ಮಿಕ ನಂಬುಗೆಯ, ದೈವತ್ವದ ಕಲ್ಪನೆಯ ಮೋಕ್ಷದೆಡೆಗಿನ ಮನೋನಿಯಂತ್ರಣದ ಒಂದು ಪಯಣ ಅಥವಾ ಅರಿವು ಅಥವಾ ಸಾಧನೆ ಎಂದು ಕರೆಯಲಾಗುತ್ತದೆ. ಇದರಲ್ಲಿ ಅಗೋಚರ ಶಕ್ತಿಯ ಮೇಲಿನ ಭಕ್ತಿ ಮತ್ತು ಅದಕ್ಕೆ ಸಂಪೂರ್ಣ ಅರ್ಪಿಸಿಕೊಳ್ಳುವಿಕೆ ಮಹತ್ವದ ಪಾತ್ರ ವಹಿಸುತ್ತದೆ. ಜ್ಞಾನ ಮಾರ್ಗ, ಭಕ್ತಿ ಮಾರ್ಗ, ಕರ್ಮ ಮಾರ್ಗ, ರಾಜ ಮಾರ್ಗ ಇವುಗಳ ಗರಿಷ್ಠ ಉತ್ಕಟತೆ ಮತ್ತು ಸಮನ್ವಯತೆ ಇದರ ಸಾಧನೆಯ ಹಾದಿಗಳು. ಕೇವಲ ಋಷಿ ಮುನಿಗಳು, ಪ್ರಖ್ಯಾತರು, ಚಿಂತಕರು ಮಾತ್ರವಲ್ಲ ಆಸಕ್ತಿ ಇರುವ ಸಾಮಾನ್ಯರು ಸಹ ಅಧ್ಯಾತ್ಮದ ಜ್ಞಾನ ಪಡೆಯಲು ಅಥವಾ ಅದರಲ್ಲಿ ಸಾಧನೆ ಮಾಡಲು ಸಾಧ್ಯವಿದೆ.

ಆದರೆ ಈಗ ಇಲ್ಲಿ ಹೇಳ ಹೊರಟಿರುವ ವೈಚಾರಿಕ, ವೈಜ್ಞಾನಿಕ, ಅಧ್ಯಾತ್ಮದ ಗುರಿ ಸಾಂಪ್ರದಾಯಿಕ ಅಧ್ಯಾತ್ಮದ ಗುರಿಯೂ ಒಂದೇ ಆಗಿದೆ ಆದರೆ ಮಾರ್ಗ ಮಾತ್ರ ಭಿನ್ನವಾಗಿದೆ. ಸಾಂಪ್ರದಾಯಿಕ ಆಧ್ಯಾತ್ಮದಲ್ಲಿ ಕಾಲ್ಪನಿಕ ಲೋಕದ, ಅವಾಸ್ತವಿಕ ನೆಲೆಯ, ಈ ಕ್ಷಣದ ಪ್ರಾಯೋಗಿಕವಲ್ಲದ, ಪಲಾಯನವಾದದ, ಸಾಮಾನ್ಯ ಜನರ ತಿಳಿವಳಿಕೆಗೆ ನಿಲುಕದ ಅನೇಕ ಅಂಶಗಳು ಅಡಗಿವೆ. ಆದ್ದರಿಂದಲೇ ಅದು ಒಂದು ಕಬ್ಬಿಣದ ಕಡಲೆ ಎಂದು ಭಾವಿಸುವ ಜನ ಸಮೂಹ ಅದರಿಂದ ಬಹಳ ದೂರ ಸರಿದು ಅದು ಯಾರೋ ವಯಸ್ಸಾದ, ಸನ್ಯಾಸ ಸ್ವೀಕರಿಸಿದ, ಕೆಲಸ ಇಲ್ಲದವರ, ಗ್ರಂಥಗಳನ್ನು ಓದಿದ, ಮಹಾತ್ಮರ ದಾರಿ. ದಿನನಿತ್ಯದ ಬದುಕಿನ ಜಂಜಡದಲ್ಲಿ ಮುಳುಗಿದ ನಮಗೆ ಅದು ಸಾಧ್ಯವಿಲ್ಲ ಎಂದು ಭಾವಿಸಿದ್ದಾರೆ.

ಇದು ಖಂಡಿತ ತಪ್ಪು ಕಲ್ಪನೆ. ಅಧ್ಯಾತ್ಮ ಕೂಡ ಆಸಕ್ತಿ ಇರುವ ಎಲ್ಲರಿಗೂ ನಿಲುಕುವ ಒಂದು ಸಾಮಾನ್ಯ ಜ್ಞಾನ. ಇದಕ್ಕಾಗಿ ವೇದ ಉಪನಿಷತ್ತು, ರಾಮಾಯಣ, ಮಹಾಭಾರತ, ಖುರಾನ್, ಬೈಬಲ್ ಮುಂತಾದ ಗ್ರಂಥಗಳನ್ನು ಓದಲೇಬೇಕು ಎಂಬ ನಿಯಮವಿಲ್ಲ. ಬಹುದೊಡ್ಡ ಚಿಂತಕರ ಮಾರ್ಗದರ್ಶನ ಬೇಕೆ ಬೇಕು ಎಂಬ ಒತ್ತಡವಿಲ್ಲ. ಬದುಕಿನ ಸುಖ ಭೋಗಗಳನ್ನು ತ್ಯಾಗ ಮಾಡಲೇಬೇಕು ಎಂಬ ಅನಿವಾರ್ಯತೆ ಇಲ್ಲ. ಈಗ ನಾವು ಇರುವ ಸ್ಥಾನದಿಂದಲೇ, ನಮಗೆ ಸಿಗುತ್ತಿರುವ ಮಾಹಿತಿಗಳಿಂದಲೇ, ನಮ್ಮ ಜೀವನದ ಅನುಭವದಿಂದಲೇ, ನಮ್ಮ ಗೆಳೆಯರು, ಹಿತೈಷಿಗಳ, ಪರಿಚಯದಿಂದಲೇ ವೈಚಾರಿಕ ಅಧ್ಯಾತ್ಮದ ಸಾಧನೆ ಮಾಡಬಹುದು. ಆರೋಗ್ಯವಂತ ಪ್ರೌಢಾವಸ್ಥೆ ತಲುಪಿದ ಪ್ರತಿ ಮನುಷ್ಯನಿಗೂ ಮೆದುಳಿದೆ ಮತ್ತು ಅದು ಎಲ್ಲಾ ಆಗುಹೋಗುಗಳನ್ನು ಗ್ರಹಿಸುತ್ತದೆ. ಗ್ರಹಿಕೆಗಳು ಮನಸ್ಸಿನಲ್ಲಿ ಮೂಡಿ ಚಿಂತನೆಯನ್ನು ಹುಟ್ಟುಹಾಕುತ್ತದೆ. ಅದರ ಜೊತೆ ದೇಹವೂ ಪ್ರತಿಕ್ರಿಯಿಸುತ್ತದೆ. ಇದು ಮನುಷ್ಯ ಪ್ರಾಣಿಯ ಸಹಜ ಕ್ರಿಯೆ ಮತ್ತು ಎಲ್ಲರಲ್ಲಿಯೂ ಕಂಡುಬರುವ ಗುಣಲಕ್ಷಣ. ಆದರೆ ಗ್ರಹಿಕೆ ಮತ್ತು ಚಿಂತನೆಯಲ್ಲಿ ಮನುಷ್ಯರಲ್ಲಿ ಸಾಕಷ್ಟು ವೈವಿಧ್ಯತೆ ಇದೆ. ಅನುವಂಶೀಯ ಗುಣಗಳಿಂದ ಹಿಡಿದು ಪ್ರೌಢಾವಸ್ಥೆ ತಲುಪುವವರೆಗೆ ಅನೇಕ ಅಂಶಗಳು ನಮ್ಮನ್ನು ಪ್ರಭಾವಿಸುತ್ತವೆ ಮತ್ತು ನಿಯಂತ್ರಿಸುತ್ತವೆ. ಜೊತೆಗೆ ಬದುಕಿನ ಅನಿವಾರ್ಯತೆ ನಮ್ಮ ತನವನ್ನು ಸಹಜವಾಗಿ ಬೆಳೆಯಲು ಬಿಡುವುದಿಲ್ಲ. ಇಂತಹ ಬದುಕಿನಲ್ಲೂ ನಾವು ಅಧ್ಯಾತ್ಮದ ಸಾಧನೆ ಖಂಡಿತ ಮಾಡಬಹುದು.

ಅಧ್ಯಾತ್ಮ ಎಂದರೇನು ? ಸರಳವಾಗಿ ಹೇಳುವುದಾದರೆ, ಅರಿವಿನ ಜೊತೆ ನಾವು ಸಾಧಿಸಬಹುದಾದ ಮಾನಸಿಕ ನಿಯಂತ್ರಣವೇ ಅಧ್ಯಾತ್ಮ. ಆ ಅರಿವು ಒಂದು ನಿರ್ದಿಷ್ಟ ವಿಷಯಕ್ಕಲ್ಲದೆ ನಮ್ಮ ಇಡೀ ವ್ಯಕ್ತಿತ್ವದ ಸಂಪೂರ್ಣ ಭಾಗವಾಗಿರಬೇಕು. ಅರಿವಿನಲ್ಲಿ ಅನೇಕ ಮಿತಿಗಳು ಇರುತ್ತವೆ. ಆದರೆ ಯಾವುದೇ ಪರಿಸ್ಥಿತಿಯಲ್ಲಿ ಅದಕ್ಕೆಲ್ಲ ಒಂದು ಪರಿಹಾರಾತ್ಮಕ ಉತ್ತರ ಹುಡುಕಿಕೊಂಡು ಮಾನಸಿಕ ನಿಯಂತ್ರಣ ಸಾಧಿಸುವುದು ಅಧ್ಯಾತ್ಮ ಸಾಧಕರಿಗೆ ಸಿದ್ದಿಸಿರುತ್ತದೆ. ( ಧಾರ್ಮಿಕ ಹಿನ್ನೆಲೆಯ ವ್ಯಕ್ತಿಗಳು ಅಧ್ಯಾತ್ಮಕ್ಕೆ ಇನ್ನೂ ವಿಶಾಲ ಮತ್ತು ಅಗೋಚರ ಅರ್ಥ ಕೊಡುತ್ತಾರೆ )

ಭಾರತದ ಇತಿಹಾಸದಲ್ಲಿ ರಾಮಕೃಷ್ಣ ಪರಮಹಂಸರು ಆಧ್ಯಾತ್ಮಿಕ ಜ್ಞಾನದಲ್ಲಿ ಉತ್ತುಂಗ ತಲುಪಿದ್ದರು ಎಂದು ಹೇಳಲಾಗುತ್ತದೆ. ರಮಣ ಮಹರ್ಷಿಗಳ ವಿಷಯದಲ್ಲಿಯೂ ಇದೇ ಅಭಿಪ್ರಾಯವಿದೆ. ಹಾಗೆ ನೋಡಿದರೆ ಬುದ್ದ ಮಹಾವೀರ ಶಂಕರ ರಾಮಾನುಜ ಮಧ್ವ  ಬಸವೇಶ್ವರ ಕಬೀರ್ ಮೀರಾ ಬಾಯಿ ಅಕ್ಕಮಹಾದೇವಿ ಅಲ್ಲಮಪ್ರಭು ವಿವೇಕಾನಂದ ಗಾಂಧಿ ಮುಂತಾದ ಅನೇಕರನ್ನು ಅವರದೇ ರೀತಿಯಲ್ಲಿ ಆಧ್ಯಾತ್ಮಿಕ ಅರಿವಿನ ಸಾಧಕರೆಂದು ಗುರುತಿಸಲಾಗುತ್ತದೆ. ಆಧ್ಯಾತ್ಮಿಕತೆಯ ಆಳವನ್ನು ಅಳೆಯಲು ಯಾವುದೇ ಮಾನದಂಡಗಳು ಇಲ್ಲ. ಅವರ ಚಿಂತನೆಗಳ ಆಧಾರದ ಮೇಲೆ ಇದನ್ನು ಗುರುತಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಸಾಮಾನ್ಯರು ಸಹ ಸಾಧಿಸಬಹುದಾದ ವೈಚಾರಿಕ ಅಧ್ಯಾತ್ಮದ ಕೆಲವು ಮಾರ್ಗಗಳೆಂದರೆ ನಮ್ಮ ಕಣ್ಣಿಗೆ ಕಾಣುವ ತಿಳಿವಳಿಕೆಗೆ ನಿಲುಕುವ ಸ್ಪರ್ಶಕ್ಕೆ ಸಿಗುವ ವ್ಯಾವಹಾರಿಕ ಜಗತ್ತಿನ ಎಲ್ಲವನ್ನೂ ಏಕಾಗ್ರತೆಯಿಂದ ಗ್ರಹಿಸಿ ಅದರ ಆಧಾರದ ಮೇಲೆಯೇ ಮಾನಸಿಕ ನಿಯಂತ್ರಣ ಸಾಧಿಸುವುದು. ಆಗೋಚರ ಶಕ್ತಿಯ ಅಥವಾ ನಮ್ಮ ಅರಿವಿಗೆ ಬಾರದ ಯಾವುದನ್ನೂ ನಾವು ನಂಬಬಾರದು. ಎಲ್ಲೋ ಕೇಳಿದ, ಯಾರೋ ಹೇಳಿದ ಅಪರೂಪದ ಅಸಹಜ ಘಟನೆಗಳು ಅಥವಾ ವಿಷಯಗಳನ್ನು ಗಣನೆಗೆ ತೆಗೆದುಕೊಳ್ಳಬಾರದು.

ಜನಪ್ರಿಯತೆ ಗಳಿಸಿರುವ  ಧಾರ್ಮಿಕ ಚಿಂತಕರ ಸ್ತುಪ್ತ ಮನಸ್ಸು, ಆತ್ಮದ ಪಯಣ, ಪುನರ್ ಜನ್ಮ, ಆಕಸ್ಮಿಕ ಘಟನೆಗಳು, ವಿಶಿಷ್ಟ ಅನುಭವ ಮುಂತಾದ ಅಸಹಜ ಮತ್ತು ಸಾರ್ವತ್ರಿಕವಲ್ಲದ ವಿಷಯಗಳ ಬಗ್ಗೆ ತಲೆ ಕೆಡಿಸಿಕೊಳ್ಳಬಾರದು. ಅಮೆರಿಕ ಅಥವಾ ಚಂದ್ರಲೋಕವನ್ನು ನಾವು ನೋಡಿಲ್ಲ, ಗಾಳಿ ನೋವು ನಮ್ಮ ಕಣ್ಣಿಗೆ ಕಾಣುವುದಿಲ್ಲ ಎಂದ ಮಾತ್ರಕ್ಕೆ ಅದನ್ನು ಇಲ್ಲ ಎನ್ನಲಾಗುತ್ತದೆಯೇ ಎನ್ನುವ ಕುಹುಕ ಚರ್ಚೆಗಳಿಗೆ ಬಲಿ ಬೀಳಬಾರದು. ಅವು ಸಹಜವಾಗಿ ನಮ್ಮ ಅರಿವು ಅನುಭವಕ್ಕೆ ಬರುವುದು ಮುಖ್ಯವಾಗಬೇಕು. ಯಾರದೋ ಅತಿಮಾನುಷ ಶಕ್ತಿಯನ್ನು ಕೇಳಿ ಅಥವಾ ನೋಡಿ ಅದನ್ನೇ ದೊಡ್ಡ ಸಾಧನೆ ಎಂದು ಅರ್ಥಮಾಡಿಕೊಳ್ಳಬಾರದು. ಕೆಲವೊಮ್ಮೆ ಅಸಹಜ ರೀತಿಯ ಪ್ರತಿಭೆಗಳು ನಮ್ಮ ನಡುವೆ ಉದ್ಭವವಾಗುತ್ತವೆ. ಆದರೆ ಅದನ್ನು ಸಾರ್ವತ್ರಿಕ ಸತ್ಯ ಎಂದು ಪರಿಗಣಿಸಬಾರದು. ಯಾರೋ ಒಬ್ಬರೋ ಇಬ್ಬರೋ ಕೇವಲ ನೀರು ಕುಡಿದು ಬದುಕಿದ್ದಾರೆ, ಒಂದು ಮಗು ಮೂರನೇ ವಯಸ್ಸಿಗೆ ವಿಶ್ವದ ಅನೇಕ ಭಾಷೆಗಳನ್ನು ಮಾತನಾಡುತ್ತದೆ, ಇನ್ಯಾರೋ ದೇವರೊಂದಿಗೆ ಮಾತನಾಡಿದ್ದೇನೆ ಎನ್ನುವ ವಿಷಯಗಳನ್ನು ಆ ಘಟನೆಗೆ ಸೀಮಿತವಾಗಿ ಮಾತ್ರ ನೋಡಬೇಕು.

ಹುಟ್ಟು ಸಾವು ಸಂಸಾರ ಅನಾರೋಗ್ಯ ಅಪಘಾತ ಆಕಸ್ಮಿಕ ವ್ಯವಹಾರ ಆಡಳಿತ ಸೋಲು ಗೆಲುವು ಎಲ್ಲವನ್ನೂ ಸಹಜ ಪರಿಸ್ಥಿತಿಯಲ್ಲಿ ಅವಲೋಕನ ಮಾಡಿ ಗ್ರಹಿಸಿ ಅದರ ಆಧಾರದ ಮೇಲೆ ನಮ್ಮ ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸುವುದೇ ವೈಜ್ಞಾನಿಕ ಅಧ್ಯಾತ್ಮ ಎಂದು ಕರೆಯಬಹುದು. ಇಲ್ಲಿ ಅಳುವೂ ಇದೆ ನಗುವೂ ಇದೆ ಕಷ್ಟ ಸುಖಗಳು ಇವೆ ಮೋಸ ವಂಚನೆಗಳು ಇವೆ ಸಾವು ನೋವುಗಳು ಸೋಲು ವಿಫಲತೆಗಳು ಅದೃಷ್ಟ ದುರಾದೃಷ್ಟಗಳು ಇವೆ ಆದರೆ ಅದನ್ನು ಸಹಜವಾಗಿ ಸ್ವೀಕರಿಸುವ ಮನೋ ಭೂಮಿಕೆಯೇ ವೈಚಾರಿಕ ಅಧ್ಯಾತ್ಮ.

ನಾವೆಲ್ಲರೂ ಎಂದಿನ ದಿನನಿತ್ಯದ ಚಟುವಟಿಕೆಗಳನ್ನು ಮಾಡುತ್ತಾ ಅದರ ಅನುಭವದ ಆಧಾರದಲ್ಲಿಯೇ ನಮ್ಮ ಅರಿವಿನ ಮಿತಿಯಲ್ಲಿಯೇ ಇದನ್ನು ಸಾಧಿಸಬಹುದು ಆ ಮುಖಾಂತರ ನಮ್ಮ ಮಾನಸಿಕ ಜೀವನಮಟ್ಟವನ್ನು ಉತ್ತಮಪಡಿಕೊಳ್ಳಬಹುದು. ನಮ್ಮ ಬದುಕಿನ ಮೇಲೆ ನಿಯಂತ್ರಣ ಸಾಧಿಸಬಹುದು. ನೆಮ್ಮದಿಯ ಮಟ್ಟವನ್ನು ಹೆಚ್ಚಿಸಿಕೊಳ್ಳಬಹುದು. ಸಾವು ಸಹಜ ಎಂಬ ಅರಿವು, ಸೋಲು ಗೆಲುವ ಸಾಮಾನ್ಯ ಎಂಬ ತಿಳಿವಳಿಕೆ, ಅಧಿಕಾರ ಹಣ ಆಸ್ತಿ ಶಾಶ್ವತವಲ್ಲ ಎಂಬ ಭಾವನೆ, ಅರಿಷಡ್ವರ್ಗಗಳು ಮಾನವನ ಸಹಜ ಸ್ವಭಾವಗಳು ಎನ್ನುವ ಅರ್ಥ,

ನಗು ಬಂದಾಗ ನಗುವುದು ಅಳು ಬಂದಾಗ ಅಳುವುದು ರೋಗ ಬಂದಾಗ ನರಳುವುದು ಎಲ್ಲವೂ ಬದುಕಿನ ಭಾಗ ಎಂದು ಸ್ವೀಕರಿಸುವ ಮನೋಭಾವವೇ ವೈಜ್ಞಾನಿಕ ಅಧ್ಯಾತ್ಮ. ಜನ ಸಾಮಾನ್ಯರು ಸಹ ಮನೋ ನಿಯಂತ್ರಣದ ಈ ಆಧ್ಯಾತ್ಮಿಕ ಸಾಧಕರಾದಾಗ ಖಂಡಿತ ಈ ಸಮಾಜ ಈಗಿನ ಪರಿಸ್ಥಿತಿಗಿಂತ ಉತ್ತಮ ಗುಣಮಟ್ಟದ ಶಾಂತಿ ಸೌಹಾರ್ದತೆ ಸಮಾನತೆಯ ಸಮಾಜ ನಿರ್ಮಾಣ ಆಗುವ ಸಾಧ್ಯತೆ ಇದೆ. ನಿಮ್ಮ ಯೋಚಿಸುವ ಸ್ವಾತಂತ್ರ್ಯವನ್ನು ಪ್ರೋತ್ಸಾಹಿಸುತ್ತಾ ಮತ್ತು ಗೌರವಿಸುತ್ತಾ…

-ವಿವೇಕಾನಂದ. ಎಚ್.ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ