ವೈಜ್ಞಾನಿಕ ಚಿಂತನೆಯನ್ನು ನೆನಪಿಸುವ ವಿಜ್ಞಾನ ದಿನ

ವೈಜ್ಞಾನಿಕ ಚಿಂತನೆಯನ್ನು ನೆನಪಿಸುವ ವಿಜ್ಞಾನ ದಿನ

ಅನಾದಿ ಕಾಲದಿಂದಲೂ ಮಾನವನ ಬದುಕಿನಲ್ಲಿ ವಿಕಾಸವಾಗುತ್ತಾ ಬಂದಿದೆ. ಕಾಲ ಕಳೆದಂತೆ ಹೊಸ ಹೊಸ ಅನ್ವೇಷಣೆಗಳು ನಡೆಯುತ್ತಾ ಬಂದಿವೆ. ನಮ್ಮ ಬದುಕಿನ ಪ್ರತಿಯೊಂದು ಹಂತದಲ್ಲೂ ವಿಜ್ಞಾನ ನಮಗೆ ಬೆಂಬಲ ನೀಡಿದೆ. ಹಾರಾಡುವ ವಿಮಾನ, ನೋಡುವ ದೂರದರ್ಶನ, ಮಾತಾಡುವ ದೂರವಾಣಿ, ಬೆಳಕು ಚೆಲ್ಲುವ ವಿದ್ಯುತ್ ದೀಪ, ಗುಂಡು ಹೊಡೆಯುವ ಬಂದೂಕು, ಲೆಕ್ಕ ಹೇಳುವ ಗಣಕ ಯಂತ್ರ ಹೀಗೆ ಹತ್ತು ಹಲವಾರು ಅನ್ವೇಷಣೆಗಳು ಆಗಿವೆ. ಈಗಲೂ ನಡೆಯುತ್ತಾ ಬಂದಿವೆ. ಈ ನಿರಂತರ ವೈಜ್ಞಾನಿಕ ಅನ್ವೇಷಣೆ ಹಾಗೂ ಸಂಶೋಧನೆಗಳಿಂದಲೇ ನಾವು ಕಳೆದ ವರ್ಷ ತಲೆದೋರಿದ ಕೊರೋನಾ ಸಾಂಕ್ರಾಮಿಕ ರೋಗವನ್ನು ಹತೋಟಿಯಲ್ಲಿಡಲು ಒಂದು ವರ್ಷಕ್ಕೂ ಕಡಿಮೆ ಸಮಯದಲ್ಲಿ ಲಸಿಕೆಯನ್ನು ನಿರ್ಮಾಣ ಮಾಡಲಾಯಿತು. ಇದಕ್ಕಾಗಿ ಸಾವಿರಾರು ವಿಜ್ಞಾನಿಗಳು, ಸಂಶೋಧಕರು ಶ್ರಮ ವಹಿಸಿದ್ದಾರೆ. ಇವರೆಲ್ಲರನ್ನೂ ನೆನಪಿಸಲು ನಾವು ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸಲೇ ಬೇಕು. ಏನಿದು ವಿಜ್ಞಾನ ದಿನ? ಬನ್ನಿ ಒಂದು ಮಾಹಿತಿಯನ್ನು ತಿಳಿಯೋಣ…

ಸರ್ ಸಿ.ವಿ.ರಾಮನ್ (ಚಂದ್ರಶೇಖರ ವೆಂಕಟ ರಾಮನ್) ಭಾರತ ಕಂಡ ಶ್ರೇಷ್ಟ ಭೌತ ವಿಜ್ಞಾನಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಇವರು ೧೯೨೮ ಫೆಬ್ರವರಿ ೨೮ರಂದು ‘ರಾಮನ್ ಪರಿಣಾಮ (ಪ್ರಭಾವ)' (Raman Effect) ವನ್ನು ಸಂಶೋಧಿಸಿದರು. ಇದಕ್ಕಾಗಿ ಅವರಿಗೆ ೧೯೩೦ರಲ್ಲಿ ಭೌತಶಾಸ್ತ್ರದಲ್ಲಿ ಉನ್ನತ ಸಂಶೋಧನೆ ಮಾಡಿದಕ್ಕಾಗಿ ನೊಬೆಲ್ ಪ್ರಶಸ್ತಿ ದೊರೆಯಿತು. ಹೀಗೆ ನೊಬೆಲ್ ಪ್ರಶಸ್ತಿ ಪಡೆದ ಮೊದಲ ಏಷ್ಯಾ ಖಂಡದ ವ್ಯಕ್ತಿ ರಾಮನ್.

ಸಿ ವಿ ರಾಮನ್ ಹುಟ್ಟಿದ್ದು ನವೆಂಬರ್ ೭, ೧೮೮೮ರಲ್ಲಿ ತಮಿಳುನಾಡು ರಾಜ್ಯದ ತಿರುಚನಾಪಳ್ಳಿ ಜಿಲ್ಲೆಯ ತಿರುವನೈಕಾವಲ್ ಎಂಬ ಊರಿನಲ್ಲಿ. ಇವರ ತಂದೆ ಚಂದ್ರಶೇಖರ್ ಹಾಗೂ ತಾಯಿ ಪಾರ್ವತಿ ಅಮ್ಮಾಳ್. ಇವರ ತಂದೆ ಕಾಲೇಜಿನಲ್ಲಿ ಭೌತಶಾಸ್ತ್ರ ಉಪನ್ಯಾಸಕರಾಗಿದ್ದರು. ರಾಮನ್ ಅವರಿಗೆ ಬಾಲ್ಯದಿಂದಲೇ ಸಂಶೋಧನೆಗಳತ್ತ ಬಹಳ ಒಲವು. ೧೯೦೭ರಲ್ಲಿ ತಮ್ಮ ಸ್ನಾತಕೋತ್ತರ ಪದವಿಯನ್ನು ಪಡೆದ ರಾಮನ್ ಸ್ವಲ್ಪ ಸಮಯ ಕಲ್ಕತ್ತಾದ ಅಂಚೆ ಮತ್ತು ತಂತಿ ಇಲಾಖೆಯಲ್ಲಿ ಕೆಲಸ ಮಾಡಿದರು. ಕಲ್ಕತ್ತ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡುವಾಗ ಹಲವಾರು ಸಂಶೋಧನೆಗಳನ್ನು ಮಾಡಿದರು. ಇವರು ತಾವಾಯಿತು, ತಮ್ಮ ಕೆಲಸವಾಯಿತು ಎಂದು ಬದುಕಿದವರು. 

ಹಲವಾರು ವಿಜ್ಞಾನ ಪತ್ರಿಕೆಗಳನ್ನು ಮುನ್ನಡೆಸಿದರು, ಸಂಶೋಧನಾತ್ಮಕ ಪ್ರಬಂಧಗಳನ್ನು ಬರೆದರು. ಲಂಡನ್ ಗೆ ಹೋಗಿ ಅಲ್ಲಿಯ ಹಲವಾರು ವಿಶ್ವವಿದ್ಯಾನಿಲಯಗಳಲ್ಲಿ ಭಾಷಣ ಮಾಡಿ ತಮ್ಮ ಜ್ಞಾನದ ಪ್ರಭಾವವನ್ನು ತೋರಿಸಿಕೊಟ್ಟರು. ಭಾರತೀಯರು ಅವಕಾಶ ದೊರೆತರೆ ಯಾವ ಸಾಧನೆಯನ್ನು ಬೇಕಾದರೂ ಮಾಡುತ್ತಾರೆ ಎಂಬುವುದನ್ನು ನಿರೂಪಿಸಿದರು.

೧೯೨೮ರಲ್ಲಿ ಇವರು ಭೌತಶಾಸ್ತ್ರದಲ್ಲಿ ಕಂಡು ಹಿಡಿದ ದ್ರವಗಳಲ್ಲಿ ಬೆಳಕು ಹರಡುವ ಹೊಸ ನಿಯಮಗಳಿಂದ ಬಹಳ ಖ್ಯಾತಿ ಗಳಿಸಿದರು. ಈ ಸಂಶೋಧನೆಗೆ ರಾಮನ್ ಎಫೆಕ್ಟ್ ಎಂದೇ ಹೆಸರಿಸಲಾಗಿದೆ. ಈ ಪರಿಣಾಮ ಅಥವಾ ಪ್ರಭಾವವನ್ನು ರಾಮನ್ ಅನ್ವೇಷಣೆ ಮಾಡಲು ಹೊಳೆದದ್ದು ಹೇಗೆಂದರೆ, ರಾಮನ್ ಅವರು ಹಡಗಿನಲ್ಲಿ ಪ್ರಯಾಣ ಮಾಡುವಾಗ ಸಾಗರದ ನೀರು ನೀಲಿಯಾಗಿ ಕಾಣಿಸುತ್ತಿತ್ತು. ಆದರೆ ನೀರಿಗೆ ಬಣ್ಣವಿಲ್ಲ. ಹಾಗೇ ಆಕಾಶವೂ ನೀಲಿ ಬಣ್ಣದಲ್ಲಿರುವುದನ್ನು ಕಂಡು ಇದರ ಹಿಂದಿನ ರಹಸ್ಯವನ್ನು ತಿಳಿಯಬೇಕೆಂದು ಹಲವಾರು ಪ್ರಯೋಗಗಳನ್ನು ಮಾಡಿದರು. ಬೆಳಕಿನ ಚದುರುವಿಕೆಯ ಪರಿಣಾಮದ ಬಗ್ಗೆ ಅರಿತು ‘ರಾಮನ್ ಪರಿಣಾಮ'ವನ್ನು ಅನ್ವೇಷಿಸಿದರು. 

೧೯೨೪ರಲ್ಲಿ ಫೆಲೋ ಆಫ್ ರಾಯಲ್ ಸೊಸೈಟಿಯ ಸದಸ್ಯತ್ವ, ೧೯೨೯ರಲ್ಲಿ ನೈಟ್ (ಸರ್) ಪ್ರಶಸ್ತಿ ದೊರೆತಿದೆ. ರಾಮನ್ ಅವರಿಗೆ ೧೯೫೪ರಲ್ಲಿ ಭಾರತ ರತ್ನ ಹಾಗೂ ೧೯೫೮ರಲ್ಲಿ ಲೆನಿನ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ರಾಮನ್ ಅವರು ೧೯೩೪ರಲ್ಲಿ ಬೆಂಗಳೂರಿನ ಟಾಟಾ ಸಂಶೋಧನಾ ಕೇಂದ್ರದ ನಿರ್ದೇಶಕರಾಗಿದ್ದರು. ನಂತರದ ದಿನಗಳಲ್ಲಿ ತಮ್ಮೆಲ್ಲಾ ಆಸ್ತಿಯನ್ನು ಮಾರಿ ೧೯೪೮ರಲ್ಲಿ ರಾಮನ್ ಅವರು ಒಂದು ಸಂಶೋಧನಾ ಕೇಂದ್ರವನ್ನು ಬೆಂಗಳೂರಿನಲ್ಲಿ ಸ್ಥಾಪಿಸುತ್ತಾರೆ. ತಮ್ಮ ಅಂತ್ಯಕಾಲದ ತನಕ ಈ ಕೇಂದ್ರದಲ್ಲೇ ರಾಮನ್ ಅವರು ದುಡಿದಿದ್ದಾರೆ. ಇದು ರಾಮನ್ ವಿಜ್ಞಾನ ಸಂಶೋಧನಾ ಕೇಂದ್ರವೆಂದು ಪ್ರಸಿದ್ಧಿಯಾಗಿದೆ. ರಾಮನ್ ಅವರು ನವೆಂಬರ್ ೨೭, ೧೯೭೦ರಲ್ಲಿ ಬೆಂಗಳೂರಿನಲ್ಲಿ ನಿಧನ ಹೊಂದಿದರು. 

‘ರಾಮನ್ ಪರಿಣಾಮ'ವನ್ನು ಸಂಶೋಧಿಸಿದ ದಿನವಾದ ಫೆಬ್ರವರಿ ೨೮ನ್ನು ಭಾರತದಲ್ಲಿ ಪ್ರತೀ ವರ್ಷ ‘ರಾಷ್ಟ್ರೀಯ ವಿಜ್ಞಾನ ದಿನ' ಎಂದು ಆಚರಿಸಲಾಗುತ್ತದೆ. ೧೯೮೬ರಲ್ಲಿ ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯು ಈ ಬಗ್ಗೆ ಘೋಷಣೆ ಮಾಡಿತು. ೧೯೮೭ರ ಫೆಬ್ರವರಿ ೨೮ರಿಂದ ಪ್ರತೀ ವರ್ಷ ವಿಜ್ಞಾನ ದಿನ ಆಚರಣೆಗೆ ಬಂತು. ಶಾಲಾ-ಕಾಲೇಜುಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಬಗ್ಗೆ ಆಸಕ್ತಿಯನ್ನು ಮೂಡಿಸುವ ನಿಟ್ಟಿನಲ್ಲಿ ಮುಂದಡಿಯಿಡಲು ಈ ದಿನವನ್ನು ಬಳಸುತ್ತಾರೆ. ಆ ಮೂಲಕ ವಿದ್ಯಾರ್ಥಿಗಳಲ್ಲಿ ಸಂಶೋಧನಾ ಮನೋಭಾವನೆಯನ್ನು ಮೂಡಿಸುವುದರ ಜೊತೆಗೆ ಭಾರತದ ಕಂಡ ಶ್ರೇಷ್ಟ ವಿಜ್ಞಾನಿಗಳಲ್ಲಿ ಒಬ್ಬರಾದ ಸಿ.ವಿ.ರಾಮನ್ ಅವರನ್ನು ನೆನಪಿಸಿಕೊಂಡಂತೆಯೂ ಆಗುತ್ತದೆ.

ವಿಜ್ಞಾನಿಗಳು ಸಂಶೋಧಿಸಿದ ಆಧುನಿಕ ಯಂತ್ರೋಪಕರಣಗಳು ನಮ್ಮ ದೈನಂದಿನ ಜೀವನವನ್ನು ಸುಲಭವನ್ನಾಗಿಸಿದೆ. ವಿಜ್ಞಾನದ ಬೆಳವಣಿಗೆ ಮಾನವನಿಗೆ ವರವೇ ಹೊರತು ಶಾಪವಲ್ಲ. ಡೈನಮೈಟ್ ಕಂಡು ಹಿಡಿದ ಆಲ್ಫ್ರೆಡ್ ನೊಬೆಲ್ ಅದನ್ನು ತಯಾರಿಸಿದ್ದು ಜನರ ಉಪಕಾರಕ್ಕೆ. ಆದರೆ ಅದರ ದುರುಪಯೋಗವೇ ಜಾಸ್ತಿ ಆದಾಗ ಅವರು ತುಂಬಾನೇ ನೊಂದುಕೊಂಡರು. ಮನುಷ್ಯನ ಸ್ವಾರ್ಥ, ಬೇರೆಯವರ ಕುರಿತು ದ್ವೇಷ ಇವೆಲ್ಲಾ ನಮ್ಮನ್ನು ಇನ್ನಷ್ಟು ಪ್ರಪಾತಕ್ಕೆ ದೂಡುವುದೇ ವಿನಹ ನಮ್ಮ ಬೆಳವಣಿಗೆಯಾಗುವುದಿಲ್ಲ. ಆದುದರಿಂದ ವೈಜ್ಞಾನಿಕ ಅನ್ವೇಷಣೆಗಳನ್ನು ಸಮಾಜದ ಒಳಿತಿಗೆ ಮಾತ್ರ ಬಳಸುವ ಕಾರ್ಯ ಆಗಲಿ.

‘ವಿಜ್ಞಾನವಿಲ್ಲದೆ ಮಾನವನಿಲ್ಲ. ಮಾನವನಿಲ್ಲದೆ ವಿಜ್ಞಾನವಿಲ್ಲ'. ಎಂಬುವುದು ಕೇವಲ ಮಾತಲ್ಲ. ಈಗಂತೂ ವಿಜ್ಞಾನದಲ್ಲಿ ಮಹತ್ತರ ಬದಲಾವಣೆಗಳು ಪ್ರತೀ ದಿನ ಆಗುತ್ತಲೇ ಇವೆ. ಆದರೆ ಒಂದು ಶತಮಾನದಷ್ಟು ಹಿಂದೆ ಸೀಮಿತ ಸಂಪನ್ಮೂಲಗಳನ್ನು ಬಳಸಿಕೊಂಡು ವಿಜ್ಞಾನದಲ್ಲಿ ಗಣನೀಯ ಸಾಧನೆ ಮಾಡಿದ ಸರ್ ಸಿ.ವಿ.ರಾಮನ್ ಅವರು ಸದಾ ಕಾಲ ಸ್ಮರಣೀಯರು.