ವೈಜ್ಞಾನಿಕ ನೆಲೆಯಲ್ಲಿ ಮಕರ ಸಂಕ್ರಾಂತಿ

ವೈಜ್ಞಾನಿಕ ನೆಲೆಯಲ್ಲಿ ಮಕರ ಸಂಕ್ರಾಂತಿ

ಸೂರ್ಯನ ಚಲನೆಯನ್ನಾಧರಿಸಿದ ಒಂದು ಪ್ರಮುಖ ಆಚರಣೆ ಎಂದರೆ ಮಕರ ಸಂಕ್ರಮಣ. ಸಂಕ್ರಮಣ ಎಂದರೆ ದಾಟುವುದು (transition) ಎಂದು ಅರ್ಥ. ಆಗಸ  ಒಂದು ಗೋಳ. ಇದರಲ್ಲಿ ಒಂದು ಸುತ್ತು ಎಂದರೆ 360°. ಇದನ್ನು ಹನ್ನೆರಡು ಸಮಭಾಗಗಳಾಗಿ ಮಾಡಿ (30°) ಅದಕ್ಕೊಂದು ನಕ್ಷತ್ರ ಪುಂಜ ಕೂರಿಸಿ ಅವುಗಳನ್ನು ದ್ವಾದಶ ರಾಶಿಗಳೆಂದರು.  ಈ ರಾಶಿಗಳನ್ನು  ಎರಡೂಕಾಲು ಭಾಗ ಮಾಡಿ (12°)  ಅದಕ್ಕೊಂದು ನಕ್ಷತ್ರ ಸಿಕ್ಕಿಸಿ ದಿನ ನಕ್ಷತ್ರಗಳೆಂದರು. ಸೂರ್ಯನ ಚಲನೆ ರಾಶಿಯಲ್ಲಾದರೆ ಚಂದ್ರನ ಚಲನೆ ನಕ್ಷತ್ರಗಳಲ್ಲಿ. ಆದ್ದರಿಂದ ಆತ ತಾರಾಪತಿ. ಸೂರ್ಯ ಒಂದು ತಿಂಗಳಲ್ಲಿ ಒಂದು ರಾಶಿಯಲ್ಲಿದ್ದು ಮುಂದಿನ ರಾಶಿಗೆ ಚಲಿಸುತ್ತಾನೆ. ಮೇಷದಿಂದ ಮೀನದ ವರೆಗೆ. ಆದ್ದರಿಂದ ಹಿಂದೆ ಮುಂದೆ ಯೋಚಿಸುತ್ತಾ ಇರುವುದಕ್ಕೆ ಮೀನ ಮೇಷ ಎಣಿಸುವುದು ಎನ್ನುವುದು. ಈ ರಾಶಿ ದಾಟುವ ದಿನವೇ ಸಂಕ್ರಮಣ. ಮಕರ ಸಂಕ್ರಮಣದಂದು ಸೂರ್ಯ ಧನುವಿನಿಂದ ಮಕರ ರಾಶಿಗೆ ಚಲಿಸುತ್ತಾನೆ.

ಈ ಸೂರ್ಯನ ಚಲನೆ ಸಾಪೇಕ್ಷವಾದುದು. ನಾವು ಬಸ್ಸಿನಲ್ಲಿ ಚಲಿಸುವಾಗ ಗಿಡ ಮರಗಳು ಓಡಿದಂತೆ. ಭೂಮಿಯು ತನ್ನ ಅಕ್ಷದಲ್ಲಿ 23.5° ವಾಲಿಕೊಂಡಿರುವುದರಿಂದ ಉತ್ತರದಿಂದ ದಕ್ಷಿಣಕ್ಕೆ ಅಲ್ಲಿಂದ ಹಿಂದಕ್ಕೆ ಸಾಪೇಕ್ಷವಾಗಿ ಸೂರ್ಯನ ಓಲಾಟ. ಈ ಚಲನೆ ಕಾಣಿಸುವುದು ಕರ್ಕಾಟಕ ಸಂಕ್ರಾಂತಿ ವೃತ್ತ ಮತ್ತು ಮಕರ ಸಂಕ್ರಾಂತಿ ವೃತ್ತಗಳ ನಡುವೆ ಇರುವ ಪ್ರದೇಶಗಳಿಗೆ ಮಾತ್ರ. ಇಂಗ್ಲೆಂಡ್ ನವರಿಗೆ ಸೂರ್ಯನ ದಿಕ್ಕು ದಕ್ಷಿಣ ಆಸ್ಟ್ರೇಲಿಯಾದವರಿಗೆ ಸೂರ್ಯನ ದಿಕ್ಕು ಉತ್ತರ. ಹೀಗೆ ದಕ್ಷಿಣೋತ್ತರ ಓಲಾಟದಲ್ಲಿ ಒಂದು ದಿನ ನಮ್ಮ ನೆತ್ತಿಯ ಮೇಲೆ ಬಂದು ನಮ್ಮ ನೆರಳನ್ನೇ ನುಂಗಿ ಬಿಡುತ್ತಾನೆ ಅದೇ ನೆರಳು ರಹಿತ ದಿನ (zero shadow day ZSD). ಒಂದು ದಿನ ಗವಿಗಂಗಾಧರೇಶ್ವರನ ಎದುರು ಭಾಗದಲ್ಲಿರುವ ನಂದಿಯ ಕೊಂಬುಗಳ ನಡುವೆ ಹಾದು ಗವಿ ಗಂಗಾಧರೇಶ್ವರನ ಲಿಂಗ ಸ್ಪರ್ಶ ಮಾಡುವುದು ಅವನ ಚಲನೆಯ ಒಂದು ಭಾಗ. ಈ ದಿನವೇ ಮಕರ ಸಂಕ್ರಮಣ. ಈ ದಿನ ಸೂರ್ಯನ ಮೊದಲ ಕಿರಣಗಳು ಶೃಂಗೇರಿಯ ಮಕರ ಸ್ಥಂಭವನ್ನು ಸ್ಪರ್ಶಿಸುತ್ತವೆ.  ಆದರೆ ಯಾದಗಿರಿಯ ಸುರಪುರ ತಾಲೂಕಿನ ಕೃಷ್ಣೆಯ ದಡದ ಮೇಲಿರುವ ಛಾಯಾಭಗವತಿ ಗುಡಿಯನ್ನು ಕಟ್ಟಿದ ಶಿಲ್ಪಿ ಪ್ರತಿದಿನವೂ ಅರುಣ ಕಿರಣಗಳು ಛಾಯಾ ದೇವಿಯ ಮೂರ್ತಿಯನ್ನು ಸ್ಪರ್ಶಿಸುವಂತೆ ಪ್ರತಿಷ್ಠಾಪಿಸಿದ್ದಾನೆ. ದೇವಸ್ಥಾನದ ಬಾಗಿಲನ್ನು ಮೂರ್ತಿಯ ಸ್ಥಾನವನ್ನು ಸೂರ್ಯ ಚಲನೆಯ ಆಧಾರದ ಮೇಲೆ ಕರಾರುವಾಕ್ಕಾಗಿ ಗಣಿಸಿದ ಅವನ ಗಣಿತ ಮತ್ತು ಖಗೋಳ ಜ್ಞಾನಕ್ಕೆ ಉಘೇ ಎನ್ನಲೇಬೇಕು.  ಈ ರೀತಿಯ ಚಲನೆಯ ಆವರ್ತನೆಯ ತಮ್ಮ ಪರಿಶೀನೆಯ ಮೂಲಕ ಸ್ಥಿರಗೊಳಿಸಿ ದೇವಸ್ಥಾನಗಳ ವಾಸ್ತು ರಚನೆ ಮಾಡಿದ ನಮ್ಮ ಹಿರಿಯರು ನಿಜಕ್ಕೂ ಗ್ರೇಟ್ ಅಲ್ಲವೇ?

ಇಂದಿನಿಂದ ( ಭೌಗೋಳಿಕವಾಗಿ ದಶಂಬರ 21) ಸೂರ್ಯ ಉತ್ತರದ ಕಡೆಗೆ ಪಯಣ ಆರಂಭಿಸುವುದರಿಂದ ಉತ್ತರ ಗೋಳಾರ್ಧದಲ್ಲಿ ನಿಧಾನವಾಗಿ ಚಳಿಯು ಸತ್ತು ವಸಂತಾಗಮನದ ಮುನ್ನುಡಿ ಬರೆಯುವುದರಿಂದ ನಮಗಿದು ಸಂಭ್ರಮದ ದಿನ. ಹಬ್ಬ. ಆದ್ದರಿಂದ ಭೀಷ್ಮರೂ ತಮ್ಮ ಅಂತ್ಯವನ್ನು ಆಹ್ವಾನಿಸಿಕೊಂಡ ದಿನವಿದು. ಧನುರ್ಮಾಸದಲ್ಲಿ ಈಶ್ವರ ದೇವಸ್ಥಾನಗಳಲ್ಲಿ ಹುಗ್ಗಿಯ (ಪೊಂಗಲ್) ನೈವೇದ್ಯ ವಿಶೇಷ. ಇವತ್ತು ಅದರ ಕೊನೆ. ತಮಿಳಿಗರಿಗೆ ಇಂದು ಪೊಂಗಲ್. ಕೃಷಿ ತ್ಯಾಜ್ಯಗಳನ್ನು ಸುಡುವ ದಿನ. ಎಲ್ಲರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು

(ಮಾಹಿತಿ ಸಂಗ್ರಹ) - ಹಾ ಮ ಸತೀಶ್, ಬೆಂಗಳೂರು 

ಚಿತ್ರ ಕೃಪೆ: ಇಂಟರ್ನೆಟ್ ತಾಣ