ವೈಜ್ಞಾನಿಕ ಮತ್ತು ವೈಚಾರಿಕತೆಯ ಸಂಕೇತ ಕುವೆಂಪು

ವೈಜ್ಞಾನಿಕ ಮತ್ತು ವೈಚಾರಿಕತೆಯ ಸಂಕೇತ ಕುವೆಂಪು

ರಾಷ್ಟ್ರಕವಿ ಕುವೆಂಪುರವರ ಜನ್ಮದಿನಾಚರಣೆಯ (ಡಿಸೆಂಬರ್ ೨೯) ಶುಭಾಶಯಗಳು. ಮತಭ್ರಾಂತಿಯಿಂದ ಲೋಕಕ್ಕೆ ಆಗಿರುವಷ್ಟು ಹಾನಿ ಮತ್ತಾವುದರಿಂದಲೂ ಆಗಿಲ್ಲ ಎಂದು ತೋರುತ್ತದೆ. ಇನ್ನೂ ಮುಂದೆಯಾದರೂ ನೀವು ಆಧ್ಯಾತ್ಮವನ್ನು ಉಳಿಸಿಕೊಂಡು ಮತ ಮತ್ತು ಅದರಿಂದ ಜನ್ಯವಾದ ಮತಭ್ರಾಂತಿ ಮತ್ತು ಮತಮೌಢ್ಯಗಳನ್ನು ನಿರಾಕರಿಸದಿದ್ದರೆ ನಿಜವಾದ ಪ್ರಜಾಸತ್ತೆಯಾಗಲಿ ಸಮಾಜವಾದವಾಗಲಿ ಸಮಾನತಭಾವ ಸ್ಥಾಪನೆಯಾಗಲಿ ಎಂದೆಂದಿಗೂ ಸಾಧ್ಯವಾಗುವುದಿಲ್ಲ - ವಿಶ್ವಮಾನವ ಕುವೆಂಪು

ರಾಷ್ಟ್ರಕವಿ ಕುವೆಂಪು ಅವರು ವಿಶ್ವಮಾನವ ಸಂದೇಶವನ್ನು ವಿಶ್ವಕ್ಕೆ ಸಾರಿ ಹೇಳಿದ ಮಹಾನ್ ಚೇತನ. ಅಂದರೆ ಪ್ರತಿಯೊಬ್ಬ ಮನುಷ್ಯನು ಹುಟ್ಟು ವಿಶ್ವಮಾನವನಾಗಿ ಹುಟ್ಟು ಬೆಳೆಯುತ್ತಾ ಜಾತಿ, ಮತ, ಧರ್ಮ, ಎಂಬುದರ ಹಲವಾರು ವಿಷಯಗಳಿಂದ ಸಂಕುಚಿತನಾಗುತ್ತಾರೆ. ಅಂದರೆ ಹುಟ್ಟುವಾಗ ಯಾವುದೇ ಮೌಢ್ಯಾಚರಣೆಗಳ ಬಗ್ಗೆ ಅರಿವು ಇರುವುದಿಲ್ಲ, ಆದರೆ ಬೆಳೆಯುತ್ತಾ ಆ ಮನುಷ್ಯನ ಮೇಲೆ ಕುಟುಂಬದ ಸಂಪ್ರದಾಯ, ಆಚರಣೆಗಳು ಏರಲ್ಪಟ್ಟಿದೆ. ಮನುಷ್ಯರ ಮೇಲೆ ಏರಲ್ಪಟ್ಟ ಎಲ್ಲಾ ಭ್ರಾಂತಿ ಗಳಿಂದ ಸಂಕುಚಿತಗೊಳಿಸಿ ಮತ್ತು ಮನಸ್ಸುಗಳು ಕಲುಷಿತಗೊಂಡಿದೆ. ಹಾಗಾಗಿ ಕುವೆಂಪು ಅವರು ವೈಚಾರಿಕತೆ, ವೈಜ್ಞಾನಿಕ ಚಿಂತನೆಗಳನ್ನು ತಮ್ಮ ಸಾಹಿತ್ಯದ ಕೃಷಿಯೊಂದಿಗೆ ಅಳವಡಿಸಿಕೊಂಡು ಸಮಾಜಕ್ಕೆ ತಿಳಿಸಿದ ಮಹಾಕವಿಗಳು.

ಕವಿಗಳು ಎಲ್ಲಾ ರಂಗಗಳಿಗೆ ಸಂದೇಶವನ್ನು ಸಾರುವ ಮೂಲಕ ವೈಚಾರಿಕತೆಯನ್ನು ಬೆಳೆಸಿದ್ದಾರೆ. ಅಂದರೆ ರಾಜ್ಯದ ವಿಷಯಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ.

"ಸರ್ವಜನಾಂಗದ ಶಾಂತಿ ತೋಟ,

ರಸಿಕರ ಕಂಗಳ ಸೆಳೆಯುವ ನೋಟ

ಹಿಂದೂ ಕ್ರೈಸ್ತ ಮುಸಲ್ಮಾನ

ಪಾರಸಿಕ ಜೈನರುದ್ಯಾನ

ಜನಕನ ಹೋಲುವ ದೊರೆಗಳ ಧಾಮ

ಗಾಯಕ ವೈಣಿಕರಾರಾಮ."

ಈ ಮೇಲಿನ ಸಾಲುಗಳನ್ನು ಇಂಡಿಯಾ ದೇಶಕ್ಕೆ ಅನ್ವಯಿಸಿ ಹೇಳುವುದಾದರೆ ಇಂಡಿಯಾ ಎಂಬುದು ಒಂದು ಶಾಂತಿಯ ತೋಟ ಅಂದರೆ ವಿಶ್ವಸಂಸ್ಥೆಯ ಪ್ರಧಾನ ತತ್ವ ವಿಶ್ವದ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದು. ಈ ತತ್ವಕ್ಕೆ ಅನುಗುಣವಾಗಿ ಪ್ರತಿಯೊಂದು ದೇಶವು ಪ್ರತಿಪಾದಿಸಿಬೇಕು ಮತ್ತು ಪಾಲಿಸಬೇಕು. ಹಾಗಾಗಿ ಇಂಡಿಯಾ ಎನ್ನುವುದು ಶಾಂತಿಯ ತೋಟವಾಗಬೇಕು, ಶಾಂತಿಯ ತೋಟವಾಗಿರುವುದರಿಂದ ರಸಿಕರ ಕಂಗಳ ಸೆಳೆಯುತ್ತದೆ.

ಇಂಡಿಯಾದಲ್ಲಿ ಹಲವಾರು ಧರ್ಮಗಳು, ಜನಾಂಗಗಳು, ಜಾತಿಗಳು ನೆಲೆಸಿವೆ ಹಾಗಾಗಿ ಜಾತ್ಯತೀತ, ಧರ್ಮ ನಿರಪೇಕ್ಷ, ಸಂವಿಧಾನದ ಪೀಠಿಕೆಯಲ್ಲಿ ಹೇಳಿದ ಆಶಯವಿದು. ಹಾಗೆಯೇ ಯಾವುದೇ ಧರ್ಮ, ಜಾತಿ, ಮತ, ಜನಾಂಗ, ಲಿಂಗ, ತಾರತಮ್ಯವು ಸಮಾಜದಿಂದ ನಿರ್ಮೂಲನೆಗೊಂದು ಸಮ ಸಮಾಜದ ನಿರ್ಮಾಣಕ್ಕೆ ಸಾಕ್ಷಿಯಾಗಬೇಕಾಗಿದೆ. ಮತ್ತು ಹಲವಾರು ರಾಜಮನೆತನಗಳು, ದೊರೆಗಳು ಆಳಿದಂತಹ ನಾಡು ಆಗಾಗಿ ಒಂದು ಸಾಮರಸ್ಯದ ಸಂದೇಶವನ್ನು ಸಾರಿದ್ದಾರೆ.

ಕವಿ ಸಾರಿದ ಮೌಢ್ಯತೆಯ ವಿರುದ್ಧದ ಸಂದೇಶ 

ಗುಡಿ ಚರ್ಚು ಮಸೀದಿಗಳ ಬಿಟ್ಟು ಹೊರಬನ್ನಿ  

ಬಡತನವ ಬುಡಮಟ್ಟ ಕೀಳಬನ್ನಿ 

ಮೌಢ್ಯತೆಯ ಮಾರಿಯನ್ನು

ಹೊರದೂಡಲೈತನ್ನಿ

ವಿಜ್ಞಾನ ದೇವಿಗೆಯ ಹಿಡಿಯ ಬನ್ನಿ

ಓ ಬನ್ನಿ ಸಹೋದರರ ಬೇಗ ಬನ್ನಿ …

 

ಸಿಲುಕದಿರಿ ಮತವೆಂಬ ಮೋಹದ ಜ್ಞಾನಕ್ಕೆ

ಮಿತಿಯಿಂದ ದುಡಿಯಿರೈ ಲೋಕಹಿತಕೆ

ಆ ಮತದ ಈ ಮತದ ಹಳೆಮತದ ಸಹವಾಸ

ಸಾಕಿನ್ನು ಸೇರಿರೈ ಮನುಜ ಮತಕೆ

ಓ ಬನ್ನಿ ಸಹೋದರರೆ ವಿಶ್ವಪಥಕೆ.

ಈ ಮೇಲಿನ ಪದ್ಯವನ್ನು ಅರ್ಥಮಾಡಿಕೊಂಡರೆ ಯಾವುದೇ ಮೌಢ್ಯತೆಯನ್ನು ದೂರ ಮಾಡಬಹುದು. ಎಲ್ಲರನ್ನೂ ಸಹೋದರರೆ ಎಂದು ಬಣ್ಣಿಸಿದ್ದಾರೆ ಮತ್ತು ಎಲ್ಲರೂ ಸಹೋದರತ್ವದ ಮನೋಭಾವ ಬೆಳೆಸಿಕೊಳ್ಳಬೇಕು ಎಂಬುದು ಈ ಸಾಲಿನ ಆಶಯ ಮತ್ತು ದೇವಸ್ಥಾನ, ಚರ್ಚುಗಳು, ಮಸೀದಿಗಳಿಗೆ ಹೋಗುವುದನ್ನು ಬಿಟ್ಟು ಹೊರಬನ್ನಿ, ವೈಜ್ಞಾನಿಕ, ವೈಚಾರಿಕತೆಯ, ಆಲೋಚನೆಯನ್ನು ಮೈಗೂಡಿಸಿಕೊಂಡರೆ ಬಡತನ ಎಂಬುವ ಸಾಮಾಜಿಕ ಪಿಡುಗನ್ನು ಬುಡಸಮೇತವಾಗಿ ನಾಶ ಮಾಡಬಹುದು.

ಮೌಢ್ಯತೆ, ಕಂದಾಚಾರ, ಆಚರಣೆ ಮಾಡುವುದನ್ನು ಬಿಟ್ಟು ವಿಜ್ಞಾನದ ಮತ್ತು ವೈಜ್ಞಾನಿಕತೆಯಲ್ಲಿ ನಂಬಿಕೆಯನ್ನು ತೋರಿಸಿ ಮತ್ತು ಮೌಢ್ಯಾಚರಣೆಗಳನ್ನು ಸಮಾಜದಿಂದ ತೊಲಗಿಸಿ ಮತ್ತು ಸಿಲುಕಿಕೊಳ್ಳಬೇಡಿ ಮತವೆಂಬ ಭ್ರಾಂತಿಯಲ್ಲಿ ಬುದ್ಧಿಯಿಂದ ದುಡಿಯಿರಿ ಲೋಕದ ಹಿತಕ್ಕಾಗಿ ಅಂದರೆ ಯಾವುದೇ ಮತ, ಧರ್ಮದ ಆಚರಣೆಯಿಂದ ಲೋಕದ ಹಿತ ಸಾದ್ಯವಿಲ್ಲ, ಅವುಗಳಿಂದ ದೂರವಿರಬೇಕು. ಆ ಮತ ಈ ಮತ ಎನ್ನುವ ಹಳೆಮತದ ಸಹವಾಸ ಬಿಟ್ಟು ಮನುಜ ಮತಕ್ಕೆ ಸೇರಿ ಮನುಷ್ಯರನ್ನು ಗೌರವಿಸಿ, ಪ್ರೀತಿ, ಸಹೋದರತ್ವ, ಸಹಬಾಳ್ವೆ ಕಡೆಗೆ ಆಲೋಚಿಸಿ ವಿಶ್ವದ ಪಥವನ್ನು ಸೇರಿಕೊಳ್ಳಿ ಅಂದರೆ ವಿಶ್ವದ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡಿ ವಿಶ್ವ ಮಾನವರಾಗಿ. ಹೀಗೆ ಹಲವಾರು ಸಂದೇಶಗಳನ್ನು ವೈಜ್ಞಾನಿಕವಾಗಿ, ವೈಚಾರಿಕವಾಗಿ, ಸಾಹಿತ್ಯದ ಮೂಲಕ ಸಮಾಜಕ್ಕೆ ಸಾರಿ ಹೇಳಿದ ಮಹಾನ್ ಚೇತನ. ಮತ್ತೊಮ್ಮೆ ವೈಚಾರಿಕ ಕವಿಗೆ ಜನ್ಮ ದಿನಾಚರಣೆ ಶುಭಾಶಯಗಳು...

-ಮುರುಳೀಧರ ಪಿ, ಸಹಾಯಕ ಪ್ರಾಧ್ಯಾಪಕರು