ವೈಣಿಕನ ವೀಣೆ

ವೈಣಿಕನ ವೀಣೆ

ಪುಸ್ತಕದ ಲೇಖಕ/ಕವಿಯ ಹೆಸರು
ಜಿ.ಪಿ.ರಾಜರತ್ನಂ
ಪ್ರಕಾಶಕರು
ಸಪ್ನ ಬುಕ್ ಹೌಸ್, ಗಾಂಧಿನಗರ, ಬೆಂಗಳೂರು - ೫೬೦೦೦೯
ಪುಸ್ತಕದ ಬೆಲೆ
ರೂ.೨೪.೦೦, ಮುದ್ರಣ: ಮಾರ್ಚ್ ೨೦೧೪

೧೯೪೪ರಲ್ಲಿ ಪ್ರಥಮ ಮುದ್ರಣ ಕಂಡ, ಮಕ್ಕಳ ಸಾಹಿತಿ ಎಂದೇ ಖ್ಯಾತ ಪಡೆದ ಜಿ.ಪಿ.ರಾಜರತ್ನಂ ಅವರ ಕೃತಿಯೇ “ವೈಣಿಕನ ವೀಣೆ". ಡೆನ್ಮಾರ್ಕ್ ದೇಶದ ಕಿನ್ನರ ಕಥೆಗಾರ ಹಾನ್ಸ್ ಕ್ರಿಸ್ಟಿಯನ್ ಆಂಡರ್ ಸನ್ ಅವರು ಬರೆದ ಆರು ಕತೆಗಳನ್ನು ರಾಜರತ್ನಂ ಅವರು ರೂಪಾಂತರ ಮಾಡಿಕೊಟ್ಟಿದ್ದಾರೆ. ನಮ್ಮ ಜೀವನಕ್ಕೆ ಹೊಂದಿಕೊಳ್ಳುವಂತೆ ರೂಪಾಂತರ ಮಾಡಿದ್ದೇನೆ ಎಂದು ರಾಜರತ್ನಂ ಅವರೇ ತಮ್ಮ ಮುನ್ನುಡಿಯಲ್ಲಿ ಹೇಳಿಕೊಂಡಿದ್ದಾರೆ. ಇದರಲ್ಲಿರುವ ಆರು ಕತೆಗಳೆಂದರೆ, ಕಡ್ಡಿ ಬುಡ್ಡಿ ಜಗಳ, ಬಲು ಚೆಲುವು ಗುಲಾಬಿ, ಒಬ್ಬ ತಾಯಿಯ ಕತೆ, ಬೆಂಡು ಬುಗುರಿ, ಸಮಾಧಿಯಾದ ಶಿಶು, ಹೋಮರನ ಸಮಾಧಿಯ ಹೂವು. 

ಈ ಕೃತಿಗೆ ವೈಣಿಕನ ವೀಣೆ ಎಂಬ ಹೆಸರು ನೀಡಿದ್ದು ಏಕೆ ಎನ್ನುವ ಬಗ್ಗೆ ಜಿ.ಪಿ.ರಾಜರತ್ನಂ ಅವರು ಹೀಗೆ ಬರೆದಿದ್ದಾರೆ “ಲಕ್ಷ್ಮೀಶ ಕವಿ ‘ಸಂಗೀತಸುಕಲಾ ನಿಪುಣನು ವೀಣೆಯಿಂ ಗಾನವಂ ನುಡಿಸುವಂದದೊಳು ಎನ್ನ ವಾಣಿಯಿಂ ಕವಿತೆಯಂ ಪೇಳಿಸಿದನು ಲಕ್ಷ್ಮೀವರಂ’ ಎಂದು ತನ್ನ ಭಾರತದಲ್ಲಿ ಹೇಳಿಕೊಂಡು ಭಾವವೇ ಇಲ್ಲಿಯ ಕತೆಯಲ್ಲೂ ಕಾಣುವುದರಿಂದ ಈ ಸಂಗ್ರಹಕ್ಕೆ ‘ವೈಣಿಕನ ವೀಣೆ' ಎಂದು ಹೆಸರಿಟ್ಟಿದ್ದೇನೆ. ಉಳಿದ ಐದು ಕತೆಗಳಿಗೆ ಎಲ್ಲರೂ ಬಯಸುವ ಪ್ರೇಮ, ಎಲ್ಲರೂ ಬೆದರುವ ಸಾವು ವಸ್ತುವಾಗಿದೆ.” ಎಂದಿದ್ದಾರೆ.

ಮರು ಮುದ್ರಣವಾಗಿರುವ ಈ ಪುಸ್ತಕಕ್ಕೆ ಬೆನ್ನುಡಿಯನ್ನು ಬರೆದಿದ್ದಾರೆ ಪ್ರೊ. ಕೆ ಎಸ್ ನಿಸಾರ್ ಅಹಮದ್ ಇವರು. ಅವರು ತಮ್ಮ ನುಡಿಯಲ್ಲಿ “ತಮ್ಮ ಅನ್ಯ ದುರ್ಲಭ ವ್ಯಕ್ತಿತ್ವ ಮತ್ತು ವೈವಿಧ್ಯತರ ಬರವಣಿಗೆಯಿಂದ ಕನ್ನಡ ಸಾಹಿತ್ಯಕ್ಕೆ ಬೆಲೆ ಬಾಳುವ ಬಳುವಳಿಯನ್ನು ಓದಿಸಿರುವ ಮಹನೀಯ ಚೇತನ ಡಾ.ಜಿ.ಪಿ.ರಾಜರತ್ನಂ. ಸುದೀರ್ಘ ಕಾಲದ ಬಹು ವಿಫುಲ ಬರಹಗಳ ಜೊತೆಗೆ ಹಿರಿಯ ಮತ್ತು ನವೋದಿತರ ಲಿಖಾವಟ್ಟುಗಳ ಸತ್ವ, ಸವಿಗಳನ್ನು ಕನ್ನಡ ಸಾಹಿತ್ಯಾಭಿಮಾನಿಗಳಿಗೆ ಮನಗಾಣಿಸುವ ಕೈಂಕರ್ಯವನ್ನು ಕೈಕೊಂಡು ಕೃತಕೃತ್ಯರಾದವರು ಜಿ.ಪಿ.ರಾಜರತ್ನಂ.

ಅವರಿಂದ ರಚಿತವಾದ ಶಿಶುಸಾಹಿತ್ಯ, ನಾಟಕ ಹಾಗೂ ಇತರ ಗದ್ಯ ಲೇಖನಗಳ ಸುಮಾರು ೭೫ಕ್ಕೂ ಹೆಚ್ಚು ಕೃತಿಗಳನ್ನು ಹೊರತಂದಿರುವ ಬೆಂಗಳೂರಿನ ಸುವಿಖ್ಯಾತ ಸಪ್ರ ಬುಕ್ ಹೌಸ್ ಈಗ ಮತ್ತೊಮ್ಮೆ ೬ ಕೃತಿಗಳನ್ನು ಹೊರತರುತ್ತಿದೆ. ಇಲ್ಲಿನ ಬರಹಗಳಲ್ಲಿ ರಾಜರತ್ನಂ ಅವರ ಹೃದಯಂಗಮ ಶೈಲಿಯ, ಸುಗಮ ಗ್ರಹಿಕೆಯ ಆಪ್ತ ನುಡಿಗಾರಿಕೆಯ ಮೊಹರು ಅಚ್ಚೊತ್ತಿದೆ. ಅವರ ಸರ್ವ ಸಮನ್ವಯ ರೂಪಿ ನಿರ್ಮಲಾಂತಃಕರಣದ ಮುಕ್ತ ಸೆಲೆಯ ಗಂಡು ಧ್ವನಿ ಅನುರಣಿಸಿದೆ.” ಎಂದಿದ್ದಾರೆ.

೫೨ ಪುಟಗಳ ಈ ಪುಟ್ಟ ಪುಸ್ತಕವನ್ನು ರಾಜರತ್ನಂ ಇವರು ಚಾಮರಾಜನಗರದ ಡಾಕ್ಟರ್ ಕಡಾಂಬಿ ಪಾರ್ಥಸಾರಥಿ ಅಯ್ಯಂಗಾರ್ (೧೯೧೨-೧೯೮೨) ಇವರ ನೆನಪಿಗಾಗಿ ಅರ್ಪಣೆ ಮಾಡಿದ್ದಾರೆ. ಪುಸ್ತಕದ ಒಳಪುಟ ಹಾಗೂ ಮುಖಪುಟಗಳಲ್ಲಿ ಮೋನಪ್ಪ ಇವರ ಸೊಗಸಾದ ಚಿತ್ರಗಳಿವೆ. ಮಕ್ಕಳಿಂದ ಹಿರಿಯರ ತನಕ ಈ ಪುಸ್ತಕ ಓದಲು ಯೋಗ್ಯ.