ವೈದ್ಯಕೀಯ,ಇಂಜಿನಿಯರಿಂಗ್ ಕಾಲೇಜಿನಲ್ಲಿ ಕನ್ನಡಕ್ಕೆ ಒತ್ತು!

ವೈದ್ಯಕೀಯ,ಇಂಜಿನಿಯರಿಂಗ್ ಕಾಲೇಜಿನಲ್ಲಿ ಕನ್ನಡಕ್ಕೆ ಒತ್ತು!

ಬರಹ

ಮುಖ್ಯಮಂತ್ರಿ ಯಡಿಯೂರಪ್ಪನವರು ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕನ್ನಡಕ್ಕೆ ಒತ್ತು ನೀಡಲು ಸರಕಾರ ಬಯಸಿದೆ ಎಂದು ಘೋಷಿಸಿದ್ದಾರೆ.ಅದಕ್ಕಾಗಿ ಅರೆಕಾಲಿಕ ಉಪನ್ಯಾಸಕರನ್ನು ನೇಮಿಸುವ ಯೋಚನೆ ಇದೆ ಎಂದೂ ಹೇಳಿದ್ದಾರೆ. ಆದರೆ ಕನ್ನಡಕ್ಕೆ "ಒತ್ತು" ನೀಡುವುದು ಹೇಗೆ ಎಂದು ಅವರು ವಿವರಿಸಿಲ್ಲ, ಅಥವಾ ಪತ್ರಿಕೆಗಳು ಆ ಬಗ್ಗೆ ಬರೆದಿಲ್ಲ.

ಕನ್ನಡಕ್ಕೆ ಒತ್ತು ಅಂದರೆ ಭಾಷೆ ಕಲಿಸುವುದೇ?

ಕನ್ನಡ ಭಾಷೆಯನ್ನು ವೃತ್ತಿಪರ ಕಾಲೇಜುಗಳಲ್ಲಿ ಕಲಿಸಲಾಗುವುದೇ? ಕನ್ನಡದಲ್ಲಿ ತೇರ್ಗಡೆಯಾಗುವುದನ್ನೂ ಕಡ್ಡಾಯಗೊಳಿಸಲಾಗುವುದೇ? ಹಾಗೆ ಮಾಡಿದರೆ, ಇತರ ರಾಜ್ಯಗಳ ವಿದ್ಯಾರ್ಥಿಗಳು ಏನು ಮಾಡಬೇಕು? ಅವರು ತಮ್ಮ ಇಂಜಿನಿಯರಿಂಗ್/ವೈದ್ಯಕೀಯ ವಿಷಯದ ಬಗ್ಗೆ ಗಮನ ಕೊಡುವುದೇ? ಅಲ್ಲ ಕನ್ನಡ ಕಲಿಕೆಗೆ ಗಮನ ಕೊಡುವುದೇ?ಕನ್ನಡ ಬಲ್ಲವರಿಗೆ ಮತ್ತು ಬಾರದವರಿಗೆ ಪ್ರತ್ಯೇಕ ಕನ್ನಡ ಪಾಠಗಳಿರುತ್ತವೆಯೇ?

ವಿಷಯಗಳನ್ನು ಕನ್ನಡದಲ್ಲಿ ಕಲಿಸುವುದೇ?

ವೈದ್ಯಕೀಯ ಮತ್ತು ಇಂಜಿನಿಯರಿಂಗ್ ವಿಷಯಗಳನ್ನು ಕನ್ನಡದಲ್ಲಿ ಕಲಿಸುವ ವಿಚಾರವಂತೂ ಇರದು ಎನಿಸುತ್ತದೆ. ಅದಕ್ಕೆ ಬೇಕಾದ ತಯಾರಿ ಸದ್ಯಕ್ಕಂತೂ ಇಲ್ಲ.ಅದು ಸಾಧ್ಯವಾಗಲು ಇನ್ನೂ ಒಂದು ದಶಕದ ತಯಾರಿಯಂತೂ ಬೇಕು!

ತಂತ್ರಾಂಶ,OS ಕನ್ನಡೀಕರಣಕ್ಕೆ ಪ್ರಯತ್ನ

ತಂತ್ರಾಂಶ, ಕಂಪ್ಯೂಟರ್ ಕಾರ್ಯನಿರ್ವಹಣ ವ್ಯವಸ್ಥೆಯನ್ನು ಕನ್ನಡ ಭಾಷೆಗೆ ಅಳವಡಿಸಲು ಒತ್ತು ನೀಡುವಂತೆ ಪಠ್ಯಕ್ರಮವನ್ನು ಬದಲಿಸುವುದು ಸೂಕ್ತವಾದೀತು.ಇದರ ಬಗ್ಗೆ ನಿಜಕ್ಕೂ ಗಮನ ನೀಡುವುದಗತ್ಯ. ಈಗ orkut, facebook ಅಂತಹ ತಾಣಗಳೂ ಕನ್ನಡದಲ್ಲಿ ಲಭ್ಯವಾಗಲು ತಯಾರಾಗುತ್ತಿವೆ. ಮುಂದಿನ ಉದ್ಯೋಗ ಸೃಷ್ಟಿಯೂ ಇಂತಹ ಕನ್ನಡೀಕರಣ ಕ್ಷೇತ್ರದಲ್ಲಿ ಆಗುವುದು ಬಹುತೇಕ ನಿಶ್ಚಿತ. ಆದುದರಿಂದ ನಮ್ಮ ಕಾಲೇಜುಗಳು ಇದರ ಕಡೆ ಗಮನ ಕೊಡುವುದಗತ್ಯ.

 ಕನ್ನಡ ವಾತಾವರಣ ನಿರ್ಮಾಣ

ಈಗ ವೃತಿಪರ ಕಾಲೇಜುಗಳಲ್ಲಿ ಬೋಧನೆ, ಕಾರ್ಯಕ್ರಮಗಳು ಎಲ್ಲವೂ ಆಂಗ್ಲಮಯ. ತರಗತಿಯ ಹೊರಗೂ ಕನ್ನಡ ಕೇಳಿ ಬರುವುದು ಕಡಿಮೆ! ಇಂತಹ ಪರಿಸ್ಥಿತಿ ಅನಿವಾರ್ಯವೇನಲ್ಲ. ಕಾಲೇಜುಗಳಲ್ಲೂ ಕನ್ನಡ ಬೋರ್ಡುಗಳನ್ನು ಕಡ್ಡಾಯಗೊಳಿಸುವಂತಹ ಕ್ರಮ ಸಾಧ್ಯ.

ಅರೆಕಾಲಿಕ ಉಪನ್ಯಾಸಕರ ನೇಮಕ ಏಕೆ?

ಇದು ಸರಕಾರಿ ಕಾಲೇಜುಗಳಿಗೆ ಸೀಮಿತವೇನೋ? ಖಾಸಗಿ ಕಾಲೇಜುಗಳೂ ಇದನ್ನು ಅನುಸರಿಸಬೇಕೇ? ಅರೆಕಾಲಿಕ ಉಪನ್ಯಾಸಕರ ಹೊಣೆ ಏನು?

ಪಿಎಚ್‌ಡಿ ಪದವಿ ಕನ್ನಡದಲ್ಲಿ ಯಾವಾಗ?

ಇಂಜಿನಿಯರಿಂಗ್ ಪಿಎಚ್‌ಡಿ ಕನ್ನಡದಲ್ಲಿ ಮಾಡಲು ಸಾಧ್ಯವೇ? ಐಎ‌ಎಸ್ ಅಂತಹ ಪರೀಕ್ಷೆಯನ್ನು ಕನ್ನಡದಲ್ಲಿ ತೆಗೆದುಕೊಳ್ಳಬಹುದಾದರೆ,ಕನ್ನಡದಲ್ಲಿ ಪ್ರಬಂಧ ಮಂಡಿಸಿ ಪಿಎಚ್‌ಡಿ ಪದವಿ ಪಡೆಯಲು ವಿಟಿಯು ಅನುವು ಮಾಡಬಾರದೇ? ಪರೀಕ್ಷಕರ ಕೊರತೆಯಂತಹ ಸಮಸ್ಯೆಗಳಿವೆಯಾದರೂ, ಉತ್ಸಾಹಿಗಳಿಗೆ ಈ ಅನುಕೂಲ ದೊರೆಯಲಿ.