ವೈದ್ಯಶಾಸ್ತ್ರೀಯ ಪರಿಷ್ಕರಣೆಗೆ ನಾಂದಿ ಹಾಡಿದ ಇಬ್ನ್ ಸೀನಾ!

ವೈದ್ಯಶಾಸ್ತ್ರೀಯ ಪರಿಷ್ಕರಣೆಗೆ ನಾಂದಿ ಹಾಡಿದ ಇಬ್ನ್ ಸೀನಾ!

"There are no incurable diseases — only the lack of will.

There are no worthless herbs — only the lack of knowledge" - ಇಬ್ನ್ ಸೀನಾ 

ಚರಕ, ಧೃಢಬಾಲ, ಸುಶ್ರೂತ ಇತ್ಯಾದಿ ಭರತಖಂಡದ ಕೀರ್ತಿವಂತ ವೈದ್ಯರಿಂದ ಗ್ರೀಕ್, ಲ್ಯಾಟಿನ್ ಇತ್ಯಾದಿ ನಾಗರಿಕತೆಯಲ್ಲಿ ಪ್ರಾಚೀನ ವೈದ್ಯರು, ವೈದ್ಯಶಾಸ್ತ್ರದಲ್ಲಿ ನೈಪುಣ್ಯತೆಯನ್ನು ಹೊಂದಿದ್ದು ಶಸ್ತ್ರವೈದ್ಯಶಾಸ್ತ್ರದಲ್ಲೂ ಪರಿಣತರಾಗಿದ್ದರು ಎಂಬುವುದು ತಿಳಿದಿರುವ ವಿಷಯ. ಆದರೆ, ಪ್ರಾಚೀನ ವೈದ್ಯಶಾಸ್ತ್ರದಲ್ಲಿ ಶಸ್ತ್ರವಿಜ್ಞಾನವು ಹೃದಯ ವಿದ್ರಾವಕವಾಗಿತ್ತಲ್ಲದೇ, ಅತ್ಯಂತ ಯಾತನಾಮಯವಾಗಿತ್ತು. ಆದರೆ, ನೋವುರಹಿತ ಮತ್ತು ವೈಜ್ಞಾನಿಕತೆಯಿಂದ ಕೂಡಿದ ಆಧುನಿಕ ವೈದ್ಯಶಾಸ್ತ್ರೀಯ ಪರಿಷ್ಕರಣೆಗೆ ನಾಂದಿ ಹಾಡಿದವರು 'ಆಧುನಿಕ ವೈದ್ಯಶಾಸ್ತ್ರದ ಪಿತಾಮಹ' ಖ್ಯಾತಿಯ ಪ್ರಸಿದ್ಧ ವೈದ್ಯರು "ಇಬ್ನ್ ಸೀನಾ"!

ಇಬ್ನ್ ಸೀನಾ ಅವರು ರಚಿಸಿದ "The Book of Healing" ಮತ್ತು "The Canon of Medicine" ಎಂಬ ಎರಡು ಬೃಹತ್ ವಿಶ್ವಕೋಶಗಳು ಇಂದೂ ವೈದ್ಯಕೀಯ ಕ್ಷೇತ್ರದಲ್ಲಿ ಉನ್ನತ ಸ್ಥಾನಮಾನ ಹೊಂದಿದೆ. ಇಬ್ನ್ ಸೀನಾ ಅವರು ಪಾರ್ಸಿ ಬಲ್ಲವರಾಗಿದ್ದು: ವೈದ್ಯಶಾಸ್ತ್ರ, ಶಸ್ತ್ರವೈದ್ಯಶಾಸ್ತ್ರ, ಖಗೋಳಶಾಸ್ತ್ರ, ತತ್ವಜ್ಞಾನ ಮತ್ತು ಅನರ್ಘ ಸಾಹಿತ್ಯತಜ್ಞ ಇತ್ಯಾದಿ ಕ್ಷೇತ್ರದಲ್ಲಿ ಪ್ರವೀಣತೆ ಹೊಂದಿದ್ದರು ಎಂದು ಇತಿಹಾಸಕಾರರು ಪರಿಗಣಿಸುತ್ತಾರೆ. ತತ್ವಶಾಸ್ತ್ರ ಮತ್ತು ಔಷಧದೊಂದಿಗೆ, ಇಬ್ನ್ ಸೀನಾ ಅವರು, ರಸದರಿಮೆ [Alchemy], ಭೌಗೋಳಿಕತೆ ಮತ್ತು ಭೂವಿಜ್ಞಾನ, ಮನೋವಿಜ್ಞಾನ, ಧರ್ಮಶಾಸ್ತ್ರ, ತರ್ಕ, ಗಣಿತ, ಭೌತಶಾಸ್ತ್ರ ಇತ್ಯಾದಿ ವಿಷಯಗಳಲ್ಲಿ ಅರಿವಿಗರೆಂದು ಇತಿಹಾಸದ ಪುಟಗಳು ಹಾಡಿ ಹೊಗಳುತ್ತಿವೆ. ಇಬ್ನ್ ಸೀನಾ ಅವರು "Arguably the most Influential Philosopher of the pre-modern era" ಎಂದು  ಇತಿಹಾಸಕಾರರು ಮತ್ತು ಎಕ್ಸೆಟರ್ ವಿಶ್ವವಿದ್ಯಾಲಯದಲ್ಲಿ ಇಸ್ಲಾಮಿಕ್ ಅಧ್ಯಯನಗಳ ಉಪನ್ಯಾಸಕರಾದ ಡಾ. ಸಜ್ಜಾದ್ ರಿಝ್ವಿ ಅವರು ಬಲವಾಗಿ ಪ್ರತಿಪಾದಿಸುತ್ತಾರೆ.

ಇಬ್ನ್ ಸೀನಾ ಅವರು ಬಾಲ್ಯದಲ್ಲಿ ಕುರಾನ್ ಮತ್ತು ಹದೀಸ್ ಸಾಹಿತ್ಯದಲ್ಲಿ ಶಿಕ್ಷಣ ಪಡೆದು, 10ನೇ ವಯಸ್ಸಿನಲ್ಲಿ ಅವರು ಸಂಪೂರ್ಣ ಕುರಾನ್ ಗ್ರಂಥವನ್ನು ಹಿಫ್ಝ್  [ಕಂಠಪಾಠ] ಮಾಡಿದರು. ಅದನ್ನನುಸರಿಸಿ, ಇಬ್ನ್ ಸೀನಾ ಅವರನ್ನು ಅವರ ತಂದೆಯವರು ಭರತಖಂಡಕ್ಕೆ ಗಣಿತ ಕಲಿಯಲು ಕಳುಹಿಸಿದರು. ತದನಂತರ, ಇಬ್ನ್ ಸೀನಾ ಅವರ ತಂದೆ ಇವರಿಗಾಗಿ ಶಿಕ್ಷಣ ಒದಗಿಸಲು ಅಂದಿನದ ಪ್ರಸಿದ್ಧ ವೈದ್ಯ ಮತ್ತು ತತ್ವಜ್ಞಾನಿಯಾದ ಅಬು ಅಬ್ದಲ್ಲಾ ಅಲ್-ನತೀಲಿಯವರನ್ನು ತಮ್ಮ ಮನೆಗೆ ಆಹ್ವಾನಿಸಿದರು.

ಇಬ್ನ್ ಸೀನಾ ಅವರು ಟಾಲೆಮಿಯ Algemist ಮತ್ತು ಯೂಕ್ಲಿಡ್ ಎಲಿಮೆಂಟ್ಸ್ ಗ್ರಂಥಗಳನ್ನು ಓದಿದ ಬಳಿಕ, ಅಲ್-ನತೀಲಿಯವರು ಶ್ರೀಯುತರನ್ನು ಸಂಶೋಧನೆಗಳನ್ನು ಸ್ವತಂತ್ರವಾಗಿ ಮುಂದುವರಿಸಲು ಕಿವಿಮಾತು ನೀಡಿದರು. ಇಬ್ನ್ ಸೀನಾ ಅವರು ತಮ್ಮ ಹದಿನೆಂಟನೆಯ ಎಳೇ ವಯಸ್ಸಿನಲ್ಲೇ ವಿಜ್ಞಾನಗಳಲ್ಲಿ ಸುಶಿಕ್ಷಿತರಾಗಿದ್ದರು; ಹಾಗೇಯೇ, ತಮ್ಮ ಸ್ವತಂತ್ರ ಸಂಶೋಧನೆಗಳನ್ನು ಸಫಲವಾಗಿ ಪ್ರಾರಂಭಿಸಿದರು. ಇಬ್ನ್ ಸೀನಾ ಅವರು ತಮ್ಮ ಆತ್ಮಚರಿತ್ರೆಯಲ್ಲಿ ಅಲ್-ನತೀಲಿಯವರನ್ನು ತಮ್ಮ ಗುರುಗಳೆಂದು ಉಲ್ಲೇಖಿಸಿದ್ದರೂ, ಅವರು ಖ್ಯಾತ ವೈದ್ಯರಾದ ಅಬು ಮನ್ಸೂರ್ ಅಲ್-ಕುಮ್ರಿ ಮತ್ತು ಅಬು ಸಹಲ್ ಅಲ್-ಮಸಿಹಿ ಅಂತಹವರ ಛತ್ರಛಾಯದಡಿ ತಾಲೀಮು ನಡೆಸಿದ್ದರೆಂದೂ ಇತಿಹಾಸ ಪುಟಗಳಲ್ಲಿ ಅಧಿಕೃತ ದಾಖಲೆಗಳಿವೆ. ತಮ್ಮ ಎಳೆಯ ಹದಿನೆಂಟನೇ ವಯಸ್ಸಿನಲ್ಲಿ, ಅವರು ಬುಖಾರಾ ಸುಲ್ತಾನನಿಗೆ ಆಸ್ಥಾನ ವೈದ್ಯರಾಗಿ ಸೇವೆ ಸಲ್ಲಿಸಿದರು. ಅವರು ವೈಜ್ಞಾನಿಕ ಮತ್ತು ಶಸ್ತ್ರವೈದ್ಯ ವಿಷಯಗಳನ್ನೂ ಒಳಗೊಂಡ 450 ಕೃತಿಗಳನ್ನು ಸಫಲವಾಗಿ ರಚಿಸಿದ್ದರು.

ಇಸ್ಲಾಮಿನ ಸ್ವರ್ಣ ಯುಗದ ಅತ್ಯಂತ ಪ್ರಶಸ್ತ ಗುಣಲಕ್ಷಣವೆಂದರೆ 'ಹಕೀಮ್' ನಾಮ ಪ್ರಸಿದ್ಧಿಗಳಿಸಿದ ಹಲಬಲ್ಲಗಳಾದ ಮುಸ್ಲಿಂ ವಿದ್ವಾಂಸರು. ಪ್ರತಿಯೊಬ್ಬರು ಸರ್ವಾಂಗಸಮವಾಗಿ - ಲೌಕಿಕ ಮತ್ತು ಆಧ್ಯಾತ್ಮಿಕ - ಸಂಶೋಧನೆಯಲ್ಲಿ ತೊಡಗಿದವರು, ಅಸಂಖ್ಯಾತ ಕ್ಷೇತ್ರಗಳಲ್ಲಿ ತಮ್ಮ ಅಮೂಲ್ಯ ಕೊಡುಗೆಗಳನ್ನು ಕರುಣಿಸಿ - ಕೆಲಮಟ್ಟದಲ್ಲಿ ಆ ಕ್ಷೇತ್ರದ 'ಪಿತಾಮಹ' ಕರೆಸಲ್ಪಡುವಷ್ಟು ಕೊಡುಗೆಗಳನ್ನು ಒದಗಿಸಿದರು. ಹಾಗೆಯೇ, ಇಬ್ನ್ ಸೀನಾ ಅವರು ಸಹ ಒಬ್ಬರು 'ಹಕೀಮ್' ಆಗಿದ್ದರು. ಶ್ರೀಯುತರು ವೈದ್ಯಶಾಸ್ತ್ರ ಸೇರಿದಂತೆ ಹತ್ತು ಹಲವಾರು ಕ್ಷೇತ್ರಗಳಲ್ಲಿ ತಮ್ಮ ಅಮೂಲ್ಯ ಕೊಡುಗೆಗಳನ್ನು ಒದಗಿಸಿದ್ದಾರೆ.

ಇಬ್ನ್ ಸೀನಾ ಅವರ ಪ್ರಾರ್ಥಮಿಕ ಕೊಡುಗೆಗಳು :

ವೈದ್ಯಶಾಸ್ತ್ರ ಮತ್ತು ಶಾಸ್ತ್ರವೈದ್ಯಶಾಸ್ತ್ರ : ಇಬ್ನ್ ಸೀನಾ ಅವರು ರಚಿಸಿದ "The Book of Healing" ಮತ್ತು "The Canon of Medicine" ಹೆಸರಿನ ಎರಡು ಬೃಹದ್ಗ್ರಂಥಗಳು ವೈದ್ಯಶಾಸ್ತ್ರದಲ್ಲಿ ಆಧುನಿಕತೆಯ ಕ್ರಾಂತಿಯೊಂದಕ್ಕೆ ಬುನಾದಿ ಹಾಕಿ, ಇಂದೂ ಯುನಾನಿ ಔಷಾಧ್ಯ ತಯಾರಿಸಲು ನೆರವಾಗುತ್ತಿದೆ! ಸೀನಾ ಅವರ "The Canon of Medicine" (ಅಲ್-ಕಾನೂನ್ ಫಿತ್-ತಿಬ್ಬ್)ವು, ಐದು ಘನಅಳತೆಯುಳ್ಳ ಆಧುನಿಕ ವೈದ್ಯಕೀಯ ವಿಶ್ವಕೋಶವೆಂದು ಪರಿಗಣಿಸಲಾಗಿದೆ. ಆಲ್ಲದೇ, 'ಅಲ್-ಕಾನೂನ್ ಫಿತ್-ತಿಬ್ಬ್'ಅನ್ನು ಇಸ್ಲಾಮಿಕ್ ಪ್ರಪಂಚ ಮತ್ತು ಯುರೋಪ್‌ನಲ್ಲಿ 18 ನೇ ಶತಮಾನದವರೆಗೆ ಪ್ರಮಾಣಿತ ವೈದ್ಯಕೀಯ ಪಠ್ಯಪುಸ್ತಕವಾಗಿ ಬಳಸಲಾಗುತ್ತಿತ್ತು.  

"The Book of Healing" ಇಬ್ನ್ ಸಿನಾ ಅವರು ರಚಿಸಿದ ವೈಜ್ಞಾನಿಕ ಮತ್ತು ತಾತ್ವಿಕ ಬ್ರಹದ್ಗ್ರಂಥವಾಗಿದೆ. ಅವರು 1014ರಲ್ಲಿ ಪುಸ್ತಕವನ್ನು ರಚಿಸಲು ಪ್ರಾರಂಭಿಸಿದರು, ಸುಮಾರು ಆರು ವರುಷಗಳ ಅಗಾಧ ಸಂಶೋಧನೆಯ ಬಳಿಕ 1020ರಲ್ಲಿ ಪೂರ್ಣಗೊಳಿಸಿ 1027 A.Dಯಲ್ಲಿ ಪ್ರಕಟಿಸಿದರು. ಈ ಮೆರುಕೃತಿಯು ಇಬ್ನ್ ಸಿನಾ ಅವರ ವಿಜ್ಞಾನ ಮತ್ತು ವೈದ್ಯಕೀಯ ವೇದಾಂತದ ಪ್ರಮುಖ ಕೃತಿಯಾಗಿದೆ. ಗ್ರಂಥವನ್ನು ನಾಲ್ಕು ಭಾಗಗಳಾಗಿ ವಿಂಗಡಿಸಲಾಗಿದೆ: ತರ್ಕಶಾಸ್ತ್ರ, ನೈಸರ್ಗಿಕ ವಿಜ್ಞಾನಗಳು, ಗಣಿತಶಾಸ್ತ್ರ (ಅಂಕಗಣಿತ, ರೇಖಾಗಣಿತ, ಖಗೋಳಶಾಸ್ತ್ರದ ಕ್ವಾಡ್ರಿವಿಯಂ) ಮತ್ತು ತಾತ್ವಿಕ ಸಿದ್ದಾಂತ ಒಳಗೊಂಡಂತೆ ಶಾಸ್ತ್ರವೈದ್ಯಕೀಯ ಕ್ರಮವಿಧಾನಗಳನ್ನು ತೋರಿಸಿಲಾಗಿದೆ.

ರಾಸಾಯನಶಾಸ್ತ್ರ : ಇಬ್ನ್ ಸೀನಾ ಅವರು ತಮ್ಮ ಕೃತಿ 'Book of the Remedy' (ಕಿತಾಬ್ ಅಲ್-ಶಿಫಾ) ಯಲ್ಲಿ ಬಹಳ ವಿಚಿತ್ರಕರ ರಾಸಾಯನಿಕತೆಯಿಂದ ಕೂಡಿದ ಔಷಧ್ಯಿಕ ವಿಧಿ-ವಿಧಾನಗಳನ್ನು ವೈದ್ಯಕೀಯ ಲೋಕಕ್ಕೆ ಪರಿಚಯಿಸಿ ದಿಗ್ಮೂಢಗೊಳಿಸಿದರು. ಅವರು ಹೃದಯದ ಕಾಯಿಲೆಗಳಿಗೆ aromatherapeutic ಚಿಕಿತ್ಸೆಯನ್ನು ಬಳಸಿ, ಸುಗಂಧದಿಂದ ಚಿಕಿತ್ಸೆಯಂತಹ ಅಪೂರ್ವ ವಿಧಿಯನ್ನು ಪರಿಚಯಿಸಿ ವೈಜ್ಞಾನಿಕ ಹಾಗು ವೈದ್ಯಕೀಯ ಕ್ಷೇತ್ರವನ್ನು ಚಕಿತಗೊಳಿಸಿದರು!

ಇಬ್ನ್ ಸೀನಾ ಅವರು ಹೂವುಗಳ ಉದ್ಧೃತಭಾಗದಿಂದ ಸುಗಂಧ ದ್ರವ್ಯ (ಅತ್ತರ್) ವನ್ನು ಹೀರಿ ರಾಸಾಯನಿಕ ಕ್ರಿಯೆಗಳಲ್ಲಿ ಒಳಪಡಿಸಿ ಆಧುನಿಕ ಸುಗಂಧ ದ್ರವವನ್ನು ಶೋಧಿಸಿದರು. ಅವರು 'ಗುಲಾಬಿ ಎಸೆನ್ಸ್‌'ನಂತಹ ಸಾರಭೂತ ತೈಲಗಳನ್ನು ಉತ್ಪಾದಿಸಲು ಹರಿಗೆಯಿಳಿಕೆ (Distillation) ಯನ್ನು ಪ್ರಪ್ರಥಮವಾಗಿ ಬಳಸಿದರು. 

ಇಬ್ನ್ ಸೀನಾ ಅವರ ರಾಸಾಯನಶಾಸ್ತ್ರಕ್ಕೆ ಸಂಬಂಧಿಸಿದ ನಾಲ್ಕು ಬೃಹದ್ಗ್ರಂಥಗಳನ್ನು ಲ್ಯಾಟಿನ್ ಭಾಷೆಯಲ್ಲಿ ಭಾಷಾಂತರಗೊಳಿಸಲಾಗಿದೆ. ಅವುಗಳೆಂದರೆ:

1. _Liber Aboali Abincine de Anima in arte Alchemiae_

2. _Declaratio Lapis physici Avicennae filio sui Aboali_

3. _Avicennae de congelation et conglutination lapidum_

4. _Avicennae ad Hasan Regem epistola de Re recta_

ಖಗೋಳಶಾಸ್ತ್ರ : ಇಬ್ನ್ ಸೀನಾ ಅವರ ವೈಜ್ಞಾನಿಕ ಬರವಣಿಗೆಯ ಒಂದು ಶ್ಲಾಘನೀಯ ಗುಣವೆಂದರೆ ಅವರು ಖಗೋಳಶಾಸ್ತ್ರವನ್ನು ಜ್ಯೋತಿಶಾಸ್ತ್ರದಿಂದ ಪ್ರತ್ಯೇಕಗೊಳಿಸಿ, ಜ್ಯೋತಿಶಾಸ್ತ್ರವನ್ನು ವಿಜ್ಞಾನ ವಿಭಾಗದಿಂದ ಅಲ್ಲಗಣಿಸಿ ತಿರಸ್ಕರಿಸಿದರು. ಇಬ್ನ್ ಸೀನಾ ಅವರು ಶುಕ್ರಗ್ರಹವನ್ನು ಸೂರ್ಯನ ಮೇಲೆ ಒಂದು ಕಲೆಯಾಗಿ ತಾವು ವೀಕ್ಷಿಸಿದ್ದಾರೆಂದು ತಮ್ಮ ಕೃತಿಯಲ್ಲಿ ಪ್ರಕಟಿಸಿದರು. 24 ಮೇ 1032ರಂದು ಅವರು ವೀಕ್ಷಿಸಿರಬಹುದೆಂದು ತಜ್ಞರು ಅಭಿಪ್ರಾಯಪಡುತ್ತಾರೆ. ಕೆಲವು ಖಗೋಳತಜ್ಞರು ಇಬ್ನ್ ಸೀನಾ ಅವರು ಒಂದು ಸೂರ್ಯಮಚ್ಚೆ (Sunspot) ಯನ್ನು ವಿಕ್ಷೀಸಿದ್ದಾರೆಂದು ಅಭಿಪ್ರಾಯಪಡುತ್ತಾರೆ. 

 ಇಬ್ನ್ ಸೀನಾ ಆವರು ಟಾಲೆಮಿಯ ಅಲ್ಮಾಜೆಸ್ಟನ್ನು ಕಟುವಾಗಿ ಟೀಕಿಸಿದರು. ಉದಾಹರಣೆಗೆ, ಇಬ್ನ್ ಸೀನಾ ಅವರು 'Solar Apogee'ಯನ್ನು ಚಲನಾತ್ಮಕವೆಂದು - ಆಧುನಿಕ ವಿಜ್ಞಾನದಂತೆ - ಪ್ರತಿಪಾದಿಸುತ್ತಾರೆ; ದುರಾದೃಷ್ಠವಾತ್, ಇದನ್ನು ಟಾಲೆಮಿಯವರು ನಿಶ್ಚಲವೆಂದು ಹೇಳುತ್ತಿದ್ದರು. ನಕ್ಷತ್ರಗಳು ಸೂರ್ಯನಿಂದ ಬೆಳಕನ್ನು ಪ್ರತಿಫಲಿಸುತ್ತದೆ ಎಂದು ಅರಿಸ್ಟಾಟಲಿನ ಅಭಿಪ್ರಾಯವನ್ನೂ ಇಬ್ನ್ ಸೀನಾ ಅವರು ಬಲವಾಗಿ ವಿರೋಧಿಸಿದರು; ನಕ್ಷತ್ರಗಳು ಸ್ವಯಂ ಪ್ರಕಾಶಮಾನ ಹೊಂದಿದೆ ಎಂದು ಇಬ್ನ್ ಸೀನಾ ಅವರು ಪ್ರಾಯೋಗಿಕವಾಗಿ ಸಾಬೀತುಪಡಿಸಿದರು.

ಲಾಕ್ಡೌನ್ ವಿಧಿಸಿದ ಇಬ್ನ್ ಸೀನಾ : ಇತ್ತೀಚಿಗಿನ ದಿನಗಳಲ್ಲಿ 'ಕ್ವಾರಂಟೈನ್', 'ಲಾಕ್ ಡೌನ್' ಅಥವಾ 'ಐಸೊಲೇಶನ್' ಎಂಬ ಹಿಂದೆಂದೂ ಹೇಳದ ಕೇಳದ ಪದಗಳನ್ನು ಕೇಳಿ ಚಿರಪರಿಚಿತಗೊಂಡಿದ್ದೇವೆ. 2019ರ ಸಾಂಕ್ರಾಮಿಕವು ನಮಗೆ ಹೊಸ ಪದಗಳೊಂದಿಗೆ, ಅತ್ಯಂತ ವಿಚಿತ್ರ ಚಿಕಿತ್ಸೆಯೊಂದನ್ನು ತೋರಿಸಿಕೊಟ್ಟಿತು. ಅದುವೇ, ವೈರಾಣು ಪ್ರಾಯೋಜಿತ ಹರಡುವ ರೋಗಗಳಿಂದ ತನ್ನನ್ನು ಪ್ರತ್ಯೇಕಿಸಿಕೊಂಡು ಮತ್ತು ರೋಗವನ್ನು ಮತ್ತಷ್ಟು ಹರಡುವುದನ್ನು ತಡೆಯುವ ಈ ಅತ್ಯದ್ಭುತ ಚಿಕಿತ್ಸಿಕ ವ್ಯವಸ್ಥೆಯನ್ನು ಕಂಡು ಹಿಡಿದವರು ಇಬ್ನ್ ಸೀನಾ ಅವರೇ!

ಶ್ರೀಯುತರು ಸಾಂಕ್ರಾಮಿಕತೆಯನ್ನು ಹರಡುವುದರಿಂದ ತಡೆಗಟ್ಟಲು ನಾಲವತ್ತು ದಿನಗಳ ನೈರ್ಮಲ್ಯ ಪ್ರತ್ಯೇಕತೆ 'ಅಲ್-ಅರ್ಬಇನಿಯ' ಪರಿಕಲ್ಪನೆಯನ್ನು ಸಫಲ ಪ್ರಾಯೋಗಿಕವಾಗಿ ಬಳಸಿಕೊಂಡ ಪ್ರವರ್ತಕರು. ಕಾಲಕ್ರಮೇಣ ವೆನೆಷಿಯನ್ ವರ್ತಕರು ಈ ಅದ್ಭುತ ಚಿಕಿತ್ಸಾ ವ್ಯವಸ್ಥೆಯನ್ನು ಆಂಗ್ಲ ದೇಶಗಳಲ್ಲಿ ಪರಿಚಯಿಸಿದರು. 'ಕ್ವಾರಂಟೀನಾ' (Quaranta = ನಲವತ್ತು; Ina = ದಿನಗಳು) ಅಂದರೆ 'ನಲವತ್ತು ದಿನಗಳು' ಎಂಬರ್ಥ. ನಂತರ, ಇದು ಐರೋಪ್ಯ ಖಂಡಾದ್ಯಂತ ಜನಪ್ರಿಯಗೊಂಡಿತು.

ಸಾಂಕ್ರಾಮಿಕತೆಗೆ ಲಸಿಕೆ ಮತ್ತು ಪ್ರಮಾಣ ಪಾತ್ರವನ್ನು ಒದಗಿಸುವ ವ್ಯವಸ್ಥೆಯನ್ನು ಸ್ಥಾಪಿಸಿದವರು ಒಟ್ಟೊಮಾನ್ ಸಾಮ್ರಾಜ್ಯದ 'ಸುಲ್ತಾನ್ ಅಬ್ದುಲ್ ಹಮೀದ್ II' ಅವರು. 1908ರಲ್ಲಿ 'Certificat du Vaccin' ನಾಮದ ಪ್ರಮಾದಪತ್ರವನ್ನು ಲಸಿಕೆ ಪಡೆದವರಲ್ಲಿ ವಿಸ್ತರಿಸಿದ್ದರು. 

ಇತರ ವಿಷಯಗಳಲ್ಲಿ ಇಬ್ನ್ ಸೀನಾ ಅವರ ಕಲಿಕೊಡುಗೆಗಳು :

ಮನಃಶಾಸ್ತ್ರ : ನಿರ್ಲಿಪ್ತ ಮನಃಶಾಸ್ತ್ರ (Clinical Psychology) ವಿಷಯಕ್ಕೆ ಸಂಬಂಧಿಸಿದ ಕಿತಾಬ್ ಅಲ್-ನಫ್ಸ್ (The Book of Healing) ಮತ್ತು ಕಿತಾಬ್ ಅಲ್-ನಜತ್ (The Book of Deliverance) ಎರಡು ಬೃಹದ್ಗ್ರಂಥಗಳು ನುಡಿದ ವಿಷಯದ ದಿಕ್ಕನ್ನು ಬದಲಾಯಿಸಿತು. ಗಮನಾರ್ಹವಾಗಿ, ಮನಃಶಾಸ್ತ್ರದಲ್ಲಿ 'Flying Man' ನಾಮದ ವಾದವನ್ನು ಇಬ್ನ್ ಸೀನಾ ಅವರು ಅಭಿವೃದ್ಧಿಪಡಿಸಿದರು.

ಭೌತಶಾಸ್ತ್ರ : ಇಬ್ನ್ ಸೀನಾ ಅವರು ಪ್ರಸ್ತುತಪಡಿಸಿದ ಚಲನೆಯ ಸಿದ್ಧಾಂತ (Theory of Motion) ವು ಭೌತಶಾಸ್ತ್ರದಲ್ಲಿ ಉತ್ತಮ ಸ್ಥಾನಮಾನ ಹೊಂದಿದೆ. ದೃಗ್ವಿಜ್ಞಾನದಲ್ಲಿ, ಬೆಳಕಿಗೆ ವೇಗವಿದೆ ಎಂದು ವಾದಿಸುವ ದಿಗ್ಗಜರಲ್ಲಿ ಇಬ್ನ್ ಸೀನಾ ಕೂಡ ಒಬ್ಬರು. ಅವರು ಕಾಮನಬಿಲ್ಲಿನ ಆಗುಹದ ವಿವರಣೆಯನ್ನು ಸಫಲವಾಗಿ ಮಂಡಿಸಿದರು. 1253 A.Dಯಲ್ಲಿ "Speculum Tripartitum" ಎಂಬ ಲ್ಯಾಟಿನ್ ಪ್ರೌಢ ಪ್ರಬಂಧವು "ಶಾಖ"ದ ಕುರಿತಿರುವ ಇಬ್ನ್ ಸೀನಾ ಅವರ ಸಿದ್ಧಾಂತದ ಕುರಿತು ಈ ಕೆಳಗಿನವುಗಳನ್ನು ಹೇಳಿದೆ: 

"Avicenna says in his book of heaven and earth, that heat is generated from motion in external things" 'Avicenna'ವು ಇಬ್ನ್ ಸೀನಾ ಅವರ ಆಂಗ್ಲ ಹೆಸರಾಗಿದೆ.   

ಕಾವ್ಯಶಾಸ್ತ್ರ : ಇಬ್ನ್ ಸೀನಾ ಅವರ ಬಹಳಷ್ಟು ಕೃತಿಗಳು ಕಾವ್ಯಾತ್ಮಕ ಪ್ರಕಾರದಲ್ಲಿದ್ದು; ಅರೇಬಿಕ್ ಮತ್ತು ಪರ್ಷಿಯನ್ ಎರಡು ಭಾಷೆಯಲ್ಲಿ ಪ್ರಕಟಿತಗೊಂಡಿದೆ. ಸಾಮಾನ್ಯವಾಗಿ, ಇಬ್ನ್ ಸೀನಾ ಅವರು ತಮ್ಮ ಸಂಶೋಧನೆಯ ಫಲಿತಾಂಶವನ್ನು ಕಾವ್ಯಾತ್ಮಕವಾಗಿ ದಾಖಲಿಸುತ್ತಿದ್ದರು. ಎಡ್ವರ್ಡ್ ಗ್ರ್ಯಾನ್ವಿಲ್ಲೆ ಬ್ರೌನ್ ಅವರು ಮೂಲತಃ ಇಬ್ನ್ ಸಿನಾ ಅವರು 'Saturn Apogee'ಯ ಕುರಿತು ರಚಿಸಿದ ಪಾರಸಿ ಭಾಷೆಯ ಕವನವನ್ನು ಭಾಷಾಂತರಿಸಿದರು. ಅದರ ಆರಿಸಿಕೊಂಡ ನಾಲ್ಕು ಸಾಲುಗಳು ಹೀಗಿವೆ:

"From the depth of the black earth up to Saturn's apogee,

All the problems of the universe have been solved by me.

I have escaped from the coils of snares and deceits;

I have unravelled all knots except the knot of Death"

ಇಬ್ನ್ ಸಿನಾ ಅವರ ವೈದ್ಯಕೀಯ ಖ್ಯಾತಿಯು ಅವರ ಶುಭನಾಮದಿಂದ ಜಗತ್ತಿನಾದ್ಯಂತ ಅಲಂಕರಿಸಿದ ನೂರಾರು ವೈದ್ಯ ಸಂಘಗಳು ಮತ್ತು ವೈದ್ಯಕೀಯ ಶಾಲೆಗಳನ್ನು ಕಂಡು ಅಂದಾಜಿಸಬಹುದು; ಅದರೊಂದಿಗೆ, ಸಂಶೋಧಕರು ಮತ್ತು ವೈದ್ಯರಿಗೆ ಪ್ರಧಾನಿಸುವ ವೇತನಗಳ ಅಥವಾ ಬಹುಮಾನಗಳ ಹೆಸರೂ ಒಳಗೊಂಡಿದೆ. 2002ರಲ್ಲಿ, UNESCO ವಿಜ್ಞಾನದ ನೀತಿಶಾಸ್ತ್ರಕ್ಕಾಗಿ "Avicenna Prize for Ethics in Science"ಯನ್ನು ದಿಗ್ಗಜರನ್ನು ಪ್ರಧಾನಿಸಲು ಪ್ರಾರಂಭಿಸಿತು; ಈ ಘನ ಬಹುಮಾನವು ದ್ವಿವಾರ್ಷಿಕವಾಗಿ ಪ್ರಧಾನಿಸಲಾಗುತ್ತಿದೆ. ಶ್ರೀಯುತರ, ಶುಭನಾಮದಿಂದ ಅಲಂಕರಿಸಲ್ಪಟ್ಟ ಅಗಣಿತ ವೈದ್ಯಕೀಯ ವಿಶ್ವವಿದ್ಯಾಲಯಗಳ ಪಟ್ಟಿಯನ್ನು ಮಾಡುವುದು ಅಸಾಧ್ಯಕರವಾಗಿದೆ!!

ಚಿತ್ರ ೧: ಇರಾನಿನಲ್ಲಿ ಇಬ್ನ್ ಸಿನಾ ಗೌರವಾರ್ಥ ಬಿಡುಗಡೆಗೊಂಡ ಅಂಚೆ ಚೀಟಿ

ಚಿತ್ರ ೨ : ಸುಲ್ತಾನ್ ಅಬ್ದುಲ್ ಹಮೀದ್ II ಅವರು ಲಸಿಕೆ ಪಡೆದುಕೊಂಡವರಿಗೆ ನೀಡುತ್ತಿದ್ದ ಲಸಿಕಾ ಪ್ರಮಾಣ ಪತ್ರ 

-ಶಿಕ್ರಾನ್ ಶರ್ಫುದ್ದೀನ್ ಎಂ, ಮಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ