ವೈಫಲ್ಯಗಳನ್ನು ಎದುರಿಸುವುದನ್ನು ಕಲಿಯಿರಿ

ವೈಫಲ್ಯಗಳನ್ನು ಎದುರಿಸುವುದನ್ನು ಕಲಿಯಿರಿ

ನಾನಾ ವಿಧದ ಪರೀಕ್ಷೆಗಳ ಸಮಯ ಈಗ ಬಂದಿದೆ. ವಿದ್ಯಾರ್ಥಿಗಳಿಗೆ ಶಾಲಾ ಪರೀಕ್ಷೆ, ರಾಜಕಾರಣಿಗಳಿಗೆ ಚುನಾವಣಾ ಪರೀಕ್ಷೆ ಎಲ್ಲವೂ ಮುಂದಿನ ಒಂದೆರಡು ತಿಂಗಳಲ್ಲಿ ನಡೆಯಲಿವೆ. ಪ್ರಮುಖವಾಗಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಮಯ ಎಂದರೆ ಮನದಲ್ಲಿ ಏನೋ ಒಂದು ರೀತಿಯ ಗಾಬರಿ. ಅದೂ ಮಂಡಳಿ ಅಥವಾ ಬೋರ್ಡ್ ಪರೀಕ್ಷೆಗಳೆಂದರೆ ಇನ್ನಷ್ಟು ಹೆದರಿಕೆ. ಚೆನ್ನಾಗಿ ತಿಳಿದಿದ್ದರೂ ಬರಿಯುವಾಗ ಏನೋ ಒಂದು ರೀತಿಯ ಅಳುಕು. ಪರೀಕ್ಷೆ ಬರೆದು ಬಂದ ಬಳಿಕ ಹೇಗೆ ಬರೆದಿರುವೆನೋ, ಉತ್ತರ ಪರೀಕ್ಷೆಗಳನ್ನು ಮೌಲ್ಯ ಮಾಪನ ಮಾಡುವವರು ಯಾವ ಮೂಡ್ ನಲ್ಲಿರುತ್ತಾರೋ? ನನಗೆ ಉತ್ತಮ ಅಂಕಗಳು ಸಿಗಬಹುದೋ, ನನ್ನ ಮುಂದಿನ ವಿದ್ಯಾಭ್ಯಾಸಕ್ಕೆ ಅನುಕೂಲ ಆಗಬಹುದೋ ಎನ್ನುವ ಧಾವಂತ, ಚಡಪಡಿಕೆ ಇದ್ದೇ ಇರುತ್ತದೆ.

ಪರೀಕ್ಷೆಯಲ್ಲಿ ಅನುತ್ತೀರ್ಣರಾದರಂತೂ ತಲೆಎತ್ತಿ ತಿರುಗಾಡೋ ಹಾಗೇ ಇಲ್ಲ ಎನ್ನುವ ಮನೋಭಾವ ಈಗಿನ ವಿದ್ಯಾರ್ಥಿಗಳಿಗಿದೆ. ಕೆಲವರಂತೂ ಇನ್ನು ನಮಗೆ ಭವಿಷ್ಯವೇ ಇಲ್ಲ ಎಂದು ಆತ್ಮಹತ್ಯೆಯಂತಹ ಕೆಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಈ ವಿಷಯದಲ್ಲಿ ನಾವು ರಾಜಕಾರಣಿಗಳನ್ನು ನೋಡಿ ಕಲಿಯಬೇಕು. ಎಷ್ಟು ಸಲ ಚುನಾವಣೆಗಳಲ್ಲಿ ಸೋತು ಕೋಟಿಗಟ್ಟಲೆ ಹಣ ಪೋಲು ಮಾಡಿದರೂ ಅವರು ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ. ಮತ್ತೆ ಮತ್ತೆ ಪ್ರಯತ್ನಿಸುತ್ತಾರೆ. ಒಮ್ಮೆ ಯಶಸ್ಸು ಕಂಡರೋ ತಾವು ಖರ್ಚು ಮಾಡಿದ ಎಲ್ಲಾ ಹಣವನ್ನು ಒಂದೇ ವರ್ಷದಲ್ಲಿ ಸಂಪಾದಿಸಿ ಬಿಡುತ್ತಾರೆ. ನ್ಯಾಯದ ಮಾರ್ಗದಿಂದಲ್ಲ ಆದರೆ ಅನ್ಯಾಯದ ಮಾರ್ಗ ಹಿಡಿದು. ರಾಜಕಾರಣಿಗಳೆಂಬ ದಪ್ಪ ಚರ್ಮದ ಪ್ರಾಣಿಗಳ ವಿಷಯವನ್ನು ನಾವು ಇಲ್ಲೇ ಬಿಡುವ. ನಾವು ವಿದ್ಯಾರ್ಥಿಗಳ ಭವಿಷ್ಯವನ್ನೊಮ್ಮೆ ನೋಡುವ, ಅವರಿಗೆ ವೈಫಲ್ಯವನ್ನು ಎದುರಿಸುವ ಬಗೆಯನ್ನು ಕಲಿಸುವ, ಧೈರ್ಯ ಮೂಡಿಸುವ.

ಅತ್ಯಂತ ಪ್ರೀತ್ಯಾದರಗಳಿಂದ ಅಜ್ಜ, ಅಜ್ಜಿ, ಅಪ್ಪ, ಅಮ್ಮ ಮೊದಲಾದವರ ಜೊತೆ ಬೆಳೆದ ಮಕ್ಕಳು ಹೆಚ್ಚಾಗಿ ಯಾವುದೇ ನಿರ್ಧಾರಗಳನ್ನು ಸ್ವಂತವಾಗಿ ತೆಗೆದುಕೊಳ್ಳುವುದಿಲ್ಲ. ಏಕೆಂದರೆ ಅವರಿಗೆ ಮನೆಯವರು ಏನು ಹೇಳುತ್ತಾರೋ ಎನ್ನುವ ಭಯ ಇರುತ್ತದೆ. ಅವರನ್ನು ಸ್ವತಂತ್ರವಾಗಿ ಬದುಕುವಂತೆ ಮಾಡುವ ಶಿಕ್ಷಣ ನಾವು ಮನೆಯಲ್ಲೇ ನೀಡಬೇಕು. ಪೋಷಕರು ಸದಾ ಕಾಲ ಮಗುವಿನ ಜತೆಯಲ್ಲೇ ಇರಲಾಗದು. ಹಾಗಾಗಿ ತಾವು ಜೊತೆಯಲ್ಲಿ ಇಲ್ಲದೇ ಹೋದರೂ ಮಾನಸಿಕವಾಗಿ ಕುಗ್ಗದೇ ಧೈರ್ಯದಿಂದ ಬರುವ ಪರಿಸ್ಥಿತಿಯನ್ನು ಎದುರಿಸಲು ಕಲಿಸಬೇಕು. ಇಲ್ಲವಾದರೆ ಎಲ್ಲಾ ಸಣ್ಣ ಪುಟ್ಟ ವಿಷಯಗಳಿಗೆ ಮಕ್ಕಳು ಪೋಷಕರ ಮೇಲೆಯೇ ಅವಲಂಬಿತರಾಗುತ್ತಾರೆ.

ಪೋಷಕರು ಮಕ್ಕಳು ಮಾಡುವ ಯಾವುದೇ ಕಾರ್ಯದ ಬಗ್ಗೆ ವಿಪರೀತವಾದ ನಿರೀಕ್ಷೆಯನ್ನು ಇಟ್ಟುಕೊಳ್ಳಬಾರದು. ಹಾಗೆಂದು ಅವರು ಮಾಡುವ ತಪ್ಪುಗಳನ್ನು ಕಣ್ಣು ಮುಚ್ಚಿ ಒಪ್ಪಿಕೊಳ್ಳಲೂ ಬಾರದು. ನಿಮ್ಮ ವಿಪರೀತವಾದ ನಿರೀಕ್ಷೆಗಳು ಮಕ್ಕಳ ಮೇಲೆ ವೃಥಾ ಒತ್ತಡ ಬೀಳುವಂತೆ ಮಾಡುತ್ತದೆ. ಈ ಒತ್ತಡದ ಕಾರಣ ಅವರ ಮನೋಸ್ಥೈರ್ಯ ಕುಂದುವ ಸಾಧ್ಯತೆ ಇದೆ.

ಮಕ್ಕಳು ಪಾಠಗಳಲ್ಲಿ ಉತ್ತಮ ಅಂಕ ತೆಗೆದಾಗ ಅಥವಾ ಕ್ರೀಡಾ ಸ್ಪರ್ಧೆಗಳಲ್ಲಿ ಪುರಸ್ಕಾರಗಳನ್ನು ಪಡೆದಾಗ ಹೊಗಳುವ ಪೋಷಕರು ಅವರು ವಿಫಲರಾದಾಗಲೂ ಬೆನ್ನು ತಟ್ಟಿ ಪ್ರೋತ್ಸಾಹಿಸಬೇಕು. ನಿಮ್ಕ ಬೈಗುಳ ಅಥವಾ ಶಿಕ್ಷೆ ಅವರಲ್ಲಿ ಕೀಳಿರಿಮೆಯನ್ನುಂಟು ಮಾಡುತ್ತದೆ. ನಿಮ್ಮ ಶಿಕ್ಷೆಗೆ ಹೆದರಿ ಅವರು ಏನಾದರೂ ಕೆಟ್ಟ ಹೆಜ್ಜೆ (ಆತ್ಮಹತ್ಯೆ, ಮನೆ ಬಿಟ್ಟು ಹೋಗುವುದು ಇತ್ಯಾದಿ) ಇಡುವ ಸಾಧ್ಯತೆ ಇದೆ. ಅವರಿಗೆ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಿ. ಪರೀಕ್ಷೆಗಳಲ್ಲಿ ಫೈಲ್ ಆಗುವುದು ಜೀವನದಲ್ಲಿ ಫೈಲ್ ಆಗುವುದಲ್ಲ. ಮತ್ತೆ ಪರೀಕ್ಷೆಗಳು ಬರುತ್ತವೆ. ಚೆನ್ನಾಗಿ ಅಭ್ಯಾಸ ಮಾಡಿ ಬರೆದರೆ ಅದೇನೂ ಬ್ರಹ್ಮ ವಿದ್ಯೆಯಲ್ಲ ಎನ್ನುವ ಆತ್ಮ ವಿಶ್ವಾಸ ಅವರಲ್ಲಿ ಮೂಡಿಸಿ.

ಮಕ್ಕಳಿಗೆ ತೀರಾ ಅಗತ್ಯವಾದ ವಸ್ತುಗಳನ್ನು ಮಾತ್ರ ತೆಗೆದುಕೊಡಿ. ಶಾಲೆಯಲ್ಲಿರುವಾಗಲೇ ಮೊಬೈಲ್, ಟ್ಯಾಬ್ ಕೊಡಿಸಬೇಡಿ. ಇದರಿಂದ ಅವರ ಗಮನ ಕಲಿಕೆಯಿಂದ ಬೇರೆ ವಿಷಯದ ಕಡೆಗೆ ಹೋಗುತ್ತದೆ. ಮನೆಯಲ್ಲಿ ಡೆಸ್ಕ್ ಟಾಪ್ ಕಂಪ್ಯೂಟರ್ ಅಳವಡಿಸಿ ಮತ್ತು ಅದನ್ನು ಎಲ್ಲರಿಗೂ ಕಾಣಿಸುವ ರೀತಿಯಲ್ಲಿ ಇಡಿ. ಇದರಿಂದ ನಿಮ್ಮ ಮಗ/ಮಗಳು ಏನು ಕೆಲಸ ಮಾಡುತ್ತಿದ್ದಾರೆ ಎನ್ನುವ ಸಂಗತಿ ನಿಮಗೆ ತಿಳಿಯುತ್ತದೆ. 

ಹೆತ್ತವರ ಕಥೆ ಹೀಗಾದರೆ, ಮಕ್ಕಳೂ ತಮ್ಮ ಜವಾಬ್ದಾರಿಯನ್ನು ಅರಿತುಕೊಳ್ಳಬೇಕು. ಹೆತ್ತವರು ಕಷ್ಟಪಟ್ಟು ದುಡಿದು ತಂದ ಹಣವನ್ನು ದುಂದು ವೆಚ್ಚ ಮಾಡದೇ ಚೆನ್ನಾಗಿ ಕಲಿತು ಮುಂದೆ ಬರಬೇಕು. ಕ್ರೀಡೆ ಅಥವಾ ಇನ್ಯಾವುದೇ ವಿಷಯದಲ್ಲಿ ಆಸಕ್ತಿ ಇದ್ದರೆ (ಚಿತ್ರ ಕಲೆ, ಕಂಪ್ಯೂಟರ್ ಗ್ರಾಫಿಕ್ಸ್) ಅದನ್ನು ನಿಮ್ಮ ಹೆತ್ತವರಿಗೆ ಮನವರಿಕೆ ಮಾಡಿ ಕಲಿಸುವಂತೆ ಕೇಳಬೇಕು. ಶಾಲೆಯಲ್ಲಿ ಕಲಿಯುವ ಪುಸ್ತಕದ ವಿದ್ಯೆ ಮಾತ್ರವಲ್ಲದೇ ಇತರೆ ಉತ್ತಮ ವಿದ್ಯೆಗಳನ್ನೂ ಕಲಿಯುವ ಮನಸ್ಸು ಮಾಡಬೇಕು.

ಪರೀಕ್ಷೆಯಲ್ಲಿನ ಸೋಲು ಬಾಳಿನ ಅಂತ್ಯ ಎಂದು ತಿಳಿದುಕೊಳ್ಳಬಾರದು. ಮತ್ತೊಮ್ಮೆ ಪ್ರಯತ್ನ ಮಾಡಬೇಕು. ಗೆಲುವು ಖಂಡಿತಾ ನಿಮ್ಮದಾಗುತ್ತದೆ. ನೀವು ಯಾವುದಾದರೂ ವಿಷಯದಲ್ಲಿ ಸೋತಾಗಲೇ ನಿಮ್ಮ ಸಾಮರ್ಥ್ಯದ ಅರಿವು ನಿಮಗೆ ಆಗುತ್ತದೆ. ನಿಮ್ಮ ಉತ್ಸಾಹ ಕುಂದದಂತೆ ನೋಡಿಕೊಂಡು ಪ್ರಯತ್ನ ಪಟ್ಟರೆ ಗೆಲುವು ನಿಮ್ಮದೇ. ಸಕಾರಾತ್ಮಕವಾಗಿ ನಿಮ್ಮ ಮನಸ್ಸನ್ನು ಸಜ್ಜುಗೊಳಿಸಿ. ಇದರಿಂದ ನಿಮಗೆ ಜೀವನದಲ್ಲಿ ಅಸಫಲತೆ ಬಾಗಿಲು ತಟ್ಟಿದಾಗ ನಿರಾಸೆಯಾಗುವುದಿಲ್ಲ. ನೀವು ಅದನ್ನು ಎದುರಿಸುವ ಕಲೆಯನ್ನು ಆಗಲೇ ಕಲಿತಿರುತ್ತೀರಿ. ಬದುಕಿನಲ್ಲಿ ತಪ್ಪು ಹೆಜ್ಜೆಗಳನ್ನು ಇಡಲು ಹೋಗಬೇಡಿ. ದುಶ್ಚಟಗಳನ್ನು ಕಲಿಯಲು ಹೋಗದಿರಿ. ಅನಿವಾರ್ಯ ಕಾರಣಗಳಿಂದ ಒಂದೊಮ್ಮೆ ಹೋದರೂ ಬೇಗನೇ ಅದರಿಂದ ಹೊರ ಬನ್ನಿ. ಯಶಸ್ಸು ನಿಮ್ಮದಾಗಲಿ.

(ಆಧಾರ)

ಚಿತ್ರ ಕೃಪೆ: ಅಂತರ್ಜಾಲ ತಾಣ