ವೈಯೆನ್ಕೆ ಅವರ ಕೊನೆ ಸಿಡಿ
ಖ್ಯಾತ ಪತ್ರಕರ್ತ ವೈಯೆನ್ಕೆ ಅವರ ‘ವಂಡರ್ ಕಣ್ಣು' ಬಹಳ ಜನಪ್ರಿಯ ಅಂಕಣವಾಗಿತ್ತು. ‘ಕೊನೆ ಸಿಡಿ' ಯೊಂದಿಗೆ ಅದು ಕೊನೆಗೊಳ್ಳುತ್ತಿತ್ತು. ಬಹುತೇಕ ಓದುಗರು ‘ಕೊನೆ ಸಿಡಿ' ಯಿಂದಲೇ ಆ ಅಂಕಣವನ್ನು ಆರಂಭ ಮಾಡುತ್ತಿದ್ದರು. ಅದು ‘ಕೊನೆ ಸಿಡಿ' ಯ ಆಕರ್ಷಣೆ. ಪನ್, ಸಿದ್ಧ ಚಾಟೂಕ್ತಿ ಹಾಗೂ ಥಟ್ ಉತ್ತರಕ್ಕೆ ಸಿದ್ಧಹಸ್ತರಾಗಿದ್ದ ವೈಯೆನ್ಕೆ ಜತೆಯಲ್ಲಿ ಮಾತಾಡುತ್ತಿದ್ದರೆ ‘ಕೊನೆ ಸಿಡಿ'ಗಳು ಒಂದೇ ಸಮನೆ ಸಿಡಿಯುತ್ತಿದ್ದವು. ಹತ್ತಾರು ವರ್ಷ ಅವರು ಬರೆದ ‘ಕೊನೆ ಸಿಡಿ' ಗಳನ್ನು ಸಂಗ್ರಹಿಸಿ, ಆ ಪೈಕಿ ಕೆಲವನ್ನು ಮಾತ್ರ ಆಯ್ದು ಒಟ್ಟಿಗೆ ಓದುವಂತಾದರೆ ಹೇಗಿದ್ದೀತು?
ಆ ಸಿಡಿತಕ್ಕೆ ನೀವು ಒಳಗಾದರೆ ನಾನು ಜವಾಬ್ದಾರನಲ್ಲ ಎನ್ನುತ್ತಾರೆ ಸಂಪಾದಕರಾದ ವಿಶ್ವೇಶ್ವರ ಭಟ್. ಅವರು ಈ ಪುಸ್ತಕದ ಸಂಪಾದಕರಾಗಿ ಕೆಲವೊಂದು ಮಾತುಗಳನ್ನು ಹೇಳಿದ್ದಾರೆ “ ವೈಯೆನ್ಕೆ ಜತೆ ಹತ್ತು ನಿಮಿಷವಿದ್ದರೆ ಇಂಥ ಹತ್ತಾರು ‘ಕೊನೆ ಸಿಡಿ' ಗಳನ್ನು ಸಿಡಿಸುತ್ತಿದ್ದರು. ಮಾತು ಮಾತಿಗೆ ಪದಗಳ ಜತೆ ಆಟವಾಡುವುದು, ಪದಗಳನ್ನು ಕಟ್ಟುವುದು, ಬಿಡಿಸುವುದು, ಕೀಳುವುದು, ಅಲ್ಲಿ ಹೊಸ ಅರ್ಥ ಹುಡುಕುವುದು, ಹೊಸ ಭಾವ ಬಿತ್ತುವುದು, ನಗೆ ಸಿಡಿಸುವುದು ಅವರಿಗೆ ತೀರಾ ಸಹಜವಾಗಿ ಒಲಿದಿತ್ತು. ಅದಕ್ಕಾಗಿ ಅವರು ತಿಣುಕಾಡುತ್ತಿರಲಿಲ್ಲ. ಎಂಥ ಸಂದರ್ಭದಲ್ಲೂ ಅವರ ಮನಸ್ಸು ಇಂಥ ‘ಪದಬಂಧಕ್ಕೆ' ತಕ್ಷಣ ಟ್ಯೂನ್ ಆಗಿಬಿಡುತ್ತಿತ್ತು. ಹೆಜ್ಜೆ ಹೆಜ್ಜೆಗೆ ಅವರು ಪನ್ ಮಾಡುತ್ತಿದ್ದರು. ಒಂದು ಪದಕ್ಕೆ ಹಲವು ಅರ್ಥಗಳನ್ನು ಕಟ್ಟಿಕೊಡುತ್ತಿದ್ದರು. ಒಮ್ಮೆ ಅವರ ಜೊತೆಗೆ ಮಾತನಾಡುವಾಗ ಸ್ನೇಹಿತರೊಬ್ಬರು , ವೈಯೆನ್ಕೆ ನೀವು ಬಹಳ Optimist - ಆಶಾವಾದಿ' ಎಂದರು. ಅದಕ್ಕೆ ವೈಯೆನ್ಕೆ ನೀಡಿದ ಉತ್ತರ - ‘ಆಪ್ಟಿಮಿಸ್ಟ್ ಅಂದ್ರೆ ಏನು ಗೊತ್ತಾ? ಆಪ್ಟಿ ಅಂದ್ರೆ ಕಣ್ಣಿಗೆ ಸಂಬಂಧಿಸಿದ್ದು. ಮಿಸ್ಟ್ ಅಂದ್ರೆ ಮಂಜು. ಅಂದ್ರೆ ಆಪ್ಟಿಮಿಸ್ಟ್ ಯಾರು ಅಂತಾಯ್ರು? ಕಣ್ಣು ಮಂಜಾಗಿರುವವನು ತಾನೇ? ಇನ್ನು ಆಶಾವಾದಿ, ಮಾರ್ಕ್ಸ್ ವಾದಿ, ಮಾವೋವಾದಿ, ಕೋಮುವಾದಿ ತರಹ ಆಶಾವಾದಿ ಅಂದರೆ ನಾನು ಆಶಾಪರ ಅಲ್ಲ, ಆಶಾವಾದಿ ಅಂದರೆ ಅನುಭವ ಇಲ್ಲದವನು ಎನ್ನುತ್ತಾರೆ. (ಅನುಭವ ಅಂದರೆ ನಾವು ಮಾಡುವ ತಪ್ಪುಗಳಿಗೆ ಕೊಡುವ ಹೆಸರು-ಎಂಬುದು ಅನುಭವಿ ಅರ್ಥಾತ್ ನಿರಾಶಾವಾದಿ ಉವಾಚ) ಆಶಾವಾದಿ ಎಂದರೆ ಕಾಸಿಲ್ಲದ ವ್ಯಕ್ತಿ ಹೋಟೇಲ್ ಗೆ ಹೋಗಿ ‘ಆಯಸ್ಟರ್' ಗೆ (ಮುತ್ತಿನ ಚಿಪ್ಪು) ಆರ್ಡರ್ ಮಾಡುತ್ತಾನಂತೆ. ಏಕೆಂದರೆ ಆ ಚಿಪ್ಪಿನಲ್ಲಿ ಮುತ್ತು ದೊರಕುವುದೆಂಬ ಆಸೆಯಿಂದ. ಆ ಮುತ್ತಿನಿಂದ ಹೋಟೇಲ್ ಬಿಲ್ ಕೊಡಬಹುದೆಂಬ ಆಸೆಯಿಂದ.” ಎಂದು ವೈಯೆನ್ಕೆ ಬಗ್ಗೆ ಹೇಳಿದ್ದಾರೆ.
ವೈಯೆನ್ಕೆ ಸಿಡಿಸಿದ ಸಾವಿರಾರು ಕೊನೆಸಿಡಿಯಲ್ಲಿನ ಒಂದು ಸಿಡಿಯ ಸ್ಯಾಂಪಲ್ ಇಲ್ಲಿದೆ “ಅಮೇರಿಕಾದಲ್ಲಿ ನ್ಯಾಯ ವಿಚಾರಣೆಯಲ್ಲಿ ಜ್ಯೂರಿ ವ್ಯವಸ್ಥೆ ಇದೆ. ೧೨ ಮಂದಿ ಯೋಗ್ಯರ ಮುಂದೆ ವಿಚಾರಣೆ ನಡೆದ ಮೇಲೆ ತಮ್ಮೊಳಗೆ ಚರ್ಚಿಸಿ ಬಳಿಕ ನ್ಯಾಯಾಧೀಶರಿಗೆ ತಮ್ಮ ನಿರ್ಧಾರ ತಿಳಿಸುತ್ತಾರೆ.
ಒಬ್ಬನ ಮೇಲೆ ಕೊಲೆ ಆರೋಪ. ಅವನು ಒಬ್ಬ ಜ್ಯೂರಿಗೆ ಸಾವಿರಾರು ಡಾಲರ್ ಲಂಚ ಕೊಡುವುದಾಗಿ ತಿಳಿಸಿ ತನ್ನ ಶಿಕ್ಷೆ ಕಡಿಮೆ ಮಾಡಬೇಕೆಂದು ಕೋರಿದ.
ಕಡೆಗೆ ನ್ಯಾಯಾಧೀಶರು ಜೀವಾವಧಿಗಿಂತ ಕಡಿಮೆ ಶಿಕ್ಷೆ ಕೊಟ್ಟರು. ಆನಂದದಿಂದ ಆರೋಪಿ ಆ ಜ್ಯೂರಿಯ ಹತ್ತಿರ ಓಡಿ ಹೋಗಿ ಕೈಕುಲುಕಿ ‘ಥ್ಯಾಂಕ್ಸ್' ಅಂದ.
ಆ ಜ್ಯೂರಿ ಹೇಳಿದ ; ತುಂಬಾ ಕಷ್ಟವಾಯಿತಪ್ಪ ನೀನು ಕೇಳಿದ್ದು ಮಾಡಕ್ಕೆ. ಉಳಿದವರೆಲ್ಲ ನಿನ್ನ ಬಿಡುಗಡೆ ಮಾಡಬೇಕೂಂತಿದ್ದರು.”
ಹೀಗೆ ನಿಮ್ಮನ್ನು ನಕ್ಕು ನಗಿಸುವ ನೂರಾರು ಸಿಡಿಗಳು ಈ ಪುಸ್ತಕದಲ್ಲಿವೆ. ಸುಮಾರು ೨೧೦ ಪುಟಗಳ ಈ ಪುಸ್ತಕವನ್ನು ಸಂಪಾದಕರಾದ ವಿಶ್ವೇಶ್ವರ ಭಟ್ ಅವರು ತಮ್ಮ ಸ್ನೇಹಿತ ಯಶವಂತ ಸರದೇಶಪಾಂಡೆ ಇವರಿಗೆ ಅರ್ಪಣೆ ಮಾಡಿದ್ದಾರೆ. ಇದೊಂದು ನಗೆಹನಿಯ ಪುಸ್ತಕ ಅಲ್ಲವಾದರೂ ಇಲ್ಲಿರುವ ‘ಸಿಡಿ' ಗಳನ್ನು ಓದಿದ ಬಳಿಕ ನಗಾಡದೇ ಇರಲು ಸಾಧ್ಯವೇ ಇಲ್ಲ.