ವೈರಾಣುವಿನಾಟ
ಕವನ
ವಸುಂಧರೆಯ ಮಡಿಲಲ್ಲಿ
ನೀರವ ಮೌನದ ನೆರಳಲ್ಲಿ
ಪರ ಲೋಕಕೆ ಅಂತಿಮ ಯಾತ್ರೆ !
ಮಹಾ ಮಾಯಾವಿ ಲೀಲೆಯಲಿ
ಸಾವು,ಲಕ್ಷಾಂತರ ಆರಿದ ಜ್ಯೋತಿ ಯಲ್ಲಿ
ವೈರಾಣುವಿನ ಕಾಣದ ಮಹಾಜಾತ್ರೆ !
ಕುಡಿಗಳ ಮೇಲಿನ ಅತ್ಯಚಾರ
ನಿಸರ್ಗದ ಮೇಲಿನ ಅನಾಚಾರ
ತರದಿರದೆ ವಸುಧೆಗೆ ಆಕ್ರೋಶ ?
ಕ್ರಿಮಿ,ಕೀಟ, ಜಂತುಗಳ ನೋವಿಗೆ
ಕಾಡು,ನಾಡು ಪ್ರಾಣಿಗಳ ಸಾವಿಗೆ
ನೊಂದು,ಬೆಂದು ಹೊರೆಯನ್ನಿಳಿಸಿದಳೇ?
ದುಗ್ಗಾಣಿಯ ಮೋಹದ ನಾಟಕಕೆ
ದುಷ್ಟತನದ ಹಮ್ಮಿನ ಪರಮಾವಧಿಗೆ
ತಪರಾಕಿ ಬೀಸಿತೆ ನಿಸರ್ಗವು !?
ಹುಟ್ಟು ಕೊಟ್ಟ- ಮಣ್ಣ ಹೊಳಪು
ಮಳೆಯ ಹನಿಯ ಸಂಗದಲ್ಲಿ
ಪರಮಾನ್ನ ಉಂಡ ಬಯಕೆಯಲ್ಲಿ !
ನಿನ್ನದೇನಿದೆ ಹೇಳು ಮಾನವ ?
ಹೊತ್ತೊಯ್ದುಕೊಂಡು ಹೋಗಲು
ಪಾಪ ತುಂಬಿದ ಮೂಟೆ ಬಿಟ್ಟು !!
ಪಂಚಭೂತಗಳ ಆಸರೆಯಲ್ಲಿ
ವಸುಧೆ ಗರ್ಭದೊಳಗೆಳೆದೆಳೆದು
ಕರ್ಮದ ಮಣ್ಣು ಉಣ್ಣು ನೀ ಎಂದಳೇ !?
ನಂಬಿಕೆ ಕುಸಿದು- ಭಯವು ಬೆಸೆದು
ಹೆಣಗಳಡಗಿದ ಕಾಫೀನುಗಳಲ್ಲಿ--
ವೈರಾಣುವಿನಾಟದ ಮಹಾ ತಂತ್ರ !!
ಮಾನವನಾದ ಅತಂತ್ರ !!!!!
-ವೀಣಾ ಕೃಷ್ಣಮೂರ್ತಿ, ದಾವಣಗೆರೆ.
ಚಿತ್ರ್
