ವೈರಾಣುವಿನ ಸುತ್ತಲೇ ಸುತ್ತುತ್ತಿರುವ ನಮ್ಮ ಮನಸ್ಸು …
ವೈರಾಣುವಿನ ಸುತ್ತಲೇ ಸುತ್ತುತ್ತಿರುವ ನಮ್ಮ ಮನಸ್ಸು - ಆಲೋಚನೆಗಳು - ಬದುಕು. ನಿಂತಲ್ಲಿ - ಕುಳಿತಲ್ಲಿ - ಮಲಗಿದಲ್ಲಿ - ಮಾತಿನಲ್ಲಿ - ಫೋನಿನಲ್ಲಿ - ಪತ್ರಿಕೆಗಳಲ್ಲಿ - ಟಿವಿಗಳಲ್ಲಿ - ಪತ್ರಿಕೆಗಳಲ್ಲಿ - ಆಡಳಿತದಲ್ಲಿ ವೈರಾಣುವಿನದೇ ಮಾತು. ಇದು ಮುಗಿಯುವುದೆಂದು, ಬದುಕಿನ ಮುಂದಿನ ಪಯಣ ಹೇಗೆ, ಮಕ್ಕಳ ಭವಿಷ್ಯವೇನು......
ಬ್ರೇಕಿಂಗ್ ನ್ಯೂಸ್ ಗಳು ಹೆಚ್ಚಾಗತೊಡಗಿವೆ.....
ಸಾವುಗಳು ಸಹಜವಾಗುತ್ತಾ ಸಾಗುತ್ತಿದೆ...
ಸುದ್ದಿಗಳು ಸಾವಿನ ಸಂಖ್ಯೆಗಳನ್ನು ಎಣಿಸುತ್ತಿವೆ...
ಕೊರೋನಾದಿಂದ ಇಂತಿಷ್ಟು ಸಾವು, ಹಸಿವಿನಿಂದ ಮತ್ತಷ್ಟು, ಆತ್ಮಹತ್ಯೆಯಿಂದ ಇನ್ನಷ್ಟು...
ಪ್ರಳಯದ ಮುನ್ಸೂಚನೆ ಎಂಬ ಇಲ್ಲಸಲ್ಲದ ತಳಮಳ ಹಾಳು ಮನಸ್ಸುಗಳಲ್ಲಿ......
ಎತ್ತರದ ಸ್ಥಳದಿಂದ ನಿಂತು ನಗರದ ಕಡೆಗೊಮ್ಮೆ ದೃಷ್ಟಿ ಹಾಯಿಸಿದಾಗ ನಿಸ್ತೇಜಗೊಂಡು ಮಲಗಿರುವ ರೋಗಿಯಂತೆ ಕಂಡಿತು. ಬಸವಳಿದು ನಲುಗಿದ ವೃದ್ದನಂತೆ ಕಾಣಿಸಿತು. ಅನಾಥ ಮಗುವಿನ ಮುಖಭಾವ ನೆನಪಾಯಿತು...
ಕಾಲೇಜು ಪಾರ್ಕು ಹೋಟೆಲು ಥಿಯೇಟರ್ ಮಾಲುಗಳಲ್ಲಿ ಬಣ್ಣದ ಚಿಟ್ಟೆಗಳ ಪ್ರೀತಿಯ ಕಲರವ ಎಲ್ಲಿ ಹೋಯಿತು....
ಮದುವೆ ಸಂಭ್ರಮದ ಕನಸಿನಲ್ಲಿದ್ದ ಅನೇಕ ಯುವ ಜೋಡಿಗಳ ಮುಹೂರ್ತಗಳು ಮುಂದೆ ಮುಂದೆ ಹೋಗುತ್ತಲೇ ಇದೆ...
ರಸ್ತೆ ಬದಿಯಲ್ಲಿ ನಿಂತು ಸಂಜೆಯ ಇಳಿಗತ್ತಲಿನಲ್ಲಿ ಹರಟೆ ಹೊಡೆಯುತ್ತಾ ಪಾನಿಪೂರಿ ಬೇಲ್ ಪುರಿ ಗೋಬಿ ಮಂಚೂರಿ ಪಾವ್ ಬಾಜಿ ಕಬಾಬ್ ಮಸಾಲೆ ದೋಸೆ ತಿನ್ನುತ್ತಾ ಖುಷಿ ಪಡುತ್ತಿದ್ದ ಆ ದಿನಗಳು ಬರುವುದೆಂದು...
ಈಗಾಗಲೇ ನಷ್ಟದಲ್ಲಿದ್ದ ಕಾಫಿ ಡೇ ಇನ್ನು ಚೇತರಿಸಿಕೊಳ್ಳುವುದು ತುಂಬಾ ಕಷ್ಟವಿರಬೇಕು. ಅಲ್ಲಿನ ನೊರೆ ಬರಿತ ಕಾಫಿ ಸಮೋಸ ಇನ್ನು ಸಿಗುವುದಿಲ್ಲವೇ..
ಬೆಳಗ್ಗೆ ಸಂಜೆ ಕ್ರಿಕೆಟ್ ಆಡುತ್ತಾ, ಷಟಲ್ ಬೀಸುತ್ತಾ, ವಾಕ್ ಮಾಡಿತ್ತಾ, ಕ್ಲಬ್ ಗಳಲ್ಲಿ ತಣ್ಣನೆಯ ಬಿಯರ್ ಹೀರುತ್ತಿದ್ದ ಸಮಯ ಮತ್ತೆ ಎಷ್ಟು ಬೇಗ ಬರುತ್ತದೆ....
ನೆನಪಾದಾಗಲೆಲ್ಲ ಅಕ್ಜನ ಮನೆ, ತಂಗಿಯ ಮನೆ, ಅಣ್ಣನ ಮನೆ, ಗೆಳೆಯರ ಮನೆಗೆ ಹೋಗಿ ಸಮಯ ಕಳೆದು ಬರುತ್ತಿದ್ದೆವು. ಈಗ ದೂರವಾಣಿಯಲ್ಲಿ ಮಾತ್ರ. ಯಾಕೋ ಸಮಾಧಾನವೇ ಇಲ್ಲ...
ಛೆ ಛೆ ಸಮಾಧಾನ ಯಾಕಿಲ್ಲ,.....ಇದೆ......
ಬಸ್ಸು ರೈಲು ನಿಲ್ದಾಣಗಳಲ್ಲಿ, ಫ್ಲೈ ಓವರ್ ಗಳ ಕೆಳಗೆ ಅನಾಥರಂತೆ ಮಲಗುತ್ತಿದ್ದ ಎಷ್ಟೋ ಜನರ ಬದುಕು ಈಗ ಹೇಗಿದೆಯೋ ಎಂದು ನೆನಪಾದರೆ...
ಡಯಾಲಿಸಿಸ್, ಕಿಮೋ ಥರಪಿ, ರೇಡಿಯೋ ಥೆರಪಿ ಮುಂತಾದ ಆರೋಗ್ಯ ಸಮಸ್ಯೆಗಳಿಗೆ ದಿನನಿತ್ಯ ಆಸ್ಪತ್ರೆಗಳಿಗೆ ಹೋಗಬೇಕಾದ ಅನಿವಾರ್ಯ ಪರಿಸ್ಥಿತಿ ಇದ್ದವರು ನೆನಪಾದಾಗ......
ಮಗಳ ಮದುವೆಯ ಆಸೆಯಿಂದ,
ಮಗನ ವಿಧ್ಯಾಭ್ಯಾಸದ ಕನಸಿನಿಂದ,
ಸಾಲ ತೀರಿಸುವ ಭರವಸೆಯಿಂದ,
ತಾಯಿಯ ಹೃದಯ ಶಸ್ತ್ರಚಿಕಿತ್ಸೆಯ ಧಾವಂತದಿಂದ, ಬೆಳೆದ ಫಸಲು ಮಾರಾಟವಾಗದೇ ಪರಿತಪಿಸುತ್ತಿರುವ
ರೈತರು ನೆನಪಾದಾಗ...
ಬೀದಿ ಬದಿಗಳಲ್ಲಿ, ಸಂದಿಗೊಂದಿಗಳಲ್ಲಿ, ತಳ್ಳು ಗಾಡಿಗಳಲ್ಲಿ ಸಿನಿಮಾ ಟೆಂಟುಗಳ ಬಳಿ ಬೀಡಿ ಸಿಗರೇಟು ಬಾಳೆ ಹಣ್ಣು ಕಾಫಿ ಟೀ ಮಾರುತ್ತಾ ಅಂದಿನ ಊಟಕ್ಕೆ ಅಂದೇ ಒಂದಷ್ಟು ಸಂಪಾದನೆ ಮಾಡಿ ಸಣ್ಣ ಗುಡಿಸಲುಗಳಲ್ಲಿ ಬದುಕುತ್ತಿದ್ದ ಜನ ನೆನಪಾದಾಗ....
ಇರಲಿ ಬಿಡಿ, ಬದುಕಿನ ಪಯಣದಲ್ಲಿ ಗಾಢ ಅನುಭವಗಳು ನಮ್ಮನ್ನು ಸಾರ್ಥಕತೆಯತ್ತ ಕೊಂಡೊಯ್ಯಲು ಇರುವ ಸಾಧನಗಳು ಎಂದೇ ಭಾವಿಸೋಣ...
ಎದೆಯೊಡ್ಡಿ ನಿಲ್ಲೋಣ ಸಮಸ್ಯೆಗಳ ಎದುರಿಗೆ ವೀರ ಯೋಧರಂತೆ,
ಗೆಲುವು - ಸೋಲು - ಸಾವನ್ನು,
ಅದು ಬಂದಂತೆ ಸ್ವೀಕರಿಸೋಣ....
ಎಲ್ಲರಿಗೂ ಒಳ್ಳೆಯದಾಗಲಿ..
ಬೆಚ್ಚನೆಯ ಸಿಹಿಗನಸಿನ ನಲ್ಬೆಳಗು ನಿಮ್ಮದಾಗಲಿ.....
- ಜ್ಞಾನ ಭಿಕ್ಷಾ ಪಾದಯಾತ್ರೆಯ 170 ನೆಯ ದಿನ ಹಾವೇರಿ ನಗರದಲ್ಲಿ ವಾಸ್ತವ್ಯ.
-ವಿವೇಕಾನಂದ. ಹೆಚ್.ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ