ವೈರುಧ್ಯ ಸ್ವಭಾವ = ಅನ್ಯೋನ್ಯ ಸಂಸಾರ!

ವೈರುಧ್ಯ ಸ್ವಭಾವ = ಅನ್ಯೋನ್ಯ ಸಂಸಾರ!

ಸುಖ ಸಂಸಾರದ ಸೂತ್ರಗಳೇನು? ಬ್ಯಾಚಲರ್ ಆದ ನಾನು ಇದರ ಬಗ್ಗೆ ಮಾತನಾಡುವುದು ತೀರಾ ಅಸಂಬದ್ಧವಾದೀತು. ಆದರೂ ಕಂಡದ್ದು, ಓದಿದ್ದನ್ನೆಲ್ಲಾ ಯೋಚಿಸಿದಾಗ ಒಬ್ಬ ವ್ಯಕ್ತಿ ಹೇಗಿರಬೇಕು ಎಂದರೆ ಶಿವನಂತಿರಬೇಕು ಎನ್ನುತ್ತೇನೆ ನಾನು. ಏಕೆ ಹೇಗೆ ಎಂಬೆಲ್ಲಾ ಪ್ರಶ್ನೆಗಳಿಗೆ ಉತ್ತರ ಕಂಡು ಹಿಡಿಯೋಣ.

ಹಿಮಾಲಯ(ಕೈಲಾಸ)ದಲ್ಲಿ ಸರ್ವಸಂಗ ಪರಿತ್ಯಾಗಿಯಾಗಿ ಭೂತಗಣಾಧಿಪತಿಯಾಗಿ ಆಸೀನಾಗುವ ಶಿವನಿಗೂ ಸಂಸಾರವೆಂಬ ಮಾಯಾಜಾಲಕ್ಕೂ ’ಎತ್ತಣ ಮಾಮರ ಎತ್ತಣ ಕೋಗಿಲೆ’ ಸಂಬಂಧ! ಯೋಗಿಯಾಗಿ ಬದುಕುವವನಿಗೂ ಭೋಗದ ಅಗತ್ಯವಿದೆಯೆನ್ನುವುದು ಆತನನ್ನು ಪರಿಪೂರ್ಣ ಮನುಷ್ಯನನ್ನಾಗಿ ಮಾಡುವ ಕಲ್ಪನೆ.

ಶಿವ ಒಂದು ರೀತಿಯಲ್ಲಿ ಪರಿಪೂರ್ಣ ಸಂಸಾರಿ! ಹಾಗೆಯೇ ’ಫೈಟಿಂಗ್ ಫ್ಯಾಮಿಲಿ’ಯನ್ನು ಸರಿಯಾಗಿ ಹೊಂದಿಸಿಕೊಂಡು ಹೋಗುವ ಚಾಣಾಕ್ಷ! ಒಮ್ಮೆ ಶಿವನ ಫ್ಯಾಮಿಲಿ ಫೋಟೋವನ್ನು ನೋಡಿ! ಗಣಪತಿ ವಾಹನ ಮೂಷಿಕವನ್ನು ತಿನ್ನುವ ನಾಗರ ಶಿವನ ಕುತ್ತಿಗೆಯಲ್ಲಿ ಸುತ್ತು ಹಾಕಿದೆ. ಆ ನಾಗರವನ್ನು ನಾಶ ಮಾಡುವ ನವಿಲು ಕಾರ್ತಿಕೇಯನ ವಾಹನ! ಶಿವನ ವಾಹನ ನಂದಿ, ಅದನ್ನು ಬೇಟೆಯಾಡೋ ಸಿಂಹ ಪಾರ್ವತಿಯ ವಾಹನ! ಒಂದನ್ನೊಂದು ತಿನ್ನುವ ಪ್ರಾಣಿಗಳೂ ಪರಸ್ಪರ ಕಚ್ಚಾಡಿ ತಿನ್ನಲಾಗದಂತೆ ಸಮತೋಲನದಲ್ಲಿ ಶಿವನ ಸಂಸಾರ ನಡೆಯುತ್ತದೆ. ಮೂಲತಃ ನಮ್ಮಲ್ಲಿರುವ ಸಂಸಾರದ ಪರಿಕಲ್ಪನೆಗಳಲ್ಲಿ ಕೂಡ ಸಿಂಹ(ಅತ್ತೆ), ನಂದಿ(ಮಾವ), ನಾಗರಹಾವು, ನವಿಲು, ಮೂಷಿಕ (ಇಷ್ಟಪಟ್ಟ ಹೆಸರುಗಳನ್ನು ತುಂಬಿಸಿಕೊಳ್ಳಿ) ಇರುತ್ತಾರೆ, ಇವರೇ ಇರಬೇಕೆಂದಿಲ್ಲ. ಸಮಯ ಸಂದರ್ಭಗಳಲ್ಲಿ ಸೃಷ್ಟಿಯಾಗಲೂಬಹುದು. ಇದನ್ನೆಲ್ಲಾ ಸಮತೋಲನ ಪಡಿಸಿಕೊಂಡು ಸಂಸಾರವನ್ನು ಸಾಗಿಸುವ ಶಿವ ಆದರ್ಶಪ್ರಾಯನೇ ಅಲ್ಲವೇ.



http://www.astromyfriend.com/yahoo_site_admin/assets/images/ganesh_shiv_full.4103340_large.jpg

ಅದರೊಂದಿಗೆ ಸಂಪೂರ್ಣವಾಗಿ ಲೌಕಿಕದಿಂದ ಡಿಟ್ಯಾಚ್ ಆಗಿದ್ದೂ ದಾಕ್ಷಾಯಿಣಿಗೆ ’ಹೋಗದಿರು’ ಎಂದು ಹೇಳಿದರೂ ಬಲವಂತಗೊಳಿಸಿ ಆಕೆಯನ್ನು ನಿಲ್ಲಿಸದೆ ಆಕೆಯ ಮಾತುಗಳಿಗೂ ಬೆಲೆಯಿರುವಂತೆ ನೋಡಿಕೊಳ್ಳುತ್ತಾನೆ. ಆಕೆಯ ಸಾವಿಗೆ ಕಾರಣನಾದ ದಕ್ಷನನ್ನೂ ಬಿಡದೆ ತನ್ನ ಪತಿ ಧರ್ಮವನ್ನು ತೋರಿಸುವ ಶಿವ, ಅದೇ ಹಾಲಾಹಲ ವಿಷವನ್ನು ಕುಡಿದು ಅದನ್ನು ಹೊರಗೂ ಒಳಗೂ ಬಿಡದೆ ಸಂಸಾರದ ಗುಟ್ಟುಗಳೆಲ್ಲಾ ಬಿಸಿ ತುಪ್ಪದಂತೆ ಎಂದು ಸೂಚಿಸುತ್ತಾನೆ. ಪಾರ್ವತಿಗೆ ತನ್ನ ದೇಹದಲ್ಲೇ ಅರ್ಧ ಭಾಗ ನೀಡಿ ಅರ್ಧನಾರೀಶ್ವರ ಎಂದು ಕರೆಯಲ್ಪಡುವುದೇ ಅಲ್ಲದೆ ಪತ್ನಿಗೆ ಕೊಡುವ ಸ್ಥಾನ ಮಾನ ಏನಿರಬೇಕು ಎಂಬುದನ್ನೂ ಸೂಚ್ಯವಾಗಿ ಸೂಚಿಸುತ್ತಾನೆ.


ಇಹ ಸುಖಗಳೆಲ್ಲಾ ನಶ್ವರ ಎನ್ನುವವರಿಗೆಲ್ಲಾ ಸಂಸಾರಿಯಾಗಿದ್ದುಕೊಂಡೂ ಲೌಕಿಕವಾಗಿ ಹೇಗೆ ಡಿಟ್ಯಾಚ್ ಆಗಿರಬೇಕು ಮತ್ತು ವೈಯಕ್ತಿಕ ನೆಲೆಯಲ್ಲಿ ಒಬ್ಬ ವ್ಯಕ್ತಿ ಯಾವ ರೀತಿಯ ವ್ಯಕ್ತಿತ್ವವನ್ನು ಹೊಂದಿರಬೇಕು ಎನ್ನುವವರಿಗೆಲ್ಲಾ ಶಿವ ಒಬ್ಬ ರೋಲ್ ಮಾಡಲ್! ಬಂದವರಿಗೆ ಸಹಾಯ ಮಾಡುತ್ತಾ ಅವರ ಹೃದಯದಲ್ಲಿ ವಾಸಿಸುವ ಶಿವ ತಾಮಸಧಾರಿ! ಸಿಟ್ಟು ಬಂದಾಗ ಉರಿಯುವ ಕೆಂಡ! ಅಮ್ಮ ಹೇಳ್ತಾ ಇದ್ರು, ’ಈಶ್ವರ ಕೂಡ ವಿಚಿತ್ರ! ಕೇಳಿದವರಿಗೆಲ್ಲಾ ವರ ಕೊಡ್ತಾನೆ, ಮತ್ತೆ ಅವರೇನು ಮಾಡ್ತಾರೆ ಅಂತ ಯೋಚನೆ ಕೂಡ ಮಾಡಲ್ಲ’ ಒಂದು ರೀತಿ ಪಾರಲೌಕಿಕತೆ ಎನ್ನುವುದು ಇದೇ ಅಲ್ಲವೇ. ಶಿವನನ್ನು ಇನ್ನೂ ಬೇರೆ ಬೇರೆ ವಿಧಾನಗಳಲ್ಲಿ ಅನಲೈಸ್ ಮಾಡಬಹುದು ಆದರೆ ಲೇಖನದ ವಸ್ತುವಿನ ವ್ಯಾಪ್ತಿಯಿಂದ ಹೊರಗೆಳೆಯುವುದರ ಅಗತ್ಯ ಕಂಡುಬರುತ್ತಿಲ್ಲ
http://www.interestingmails.com/image_gallery/shiv-17.jpg
ಶಿವನನ್ನು ಒಬ್ಬ ದೇವರೆಂದು ಆರಾಧಿಸುವುದು ಬಿಡುವುದು ಅವರವರಿಗೆ ಬಿಟ್ಟದ್ದು. ಆದರೆ ನಮ್ಮಲ್ಲಿ ದೇವರನ್ನು ಸೂಚಿಸಿರುವ ರೀತಿಗಳಲ್ಲಿ ಸೂಕ್ತವಾಗಿ ಬದುಕುವ ರೀತಿಗಳನ್ನೂ ಬಿಂಬಿಸಲಾಗಿದೆ. ಇದು ಬೇರೆಲ್ಲೂ ಕಾಣಸಿಗದು ಎಂದು ನಾನು ಭಾವಿಸಿದ್ದೇನೆ, ಸುಳ್ಳು ಕೂಡ ಆಗಿರಬಹುದು. ಧರ್ಮದಲ್ಲಿ, ಅದರ ನಂಬಿಕೆಗಳಲ್ಲಿ ಸೂಕ್ತವಾಗಿ ಬದುಕುವ ರೀತಿ ನೀತಿಗಳನ್ನು ತಿಳಿಸಲಾಗಿದೆ. ಇದು ನಮ್ಮಲ್ಲಿ ಮಾತ್ರವಲ್ಲ ಹೆಚ್ಚಿನ ಪಂಗಡಗಳಲ್ಲಿ ಹಾಗೂ ಧರ್ಮಗಳಲ್ಲಿ ಕೂಡ ಇದೆ. ಅದರಲ್ಲಿರುವ ಉತ್ತಮ ಅಂಶಗಳನ್ನು ಬಿಟ್ಟು ನಾವು ದೇವರಿಗಾಗಿ ದೇವಸ್ಥಾನಗಳನ್ನು ಕಟ್ಟಿ, ಅವರ ಹೆಸರಿನಲ್ಲಿ ಧರ್ಮಯುದ್ಧವನ್ನು ಮಾಡಿ ಒಂದು ವ್ಯವಸ್ಥಿತ ಅವ್ಯವಸ್ಥ ಸಮಾಜವನ್ನು  ನಿರ್ಮಿಸುತ್ತಾ ದೇವರನ್ನು ನಿಜಕ್ಕೂ ದೇವರಾಗಿಸುತ್ತೇವೆ. ಇದು ನಿಜಕ್ಕೂ ಧರ್ಮ ಎಂಬ ಅಧರ್ಮ ಕಾಣುತ್ತಿರುವ ಅತಿ ದೊಡ್ಡ ದುರಂತ!

[ಪದವಿಯಲ್ಲಿ ನಡೆಯುತ್ತಿದ್ದ ಇಂಗ್ಲೀಷ್ ಲೆಕ್ಚರರ್ ವಿಶ್ವನಾಥ ಗಟ್ಟಿ ಮತ್ತು ನನ್ನ ನಡುವೆ ನಡೆಯುತ್ತಿದ್ದ ಚರ್ಚೆಗಳು ಈ ಲೇಖನಕ್ಕೆ ಕಾರಣ. ಅವರಿಗೆ ಇದು ನಾನು ಸಲ್ಲಿಸುತ್ತಿರುವ ಕಾಣಿಕೆ]