ವೈಶಾಖದ ಮಳೆ

ವೈಶಾಖದ ಮಳೆ

ಪುಸ್ತಕದ ಲೇಖಕ/ಕವಿಯ ಹೆಸರು
ಸುಮತಿ ಕೃಷ್ಣಮೂರ್ತಿ
ಪ್ರಕಾಶಕರು
ಹರಿವು ಬುಕ್ಸ್, ಬೆಂಗಳೂರು
ಪುಸ್ತಕದ ಬೆಲೆ
ರೂ. ೧೧೦.೦೦, ಮುದ್ರಣ: ೨೦೨೪

ಭರವಸೆಯ ಕವಯತ್ರಿ ಸುಮತಿ ಕೃಷ್ಣಮೂರ್ತಿ ಅವರ ಚೊಚ್ಚಲ ಕವನ ಸಂಕಲನ ‘ವೈಶಾಖದ ಮಳೆ' ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಕವನ ಸಂಕಲನದ ಬಗ್ಗೆ ಸೊಗಸಾದ ಮುನ್ನುಡಿಯನ್ನು ಬರೆದಿದ್ದಾರೆ ಎಂ ಎಸ್ ಆಶಾದೇವಿ. ಇವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಅನಿಸಿಕೆಗಳ ಆಯ್ದ ಭಾಗ...

“ಸುಮತಿ ಕೃಷ್ಣಮೂರ್ತಿಯವರ 'ವೈಶಾಖದ ಮಳೆ' ಯ ಮೊದಲ ಓದು ಕವಿಯ ಮೊದಲ ಕವಿತೆಗಳಿಗಿಂತ ಖಂಡಿತ ತುಸು ಎತ್ತರದಲ್ಲಿದೆ. ಅವರೊಳಗೆ ಕವಿಯ ಕಣ್ಣಿನ ಇರುವಿಕೆಯನ್ನಂತೂ ಇಲ್ಲಿನ ಕವಿತೆಗಳು ಸಾಬೀತು ಮಾಡುತ್ತಿವೆ. ಕವಿತೆಗಳು ಧಿಡೀರ್ ಅಡುಗೆಯಾಗಿ ಮೆರೆಯುತ್ತಿರುವ ಈ ಕಾಲ ನಮ್ಮನ್ನು ಆತಂಕಕ್ಕೂ ತಳ್ಳಿರುವ ಸಂದರ್ಭದಲ್ಲಿ ಕಾವ್ಯವನ್ನು ಗಂಭೀರವಾಗಿ ತೆಗೆದುಕೊಂಡವರ ಬಗ್ಗೆ ಸಹಜವಾಗಿಯೇ ಪ್ರೀತಿ ಹುಟ್ಟುತ್ತದೆ. ತನ್ನೊಳಗಿನ ತಳಮಳವನ್ನೇ ಸಾಮಾನ್ಯವಾಗಿ ಮೊದ ಮೊದಲ ಕವಿತೆಗಳಲ್ಲಿ ಕಾಣುವುದು. ತನ್ನ ವ್ಯಕ್ತಿಗತವಾದ ಅನುಭವಗಳು,, ಢಾಳಾದ ಸಾಮಾಜಿಕ ವಾಸ್ತವಗಳು ಇವುಗಳ ವ್ಯಾಖ್ಯಾನ ಅಲ್ಲಿರುತ್ತದೆ. ಸುಮತಿಯವರು ಅದಕ್ಕಿಂತ ಆಳವಾಗಿ, ಗಂಭೀರವಾಗಿ ಬದುಕು ಮತ್ತು ಮನುಷ್ಯನನ್ನು ಧ್ಯಾನಿಸಲು ಹವಣಿಸುತ್ತಿದ್ದಾರೆ.

ಸರಳವಾದ ಬಂಧದಲ್ಲಿದ್ದರೂ 'ಒತ್ತಾಸೆ' ಕವಿತೆ ಈ ಹವಣಿಕೆಯ ಆರಂಭದಂತೆ ಕಾಣಿಸುತ್ತದೆ. ಬದುಕಿನ ಬಗೆಗೆ, ಅದರೆದುರು ದಿಕ್ಕೆಟ್ಟವರಂತೆ ನಿಲ್ಲುವ ಮನುಷ್ಯರು ಹುಲು ಮಾನವರಂತೆ ವ್ಯವಸ್ಥೆಯ ಬಗೆಗೋ, ಸಂದರ್ಭ ಸನ್ನಿವೇಶಗಳ ಬಗೆಗೋ ಕೈತೋರಿ ತಮ್ಮನ್ನು ಸುಳ್ಳುಸುಳ್ಳೇ ಸಮಾಧಾನ ಪಡಿಸಿಕೊಳ್ಳಲು ವ್ಯರ್ಥ ಪ್ರಯತ್ನ ನಡೆಸುತ್ತಲೇ ಇರುತ್ತೇವೆ. ತೊಡಕಿನ ಮೂಲ ಬದುಕಿನ ಮೂಲದಲ್ಲಿರುವಂತೆಯೇ ತನ್ನೊಡಲಲ್ಲೂ ಮನೋಮೂಲದಲ್ಲೂ ಇರಬಹುದೆನ್ನುವ ಸತ್ಯವೇ ಬೆಳಕಿಂಡಿಯಾದಾಗ ಬದುಕು ಬೇರೆಯಾಗಿಯೇ ಕಂಡೀತು.

"ನ್ಯೂನತೆಗಳು ನಿನ್ನಲ್ಲಷ್ಟೇ ಅಲ್ಲ

ನನ್ನಲ್ಲೂ ಇತ್ತು ಬದುಕೇ

ನಾ ಕೇಳಿದ್ದು ನೀನು ಕೊಡಲಿಲ್ಲ

ನೀನು ಕೊಟ್ಟಿದ್ದು ನನಗೆ ತೃಪ್ತಿಯಾಗಲಿಲ್ಲ

ನನಗೂ ನಿನಗೂ ಹಾವು ಮುಂಗುಸಿಯಂತೆ

ಸದಾ ಸೆಣಸಾಟ"

ಇದು ಎಲ್ಲ ಕಾಲದಿಂದಲೂ ಎಂಬಂತೆ ಮನುಷ್ಯ ನಡೆಸುತ್ತಿರುವ ಹೋರಾಟ ಮತ್ತಿದಕ್ಕೆ ಕೊನೆಯೂ ಇಲ್ಲ. ಪ್ರತಿ ವ್ಯಕ್ತಿಯೂ ತಾನೇ ಸೆಣಸಬೇಕಾದ ಹೋರಾಟ ಇದು. ಆದರೆ ನಮ್ಮ ನೋಟ ನಿಲುವುಗಳು ನಮ್ಮ ಹೋರಾಟದ ಸೋಲು ಗೆಲುವುಗಳನ್ನು ನಿರ್ಧರಿಸುತ್ತವೆ ಎನ್ನುವುದಾದರೆ ಮನುಷ್ಯ ಪ್ರಯತ್ನಕ್ಕೆ ಒತ್ತು ಕೊಡಬೇಕು ಎನ್ನುವ ಸತ್ಯವನ್ನು ಈ ಕವಿತೆ ಅಪ್ರಿಯ ಸತ್ಯವಾಗಿ ಒಪ್ಪುತ್ತದೆ.

"ಕೊಂಚ ಕರುಣೆ ನೀನು ತೋರಿಸಬಹುದಿತ್ತು

ನಿನ್ನ ಓಲೈಸಲು

ನಾನು ಕೂಡ ಇನ್ನಷ್ಟು ಶ್ರಮ ಪಡಬಹುದಿತ್ತು"

ವಾಚ್ಯತೆ ಈ ಕವಿತೆಯ ದೌರ್ಬಲ್ಯ ಆದರೂ ತನ್ನ ಪ್ರಾಮಾಣಿಕತೆಯಿಂದ ಓದುಗರನ್ನು ತಟ್ಟುತ್ತದೆ. ಇನ್ನೊಂದು ಕವಿತೆ, 'ಬೆಕ್ಕಿನ ಕಣ್ಣು' ಕೂಡ ನಮ್ಮ ಗಮನ ಸೆಳೆಯುತ್ತದೆ. ಆಚಾನಕ್ ಆಗಿ ಎನ್ನುವಂತೆ ಕಣ್ಣೆದುರಿಗಿನ ಸಂಗತಿಯೊಂದು ನಮ್ಮನ್ನು ಒಳಗಣ್ಣಾಗಿ ಕಾಡುವ ಪರಿಯನ್ನು ಈ ಕವಿತೆ ಪರಿಣಾಮಕಾರಿಯಾಗಿ ಕಾಣಿಸುತ್ತದೆ. ಬೆಕ್ಕಿನ ಕಣ್ಣು ಒಳಗಣ್ಣನ್ನು ತೆರೆಯುವ ರೂಪಕವಾಗಿ ಬೆಳೆಯುತ್ತಾ ಹೋಗುತ್ತದೆ. ಲೋಕವನ್ನು ಬಿಡುಬೀಸಾಗಿ ಎದುರಿಸುವ ಧೈರ್ಯವನ್ನು ಬೇಕಾದಷ್ಟು ಬೆಳೆಸಿಕೊಳ್ಳುವುದರಲ್ಲಿ ಇರುವ ರಣೋತ್ಸಾಹ 'ಸ್ವ' ವನ್ನು ಎದುರಿಸುವುದರಲ್ಲಿ ಇರುವುದು ತೀರಾ ಕಡಿಮೆ. ಆದರೆ ಬದುಕಿನ ಶಕ್ತಿ ಎಂಥದ್ದೆಂದರೆ, ನಮಗೆ ಬೇಡವಾಗಿಯೂ ಅದು ನಮಗೆ ಕಲಿಸಬೇಕಾದ ಪಾಠವನ್ನು, ತೋರಿಸಬೇಕಾದ ಸತ್ಯವನ್ನು ಮುಲಾಜಿಲ್ಲದೆ ನಮ್ಮೆದುರಿಗಿಡುತ್ತದೆ. ವಿಶೇಷವೆಂದರೆ ಈ ಕವಿತೆ ಇದನ್ನು ಗಂಡಿನ ಕಣ್ಣಿನ ಮೂಲಕ ನೋಡುತ್ತದೆ. ಆಪ್ರಯತ್ನವಾಗಿ ಸಿಕ್ಕಿರುವ ಅಧಿಕಾರವನ್ನು ಗಂಡು ಭಂಡತನದಿಂದ ಬಳಸಿ ಬಳಸಿ ಗೆಲ್ಲುತ್ತಲೇ ಇರುತ್ತಾನೆ ಎಂದು ನಾವು ತಿಳಿದಿರುತ್ತೇವೆ. ಆದರೆ ಒಳಗೆಲ್ಲೋ ಆ ಗಂಡಿಗೆ ತಾನು ಸೋತ ಸತ್ಯ ಕಂಡದ್ದೇ ಆತ ಅಧೀರನೂ ಆಗಬಲ್ಲ ಎನ್ನುವುದನ್ನು, ಆ ಘಳಿಗೆಯಲ್ಲಿ ಆತನಿಗೆ ತನ್ನ ಬಗೆಗೇ ಹುಟ್ಟಬಹುದಾದ ತಿರಸ್ಕಾರವನ್ನೂ ಕವಿ ಸರಿಯಾಗಿಯೇ ಗುರುತಿಸಿದ್ದಾರೆ.

ಕಾವ್ಯವನ್ನು ಗೆಳತಿಯಾಗಿ ಪರಿಭಾವಿಸುವ ಈ ಕವಿ ಇವಳು ತನ್ನ ನಿಯಂತ್ರಣದಲ್ಲಿರದೆ ತಾನು ಇವಳ ಮುಲಾಜಿಗೂ ಕೃಪೆಗಾಗಿಯೂ ಕಾಯಬೇಕಾದ ಅವಸ್ಥೆಗೆ ಒಳಪಟ್ಟವಳು ಎನ್ನುವುದನ್ನು ಹೇಳುತ್ತದೆ. ಆದರೆ ಇದರ ಬಗೆಗೆ ಮುಜುಗರವೇನೂ ಕವಿಗಿಲ್ಲ, ಏಕೆಂದರೆ ಈಕೆ ಗೆಳತಿ, ಗೆಳೆತನದಲ್ಲಿ ಅಹಂಕಾರಕ್ಕೋ ದಾಕ್ಷಿಣ್ಯಕ್ಕೋ ಅವಕಾಶವೇ ಇಲ್ಲ. ಜೊತೆಗೆ ಕವಿ ತನ್ನ ಆತ್ಮವಿಶ್ವಾಸವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಲು ತನಗೂ ಆ ಗೆಳತಿಗೂ ಸ್ವಭಾವದಲ್ಲಿ ತುಂಬಾ ಸಾಮ್ಯತೆಗಳಿರುವುದನ್ನೂ ಸಮೀಕರಿಸಿಕೊಳ್ಳುತ್ತಾರೆ. ಹೀಗಾಗಿ ಈ ಒಡನಾಟವು ಆಕೆಗೆ ಬಲು ಪ್ರಿಯವಾದುದು. ಕೋಪ, ಜಗಳಗಳೇನೇ ಇದ್ದರೂ. ಆಕೆ ಕೆಲವೊಮ್ಮೆ ಮಾತು ಬಿಟ್ಟರೂ ಮುಂದೊಂದು ದಿನ ಆಕೆ ತನಗೆ ಒಲಿದಾಳು ಎನ್ನುವ ಭರವಸೆಯಿಂದ ಕಾಯಲು ಸಿದ್ಧ ಎನ್ನುವ ನಿಲುವಿಗೆ ಬರುತ್ತಾರೆ.

ಪ್ರೀತಿಯ ಒರತೆ ಇಲ್ಲದಾಗಲೂ ಪ್ರೀತಿಯ ಸ್ಮರಣೆ, ಪಡೆದದ್ದರ ಬಗೆಗೆ ಸಣ್ಣದೊಂದು ಆಧಾರ ಮನ್ನಣೆಯೂ ಇಲ್ಲದಿದ್ದರೆ ಅದು ಸಖ್ಯಕ್ಕೇ ಮಾಡುವ ವಿಶ್ವಾಸ ದ್ರೋಹವಲ್ಲವೆ ಎನ್ನುವ ಪ್ರಶ್ನೆ ಈ ಕವಿತೆಯ ಧ್ವನಿಯಾಗಿದೆ. ಸುಮತಿಯವರಿಗೆ ಕಾವ್ಯಲೋಕದಲ್ಲಿ ಭವಿಷ್ಯವಿದೆ ಎನ್ನುವುದರಲ್ಲಿ ಅನುಮಾನ ಇರಬೇಕಾಗಿಲ್ಲ ಎನ್ನುವುದನ್ನು ಇಲ್ಲಿನ ಕವಿತೆಗಳು ತಮ್ಮ ಸ್ವಶಕ್ತಿಯಿಂದಲೇ ತೋರಿಸಿಕೊಡುತ್ತಿವೆ. ಹಲವು ಕವಿತೆಗಳಲ್ಲಿ ಕಾಣಿಸುವ ವಾಚ್ಯತೆಯ ಬಗೆಗೆ ಗಮನಕೊಡುವುದು ತೀರಾ ಅವಶ್ಯಕ ಎನ್ನಿಸುತ್ತದೆ. ಕವಿತೆಯ ಬಂಧಗಳನ್ನು ಬಿಗಿಯಾಗಿಸುವುದರ ಕಡೆಗೆ, ಕವಿತೆಯನ್ನೊಂದು ಶಿಲ್ಪದ ಹಾಗೆ ಕಡೆಯುವುದರ ಬಗೆಗೆ ಈ ಕವಿ ಇನ್ನಷ್ಟು ಧ್ಯಾನಸ್ಥ ಸ್ಥಿತಿಯಲ್ಲಿ ಧ್ಯಾನಿಸಬೇಕು ಅನ್ನಿಸುತ್ತದೆ. ಸುಮತಿ ಕೃಷ್ಣಮೂರ್ತಿಯವರ ಈ ಸಂಕಲನಕ್ಕೆ ಪ್ರವೇಶ ರೂಪದ ಈ ಮಾತುಗಳನ್ನು ಬರೆಯುವುದು ಸಂತೋಷದ ಸಂಗತಿ.”