ವ್ಯಕ್ತಿಯ ರಹಸ್ಯ ತಿಳಿಸಬಲ್ಲ ಬೆವರು

ವ್ಯಕ್ತಿಯ ರಹಸ್ಯ ತಿಳಿಸಬಲ್ಲ ಬೆವರು

ಬೇಸಿಗೆಯ ಸಮಯದಲ್ಲಿ ನಾವು ಹೊರಗಡೆ ಹೋದಾಗ ಸೂರ್ಯನ ಬಿಸಿಲಿನ ಶಾಖಕ್ಕೆ ನಮ್ಮ ಮೈ ಬೆವರುತ್ತೆ. ಅತೀ ಹೆಚ್ಚು ಶ್ರಮ ವಹಿಸಿ ಕೆಲಸ ಮಾಡಿದರೂ ಮೈ ಬೆವರುತ್ತೆ. ಕೆಲವು ಬಾರಿ ವಿಪರೀತ ಹೆದರಿಕೆಯಾದರೂ ಮೈಯಿಂದ ಬೆವರು ಬರುತ್ತೆ. ಇದು ನಮ್ಮ ದೇಹದ ಉಷ್ಣಾಂಶವನ್ನು ಕಾಪಾಡಲು ನಿಸರ್ಗವೇ ಮಾಡಿದ ಉಪಾಯ. ಆದರೆ ಈ ಬೆವರು ಚರ್ಮದ ಮೇಲಿರುವ ಗ್ರಂಥಿಗಳಿಂದ ಹೊರ ಬರುವಾಗ ಅಲ್ಲಿರುವ ಬ್ಯಾಕ್ಟೀರಿಯಾಗಳೊಂದಿಗೆ ಸೇರಿ ದುರ್ವಾಸನೆಯನ್ನು ಹೊರ ಹಾಕುತ್ತವೆ. ಈ ದುರ್ವಾಸನೆ ಹೊರಬರುವ ಪ್ರಮಾಣ ಒಬ್ಬರಿಂದ ಒಬ್ಬರಿಗೆ ವ್ಯತ್ಯಾಸವಿರುತ್ತದೆ. ಈ ಕಾರಣದಿಂದಾಗಿ ಕೆಲವರ ಮೈಯಿಂದ ಬರುವ ಬೆವರಿನ ವಾಸನೆ ಸಹಿಸಲು ಅಸಾಧ್ಯವಾಗಿರುತ್ತದೆ. ನಿಮ್ಮ ಚರ್ಮದಿಂದ ಹೊರಬರುವ ಬೆವರು ನಿಮ್ಮ ಕಥೆಯನ್ನು ಹೇಳುತ್ತದೆ, ಗೊತ್ತೇ?

ಮನುಷ್ಯನ ಚರ್ಮದಿಂದ ಹೊರ ಬರುವ ಬೆವರು ಆತನ ಆರೋಗ್ಯದ ರಹಸ್ಯವನ್ನು ಹೇಳುತ್ತದೆ. ಸರಿಯಾಗಿ ಬೆವರುತ್ತಿರುವ ಮನುಷ್ಯ ಉತ್ತಮ ಆರೋಗ್ಯವನ್ನು ಹೊಂದಿದ್ದಾನೆ ಎಂದು ನಾವು ಅರಿತುಕೊಳ್ಳಬಹುದು. ಬೆವರು ನಮ್ಮ ಪರಿಶ್ರಮದ ಲಕ್ಷಣ. ಆದರೆ ಕೆಲವೊಮ್ಮೆ ಬರುವ ಅತಿಯಾದ ಬೆವರು ನಮ್ಮನ್ನು ಮುಜುಗರಕ್ಕೆ ಒಳಪಡಿಸುವ ಸಾಧ್ಯತೆ ಇರುತ್ತದೆ. ಕೆಲವೊಮ್ಮೆ ನಾವು ಸೇವಿಸುವ ಆಹಾರವೂ ಈ ಬೆವರಿಗೆ ಕಾರಣವಾಗುತ್ತದೆ. ಈರುಳ್ಳಿ, ಬೆಳ್ಳುಳ್ಳಿಯ ಅತಿಯಾದ ಸೇವನೆಯು ಬೆವರನ್ನು ವಾಸನಾಭರಿತವನ್ನಾಗಿಸುತ್ತದೆ. ಈ ಕಾರಣದಿಂದ ಈ ತರಕಾರಿಗಳನ್ನು ಕಡಿಮೆ ಪ್ರಮಾಣದಲ್ಲಿ ತಿನ್ನುವುದು ಉತ್ತಮ.

ಕೆಲವರ ಮೈ ವಿಪರೀತ ಬೆವರುತ್ತದೆ. ಇಂಥವರು ದಿನಕ್ಕೆ ಎರಡು ಬಾರಿ ಸ್ನಾನ ಮಾಡಬೇಕು. ಬೇಸಿಗೆಯ ಸಮಯದಲ್ಲಿ ಹತ್ತಿಯ (ಕಾಟನ್) ಬಟ್ಟೆಯನ್ನು ಧರಿಸುವುದು ಉತ್ತಮ. ಇದು ಬೆವರನ್ನು ಹೀರುತ್ತದೆ ಮತ್ತು ನಮ್ಮ ದೇಹವನ್ನು ತಂಪಾಗಿಡುತ್ತದೆ. ಆದರೆ ಈ ಬಟ್ಟೆಗಳನ್ನು ದಿನಾಲೂ ಒಗೆದು, ಚೆನ್ನಾಗಿ ಬಿಸಿಲಿನಲ್ಲಿ ಒಣಗಿಸಿ ಮತ್ತೆ ಧರಿಸಬೇಕು. ಬೆವರು ಹೆಚ್ಚಾಗಿ ನಮ್ಮ ದೇಹದಿಂದ ಹೊರ ಹೋದರೆ ದೇಹದಲ್ಲಿ ನಿರ್ಜಲೀಕರಣದ (ನೀರಿನ ಕೊರತೆ) ಸಮಸ್ಯೆ ಎದುರಾಗುತ್ತದೆ. ಇದನ್ನು ಪರಿಹರಿಸಲು ಬೇಸಿಗೆಯ ಸಮಯದಲ್ಲಿ ಸಾಕಷ್ಟು ಪ್ರಮಾಣದಲ್ಲಿ (ದಿನಕ್ಕೆ ಕನಿಷ್ಟ ೩-೪ ಲೀಟರ್) ನೀರಿನ ಸೇವನೆ ಮಾಡಬೇಕು. ಕಬ್ಬಿನ ಹಾಲು, ಎಳನೀರು ಮತ್ತು ಲಿಂಬೆ ಶರಬತ್ತು ಸೇವನೆ ನೀರಿನ ಕೊರತೆ ಸರಿದೂಗಿಸುವುದಲ್ಲೇ, ದೇಹಕ್ಕೆ ಅವಶ್ಯಕವಾದ ಪೋಷಕಾಂಶಗಳನ್ನೂ ಒದಗಿಸುತ್ತದೆ. ಸೌತೇಕಾಯಿ, ಕಲ್ಲಂಗಡಿ ಹಣ್ಣಿನ ಸೇವನೆ ಸಾಕಷ್ಟು ಪ್ರಮಾಣದ ನೀರನ್ನು ದೇಹಕ್ಕೆ ಒದಗಿಸುತ್ತದೆ. ಆದಷ್ಟು ತಂಪು ಪಾನೀಯದ ಸೇವನೆ (ಗ್ಯಾಸ್ ಹೊಂದಿರುವ)ಯನ್ನು ಮಾಡದೇ ಇರುವುದು ಉತ್ತಮ. ಇದರಲ್ಲಿ ಗರಿಷ್ಟ ಪ್ರಮಾಣದ ಸಕ್ಕರೆಯ ಅಂಶ ಮತ್ತು ಹಾನಿಕಾರಕ ರಸಾಯನಿಕಗಳು ಇರುತ್ತವೆ. ಇದನ್ನು ಕುಡಿಯುವಾಗ ತಂಪು ಎಂದು ಅನಿಸಿದರೂ, ನಂತರ ಅನಾರೋಗ್ಯದ ಸಮಸ್ಯೆಗಳು ಕಾಡುತ್ತವೆ. 

ಸ್ನಾನ ಮುಗಿಸಿದ ಬಳಿಕ ಉತ್ತಮ ದರ್ಜೆಯ ಟಾಲ್ಕ್ ಪೌಡರ್ ಬಳಸಿ. ಇದರಿಂದ ಬೆವರು ಹೊರಬರುವ ಪ್ರಮಾಣ ನಿಯಂತ್ರಣದಲ್ಲಿರುತ್ತದೆ. ಸ್ನಾನ ಮಾಡುವಾಗ ಅರಸಿನ ಮಿಶ್ರ ಮಾಡಿದ ಗುಣಮಟ್ಟದ ಕಡಲೇ ಹಿಟ್ಟನ್ನು ಬಳಸಿದರೆ ದೇಹದ ದುರ್ಗಂಧ ಕಡಿಮೆಯಾಗುತ್ತದೆ. ಅರಸಿನ ಮತ್ತು ಕಡಲೇಹಿಟ್ಟು ದೇಹದ ಚರ್ಮದಲ್ಲಿ ಬೆಳೆಯುವ ಬ್ಯಾಕ್ಟೀರಿಯಾಗಳನ್ನು ನಿವಾರಿಸುತ್ತದೆ. ಚರ್ಮದ ಕಾಂತಿಯೂ ಅಧಿಕವಾಗುತ್ತದೆ.

ಈಗ ಮಾರುಕಟ್ಟೆಯಲ್ಲಿ ದೇಹದ ದುರ್ಗಂಧವನ್ನು ನಿವಾರಿಸುವ ನೂರಾರು ಬಗೆಯ ಡಿಯೋಡ್ರೆಂಟ್ ಗಳು ಸಿಗುತ್ತವೆ. ಆದರೆ ಇವುಗಳನ್ನು ಬಳಸುವ ಮೊದಲು ಅವು ನಿಮ್ಮ ದೇಹಕ್ಕೆ, ಚರ್ಮಕ್ಕೆ ಸುರಕ್ಷಿತವೇ ಎನ್ನುವುದನ್ನು ಪರೀಕ್ಷಿಸಿಕೊಂಡ ಬಳಿಕ ಬಳಸಿ. ಏಕೆಂದರೆ ಹಲವಾರು ಮಂದಿಗೆ ಅದರ ವಾಸನೆ ಅಲರ್ಜಿಯಾಗುವ ಸಾಧ್ಯತೆ ಇದೆ. ಚರ್ಮಕ್ಕೆ ಬಳಸಿದಾಗ ಅಲ್ಲೂ ತುರಿಕೆಯಾಗುವ ಸಮಸ್ಯೆ ಕಾಡಬಹುದು. ನಿಮ್ಮ ಚರ್ಮವನ್ನು ಸ್ವಚ್ಛವಾಗಿಟ್ಟರೆ ನಿಮ್ಮ ದೇಹ ಬೆವರಿದರೂ ದುರ್ಗಂಧ ಹೊರ ಬರುವುದಿಲ್ಲ. ನಿಮ್ಮ ಆರೋಗ್ಯವೂ ಚೆನ್ನಾಗಿರುತ್ತದೆ.

(ಆಧಾರ)

ಚಿತ್ರ ಕೃಪೆ: ಅಂತರ್ಜಾಲ ತಾಣ