ವ್ಯಾಘ್ರನ ತ್ಯಾಗ

ವ್ಯಾಘ್ರನ ತ್ಯಾಗ

ಬರಹ

ವ್ಯಾಘ್ರನ ತ್ಯಾಗ
ಈಗ್ಗೆ ೧೦ ಅಥವಾ ೧೨ ವರ್ಷಗಳ ಕೆಳಗೆ ನನ್ನ ಶಾಲೆಯಲ್ಲಿ ೫ನೇ ತರಗತಿಯಲ್ಲಿ ಕನ್ನಡ ಮಾಸ್ಟರ್ ಒಬ್ಬರು ರಾಗವಾಗಿ ಪುಣ್ಯಕೋಟಿಯ ಕಥೆಯನ್ನು ಹಾಡಿಸುತ್ತಿದ್ದರು. ಅದರಲ್ಲಿ ಬಂದ ಸಾಲುಗಳು,
“ಎನ್ನ ಒಡಹುಟ್ಟಕ್ಕ ನೀನು ನಿನ್ನ ಕೊಂದು ನಾನೇನ ಪಡೆವೆನು
ಎನ್ನುತಾ ಹುಲಿ ಹಾರಿ ನೆಗೆದು ತನ್ನ ಪ್ರಾಣವ ಬಿಟ್ಟಿತು.”
ಈ ಸಾಲುಗಳು ನನ್ನ ಮನವ ಕಲಕಿತು. ಹೀಗೆ ಪುಣ್ಯಕೋಟಿಯನ್ನುಳಿಸಿ ತನ್ನ ಪ್ರಾಣವ ತೆತ್ತ ಹುಲಿಯ ಬಗ್ಗೆ ನನಗೆ ಒಂದು ಗೌರವ ಭಾವ ಹುಟ್ಟಿತು. ಹೀಗಾಗಿ ಒಂದು ರೂಪಕ ತಯಾರು ಮಾಡಿ ನನ್ನ ಮಕ್ಕಳ ಕೈಲಿ ಮಾಡಿಸಿದ್ದೆ.ಅದನ್ನೆ ಇಲ್ಲಿ “ವ್ಯಾಘ್ರನ ತ್ಯಾಗ” ಎಂಬ ಹೆಸರಿನಲ್ಲಿ ಕಳಿಸಿದ್ದೇನೆ.
ಅಂಕ ೧
ಧರಣಿ ಮಂಡಲ ಮಧ್ಯದೊಳಗೆ
ಮೆರೆಯುತಿಹ ಕರ್ನಾಟ ದೇಶದಿ
ತ್ಯಾಗ ಮಾಡಿ ಪ್ರಾಣಬಿಟ್ಟ
ಒಂದು ವ್ಯಾಘ್ರನ ಕಥೆಯಿದು.
ಹಾರಿ ನೆಗೆದು ಪ್ರಾಣ ತೊರೆದ
ಅರ್ಬುದಾನೆಂದೆಂಬ ವ್ಯಾಘ್ರನ
ತ್ಯಾಗ ಭಾವವ ಬಿಡಿಸಿ ಹೇಳುವ
ಒಂದು ಸುಂದರ ಕಥೆಯಿದು.

ವ್ಯಾಘ್ರ ರಾಜನ ವಂಶ ಬೆಳೆದು
ತನ್ನ ಅಜ್ಜನ ಸ್ಮರಿಸಿ ನಿಂದು
ಕಾಡಲಲೆದು ಆಡಿ ಬರುತಿರೆ
ಅಲ್ಲಿ ಬಂದಿತು ಕರುವದು.
ಬಂದ ಕರುವು ಹುಲಿಯ ನೋಡಿ
ಭಯದಿ ಬಳಲಿ ಕಾಲು ನಡುಗಿ
ಕರುಳು ಮಿಡಿವ ಕೂಗು ಹಾಕಿ
ಕುಸಿಯಿತಲ್ಲೇ ನೆಲದಲಿ.
“ಯಾರು ನೀನು ಹೇಳು ಕರುವೆ
ಏಕೆ ಹೀಗೆ ನಡುಗುತಿರುವೆ?
ಹೆದರಬೇಡ ಹೇಳು ಬೇಗ
ಅರ್ಬುದನ ಮೊಮ್ಮಗನು ನಾ.
ನಿನ್ನ ವಂಶದ ಗೋವನುಳಿಸಿ
ತನ್ನ ಪ್ರಾಣವ ತೆತ್ತನಲ್ಲ
ಕ್ರೂರ ವದನದ ಬೆಣ್ಣೆ ಮನಸಿನ
ಅರ್ಬುದನು ನನ್ನಜ್ಜನು.”
ಕುಸಿದ ಕರುವು ಮೆಲ್ಲನೇಳುತ
ದೈನ್ಯದಿಂದ ಬಾಗಿ ನಿಂತು
ಹೆಬ್ಬುಲಿಗೆ ತಾ ನಮನ ಮಾಡಿ
ತನ್ನ ಕಥೆಯನು ಹೇಳಿತು.
“ನಿನ್ನ ತಾತನು ಉಳಿಸಿದಂಥ
ಪುಣ್ಯಕೋಟಿಯ ವಂಶದಿಂದ
ಜನಿಸಿ ಬಂದ ಕರುವು ನಾನು
ಎನ್ನ ಕೊಲ್ಲದೆ ಬಿಡುವೆಯಾ?”
ಹುಲಿ:- ಪುಣ್ಯಕೋಟಿಯನ್ನು ಉಳಿಸಿದ ಆದಿನ ನನ್ನಜ್ಜನ ವರೆಗೆ ಕರಾಳದಿನ. ಬಂಡೆಯೊಳಗಿನ ಸಿಹಿನೀರಿನ ಬುಗ್ಗೆಯಂತೆ ಆಭೀಕರ ರೂಪದೊಳಗೆ ಬೆಣ್ಣೆಯಂತೆ ಕರಗುವ ಮನಸು. ಇದು ನನ್ನಜ್ಜನ ಸ್ವಭಾವ. ಓಹ್! ಈಸ್ವಭಾವವೇ ಅಲ್ಲವೇ ನನ್ನಜ್ಜನ ಬದುಕಿಗೇ ಮುಳ್ಳಾದುದು. ನಿನ್ನಜ್ಜಿಯಂತು ತನ್ನ ಕಂದನ ಅರಸಿ ಸಂಭ್ರಮದಿಂದ ದೊಡ್ಡಿಗೆ ತೆರಳಿದಳು. ಆದರೆ….ಆದರೆ…… ನನ್ನಜ್ಜ…
ಕರು:- ಏನಾಯಿತು ನಿನ್ನಜ್ಜನಿಗೆ?ಏನಾಯಿತು? ದಯವಿಟ್ಟು ಹೇಳು. ಅಳದೇ ಹೇಳು.
ಹುಲಿ:- ಹಸಿವಿನಿಂದ ಕಂಗಾಲಾಗಿದ್ದಾಗಲೂ ಕರುಣಾಮಯಿಯಾಗಿ ನಿನ್ನಜ್ಜಿಯನ್ನು ಬದುಕಲು ಬಿಟ್ಟ ನನ್ನಜ್ಜನಿಗೆ ಬಂದ ಬಿರುದು ಖೂಳವ್ಯಾಘ್ರನೆಂದು. ಜನರ ಬಾಯಲ್ಲಿಂದು ನಿನ್ನ ಅಜ್ಜಿಯು ದೇವಿಯಾದಳು. ನನ್ನ ಅಜ್ಜನು ಕ್ರೂರಿಯಾದನು. ಅವನ ತ್ಯಾಗ ಯಾರಿಗೂ ತಿಳಿಯಲೇ ಇಲ್ಲ.
ಕರು:- ಯಾವ ತ್ಯಾಗ? ಹೇಳುವೆಯಾ ನಿನ್ನಜ್ಜನ ಕಥೆಯಾ? ನನಗೆ ಕೇಳುವ ಕುತೂಹಲವಾಗುತ್ತಿದೆ.
ಅಂಕ ೨
Flash back
ಅರ್ಬುದ:-ಎನ್ನ ಒಡಹುಟ್ಟಕ್ಕ ನೀನು. ನಿನ್ನ ಕೊಂದು ನಾನೇನ ಪಡೆವೆನು? ಓಹ್! ವಿಧಿಯೆ ಏನಿದು ನನ್ನ ವಿಚಿತ್ರ ಸ್ಥಿತಿ? ನಿನ್ನ ಕೊಲ್ಲಲಾರೆನು. ಕೊಲ್ಲದೇ ಇರಲಾರೆನು. ಹುಲಿ ನಾನು ಹಸಿದರೆ ಹುಲ್ಲು ತಿನ್ನಲಾರೆನು ಓಹ್! ದೇವರೆ ನನ್ನನ್ನು ಏಕೆ ಮಾಂಸಾಹಾರಿಯಾಗಿ ಹುಟ್ಟಿಸಿದೆ?..... ಹಸಿವು ….. ಹಸಿವು ಓಹ್ ಏನು ಮಾಡಲಿ? ಈಗ ನಾನೇನು ಮಾಡಲಿ? ನನ್ನಂತೆಯೇ ಜೀವವಿರುವ ಇನ್ನೊಂದು ಪ್ರಾಣಿಯನ್ನು ಕೊಂದು ತಿಂದೇ ನನ್ನ ಹಸಿವನ್ನು ನೀಗಿಸಿಕೊಳ್ಳಬೇಕೆ ನಾನು. ಬೇರೆ ದಾರಿಯೇ ಇಲ್ಲವೇ?
ಪುಣ್ಯಕೋಟಿ:- ಏಕೆ ಹೀಗೆ ಪರಿತಪಿಸಿರುವೆ ವ್ಯಾಘ್ರರಾಜ? ನಾನು ಹಿಂದಿರುಗಿ ಬರುವೆ, ನಿನ್ನ ಆಹಾರವಾಗುವೆ ಎಂದು ವಚನವಿತ್ತೇ ತೆರಳಿದ್ದೆನಲ್ಲ. ನೀನು ನನ್ನನ್ನು ತಿಂದರೂ ತಪ್ಪು ನಿನ್ನದಾಗುವುದಿಲ್ಲ. ಮಿಡತೆಯನ್ನು ಕಪ್ಪೆ, ಕಪ್ಪೆಯನ್ನು ಹಾವು, ಹಾವನ್ನು ಗಿಡುಗ ಹೀಗೆ ಒಂದನ್ನೊಂದು ತಿನ್ನುತ್ತಾ ಹೋಗುವುದುತಾನೆ ವಿಧಿ ನಿಯಮ. ಆ ನಿಯಮವು ನನ್ನನ್ನು ನೀನು ತಿನ್ನುವುದರ ಮೂಲಕವೇ ಮುಂದುವರೆಯ ಬೇಕೆಂಬುದೇ ಆಗಿರುವಾಗ ಸುಮ್ಮನೆ ಚಿಂತಿಸುವುದರಲ್ಲಿ ಅರ್ಥವಿಲ್ಲ ವ್ಯಾಘ್ರರಾಜ.
ಅರ್ಬುದ:-“ನನ್ನ ಗೊಂದಲ ತಿಳಿಯಲಾರೆ
ನನ್ನ ಭಾವನೆ ಅರಿಯಲಾರೆ
ಕೊಲ್ಲಲಾರೆನು ಇನ್ನು ನಾನು
ಯಾವ ಜೀವದ ಸೆಲೆಯನೂ.
ತೆರಳು ನೀನು ಮನೆಯ ಕಡೆಗೆ
ನಿನ್ನ ಕಂದನು ಇರುವ ಎಡೆಗೆ,”
ಎನ್ನುತಾ ಹುಲಿ ಹಾರಿ ನೆಗೆದು
ತನ್ನ ಪ್ರಾಣವ ಬಿಟ್ಟಿತು.
ಅಂಕ ೩
[ಹುಲಿಯ ಕಥೆ ಕೇಳುತ್ತಾ ಕರು ಹುಲಿಯ ಪಕ್ಕದಲ್ಲೇ ಕುಳಿತಿದೆ]
ಹುಲಿ:- ಇಂಥ ಅರ್ಬುದನ ಮೊಮ್ಮಗ ನಾನು. ಅರೆ! ಇದೇನು? ಭಯ ತೊರೆದು ಮಂತ್ರಮುಗ್ಧನಾಗಿ ಕಥೆ ಕೇಳುತ್ತಾ ಕುಳಿತುಬಿಟ್ಟೆಯಲ್ಲ. ಓಹೋ! ಅರ್ಬುದನ ಮೊಮ್ಮಗ ಅವನಜ್ಜನಂತೆಯೇ ಇರಬಹುದು ಎಂದುಕೊಂಡೆಯಾ? ನನ್ನಜ್ಜ ಹಸಿದ ವೇಳೆಯಲ್ಲೂ ಸಿಕ್ಕ ಬೇಟೆಯ ಹಿಂದಿರುಗಿಸಿ ಕಳಿಸುವ, ತನ್ನ ಬಳಿಗೆ ಮತ್ತೆ ಬರುವುದೆಂಬ ವಿಶ್ವಾಸವನ್ನಿಟ್ಟಿದ್ದ ದೊಡ್ಡ ಮನಸಿನವ, ಕೊಟ್ಟ ಮಾತಂತೆ ತಿರುಗಿ ಬಂದ ಹಸುವನ್ನು ಕಂಡು ಆ ಹಸುವಿನ ಸತ್ಯಕ್ಕೆ ಬೆರಗಾಗಿ, ಮರುಗಿ ಆ ಹಸುವಿಗೆ ಜೀವದಾನ ಮಾಡಿ ತನ್ನ ಹಸಿವಿಗಾಗಿ ಇನ್ನೊಂದು ಜೀವಿಯ ಹತ್ಯೆ ಮಾಡಲಾರದೇ ಹಾರಿ ಬಿದ್ದು ಸತ್ತ. ಹೌದು! ಅವನು ಪರರಲ್ಲಿ ಅದರಲ್ಲೂ ವೈರಿಯಲ್ಲಿ ವಿಶ್ವಾಸ ತೋರಿದ. ವೈರಿಯ ಮಗುವಿಗಾಗಿ ಮರುಕ ತೋರಿದ. ವೈರಿಯಲ್ಲಿರುವ ಸದ್ಗುಣವನ್ನು ಮೆಚ್ಚಿದ. ಹಿರಿಯ ವಿಶಾಲ ಮನೋಭಾವದವನಾಗಿದ್ದ. ಅಂದು ತಾನು ಅಳವಡಿಸಿಕೊಂಡ ಜೀವನ ಮೌಲ್ಯಕ್ಕಾಗಿ ಜೀವವನ್ನೇ ಬಿಟ್ಟ. ಕೊನೆಗವನಿಗೆ ಸಿಕ್ಕಿದ್ದೇನು? ಸಾವು! ಖೂಳವ್ಯಾಘ್ರನೆಂಬ ಬಿರುದು! ಇಲ್ಲ ಕರುವೇ ಇಲ್ಲ. ನನಗೆ ನನ್ನ ಬದುಕು ದೊಡ್ಡದ್ದು. ಬಲಶಾಲಿಯೇ ಬದುಕಬಲ್ಲ ಈಜಗತ್ತಿನಲ್ಲಿ. ಹುಲಿ ಹುಲಿಯಂತೆಯೇ ಕರು ಕರುವಿನಂತೆಯೇ ಇರಬೇಕು.ಇದೇ ಜೀವ ನಿಯಮ, ಇದೇ ಲೋಕ ನಿಯಮ.
ಕರು:- ಕೊಲ್ಲಬೇಡ ನನ್ನನ್ನು. ನಿನ್ನ ದಮ್ಮಯ್ಯ ಎನ್ನುತ್ತೇನೆ. ನಿನ್ನ ಕಾಲಿಗೆ ಎರಗುತ್ತೇನೆ. ನಿನ್ನ ಶಕ್ತಿಯ ಮುಂದೆ ನಾನು ಅತಿ ಸಾಮಾನ್ಯನು. ನಿನ್ನಜ್ಜನಲ್ಲಿದ್ದ ಕರುಣೆ ನಿನ್ನಲ್ಲಿಲ್ಲದಾಯಿತೆ? ನಿನ್ನ ಅಜ್ಜನ ರಕ್ತವೇ ಅಲ್ಲವೇ ನಿನ್ನಲ್ಲೂ ಹರಿಯುತ್ತಿರುವುದು? ದಯೆಯೇ ದರ್ಮದ ಮೂಲವಲ್ಲವೇ?
ಹುಲಿ:- ದಯೆ? ಕರುಣೆ? ಇಲ್ಲಿ ನೆರೆದಿರುವ ಬುದ್ಧಿವಂತರನ್ನೇ ಕೇಳುತ್ತೇನೆ ನಾನು ಏನು ಮಾಡಲಿ ಎಂದು?
ಅಣ್ಣಗಳಿರಾ ಅಕ್ಕಗಳಿರಾ
ನೀಡಿರೆನಗೆ ಸಲಹೆಯೊಂದ
ಯಾವ ಹಾದಿ ತುಳಿದು ನಾನು
ಧನ್ಯನಾಗಲಿ ಈದಿನ?
ವಿಧಿಯ ನಿಯಮವ ಮೀರಿ ನಾನು
ನನ್ನ ಅಜ್ಜನ ಹಾದಿ ತುಳಿದು
ಅಳಿವುದೊಂದೇ ದಾರಿಯೆಂದು
ನನ್ನ ಕಥೆಯಾ ಮುಗಿಸಲೇ?
ಅಥವಾ
ವಿಧಿಯ ನಿಯಮಕೆ ಹೊಂದಿಕೊಂಡು
ಎನ್ನ ಉಳಿವಿಗೆ ಕರುವ ತಿಂದು
ಇದುವೆ ಬದುಕಿನ ರೀತಿಯೆಂದು
ಲೋಕಕೆಲ್ಲಾ ಸಾರಲೇ?
================================