ವ್ಯಾಲಂಟೈನ್ಸ್ ಡೇ

ವ್ಯಾಲಂಟೈನ್ಸ್ ಡೇ

ಬರಹ

ತ್ರಿಲೋಕ ಸಂಚಾರಿಯಾದ ನಾರದರು ಈ ನಡುವೆ ಭೂಲೋಕ ಸುತ್ತುವುದು ಹೆಚ್ಚಾಯಿತು. ಹೊಸದಾಗಿ ಬಂದ ಮಂತ್ರಿವರ್ಗ ಸುಮ್ಮ ಸುಮ್ಮನೆ ಫ಼ಾರಿನ್ ಟ್ರಿಪ್ ಹಾಕುವ ಹಾಗೆ. ಎಷ್ಟೇ ಆಗಲಿ ’ಸ್ವರ್ಗವಾಣಿ’ ಪತ್ರಿಕೆಯ ಖಾಯಂ ವರದಿಗಾರ ಆಗಿರುವುದರಿಂದ ಯಾರೂ ಅವರನ್ನು ತಡೆಯುತ್ತಿರಲಿಲ್ಲ. ವಾಪಸ್ಸು ಬಂದ ಮೇಲೆ ಅವರ ಬಿಲ್ ಸರಿಯಾಗಿ ಚುಕ್ತಾ ಆಗುತ್ತಿತ್ತು. ನಾರದರ ಬಿಲ್ ಚುಕ್ತಾ ಆಗುತ್ತಿದ್ದುದನ್ನು ವೆಂಕಟೇಶ್ವರನ ಆಕೌಂಟಿನಡಿ ತೋರಿಸುತ್ತಿದ್ದರು, ಸ್ವರ್ಗಲೋಕದ ಅಕೌಂಟೆಂಟ್’ಗಳು !!

ಇರಲಿ, ಈ ಸಾರಿ ಅವರ ಪರ್ಯಟಣೆಯ ಉದ್ದೇಶ ಏನಪ್ಪಾ ಅಂದರೆ, ಕನ್ನಡ ನಾಡಿನಲ್ಲಿ ನೆಡೆವ ಆಂಗ್ಲರ ಹಬ್ಬಗಳನ್ನು ತಮ್ಮ ನಾಡಿನಲ್ಲೂ ಜಾರಿಗೆ ತರಬೇಕೆನ್ನುವುದು. ಹಾಗೆಯೇ ನಾರದರ ಹೊಸ ವರ್ಷದ ರೆಸಲ್ಯೂಶನ್ ಕೂಡ. ಎಲ್ಲಿಂದ ಆರಂಭ ಮಾಡಲಿ ಎಂದು ಯೋಚಿಸಿದವರಿಗೆ ’ವ್ಯಾಲಂಟೈನ್ಸ್ ಡೇ’ಗಿಂತ ಉತ್ತಮ ದಿನ ಇಲ್ಲ ಎಂದು ತಿಳಿದು, ಸ್ವರ್ಗಲೋಕದ ಜನರನ್ನು ವ್ಯಾಲಂಟೈನ್ ಪಾರ್ಟಿ ಮಾಡುವಂತೆ ಪ್ರಚೋದಿಸಬೇಕೆಂಬ ನಿರ್ಧಾರ ತಳೆದು, ವ್ಯಾಲೆಂಟೈನ್ ಮಹಿಮೆಯನ್ನು ಸಾರುವಲ್ಲಿ ಮುಂದಾದರು.

ಮೊದಲಿಗೆ ಸಿಕ್ಕವರು ವಿಶ್ವಾಮಿತ್ರ ಮಹರ್ಷಿ. ವ್ಯಾಲಂಟೈನ್’ಗೂ ವಿಶ್ವಾಮಿತ್ರನಿಗೂ ಏನು ಸಂಬಂಧ ಎನಿಸಿದರೂ, ಇಟ್ಟ ಹೆಜ್ಜೆ ಹಿಂದೆಗೆಯಬಾರದು ಎಂಬ ಅಚಲ ನಿರ್ಧಾರದಿಂದ ವ್ಯಾಲಂಟೈನ್ ಮಹಿಮೆಯನ್ನು ಸಾರಿ, ತಮ್ಮ ಪ್ರಿಯರಾದವರಿಗೆ ಏನಾದರೂ ಕಾಣಿಕೆಯನ್ನು ನೀಡುವುದು ಹಾಗೂ ಕಾಣಿಕೆ ಪಡೆಯುವುದು ಈ ದಿನದ ಸದುದ್ದೇಶ ಎಂದೂ ತಿಳಿಸಿದರು. ಅಲ್ಲಿಯವರೆಗೂ ಸುಮ್ಮನಿದ್ದ ಮುನಿವರ್ಯ ’ಇದರಲ್ಲಿ ವಿಶೇಷವೇನಿದೆ. ಏನಾದರೂ ಹೊಸದಿದ್ದರೆ ತಿಳಿಸಿ’ ಎಂದರು. ನಾರದರಿಗೆ ಶಾಕ್. ’ಅಂದರೆ ನಿಮಗೆ ವ್ಯಾಲಂಟೈನ್ ಮಹಿಮೆ ಗೊತ್ತಿತ್ತೇ?’ ಎಂದು ಕೇಳಿದರು. ಅದಕ್ಕೆ ’ನಾವು ಮೇನಕೆಯೊಡನೆ ಸರಸವಾಡಿದಾಗ ಆಕೆ ನೀಡಿದ ಮಗು ’ಶಕುಂತಲೆ’ ವ್ಯಾಲಂಟೈನ್ ಗಿಫ಼್ಟ್ ಅಲ್ಲದೆ ಮತ್ತೇನು?’ ಎಂದು ನುಡಿದು ಮುನ್ನೆಡೆದರು ವ್ಯಾಲಂಟೈನ್ ಮುನಿ.

ಯಾಕೋ ವ್ಯಾಪಾರ ಸರಿಹೋಗಲಿಲ್ಲ ಎಂದು ಅಂದುಕೊಂಡು ಮುನ್ನೆಡೆದಾಗ ಆ ಕಡೆಯಿಂದ ದುಷ್ಯಂತ ಮಹಾರಾಜ ಬರುತ್ತಿದ್ದನು. ವಿಶ್ವಾಮಿತ್ರ ಹಾಗೂ ದುಷ್ಯಂತನದು ಒಂದೇ ಕೇಸು ಎಂದು ಅನ್ನಿಸಿತು. ಯಥಾ ಮಾವ ತಥಾ ಅಳಿಯ!! ಹೇಳಿ ಪ್ರಯೋಜನವಿಲ್ಲ ಎಂದುಕೊಂಡು ಅವನು ಹಾದು ಹೋಗುವವರೆಗೂ ಅಡಗಿದ್ದು ನಂತರ ಹೊರಬಂದು ಮುನ್ನೆಡೆಯಲು ಎದುರಾದದ್ದು ಬಲಭೀಮ. ಇವನಿಗೆ ದೇಹಬಲವಿರುವುದು ಗೊತ್ತು ಆದರೆ ಪ್ರೀತಿ-ಪ್ರೇಮದ ಗಂಧವಿದೆಯೋ ಇಲ್ಲವೋ ಗೊತ್ತಿರಲಿಲ್ಲ. ಹಾಗೆಂದು ಇವನಿಂದ ಅಡಗಿ ಕುಳಿತುಕೊಳ್ಳುವ ಧೈರ್ಯವಂತೂ ಬರಲಿಲ್ಲ. ಅವನ ಮುಂದೆಯೂ ವ್ಯಾಲೆಂಟೈನ್ ಮಹಿಮೆಯನ್ನು ಅರುಹಲು ಅವನೆಂದ ’ಇಷ್ಟೇನಾ, ಬೇರೇನಾದರೂ ವಿಶೇಷತೆ ಇದೆಯಾ’ ಎಂದ. ನಾರದರಿಗೆ ಮತ್ತೆ ಗೊಂದಲ. ’ನಿನಗೂ ವ್ಯಾಲಂಟೈನ್ ಬಗ್ಗೆ ಮೊದಲೇ ಗೊತ್ತಿತ್ತೆ?’. ಭೀಮನೆಂದ ’ದ್ರೌಪದಿಗಾಗಿ ಸೌಗಂಧಿಕಾ ಪುಷ್ಪದ ವಾಸನೆಯನ್ನು ಅನುಸರಿಸಿ ಹೋಗಿ ಹನುಮ ಬಾಲ ಎತ್ತಲೂ ಆಗದೆ ಅವಮಾನಿತನಾಗಿದ್ದು ತಮಗೆ ಗೊತ್ತಲ್ಲವೇ? ನನ್ನ ವ್ಯಾಲಂಟೈನ್’ಗೆ ಪುಷ್ಪದ ಗಿಫ಼್ಟ್ ಕೊಡಲು ಹೋಗಿದ್ದಕ್ಕಲ್ಲವೇ ಹಾಗಾಗಿದ್ದು?’ ಎಂದು ಹಳೆಯ ನೆನಪನ್ನು ಕೆದಕಿದ್ದಕ್ಕಾಗಿ ಕೆಕ್ಕರಿಸಿ ನೋಡಿ ಮುನ್ನೆಡೆದ.

ಥತ್! ಎಂದು ಮುನ್ನೆಡೆಯಲು ಅರ್ಜುನ ಎದುರಾದ. ಹಲವಾರು ಪತ್ನಿಯರನ್ನು ಹೊಂದಿರುವ ಇವನೇ ಸರಿ ಎಂದು ಅವನ ಮುಂದೆಯೂ ವ್ಯಾಲಂಟೈನ್ ಮಹಿಮೆ ಹೇಳಿದರು ನಾರದರು. ಏನೂ ಉತ್ಸುಕತೆಯೇ ತೋರದ ಅರ್ಜುನನನ್ನು ಕಂಡು ’ನಿನಗೂ ವ್ಯಾಲಂಟೈನ್ ಬಗ್ಗೆ ಮೊದಲೇ ಗೊತ್ತಿತ್ತೆ?’ ಎಂದು ಕೇಳಿದರು. ಅರ್ಜುನನೆಂದ ’ಅಣ್ಣ ಧರ್ಮರಾಯ ದ್ರೌಪದಿಯೊಡನೆ ವ್ಯಾಲಂಟೈನ್ ದಿನ ಆರಾಮವಾಗಿ ಕಾಲ ಕಳೆಯುತ್ತಿದ್ದಾಗ ನಾನು ಒಳನುಗ್ಗಿ ಭಂಗ ತಂದು ಕೊನೆಗೆ ತೀರ್ಥ ಯಾತ್ರೆ ಮಾಡಬೇಕಾಯ್ತು. ಮತ್ತೆ ಇನ್ನೇಕೆ ಈ ವ್ಯಾಲಂಟೈನ್ ಗೊಡವೆ. ನನ್ನನ್ನು ಸುಮ್ಮನೆ ಬಿಟ್ಟು ಬಿಡಿ ನಾರದರೆ’ ಎಂದು ಮುನ್ನೆಡೆದ.

ರಾಮನ ಬಳಿ ಹೋದರೆ ಅವನು ನಸುನಕ್ಕು ’ಹೊನ್ನಿನ ಜಿಂಕೆ ಎಂಬ ವ್ಯಾಲಂಟೈನ್ ಗಿಫ಼್ಟ್ ಕೊಡಲು ಹೋದಾಗ ರಾವಣ ಸೀತೆಯನ್ನೇ ಅಪಹರಿಸಿಕೊಂಡು ಹೋದ. ಈ ವ್ಯಾಲಂಟೈನ್ ಗೊಡವೆ ನನಗೆ ಬೇಡ’ ಎಂದ.

ಸುಗ್ರೀವನನ್ನು ಕೇಳಲು ’ವಾಲಿ ನನ್ನ ವ್ಯಾಲಂಟೈನ್ ಅನ್ನು ಹಿಡಿದು ಇಟ್ಟುಕೊಂಡಾಗಲೇ ನನಗೆ ವ್ಯಾಲಂಟೈನ್ ಬಗ್ಗೆ ಆಸಕ್ತಿ ಹೊರಟು ಹೋಯಿತು’ ಎಂದ.

ಕೃಷ್ಣನು ’ವ್ಯಾಲಂಟೈನ್ ಗಿಫ಼್ಟ್ ಎಂದು ಪಾರಿಜಾತ ವೃಕ್ಷವನ್ನು ರುಕ್ಮಿಣಿಗಾಗಿ ತಂದರೆ ಸತ್ಯಭಾಮೆ ಮುನಿಸಿಕೊಂಡಳು. ಸಧ್ಯಕ್ಕೆ ಯಾವ ಗಲಾಟೆಯೂ ಇಲ್ಲದೆ ನೆಮ್ಮದಿಯಾಗಿದ್ದೀನಿ. ನನ್ನ ಬಿಟ್ಟುಬಿಡು’ ಎಂದ.

ಮುಕ್ಕಣ್ಣನಲ್ಲಿ ಪ್ರೇಮ ಉಕ್ಕಿಸಲು ಹೋಗಿ ಸುಟ್ಟು ಭಸ್ಮವಾದ ಮನ್ಮಥನನ್ನು ನೆನೆದು ತನಗೂ ಅದೇ ಗತಿ ಎಲ್ಲಿ ಬರುವುದೋ ಎಂದು ಶಿವನ ಬಳಿ ಹೋಗುವ ಧೈರ್ಯ ತೋರಲಿಲ್ಲ ನಾರದರು.

ಬ್ರಹ್ಮನನ್ನು ಮಾತನಾಡಿಸಲು ಅಪಾಯಿಂಟ್ಮೆಂಟ್ ಇಲ್ಲ. ಸದಾ 'production issues' ಇರುವುದರಿಂದ ಸುಲಭವಾಗಿ ಅವನ ಬಳಿ ಹೋಗಲು ಸಾಧ್ಯವಿಲ್ಲ.

ಸಂಕಟ ಬಂದಾಗ ವೆಂಕಟರಮಣ ಎಂದು ಅವನ ಬಳಿ ಹೋಗೋಣವೆಂದರೆ ಹೆಂಗಳಿಂದ ದೂರಾಗಿ ಬೆಟ್ಟವೇರಿ ಕುಳಿತಿದ್ದಾನೆ. ಅವನ ಮುಂದೆ ವ್ಯಾಲಂಟೈನ್ ಪುರಾಣ ಹೇಗೆ ಓದುವುದು?

ಸದಾ ಪಾರ್ಟಿ ಮೂಡಿನಲ್ಲೇ ಇರುವ ದೇವೇಂದ್ರನಿಗೆ ಇದೇನೂ ಹೊಸತಲ್ಲ. ಬ್ರಹ್ಮನಷ್ಟೇ ಬ್ಯುಸಿಯಾಗಿರುವ ಮತ್ತೊಬ್ಬನೆಂದರೆ ಯಮಧರ್ಮ. ಯಾವಾಗಲೂ ಅಕೌಂಟ್ ಮುಚ್ಚುವುದರಲ್ಲೇ ಬ್ಯುಸಿ. ಅವನ ಮುಂದೆ ಹೇಳುವುದೂ ಒಂದೇ ಅವನ ಕೋಣನ ಮುಂದೆ ಕಿನ್ನರಿ ಬಾರಿಸುವುದೂ ಒಂದೇ!!

ಸ್ವರ್ಗಲೋಕದಲ್ಲಿ Valentine's Day ಪ್ರಾಜಕ್ಟ್ ಜಾರಿಗೆ ತರಲು ಸರಿಯಾದ ’ಪ್ರಾಜಕ್ಟ್ ಲೀಡ್’ನನ್ನು ಹುಡುಕುತ್ತಿದ್ದಾರೆ ನಾರದರು. ನಿಮಗೆ ಗೊತ್ತಿದ್ದಲ್ಲಿ ಸೂಕ್ತ ದೇವತೆಯ ಬಯೋ ಡೇಟಾ’ವನ್ನು triloka_sanchaari@swargavaani.com’ಗೆ ರವಾನಿಸಿ. ಆ ದೇವತೆಯು ಆಯ್ಕೆಯಾದಲ್ಲಿ ನಿಮಗೆ ಸ್ವರ್ಗಲೋಕದ ಒಂದು ಸಂಜೆ ಟ್ರಿಪ್ ಫ಼್ರೀ !!!!