ವ್ಯೂಹ(ಪತ್ತೇದಾರಿ ಕಾದಂಬರಿ)-ಅಧ್ಯಾಯ-1
ಒಂದು ಸುಂದರವಾದ ಹಿಮಪರ್ವತ ಶ್ರೇಣಿ. ಸುತ್ತ ಎತ್ತೆತ್ತಲೂ ಶುಭ್ರವಾದ ಹತ್ತಿಯಂತಿರುವ ಹಿಮ.ತಂಪಾದ ಗಾಳಿ. ಅಲ್ಲಲ್ಲಿ ಅರಳಿ ನಿಂತಿರುವ ಸುಂದರ ಸುಮಗಳು.ಹಿಮಪರ್ವತಗಳನ್ನು ಬೆಳ್ಳಿಯಂತೆ ಬೆಳಗುತ್ತಿರುವ ದಿನಕರ.ಇಂತಹ ಸುಮಧುರವಾದ ಸೌಂದರ್ಯವನ್ನು ಆಹ್ಲಾದಿಸುತ್ತಿರುವ ರಘು. ಆಗ ಇದ್ದಕಿದ್ದಂತೆಯೇ ಪ್ರಕೃತಿ ಬದಲಾಗತೊಡಗಿತು.ಪ್ರಶಾಂತವಾದ ಸೂರ್ಯ ಧಗ ಧಗನೆ ಉರಿಯತೊಡಗಿದನು. ಸೂರ್ಯನ ಪ್ರಖರತೆಗೆ ಬೆಳ್ಳನೆಯ ಹಿಮ ಪರ್ವತಗಳು ಕರಗಿ ನೀರಾಗತೊಡಗಿದವು.ಸುಮ ಪುಷ್ಪಗಳು ಬಾಡತೊಡಗಿದವು.ಇದ್ದಕಿದ್ದಂತೆ ಭೂಮಿ ನಡುಗಿ ಭೂಮಿಯೊಳಗಿನ ಲಾವಾರಸ ಕುದಿಯತೊಡಗಿತು.ಬೆಳ್ಳನೆಯ ಹಿಮಪರ್ವತ ಸಿಡಿದು ಲಾವಾರಸ ಉಕ್ಕಿ ಹರಿಯತೊಡಗಿತು.ಆಗ ಆಕಾಶವೆಲ್ಲ ಬೆಂಕಿ ಉಗುಳತೊಡಗಿದೆಯೇನೋ ಎಂದು ಭಾಸವಾಗುವಷ್ಟು ಲಾವಗ್ನಿ ಸಿಡಿಯತೊಡಗಿತು.ರಘು ವಿಚಲಿತಗೊಂಡು ರಕ್ಷಣೆಗಾಗಿ ಕೂಗತೊಡಗಿದ.ಆದರೆ ಅಲ್ಲಿ ಅವನ ಸಹಾಯಕ್ಕೆ ಬರುವವರು ಯಾರೂ ಇಲ್ಲ. ರಘು ಹಿಮ ಪರ್ವತಕ್ಕೆ ಬೆನ್ನು ತಿರುಗಿಸಿ ಎಷ್ಟು ಸಾಧ್ಯವೋ ಅಷ್ಟು ವೇಗವಾಗಿ ಓಡಲು ಯತ್ನಿಸಿದ.ಆದರೆ ಅವನಿಗೆ ಓಡಲು ಆಗುತ್ತಿಲ್ಲ.ಅವನ ಕಾಲುಗಳನ್ನು ಅದೆಂತವೋ ಬಳ್ಳಿಗಳು ವ್ಯೂಹದಂತೆ ಸುತ್ತಿಕೊಂಡು ಅವನನ್ನು ಓಡದಂತೆ ತಡೆಯುತ್ತಿವೆ.ಇನ್ನೇನು ಲಾವಾರಸ ಇವನು ನಿಂತಿದ್ದ ಜಾಗಕ್ಕೆ ರಭಸದಿಂದ ಹರಿದು ಬರುತ್ತಿದೆ....ಇನ್ನೇನು ಬಂತು...ಇನ್ನು ಸ್ವಲ್ಪ ದೂರ ಅಷ್ಟೇ...ಇನ್ನು ನಾಲ್ಕೇ ಹೆಜ್ಜೆ....ಲಾವಾರಸ ಕಾಲ ಬುಡಕ್ಕೆ ಬಂತು...
ಆಗ ರಘುವಿಗೆ ಫಕ್ಕನೆ ಎಚ್ಚರವಾಯಿತು.ಎದ್ದು ಹಾಸಿಗೆಯ ಪಕ್ಕದ ಟೇಬಲ್ ಮೇಲೆ ಇಟ್ಟಿದ್ದ ನೀರನ್ನು ಕುಡಿದು ಸುಧಾರಿಸಿಕೊಳ್ಳತೊಡಗಿದನು."ಎಂತಹ ದುಸ್ವಪ್ನ !!!!"...ರಘು ಉದ್ಘರಿಸಿದ."ದಿನಾಲೂ ಸುಂದರವಾದ ಕನಸುಗಳು ಬೀಳುತ್ತಿದವು...ಆದರೆ ಇಂದೇಕೋ ಭಯಾನಕವಾದ ಕನಸು...ಅಬ್ಬ!!!! ಇನ್ನೇನು ಲಾವಾರಸ ಕಾಲ ಬುಡಕ್ಕೆ ಬಂದಿತ್ತು!!!! ಸಧ್ಯ ಕನಸಲ್ಲ!!!" ಎಂದು ರಘು ಮತ್ತೆ ಹಾಸಿಗೆಯ ಮೇಲೆ ಉರುಳಿಕೊಂಡನು.ಹಾಗೆಯೇ ಉರುಳಿಕೊಂಡು ಸಮಯ ನೋಡಿದ.ಅವನ ಗಡಿಯಾರ ಸಮಯ ೮ ಗಂಟೆ ಎಂದು ತೋರಿಸುತ್ತಿತ್ತು.ಪೋಲಿಸ್ ಇನಸ್ಪೆಕ್ಟಾರ್ ಆದ ರಘುವಿಗೆ ರವಿವಾರ ಕೂಡ ಆಫೀಸ್ ಇದ್ದುದರಿಂದ ಸ್ವಲ್ಪ ತಡವಾಗಿ ಆಫೀಸಿಗೆ ಹೋದರಾಯಿತು ಎಂದುಕೊಂಡು "ಸರಿ ಇಂದು ಹೇಗಾದರೂ ರವಿವಾರ ಅಲ್ಲವೇ....ಇನ್ನು ಸ್ವಲ್ಪ ಮಲಗಿದರಾಯಿತು" ಎಂದು ಮತ್ತೆ ಕಣ್ಣು ಮುಚ್ಚಿದ. ಆದರೆ ಪಾಪ!! ಅವನಿಗೆ ಹೇಗೆ ಗೊತ್ತಾಗಬೇಕು,ಸ್ವಲ್ಪ ಹೊತ್ತಿನಲ್ಲಿಯೇ ಒಂದು ದುಖಕರವಾದ ವಾರ್ತೆಯೊಂದು ಬರಲಿದೆ ಎಂದು ?.....ಹೌದು...ಸ್ವಲ್ಪ ಸಮಯದಲ್ಲಿಯೇ ಅವನ ಮೊಬೈಲ್ ಹೊಡೆದುಕೊಳ್ಳತೊಡಗಿತು.ಹಾಗೆಯೇ ರಘು ಕಣ್ಣು ತೆರೆದು ಯಾರ ಕಾಲ್ ಎಂದು ನೋಡಿದ. ಅದು ಮಲ್ಲೇಶ್ವರಂ ಪೋಲಿಸ್ ಥಾಣೆಯ ಕಾಲ್ ಆಗಿತ್ತು."ಇದ್ಯಾಕಪ್ಪ ಇವರು ಕಾಲ್ ಮಾಡ್ತಿದಾರೆ ? ಥೂ! ರವಿವಾರ ಕೂಡ ನೆಮ್ಮದಿಯಾಗಿ ಮಲಗಲು ಬಿಡುವದಿಲ್ಲವಲ್ಲ"...ಎಂದುಕೊಂಡು ರಘು ಕಾಲ್ ರಿಸೀವ್ ಮಾಡಿದನು.ಅತ್ತಲಿಂದ....
"ಹಲೋ......ಇನ್ಸಪೆಕ್ಟರ ರಘು ಅವರಾ?"
"ಹಾಂ....ಹೌದು...ಸ್ಪೀಕಿಂಗ್....."
"......ಸರ್.....ವಿನಯ್.....ಅವ್ರು ನಿಮ್ಮ ತಮ್ಮಾನ?..."
"ಹಾಂ....ಹೌದು...ಯಾಕೆ?..."
"...ಸರ್.....ವಿನಯ್ , ಗೋಕುಲಂ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ನಲ್ಲಿ ಓದುತ್ತಿದಾರ?"
"ಹಾಂ.....ಹೌದು...ಯಾಕೆ?.."
.........ಅದೇ ಕಂಪ್ಯೂಟರ್ ಸೈನ್ಸ್ ಡಿಪಾರ್ಟ್ಮೆಂಟ್.....4 ನೆ ಸೆಮಿಸ್ಟರ್ ನಲ್ಲಿ......."
"ಹಾಂ....ಹೌದಪ್ಪ....ಅವನು ಅಲ್ಲೇ ಓದ್ತಾ ಇದಾನೆ.....ಯಾಕೆ ಏನಾಯ್ತು ?...ಯಾಕೆ ಈ ಥರ ಪ್ರಶ್ನೆ ಕೇಳ್ತಾ ಇದ್ದೀರಾ?...."
".............................................................." ಅತ್ತಲಿದ್ದವರ ಧ್ವನಿ ಒಂದು ಭಾರವಾದ ನಿಟ್ಟಿಸಿರಿನೊಂದಿಗೆ ಮೌನವಾಯ್ತು.
"ಹಲೋ.....ಯು ದೇರ್ ?...ಹಲೋ.....ಮಾತನಾಡಿ.........................." ಎಂದು ರಘು ಚಡಪಡಿಸತೊಡಗಿದನು.ಅವನಿಗೆ ಮನಸ್ಸಿನಲ್ಲಿ ಏನೋ ಒಂದು ಆತಂಕ ಶುರುವಾಗತೊಡಗಿತ್ತು.ರಘು ಮೊದಲೇ ಒಬ್ಬ ಪೋಲಿಸ್ ಇನ್ಸ್ಪೆಕ್ಟರ್ ಆಗಿದ್ದರಿಂದ,ವಿನಯ್ ಗೆ ಏನೋ ಅಪಾಯ ಆಗಿದೆ ಎಂದು ಭಾವಿಸಿದನು.ಅದಕ್ಕೆ ತುಂಬಾ ಆರ್ತವಾದ ಸ್ವರದಲ್ಲಿ....
"ಯಾಕೆ ಮೌನವಾಗಿದ್ದಿರಿ?....ಮಾತನಾಡಿ ಪ್ಲೀಸ್.....ವಿನಯ್ ಗೆ ಏನಾಗಿದೆ ? ಇಲ್ಲಿ ನೋಡಿ.....ನಾನು ಕೂಡ ಒಬ್ಬ ಪೋಲಿಸ್ ಆಫೀಸೆರ್..ಏನೇ ಆಗಿದ್ದರೂ ದಯವಿಟ್ಟು ವಿಷಯ ಏನೆಂದು ತಿಳಿಸಿ...ಪ್ಲೀಸ್...." ಎಂದು ಗೋಗರೆಯತೊಡಗಿದನು.
"ಸರ್.....ನಿಮ್ಮ ತಮ್ಮ ವಿನಯ್ ಅವರನ್ನು ಯಾರೋ ಕೊ...ಕೊಲೆ ಮಾಡಿಬಿಟ್ಟಿದ್ದಾರೆ ಸರ್....." ಎಂದಿತು ಆ ಕಡೆಯ ಧ್ವನಿ!!!!!!!!!!
"ಒಹ್! ಮೈ ಗಾಡ್!!!!!!!!!!!! ಇಲ್ಲ ನೀವು ಸುಳ್ಳು ಹೇಳ್ತಾ ಇದ್ದೀರಾ......ದಯವಿಟ್ಟು ಒಂದು ಸಲ ಪರೀಕ್ಷೆ ಮಾಡಿ...ಅವನು ವಿನಯ್ ಆಗಿರಲು ಸಾಧ್ಯವೇ ಇಲ್ಲ.....ಪ್ಲೀಸ್...ಹಾಗೆ ಹೇಳ್ಬೇಡಿ!!!!!" ಎಂದು ರಘು ಆರ್ತನಾಗಿ ನುಡಿಯತೊಡಗಿದನು.ವಿನಯ್ ಅವನಿಗಿದ್ದ ಒಬ್ಬನೇ ಒಬ್ಬ ಬಂಧು.ರಘುವಿನ ತಂದೆ ತಾಯಿ 5 ವರ್ಷಗಳ ಹಿಂದೆ ಒಂದು ಅಪಘಾತದಲ್ಲಿ ತೀರಿಕೊಂಡಿದ್ದರಿಂದ ವಿನಯ್ ಮತ್ತು ಅವನು ಅನಾಥರಾಗಿದ್ದರು.ಆದರೂ ರಘುವಿಗೆ ವಿನಯ್ ಒಬ್ಬನಾದರೂ ಇದ್ದಾನಲ್ಲ ಎಂದು ಸಮಾಧಾನ ಹೊಂದಿ ಅವನನ್ನು ಚೆನ್ನಾಗಿ ನೋಡಿಕೊಳ್ಳುವ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದನು.ಈಗ್ಗೆ ಎರಡು ವರ್ಷದ ಹಿಂದೆ ವಿನಯ್ ಗೆ ಪ್ರಸಿದ್ಧ ಎಂಜಿನಿಯರಿಂಗ್ ಕಾಲೇಜ್ ಆದ ಗೋಕುಲಂ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಲ್ಲಿ ಕಂಪ್ಯೂಟರ್ ಸೈನ್ಸ್ ಸೀಟ್ ಸಿಕ್ಕಿತ್ತು. ಈ ಕಾಲೇಜ್ ಮಲ್ಲೇಶ್ವರಂ ನಲ್ಲಿ ಇತ್ತು. ರಘು ವೈಟ್ ಫೀಲ್ಡ್ ನ ಪೋಲಿಸ್ ಆಫೀಸಿನಲ್ಲಿ ಕೆಲಸ ಮಾಡುತ್ತಿದ್ದ.ಪೋಲಿಸ್ ಆಫೀಸ್ ವೈಟ್ ಫೀಲ್ಡ್ ನಲ್ಲಿ ಇದ್ದುದರಿಂದ ರಘುವಿನ ಮನೆ ಅಲ್ಲೇ ಇತ್ತು.ಆದರೆ ವಿನಯ್ ಕಾಲೇಜ್ ಗೆ ಮನೆ ದೂರವಿದ್ದುದರಿಂದ ರಘು ಮಲ್ಲೇಶ್ವರಂ ಪೋಲಿಸ್ ಸ್ಟೇಷನ್ ಗೆ ವರ್ಗ ಮಾಡಿಸಿಕೊಳ್ಳಲು ಯತ್ನಿಸಿದನು.ಆದರೆ ಅಲ್ಲಿಗೆ ವರ್ಗ ಮಾಡಲು ಇನ್ನು ೩ ವರ್ಷ ಕಾಯಬೇಕು ಎಂದು ಮೇಲಧಿಕಾರಿಗಳು ಹೇಳಿದ್ದರಿಂದ,ವಿನಯ್ ನನ್ನು ಹಾಸ್ಟೆಲಿನಲ್ಲಿ ಇಟ್ಟು ಓದಿಸುವ ಏರ್ಪಾಡು ಮಾಡಿದನು.ವಿನಯ್ ಕೂಡ ಅಣ್ಣನಿಗೆ ಸಹಕರಿಸುತ್ತ,ಅಣ್ಣನೊಡನೆ ಚೆನ್ನಾಗಿ ಹೊಂದಿಕೊಂಡು ಹೋಗುತ್ತಿದ್ದನು.ಹೀಗೆ ಇವರ ಜೀವನ ಸಾಗುತಿತ್ತು. ಆದರೆ ಇಂದು ಈ ವಿಷಯ ಕೇಳಿದ ರಘುವಿಗೆ ಅದನ್ನು ನಂಬಲು ಆಗುತ್ತಿಲ್ಲ.ಅದಕ್ಕೆ ಅವನು ಕೊಲೆಯಾದವರು ವಿನಯ್ ಹೌದೋ ಅಲ್ಲವೋ ಪರೀಕ್ಷಿಸಲು ಹೇಳಿದ್ದು...
ಆಗ ಅತ್ತ ಕಡೆಯ ಧ್ವನಿ..."ಸರ್.....ಹೌದು ಸರ್...ಸರಿಯಾಗಿ ಪರೀಕ್ಷೆ ಮಾಡಿಯೇ ಹೇಳಿದ್ದೇವೆ.....ಶವದ ಕಿಸೆಯಲ್ಲಿ ಇದ್ದ ಕಾಲೇಜ್ ಐ ಡೀ ಕಾರ್ಡ್ನಲ್ಲಿರುವ ಫೋಟೋ ಗು ಮತ್ತು ಶವದ ಮುಖಕ್ಕೂ ಹೊಂದಾಣಿಕೆ ಆಗಿದೆ...ಕಾಲೇಜಿಗೆ ಫೋನ್ ಮಾಡಿ ವಿಷಯ ತಿಳಿಸಿದಾಗ ಅವರ ಗೆಳೆಯರು ನಿಮ್ಮ ನಂಬರ್ ಕೊಟ್ಟರು..ಅದಕ್ಕೆ ನಿಮಗೆ ವಿಷಯ ತಿಳಿಸಿದ್ದೇನೆ ಸರ್...." ಎಂದಿತು.
"ನೋ!!!!! " ರಘುವಿಗೆ ಬರಸಿಡಿಲು ಬಡಿದಂತಾಯ್ತು.ಆದರೂ ಒಬ್ಬ ಪೋಲಿಸ್ ಅಧಿಕಾರಿಯಾಗಿ ಮನಸ್ಸನ್ನು ಸಂಯಮಕ್ಕೆ ತಂದುಕೊಂಡನು.ಆದರೂ ತನ್ನ ಪ್ರೀತಿಯ ತಮ್ಮ ಶವವಾಗಿದ್ದಾನೆ ಎಂದು ತಿಳಿದು ತುಂಬಾ ದುಖವಾಯಿತು."ಸರಿ...ಈಗಲೇ ಅಲ್ಲಿಗೆ ಬರುತ್ತೇನೆ..." ಎಂದು ಗದ್ಗದಿತವಾದ ಧ್ವನಿಯಲ್ಲಿ ಹೇಳಿ ಫೋನ್ ಕಟ್ ಮಾಡಿದನು.ಹಾಗೆಯೇ ಹಾಸಿಗೆಯ ಮೇಲೆ ಕುಸಿದು ತನ್ನ ಮನದಲ್ಲಿರುವ ದುಃಖವನ್ನು ಕಡಿಮೆ ಮಾಡಿಕೊಳ್ಳಲು ಅಳತೊಡಗಿದನು. ಆದರೂ ಈ ದುಖಾಗ್ನಿ ಅಷ್ಟು ಸರಳವಾಗಿ ಶಮನ ಮಾಡುವಂತಹುದಾಗಿರಲಿಲ್ಲ.ಹಾಗೆಯೇ ಹಾಸಿಗೆಯಿಂದ ಎದ್ದು,ಉಟ್ಟ ಬಟ್ಟೆಯಲ್ಲಿಯೇ ಜೀಪಿನಲ್ಲಿ ಮಲ್ಲೇಶ್ವರಂ ಪೋಲಿಸ್ ಸ್ಟೇಷನ್ ಕಡೆಗೆ ಸಾಗಿದನು.
ಮಲ್ಲೇಶ್ವರಂ ಪೋಲಿಸ್ ಸ್ಟೇಷನ್ ಗೆ ಹೋದಾಗ ಅಲ್ಲಿಯ ಅಧಿಕಾರಿ,"ಶವವನ್ನು ಕೆ ಸಿ ಜನರಲ್ ಆಸ್ಪತ್ರೆಗೆ ಪೋಸ್ಟ್ ಮಾರ್ಟಂ ಗಾಗಿ ಕಳಿಸಿದ್ದೇವೆ" ಎಂದು ಹೇಳಿದನು. ಅಲ್ಲಿಂದ ಕೆ ಸಿ ಜನರಲ್ ಆಸ್ಪತ್ರೆಗೆ ಬಂದಾಗ ಶವ ಆಗ ತಾನೇ ಪೋಸ್ಟ್ ಮಾರ್ಟಂ ಮುಗಿಸಿಕೊಂಡು ಶವದ ಕೊನೆಯಲ್ಲಿ ಮಲಗಿತ್ತು.ಶವವನ್ನು ನೋಡಿದ ತಕ್ಷಣ ರಘುವಿಗೆ ದುಖ ಉಮ್ಮಳಿಸಿ ಬಂದು ಬಿಕ್ಕತೊದಗಿದನು. ಆದರೂ ಏನು ಮಾಡುವಂತಿರಲಿಲ್ಲ.ಕಾಲ ಮಿಂಚಿ ಹೋಗಿತ್ತು.ಮನಸ್ಸಿನಲ್ಲಿ ಕೊಲೆ ಮಾಡಿದವರನ್ನು ನೆನೆಸಿಕೊಳ್ಳುತ್ತಾ ಕೋಪದಿಂದ ರಘು ಭುಸುಗುತ್ತಿದನು."ಏನಾದರೂ ಆಗಲಿ ನನ್ನ ತಮ್ಮನನ್ನು ಕೊಲೆ ಮಾಡಿದವರನ್ನು ಕಂಡು ಹಿಡಿದು ಅವರನ್ನು ಜೈಲಿಗೆ ಅಟ್ಟುತ್ತೇನೆ"...ಎಂದು ರಘು ಸಂಕಲ್ಪ ಮಾಡಿದನು.ಆಗಲೇ ಅವನ ಮನಸ್ಸಿನಲ್ಲಿರುವ ಒಬ್ಬ ಪೋಲಿಸ್ ಅಧಿಕಾರಿ ಜಾಗೃತನಾಗಿದ್ದು. ಹಾಗೆ ಅವನು ಶವದ ಹತ್ತಿರ ಬಂದು ಶವವನ್ನು ಪರೀಕ್ಷಿದನು. ವಿನಯನ ದೇಹವನ್ನು ಐದಾರು ಕಡೆಯಲ್ಲಿ ಚಾಕುವಿನಿಂದ ಇರಿಯಲಾಗಿತ್ತು.ಅದರಿಂದ ಆದ ವಿಪರೀತ ರಕ್ತಸ್ರಾವದಿಂದ ವಿನಯ್ ಸಾವನ್ನಪ್ಪಿದ್ದನು.ವೈದ್ಯರೂ ಕೂಡ ಇದನ್ನೇ ಹೇಳಿದರು.ಸರಿ ಮೊದಲು ಮಾಡಬೇಕಾದ ಕೆಲಸವನ್ನು ಮುಗಿಸಿ ಈ ಕೊಲೆಯ ಸುಧೀರ್ಘವಾದ ತನಿಖೆ ನಡೆಸಬೇಕೆಂದು ನಿರ್ಧರಿಸಿ ಶವವನ್ನು ತನ್ನ ಸುಪರ್ದಿಗೆ ತೆಗೆದುಕೊಂಡನು.ಮುಂದೆ ವಿನಯನ ಅಂತ್ಯಕ್ರಿಯೆಯನ್ನು ಒಬ್ಬನೇ ಅಣ್ಣನಾದ ತಾನು ವಿಪರೀತ ದುಃಖದಿಂದ ಮುಗಿಸಿದನು.ಅಂತ್ಯಕ್ರಿಯೆಯಲ್ಲಿ ಕಾಲೇಜಿನ ಎಲ್ಲರೂ ಭಾಗವಹಿಸಿದ್ದರು. ಯಾರೂ ವಿನಯನ ಸಾವನ್ನು ನಂಬುವ ಸ್ತಿತಿಯಲ್ಲಿರಲಿಲ್ಲ.ರಘು ಶವ ಸಂಪೂರ್ಣವಾಗಿ ಭಸ್ಮವಾಗುವ ತನಕ ಸ್ಮಶಾನದಲ್ಲಿದ್ದು...ಕೊಲೆ ಮಾಡಿದವರನ್ನು ಕಂಡು ಹಿಡಿಯುವ ಸಂಕಲ್ಪದೊಂದಿಗೆ ಮನೆಗೆ ಹಿಂದಿರುಗಿದನು.
****************************************************************************************************
ಅಧ್ಯಾಯ -1- ಮುಗಿಯಿತು.......
ಅಧ್ಯಾಯ - 2- ಮುಂದಿನ ವಾರ.....
Comments
ಉ: ವ್ಯೂಹ(ಪತ್ತೇದಾರಿ ಕಾದಂಬರಿ)-ಅಧ್ಯಾಯ-1
In reply to ಉ: ವ್ಯೂಹ(ಪತ್ತೇದಾರಿ ಕಾದಂಬರಿ)-ಅಧ್ಯಾಯ-1 by venkatb83
ಉ: ವ್ಯೂಹ(ಪತ್ತೇದಾರಿ ಕಾದಂಬರಿ)-ಅಧ್ಯಾಯ-1