ವ್ಯೂಹ(ಪತ್ತೇದಾರಿ ಕಾದಂಬರಿ)-ಅಧ್ಯಾಯ-3

ವ್ಯೂಹ(ಪತ್ತೇದಾರಿ ಕಾದಂಬರಿ)-ಅಧ್ಯಾಯ-3

 ಮಲ್ಲೇಶ್ವರಂ ಪೋಲಿಸ್ ಸ್ಟೇಷನ್ ಗೆ ವರ್ಗ ಮಾಡಿಸಿಕೊಂಡು,ವಿನಯನ ಕೊಲೆಯ ಸಮಗ್ರ ತನಿಖೆಯನ್ನು ನಡೆಸಬೇಕೆಂದು ಯೋಚಿಸಿದ ರಘುವಿಗೆ ತಕ್ಷಣ ನೆನಪಾಗಿದ್ದು ತನಗೆ ಪರಮಾಪ್ತರೂ,ತನ್ನ ಪಿತೃ ಸಮಾನರೂ ಆದ ರಂಗರಾವ್ ಅವರು.ರಂಗರಾವ್ ರಘುವಿನ ತಂದೆಯ ಸ್ನೇಹಿತರಾಗಿದ್ದರು.ಅವರು ಪೋಲಿಸ್ ಡಿಪಾರ್ಟ್ಮೆಂಟ್ ನಲ್ಲಿ ಎಸ್ ಪಿ ಆಗಿ ಸೇವೆ ಸಲ್ಲಿಸಿ,ಮೂರು ವರ್ಷಗಳ ಹಿಂದೆ ನಿವೃತ್ತಿ ಹೊಂದಿದ್ದರು.ರಂಗರಾವ್ ಅವರು ರಘು ಮತ್ತು ವಿನಯರನ್ನು ಚಿಕ್ಕಂದಿನಿಂದ ಬಲ್ಲರು.ಅವರೇ ರಘುವನ್ನು ಪೋಲಿಸ್ ಕೆಲಸಕ್ಕೆ ಸೇರಲು ಪ್ರೋತ್ಸಾಹಿಸಿದವರು.ಅವರನ್ನು ಕೇಂದ್ರ ಸರಕಾರ ಆರಾಮವಾಗಿ ನಿವೃತ್ತಿ ಜೀವನ ಕಳೆಯಲು ಬಿಡದೆ,ಕೇಂದ್ರೀಯ ಸಲಹಾ ಸಮಿತಿಯ ಸದಸ್ಯರನ್ನಾಗಿ ನೇಮಿಸಿ ದೆಹಲಿಯಲ್ಲಿರಿಸಿಕೊಂಡಿತ್ತು.ವಿನಯ ಕೊಲೆಯಾದ ದಿನದಂದು ರಘು ವಿಪರೀತವಾದ ದುಃಖ ಮತ್ತು ಶಾಕ್ ನಲ್ಲಿದ್ದನು.ಅದ ಕಾರಣ ಅವನು ವಿನಯನ ಕೊಲೆಯ ವಿಚಾರವನ್ನು ರಂಗರಾವ್ ಅವರಿಗೆ ತಿಳಿಸುವ ವಿಚಾರವನ್ನೇ ಮಾಡಲಿಲ್ಲ.ಅವನ ಮನಸ್ಸಿನ ತುಂಬಾ ಕೇವಲ ವಿನಯನ ಚಿತ್ರವೇ ಸುಳಿದಾಡುತ್ತಿದ್ದುದರಿಂದ,ಅವನಿಗೆ ಬೇರೆ ಎಲ್ಲ ವಿಚಾರಗಳು ಮರೆತು ಹೋಗಿದ್ದವು.ಮನುಷ್ಯನ ಮನಸ್ಸೇ ಅಂತಹುದು.ನಮ್ಮ ಕಣ್ಣ ಮುಂದೆಯೇ ನಮ್ಮ ಪರಮಾಪ್ತರು ತೀರಿ ಹೋದಾಗ,ನಮಗೆ ಆ ದುಃಖದಲ್ಲಿ ಬೇರೆ ಯಾರ ಬಗ್ಗೆಯೂ ನೆನಪಾಗುವದಿಲ್ಲ.ನಮ್ಮ ಮನಸ್ಸಿನ ತುಂಬಾ ಆ ವ್ಯಕ್ತಿಯೇ ತುಂಬಿರುತ್ತಾರೆ.ವಿನಯ ಕೊಲೆಯಾದ ದಿನ ರಘು ಇಂತಹುದೇ ಸ್ಥಿತಿಯಲ್ಲಿದ್ದನು.ಅದಕ್ಕೆ ರಘು ಈಗ ರಂಗರಾವ್ ಅವರಿಗೆ ಫೋನ್ ಮಾಡಿ,ಇಲ್ಲಿ ನಡೆದ ಎಲ್ಲ ಘಟನೆಗಳನ್ನು ಸವಿಸ್ತಾರವಾಗಿ ತಿಳಿಸಿದನು.

ಸುದ್ದಿಯನ್ನು ಕೇಳಿದ ರಂಗರಾವ್ ಅವರಿಗೆ ಭೂಮಿಯೇ ಬಾಯಿ ಬಿರಿದಂತಾಯಿತು.ಅವರು ರಘು ಮತ್ತು ವಿನಯರನ್ನು ತಮ್ಮ ಸ್ವಂತ ಮಕ್ಕಳಂತೆ ಪ್ರೀತಿಸುತ್ತಿದ್ದರು.ಎಷ್ಟೇ ಆಗಲಿ ವಿನಯ ತಾವು ಎತ್ತಿ ಆಡಿಸಿದ ಕೂಸಲ್ಲವೆ.ಅವರಿಗೆ ವಿನಯನ ಕೊಲೆಯ ವಿಚಾರ ಕೇಳಿ ವಿಪರೀತ  ದುಃಖವಾಯಿತು.ದುಃಖವನ್ನು ತಾಳಲಾರದೆ,ಎಳೆಯ ಮಗುವನ್ನು ಕಳೆದುಕೊಂಡ ತಾಯಿಯಂತೆ ಫೋನಿನಲ್ಲಿಯೇ ಬಿಕ್ಕತೊಡಗಿದರು.ಇದನ್ನು ಕೇಳಿ ರಘುವಿಗೂ ತಾಳಲಾಗದ ಸಂಕಟ ಉಂಟಾಯಿತು.ಆದರೂ ತನ್ನ ದುಃಖವನ್ನು ನಿಗ್ರಹಿಸಿ,ರಂಗರಾವ್ ಅವರನ್ನು ಸಂತೈಸಿದನು.ರಘು ರಂಗರಾವ್ ಅವರಿಗೆ,ತಾನು ಮಲ್ಲೇಶ್ವರಂ ಪೋಲಿಸ್ ಸ್ಟೇಷನ್ ಗೆ ಹೋಗಿದ್ದನ್ನು ಮತ್ತು ಅಲ್ಲಿಯ ಇನಸ್ಪೆಕ್ಟೆರ್ ಅವನ ಜೊತೆ ನಡೆದುಕೊಂಡಿದ್ದನ್ನು ವಿವರವಾಗಿ ತಿಳಿಸಿದನು.ಇದನ್ನು ಕೇಳಿದ ರಂಗರಾವ್ ಅವರು ನಾಳೆಯೇ ಬೆಂಗಳೂರಿಗೆ ಬರುವದಾಗಿ ಮತ್ತು ಅಲ್ಲಿಗೆ ಬಂದು ಕೈಲಾದ ಸಹಾಯ ಮಾಡುವದಾಗಿ ತಿಳಿಸಿದರು.

ಮರುದಿನ ಬೆಳಗ್ಗೆ ಬೆಂಗಳೂರಿಗೆ ಬಂದಿಳಿದ ರಂಗರಾವ್ ಅವರನ್ನು ಭೇಟಿ ಮಾಡಿದ ರಘು,ತಾನೇ ಮಲ್ಲೇಶ್ವರಂಗೆ ವರ್ಗ ಮಾಡಿಸಿಕೊಂಡು ವಿನಯನ ಕೊಲೆಯ ತನಿಖೆ ಮಾಡಬೇಕೆಂಬ ನಿರ್ಧಾರವನ್ನು ತಿಳಿಸಿದನು.ಆಗ ರಂಗರಾವ್ ಅವರು ತಾವೊಮ್ಮೆ ಹೋಗಿ ಮಲ್ಲೇಶ್ವರಂ ಇನಸ್ಪೆಕ್ಟೆರ್ ನನ್ನು ಕಂಡು ಇನ್ನೊದು ಸಲ ವಿಚಾರಿಸಿ ಬರುವದಾಗಿ ತಿಳಿಸಿದರು. ಇದನ್ನು ಕೇಳಿದ ರಘು,ಆ ಇನಸ್ಪೆಕ್ಟೆರ್ ರಂಗರಾವ್ ಅವರ ಜೊತೆಯೂ ಹಾಗೆಯೇ ವರ್ತಿಸಬಹುದೆಂದು ಹೆದರಿ ಅವರಿಗೆ ಮಲ್ಲೇಶ್ವರಂ ಸ್ಟೇಷನ್ ಗೆ ಹೋಗಬೇಡವೆಂದು ತಡೆದನು.ಆಗ ರಂಗರಾವ್ ಅವರು ಇದೊಂದು ಕಡೆಯ ಪ್ರಯತ್ನವನ್ನು ಮಾಡೋಣವೆಂದು ಹೇಳಿ ರಘುವನ್ನು ಒಪ್ಪಿಸಿದರು.ಮಲ್ಲೇಶ್ವರಂ ಪೋಲಿಸ್ ಸ್ಟೇಷನ್ ಗೆ ಹೋದ ರಂಗರಾವ್ ಅವರಿಗೂ ನಿರಾಶೆ ಕಾದಿತ್ತು. ಆ ಇನಸ್ಪೆಕ್ಟೆರ್,ರಂಗರಾವ್ ಅವರಿಗೆ ತನಿಖೆ ಇನ್ನು ಪ್ರಗತಿಯಲ್ಲಿದೆ ಎಂದೂ,ಕೊಲೆಯ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲವೆಂದು ಹೇಳಿದನು.ರಂಗರಾವ್ ಇನ್ನಷ್ಟು ವಿವರಗಳನ್ನು ಕೇಳಲು ಯತ್ನಿಸಿದಾಗ ಆ ಇನಸ್ಪೆಕ್ಟೆರ್,ತಾನು ರೌಂಡ್ಸ್ ಹೋಗಬೇಕಾಗಿದೆ ಎಂದು ಹೇಳಿ ಆದಷ್ಟು ಬೇಗ ಆ ಜಾಗದಿಂದ ನುನುಚಿಕೊಂಡನು.ಇದರಿಂದ ರಂಗರಾವ್ ಅವರಿಗೆ ಈ ಕೊಲೆಯ ಹಿಂದೆ ಯಾವುದೊ ಒಂದು ದೊಡ್ಡ ಕೈ ಇದೆ ಎಂದು ಮನವರಿಕೆ ಆಗಿ ಹೋಗಿತ್ತು.ಆ ಇನಸ್ಪೆಕ್ಟೆರ್ ಹೇಗಾದರೂ ಮಾಡಿ ಈ ಕೊಲೆಯ ಕೇಸನ್ನು ಇನ್ನು ಸ್ವಲ್ಪ ದಿನದಲ್ಲಿ ಮುಚ್ಚಿ ಹಾಕುವದರಲ್ಲಿ ಯಾವುದೇ ಅನುಮಾನವಿರಲಿಲ್ಲ.ಆದ ಕಾರಣ ಅವರಿಗೆ ರಘು ಮಲ್ಲೇಶ್ವರಂ ಪೋಲಿಸ್ ಸ್ಟೇಷನ್ ಗೆ ವರ್ಗ ಮಾಡಿಸಿಕೊಂಡು.ಕೊಲೆಯ ತನಿಖೆ ಮಾಡುವ ನಿರ್ಧಾರ ಸರಿ ಎನ್ನಿಸಿತು.

ಭಾರತ ದೇಶದಲ್ಲಿ ಒಂದು ಹೊಲಸು ರಾಜಕೀಯ ಕಾನೂನಿದೆ.ಅದೇನೆಂದರೆ ಯಾವದೇ ಒಬ್ಬ ಸರಕಾರೀ ಅಧಿಕಾರಿ ಎಲ್ಲಿಯಾದರೂ ವರ್ಗ ಮಾಡಿಸಿಕೊಳ್ಳಬೇಕೆಂದರೆ ಆ ಏರಿಯಾದ ಶಾಸಕ ಅದಕ್ಕೆ ಒಪ್ಪಿಗೆ ಕೊಡಬೇಕು.ಇದೊಂದು ಅಲಿಖಿತ ಕಾನೂನಾಗಿದ್ದು ಕೆಲವು ರಾಜಕಾರಣಿಗಳು ಇದರ ಸಂಪೂರ್ಣ ಲಾಭ ಪಡೆಯುತ್ತಾರೆ.ತಮ್ಮ ಹತ್ತಿರ ಬಂದ ಅಧಿಕಾರಿಗಳ ಹತ್ತಿರ ಲಕ್ಷಗಟ್ಟಲೆ ಹಣ ಕಿತ್ತುಕೊಂಡು,ಇಲ್ಲಿದ್ದ ಅಧಿಕಾರಿಯನ್ನು ಎತ್ತಂಗಡಿ ಮಾಡಿಸಿ ಹಣ ಕೊಟ್ಟ ಅಧಿಕಾರಿಯನ್ನು ಅಲ್ಲಿ ಪ್ರತಿಷ್ಟಾಪನೆ ಮಾಡಿ ಬಿಡುತ್ತಾರೆ.ಅದರಲ್ಲೂ ಮಲ್ಲೇಶ್ವರಂ ನಂತಹ ಪೋಲಿಸ್ ಸ್ಟೇಷನ್ ನಲ್ಲಿ ಟೇಬಲ್ ಕೆಳಗಿನ ಉತ್ಪನ್ನವೂ ಜಾಸ್ತಿ ಇದ್ದಿದರಿಂದ,ಆ ಪೋಲಿಸ್ ಸ್ಟೇಷನ್ ಗೆ ಬರಲು ಕನಿಷ್ಠ ಹದಿನೈದರಿಂದ ಇಪ್ಪತ್ತು ಲಕ್ಷ ರೂಪಾಯಿಯನ್ನಾದರೂ ಲಂಚದ ರೂಪದಲ್ಲಿ ಕೊಡಬೇಕಾಗಿತ್ತು.ಈ ವ್ಯವಸ್ಥೆಯ ಬಗ್ಗೆ ಚೆನ್ನಾಗಿ ಪರಿಚಯವಿದ್ದ ರಂಗರಾವ್ ಅವರು,ರಘುವನ್ನು ಮಲ್ಲೇಶ್ವರಂಗೆ ವರ್ಗಾವಣೆ ಮಾಡಿಸಬೇಕೆಂದರೆ ಅಲ್ಲಿನ ಶಾಸಕ  ರಾಜಶೇಖರಯ್ಯನನ್ನು ಒಲೈಸಬೇಕು ಎಂಬ ಸತ್ಯ ತಿಳಿದಿತ್ತು.ಆದ ಕಾರಣ ರಘುವನ್ನು ಕರೆದುಕೊಂಡು,ರಂಗರಾವ್ ಅವರು ಮಲ್ಲೇಶ್ವರಂ ಶಾಸಕನ ಮನೆಗೆ ನಡೆದರು.ಶಾಸಕ ಮಹಾಶಯ ಆಗ ತಾನೇ ಊಟ ಮುಗಿಸಿಕೊಂಡು ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದನು.ಒಳಗೆ ಹೋದ ರಂಗರಾವ್ ಅವರು ರಾಜಶೇಖರಯ್ಯ ನೊಡನೆ ತಮ್ಮಿಬ್ಬರ ಪರಿಚಯಮಾಡಿಕೊಂಡರು.ಆಗ ರಾಜಶೇಖರಯ್ಯ,

"ಹಾಂ..ಬನ್ನಿ ಬನ್ನಿ.....ಏನು ಸಮಾಚಾರ ? ನನ್ನಿಂದ ಏನಾಗಬೇಕಾಗಿತ್ತು?",ಎಂದು ಎಲ್ಲ ರಾಜಕಾರಣಿಗಳ ಹಾಗೆ ಕೃತಕ ಸೌಜನ್ಯ ತೋರಿದನು.ಆಗ ರಂಗರಾವ್ ಅವರು,

"ಏನಿಲ್ಲ ಸರ್.....ರಘು ವೈಟ್ ಫೀಲ್ಡ್ ಸ್ಟೇಷನ್ ನಲ್ಲಿ ಕೆಲಸ ಮಾಡ್ತಾ ಇದಾನೆ....ಅವನಿಗೆ ಮಲ್ಲೇಶ್ವರಂ ಸ್ಟೇಷನ್ ವರ್ಗಾವಣೆ ಮಾಡಿಸಿಕೊಳ್ಳಬೇಕಾಗಿದೆ...ಅದೇನೋ ಅವನಿಗೆ ನಿಮ್ಮ ಕೆಳಗೆ ಕೆಲಸ ಮಾಡುವ ಹುಮ್ಮಸ್ಸು...ಅದಕ್ಕೆ ದಯವಿಟ್ಟು ತಾವು ದೊಡ್ಡ ಮನಸ್ಸು ಮಾಡಿ ಶಿಫಾರಸ್ಸು ಪತ್ರ ಕೊಡಬೇಕು..." ಎಂದು ಹಸಿ ಸುಳ್ಳೊಂದನ್ನು ತೇಲಿ ಬಿಟ್ಟರು. ಅವರಿಗೆ ಗೊತ್ತಿತ್ತು ರಾಜಕಾರಣಿಗಳು ಜಯಕಾರ ಹಾಕಿದರೆ ಕೆಲಸ ಸಲೀಸಾಗಿ ಆಗುತ್ತದೆಂದು.ಇನ್ನೋದೆನೆಂದರೆ,ವಿನಯನ ಕೊಲೆಯ ಹಿಂದ ಯಾವುದೊ ದೊಡ್ಡ ವ್ಯಕ್ತಿಯ ಕೈವಾಡವಿದ್ದಿದರಿಂದ ಅವರು ನಿಜ ಸಂಗತಿಯನ್ನು ರಾಜಶೇಖರಯ್ಯನಿಗೆ  ತಿಳಿಸಿದ್ದಿದ್ದರೆ ವಿನಯನ ಕೇಸು ಕೈ ಬಿಟ್ಟು ಹೋದಂತಾಗುತ್ತಿತ್ತು.ಅದಕ್ಕೆ ಅವರು "ನಿಮ್ಮ ಕೆಳಗೆ ಕೆಲಸ ಮಾಡುವ ಹುಮ್ಮಸ್ಸು.." ಎಂದು ಹೇಳಿದರು.ಇದನ್ನು ಕೇಳಿ ಉಬ್ಬಿ ಹೋದ ರಾಜಶೇಖರಯ್ಯ,
"ಒಹ್ ಗುಡ್ ಗುಡ್.....ಆದರೆ ಸುಮ್ನೆ ಹೆಂಗೆ ಶಿಫಾರಸ್ಸು ಪತ್ರ ಕೊಡೋಕಾಗತ್ತೆ ದ್ಯಾವ್ರು ? ಈಗಾಗಲೇ ಆ ಮಲ್ಲೇಶ್ವರಂ ಇನಸ್ಪೆಕ್ಟೆರ್ ೧೫ ಲಕ್ಷ ಕೊಟ್ಟಿದ್ದಾನೆ....ಅದಕ್ಕಿಂತ ಸ್ವಲ್ಪ ಹೆಚ್ಚು ಕಡಿಮೆ ಕೊಟ್ಟರೆ ಶಿಫಾರಸ್ಸು ಪತ್ರ ಕೊಡೋಕೆ ತಕರಾರೇನೂ ಇಲ್ಲ..." ಎಂದು ತನ್ನ ಹಲ್ಲು ಗಿಂಜಿದನು.ಎಷ್ಟೇ ಆದರೂ ರಾಜಕಾರಣಿ ಅಲ್ಲವೇ ಹಣ ಎಂದರೆ ಬಾಯಿ ಬಿಡಲೇಬೇಕು.ಈ ಮಾತುಗಳನ್ನು ಕೇಳಿ ರಘುವಿನ ಮುಖ ಬಿಳಿಚಿಕೊಂಡು ಹೋಯಿತು.೧೫ ಲಕ್ಷ ರೂಪಾಯಿ!!!! ಅಬ್ಬಾ!!!! ಅವನಿಗೆ ತಲೆ ತಿರುಗತೊಡಗಿತು.ಚಿಂತಾಕ್ರಾಂತನಾಗಿ ರಂಗರಾವ್ ಅವರ ಮುಖ ನೋಡಿದನು.ಅವರು ರಘುವಿಗೆ ಸುಮ್ಮನಿರುವಂತೆ ಕಣ್ಸನ್ನೆ ಮಾಡಿ, ರಾಜಶೇಖರಯ್ಯನನ್ನು ಉದ್ದೇಶಿಸಿ,
"ಸರ್....೧೫ ಲಕ್ಷ ಕೊಡುವಷ್ಟು ಶ್ರೀಮಂತನಲ್ಲ ರಘು...ದಯಮಾಡಿ ಸ್ವಲ್ಪ ಕರುಣೆ ತೋರಿಸಿ ಸರ್......ಹೇಗಿದ್ದರೂ....ನಾನು ಕೇಂದ್ರ ಸರ್ಕಾರದ ಮಂತ್ರಾಲಯಕ್ಕೆ ಹತ್ತಿರವಾಗಿ ಕೆಲಸ ಮಾಡುತ್ತೇನೆ....ನೀವು ಕೂಡ ಕೇಂದ್ರದ ರಾಜಕೀಯದತ್ತ ಒಲವು ತೋರಿಸುತ್ತಿದ್ದೀರಿ....ನಿಮ್ಮ ಪಾರ್ಟಿ ಅಧ್ಯಕ್ಷರು ನನಗೆ ತುಂಬಾ ಬೇಕಾದವರು.....ನೋಡಿ ಈಗ ಸ್ವಲ್ಪ ದಯೆ ತೋರಿದರೆ...ನಿಮ್ಮ ರಾಜಕೀಯ ಭವಿಷ್ಯಕ್ಕೆ ಸಹಾಯವಾಗುತ್ತದೆ..." ಎಂದು ರಾಜಶೇಖರಯ್ಯನ ಎದೆಗೆ ನೇರವಾಗಿ ಹೊಡೆದರು.ಆಗ ಶಾಸಕ ಮಹೋದಯನಿಗೆ ಎಚ್ಚರವಾದಂತಾಗಿ,
"ನೀವು ಹೇಳೋದ್ರಲ್ಲೂ ಪಾಯಿಂಟ್ ಐತೆ ಸ್ವಾಮಿ....ಆದರೂ ಸ್ವಲ್ಪ ವಿಚಾರ ಮಾಡಿ.....ಕಡೆಗೆ ಒಂದು ೫ ಲಕ್ಷನದ್ರು ಕೊಡೊ ಹಂಗೆ ಮಾಡಿ....ಏನೋ ನಿಮ್ಮಂತವರ ಹೆಸರು ಹೇಳಿ ದೀಪ ಹಚ್ತೀನಿ....",ಎಂದು ಹೇಳಿದನು.ರಾಜಕಾರಣಿಗಳ ಜಾತಿಯೇ ಹಾಗೆ ಒಂದು ರೂಪಾಯಿ ಸಿಕ್ಕರೂ ಅದನ್ನು ಬಿಡದಂತಹ ಜಾತಿ ಅದು.ರಘುವಿಗೆ ೫ ಲಕ್ಷ ರೂಪಾಯಿ ಕೊಡುವದು ಏನೂ ಕಷ್ಟವಾಗಿರಲಿಲ್ಲ.ಅವನು ಮುಖ ಅರಳಿಸಿ ರಂಗರಾವ್ ಅವರನ್ನು ನೋಡಿದನು.ರಂಗರಾವ್ ಅವರಿಗೆ ಅವನ ಮುಖದಲ್ಲಿನ ಒಪ್ಪಿಗೆ ಸೂಚಿಸುವ ಭಾವವನ್ನು ನೋಡಿ ಮುಗುಳ್ನಗೆಯಿಂದ,
"ಸರಿ ಬಿಡಿ ರಾಜಶೇಖರಯ್ಯ ಅವರೇ...ನಮ್ಮ ಹುಡುಗ ನಿಮಗೆ ಹಣ ತಲುಪಿಸುತ್ತಾನೆ..ದಯವಿಟ್ಟು ಇದೊಂದು ಉಪಕಾರ ಮಾಡಿ...",ಎಂದು ಅಲ್ಲಿಂದ ಹೊರಡಲು ಅನುವಾದರು.ಆಗ ರಾಜಶೇಖರಯ್ಯ,
"ಸರಿ...ಬಿಡಿ..ಹಣ ಬಂದರೆ ನಿಮ್ಮ ಕೆಲಸ ಆದ ಹಾಗೆಯೇ.....ಹಂಗೇನೆ....ಪಾರ್ಟಿ ಅಧ್ಯಕ್ಷರ ಹತ್ರ...ನಮ್ಮ ಪಾಯಿಂಟ್ ನು ಹೇಳಿ ದೆಹಲಿ ರಾಜಕೀಯಾನೂ ಕುದುರೋ ಹಾಗೆ ಮಾಡಿ ದ್ಯಾವ್ರು..." ಎಂದನು....ಅದಕ್ಕೆ ರಂಗರಾವ್,
"ಆಯ್ತು ಬಿಡಿ ಸ್ವಾಮಿ....ನಿಮ್ಮ ಕೆಲಸಾನೂ ಆದ ಹಾಗೆಯೆ...",ಎಂದು ರಾಜಶೇಖರಯ್ಯನಿಗೆ ವಂದಿಸಿ ರಘುವಿನೊಡನೆ ಹೊರಟನು.ರಘುವಿಗೆ ತನ್ನ ಕಾರ್ಯ ಸಾಧನೆಯ ಮೊದಲನೆಯ ಮೆಟ್ಟಿಲು ಹತ್ತಿದಂತೆ ಆಯಿತು.ಅವನು ರಂಗರಾವ್ ಅವರನ್ನು ಮನಪೂರ್ತಿಯಾಗಿ ವಂದಿಸಿದನು.ಅವರಿಲ್ಲದೆ ಹೋಗಿದ್ದರೆ ಅವನ ವರ್ಗಾವಣೆ ಮರಿಚೀಕೆಯಾಗಿ ಉಳಿದುಬಿಡುತ್ತಿತ್ತು.ಹಾಗೆಯೇ ವಿನಯನ ಕೊಲೆಯ ಕೇಸು ಮುಚ್ಚಿಹೊಗುತ್ತಿತ್ತು.ರಘುವಿನ ಕೆಲಸವನ್ನು ಮುಗಿಸಿ ರಂಗರಾವ್ ಅವರು ಏನಾದರೂ ಸಹಾಯ ಬೇಕಾದರೆ ಫೋನ್ ಮಾಡಲು ತಿಳಿಸಿ ದೆಹಲಿಗೆ ಹೊರಟು ಹೋದರು.ರಘು ೫ ಲಕ್ಷ ರೂಪಾಯಿ ಹೊಂದಿಸಿ ರಾಜಶೇಖರಯ್ಯನಿಗೆ ಕೊಟ್ಟನು.ರಘುವಿನ ವರ್ಗಾವಣೆ ಮಲ್ಲೇಶ್ವರಂ ಪೋಲಿಸ್ ಸ್ಟೇಷನ್ ಗೆ ಆಯಿತು.
*******************************************************************************
ಅಧ್ಯಾಯ-3-ಮುಗಿಯಿತು.
ಅಧ್ಯಾಯ-4-ಮುಂದಿನ ವಾರ.
ಅಧ್ಯಾಯ-2-ಲಿಂಕ್ :

 http://sampada.net/%E0%B2%B5%E0%B3%8D%E0%B2%AF%E0%B3%82%E0%B2%B9%E0%B2%AA%E0%B2%A4%E0%B3%8D%E0%B2%A4%E0%B3%87%E0%B2%A6%E0%B2%BE%E0%B2%B0%E0%B2%BF-%E0%B2%95%E0%B2%BE%E0%B2%A6%E0%B2%82%E0%B2%AC%E0%B2%B0%E0%B2%BF-%E0%B2%85%E0%B2%A7%E0%B3%8D%E0%B2%AF%E0%B2%BE%E0%B2%AF-2

 
 

 

Comments