ವ್ಯೂಹ(ಪತ್ತೇದಾರಿ ಕಾದಂಬರಿ)-ಭಾಗ-6
ರಘು ಸುನಿತಾಳ ವಿಳಾಸವನ್ನು ತೆಗೆದುಕೊಂಡು ನೇರವಾಗಿ ತನ್ನ ಮನೆಗೆ ಬಂದನು.ಮನೆಗೆ ಬಂದು ಒಂದು ಪುಟ್ಟ ಬ್ಯಾಗಿನಲ್ಲಿ ಒಂದೆರಡು ಜೊತೆ ಬಟ್ಟೆ,ಪಿಸ್ತೂಲು ,ಚಿಕ್ಕದೊಂದು ಕತ್ತಿ,ವೈರ್ ಲೆಸ್ ಸೆಟ್ ಮತ್ತು ಒಂದು ಚಿಕ್ಕ ಫಸ್ಟ್ ಎಡ್ ಕಿಟ್ ಗಳನ್ನು ಇಟ್ಟುಕೊಂಡನು.ಹಾಗೆಯೇ ಇಂಟರ್ನೆಟ್ ತೆಗೆದು ಹಾಸನಕ್ಕೆ ಒಂದು ರೈಲು ಟಿಕೆಟ್ ರಿಸರ್ವ್ ಮಾಡಿಸಿದನು.ಮನೆ ದೀಪಗಳನ್ನೆಲ್ಲ ಆರಿಸಿ,ಮನೆಗೆ ಬೀಗ ಹಾಕಿ ಗೇಟಿನತ್ತ ಒಂದೆರಡು ಹೆಜ್ಜೆ ಇಡುತ್ತಿರುವಾಗಲೇ ಹಿಂದಿನಿಂದ ಯಾರೋ ಒಬ್ಬರು ರಘುವಿನ ತಲೆಯ ಮೇಲೆ ಎಂಥದೋ ಒಂದು ವಸ್ತುವಿನಿಂದ ಜೋರಾಗಿ ಪ್ರಹಾರ ಮಾಡಿದರು.ತಕ್ಷಣವೇ ರಘು "ಅಮ್ಮಾ!!!!" ಎಂದು ಕೂಗಿಕೊಂಡು ಪ್ರಜ್ಞೆ ತಪ್ಪಿ ನೆಲಕ್ಕೆ ಬಿದ್ದನು.ರಘುವನ್ನೇ ಹಿಂಬಾಲಿಸುತ್ತಿದ್ದ ಆ ಉರಿಯುವ ಕಣ್ಣಿನ ವ್ಯಕ್ತಿಯ ಕೈಗಳು ಈ ಕೃತ್ಯವನ್ನೆಸಗಿದ್ದವು.
ಸ್ವಲ್ಪ ಸಮಯದ ನಂತರ ರಘುವಿಗೆ ಎಚ್ಚರವಾಯಿತು.ರಘು ನಿಧಾನವಾಗಿ ತನ್ನ ಕಣ್ಣುಗಳನ್ನು ತೆರೆಯಲು ಯತ್ನಿಸಿದನು.ಆದರೆ ಎಷ್ಟೇ ಪ್ರಯತ್ನಪಟ್ಟರೂ ರಘುವಿಗೆ ಕಣ್ಣುಗಳನ್ನು ತೆರೆಯಲು ಆಗಲಿಲ್ಲ.ಕಣ್ಣಿಗೆ ಗಾಢವಾದ ಕತ್ತಲು ಕವಿದಿತ್ತು.ರಘುವಿಗೆ ತಾನು ಕಣ್ಣುಗಳನ್ನು ಕಳೆದುಕೊಂಡು ಬಿಟ್ಟೆನೋ ಏನೋ ಎಂಬ ಭಯ ಶುರುವಾಯಿತು.ಆದರೆ ಸ್ವಲ್ಪ ಸಮಯದ ನಂತರ ರಘುವಿಗೆ,ತನ್ನ ಕಣ್ಣುಗಳನ್ನು ಕಪ್ಪು ಬಟ್ಟೆಯಿಂದ ಕಟ್ಟಲಾಗಿದೆ ಎಂಬುದು ಅರಿವಿಗೆ ಬಂದಿತು.ನಿಧಾನವಾಗಿ ಕೈ ಕಾಲುಗಳನ್ನು ಆಡಿಸಲು ಪ್ರಯತ್ನಪಟ್ಟನು.ಆದರೆ ಅವನ ಕೈ ಕಾಲುಗಳನ್ನು ಕೂಡ ಬಲವಾಗಿ ಹಗ್ಗದಿಂದ ಕಟ್ಟಲಾಗಿತ್ತು.ರಘು ತಲೆಯನ್ನು ಕೊಂಚ ಅತ್ತಿತ್ತ ಅಲುಗಾಡಿಸಿದಾಗ ಸಾಯುವ ಹಾಗೆ ನೋವಾಯಿತು.ತಲೆಗೆ ಬಲವಾದ ಪೆಟ್ಟು ಬಿದ್ದುದರಿಂದ ತಲೆ ತುಂಬಾ ನೋಯುತ್ತಿತ್ತು.ಹಾಗೆ ಹಿಂಭಾಗದ ಕತ್ತಿನ ಮೇಲೆ ಯಾವುದೋ ದ್ರವ ಇಳಿದುಹೊದಂತೆ ಭಾಸವಾಗುತ್ತಿತ್ತು.ಇದರಿಂದ ರಘುವಿಗೆ ತಲೆಗೆ ಬಿದ್ದ ಪೆಟ್ಟಿನಿಂದಾಗಿ ಸ್ವಲ್ಪ ರಕ್ತಸ್ರಾವವಾಗಿದೆ ಎಂದು ತಿಳಿಯಿತು.ಹಾಗೆಯೇ ನೆಲದ ಮೇಲೆ ಕೊಂಚ ತೆವಳಿದಾಗ ಸಾವಿರಾರು ಸೂಜಿಗಳು ದೇಹವನ್ನು ಚುಚ್ಚಿದಂತಾಯಿತು.ಇಷ್ಟು ಹೊತ್ತು ಆ ಭಂಗಿಯಲ್ಲಿ ಮಲಗಿದ್ದರಿಂದ ದೇಹವೆಲ್ಲ ಜೋಮು ಹಿಡಿದುಕೊಂಡಿತ್ತು.ಆಗ ಚಳಿಗಾಲವಾಗಿದ್ದರಿಂದ ನೆಲವೂ ಕೂಡ ಮಂಜಿನಂತೆ ತಣ್ಣಗೆ ಕೊರೆಯುತ್ತಿತ್ತು.ಹಾಗೆಯೇ ರಘು ನಿಧಾನವಾಗಿ ತೆವಳುತ್ತಿರಬೇಕಾದರೆ ಏನೋ ಸ್ವಲ್ಪ ಸದ್ದಾಯಿತು.ರಘು ಯಾರೋ ತನ್ನ ಹತ್ತಿರ ಬರುತ್ತಿದ್ದಾರೆ ಎಂದು ಊಹಿಸಿ ಮೊದಲಿನಂತೆಯೇ ನಿಶ್ಚಲವಾಗಿ ಬಿದ್ದುಕೊಂಡನು.
ಆ ಸಣ್ಣ ಸದ್ದಿನ ಹಿಂದೆಯೇ ಯಾರೋ ನಡೆದುಕೊಂಡು ಬರುವ ಸದ್ದು ಕೇಳಿಸಿತು.ರಘು ತನ್ನ ಮೈಯೆಲ್ಲಾ ಕಿವಿಯಾಗಿಸಿಕೊಂಡು ಅತ್ಯಂತ ಜಾಗರೂಕನಾಗಿ ಆ ಸದ್ದುಗಳನ್ನು ಕೇಳತೊಡಗಿದನು.ಸ್ವಲ್ಪ ಸಮಯದಲ್ಲಿಯೇ ಆ ವ್ಯಕ್ತಿಯ ಮೊಬೈಲ್ ರಿಂಗಣಿಸತೊಡಗಿತು.ಆ ವ್ಯಕ್ತಿ ಕಾಲ್ ರಿಸೀವ್ ಮಾಡಿ ಮಾತನಾಡತೊಡಗಿದನು.
"ಹಲೋ....ಹಾ ಹೇಳಿ ಸಾಯೇಬ್ರೆ..........ಹಾಂ...ಅವನನ್ನ ಬಡಿದು ಹಾಕಿವ್ನಿ.........ಇಲ್ಲೇ ಪಕ್ಕದ ಕೋಣೆಲೇ......ಕೂಡಿ ಹಾಕಿದಿವಿ......ನೀವೇನೂ ಚಿಂತೆ ಮಾಡ ಬ್ಯಾಡಿ ಬುದ್ದಿ.....ಅವನ್ನ ಕೈ ಕಾಲು ಕಟ್ಟಿ,ಕಣ್ಣು ಬ್ಯಾರೆ ಕಟ್ಟಿವ್ನಿ....ಅವಂಗೆ ಏನೂ ಕಾಣಾಕಿಲ್ಲ....ಕೋಣೆಗೂ ದೊಡ್ಡ ಬೀಗಾನೆ ಹಾಕಿವ್ನಿ.......ಹಾಂ.......ಕೋಣೆಗೆ ಯಾವ್ದು ಕಿಟಕಿ ಇಲ್ಲ ಸಾಯೇಬ್ರೆ......ಹಾಂ.....ಏನಂದ್ರಿ ಅವನ್ನ ಈವತ್ತೇ ಇಲ್ಲೇ ಮುಗಿಸಬೇಕಾ ?........ಹಮ್ಮ್ಮ್ಮ್.....ಬ್ಯಾಡ ಬುದ್ದಿ.......ಇಲ್ಲೇ ಮುಗಿಸದ್ರೆ ಸುಮ್ನೆ ತೊಂದ್ರೆ.....ಅದು ಬ್ಯಾರೆ ಪೋಲಿಸ್ ಹೈದ ಅವ್ನು....ಸುಮ್ನೆ ತೊಂದರೆಗೆ ಸಿಕ್ಕ ಹಾಕೊತಿವಿ.....ಕ್ವಾಣನ ಕುಂಟೆ ಬಂಗಲೆನಲ್ಲಿ ಮುಗ್ಸೋಣ ಬುಡಿ.......ಇವತ್ತ ರಾತ್ರೆನೆ ಪೈಸಲ್ ಮಾಡ ಬುಡೋಣ......" ಎಂದಿತು ಆ ಧ್ವನಿ.ಇದನ್ನು ಕೇಳಿದ ರಘುವಿಗೆ ಗಂಟಲ ಪಸೆಯೇ ಆರಿಹೊದಂತೆ ಅನಿಸಿತು.ಅಂದರೆ ಈಗ ಫೋನಿನಲ್ಲಿ ಮಾತನಾಡಿದ ವ್ಯಕ್ತಿಯೇ ತನ್ನ ಮೇಲೆ ಹಲ್ಲೆ ಮಾಡಿದವನು ಎಂದು ರಘುವಿಗೆ ಸ್ಪಷ್ಟವಾಯಿತು.ಅವನ ಮಾತುಗಳನ್ನು ಕೇಳಿ ಇಂದು ರಾತ್ರಿಯೇ ತನ್ನ ಕಥೆ ಮುಗಿಯಿತು ಎಂದು ತಿಳಿದು ರಘುವಿನ ಹೃದಯ ಜೋರಾಗಿ ಬಡಿದು ಕೊಳ್ಳಲು ಶುರುಮಾಡಿತು.ಆದರೆ ಒಂದು ಸಮಾಧಾನದ ಸಂಗತಿ ಎಂದರೆ ಈಗ ಅವನನ್ನು ಯಾರೂ ಗಮನಿಸುತ್ತಿರಲಿಲ್ಲ.ಏಕೆಂದರೆ ಇವನನ್ನು ಒಂದು ಕೊಠಡಿಯಲ್ಲಿ ಕೂಡಿಹಾಕಿ ಆ ವ್ಯಕ್ತಿ ಇನ್ನೊಂದು ಕೊಠಡಿಯಿಂದ ಮಾತನಾಡುತ್ತಿದ್ದನು.ಆದ್ದರಿಂದ ರಘು ಆ ವ್ಯಕ್ತಿಯ ಮಾತುಗಳನ್ನು ಇನ್ನಷ್ಟು ಸ್ಪಷ್ಟವಾಗಿ ಕೇಳಲು ಧ್ವನಿ ಬರುತ್ತಿದ್ದ ದಿಕ್ಕಿನೆಡೆಗೆ ಸದ್ದು ಮಾಡದೆ ತೆವಳತೊಡಗಿದನು.ಪಕ್ಕದ ಕೋಣೆಯಲ್ಲಿ ಇನ್ನೂ ಮಾತು ಮುಂದುವರೆದಿತ್ತು.
"ಹಾಂ....ಸಾಯೇಬ್ರೆ......ಈಗ ನಾನು ಒರಗಡೆ ಓಗಿ ಊಟ ಮುಗಿಸ್ಗೊಂಡು ಬರ್ತೀನಿ......ಆ ಮ್ಯಾಗೆ ಇಲ್ಲೇ ಕಾವಲು ಕುಂತಿರ್ತೀನಿ....ನೀವ್ ಸಂಜೆ ನಿಮ್ ಗಾಡಿ ತುಗೊಂದ್ ಬನ್ನಿ....ಅವನ್ನ ಕ್ವಾಣನ್ ಕುಂಟೆ ಬಂಗಲೆಗೆ ಸಾಗಿಸ್ಬಿಡೋಣ...ಸರಿ ನಾ ಈಗ ಫೋನ್ ಮಡಗ್ತೀನಿ....ಸಂಜೆ ಫೋನ್ ಮಾಡ್ತಿವ್ನಿ..." ಎಂದು ಆ ವ್ಯಕ್ತಿ ಕಾಲ್ ಕಟ್ ಮಾಡಿದನು.
ಸ್ವಲ್ಪ ಹೊತ್ತಿನಲ್ಲಿಯೇ ರಘುವಿಗೆ,ಪಕ್ಕದ ಕೋಣೆಯ ವ್ಯಕ್ತಿ ರಘುವಿನ ಕೋಣೆಯ ಬೀಗ ತೆರೆಯುವ ಸದ್ದು ಕೇಳಿಸಿತು.ಆಗ ರಘು ಆದಷ್ಟು ವೇಗವಾಗಿ ಹಿಂದಕ್ಕೆ ತೆವಳಿ ಮೊದಲಿನಂತೆಯೇ ನಿಶ್ಚಲವಾಗಿ ಬಿದ್ದುಕೊಂಡನು.ಆ ವ್ಯಕ್ತಿ ಒಳಗೆ ಬಂದು ರಘು ಏನಾದರೂ ಎಚ್ಚರಗೊಂಡಿದ್ದಾನೋ ಏನೋ ಎಂದು ಪರೀಕ್ಷಿಸಲು ಜೋರಾಗಿ ರಘುವಿಗೆ ಒದ್ದನು.ಅವನು ಒದ್ದಾಗ ರಘುವಿಗೆ ತುಂಬಾ ನೋವಾಯಿತು.ಆದರೂ ರಘು ಸಂಯಮದಿಂದ ಆ ನೋವನ್ನು ತಡೆದುಕೊಂಡನು.ರಘು ಕಮಕ್ ಕಿಮಕ್ ಅನ್ನದಿದ್ದುದನ್ನು ನೋಡಿ ಆ ವ್ಯಕ್ತಿ ರಘು ಎಚ್ಚರಗೊಂಡಿಲ್ಲವೆಂದು ನಿರ್ಧರಿಸಿ ಮತ್ತೆ ಬಾಗಿಲು ಹಾಕಿಕೊಂಡು ಬೀಗ ಜಡಿದನು.ಸ್ವಲ್ಪ ಸಮಯದ ನಂತರ ಹೊರಗಿನ ಕೋಣೆಯ ಬಾಗಿಲು ಹಾಕಿಕೊಂಡು ಬೀಗ ಹಾಕಿದ ಸದ್ದು ಕೇಳಿಸಿತು.ಆಗ ರಘುವಿನ ಬುದ್ದಿ ಚುರುಕಾಗಿ ಕೆಲಸ ಮಾಡತೊಡಗಿತು.ರಘು ಹೇಗಾದರೂ ಮಾಡಿ ಆ ವ್ಯಕ್ತಿ ಮರಳಿ ಬರುವದರೊಳಗಾಗಿ ಅಲ್ಲಿಂದ ತಪ್ಪಿಸಿಕೊಳ್ಳಬೇಕೆಂದು ನಿರ್ಧರಿಸಿದನು.ರಘು ಜೋರಾಗಿ ಅತ್ತಿಂದಿತ್ತ ತೆವಳತೊದಗಿದನು.ಹಾಗೆ ತೆವಳಿದಾಗ ರಘುವಿನ ಕೈಗೆ ಯಾವುದೋ ಒಂದು ಚೂಪಾದ ವಸ್ತು ತಗುಲಿ ರಘುವಿಗೆ ತುಂಬಾ ನೋವಾಯಿತು.ರಘು ಹಿಂದೆ ಕಟ್ಟಿದ್ದ ಆ ಕೈಗಳಿಂದ ಆ ವಸ್ತುವನ್ನು ಪರೀಕ್ಷಿದಾಗ ಅದು ಒಂದು ಮೊಳೆ ಎಂದು ಗೊತ್ತಾಯಿತು.ಈಗ ರಘುವಿನ ಸಂತೋಷಕ್ಕೆ ಪಾರವೇ ಇರಲಿಲ್ಲ.ರಘು ನಿಧಾನವಾಗಿ ಕೈಗಳಿಗೆ ಕಟ್ಟಿದ್ದ ಹಗ್ಗವನ್ನು ಆ ಮೊಳೆಯ ಮೊನೆಗೆ ತಂದು,ವೇಗವಾಗಿ ಆ ಹಗ್ಗವನ್ನು ಆ ಮೊನೆಗೆ ಉಜ್ಜತೊಡಗಿದನು.ಸ್ವಲ್ಪ ಹೊತ್ತಿನಲ್ಲಿಯೇ ಆ ಹಗ್ಗ ತುಂಡಾಗಿ ಅವನ ಕೈಗಳು ಸ್ವತಂತ್ರವಾದವು.ಹಾಗೆಯೇ ರಘು ತನ್ನ ಕೈಗಳ ಸಹಾಯದಿಂದ ಕಾಲಿಗೆ ಕಟ್ಟಿದ್ದ ಹಗ್ಗ ಮತ್ತು ಕಣ್ಣು ಪಟ್ಟಿಗಳನ್ನು ಬಿಚ್ಚಿದನು. ಆ ಕೋಣೆಯನ್ನು ನೋಡಿದಾಗ ಅಲ್ಲಿ ಅತ್ಯಂತ ಕ್ಷೀಣವಾದ ಬೆಳಕಿತ್ತು.ಆ ಕೋಣೆಗೆ ಯಾವುದೇ ಕಿಟಕಿಗಳಿರಲಿಲ್ಲ.
ರಘು ಆ ಕೋಣೆಯನ್ನು ವಿವರವಾಗಿ ಪರೀಕ್ಷಿಸತೊಡಗಿದನು.ಆ ಕೋಣೆಯ ಒಂದು ಮೂಲೆಯಲ್ಲಿ ಒಂದು ತುಕ್ಕು ಹಿಡಿದ ಸಲಾಕೆ ಬಿದ್ದಿತ್ತು.ರಘು ಬೇಗನೆ ಆ ಸಲಾಕೆಯನ್ನು ತೆಗೆದುಕೊಂಡು ತನ್ನ ಎಲ್ಲ ಬಲವನ್ನು ಒಗ್ಗೊಡಿಸಿ ಜೋರಾಗಿ ಆ ಕೋಣೆಯ ಬಾಗಿಲಿಗೆ ಹೊಡೆದನು.ಹೀಗೆ ಒಂದೆರಡು ಹೊಡೆತಗಳನ್ನು ಹೊಡೆಯುವದರ ಒಳಗಾಗಿ ಆ ಬಾಗಿಲು ಉದ್ದಕ್ಕೆ ಸೀಳಿ ಹೋಯಿತು.ಇನ್ನೆರಡು ಹೊಡೆತಗಳಿಗೆ ಆ ಬಾಗಿಲು ಸಂಪೂರ್ಣವಾಗಿ ಮುರಿದು ಹೋಯಿತು.ಹೀಗೆಯೇ ರಘು ಹೊರಗಿನ ಬಾಗಿಲನ್ನು ಮುರಿದು ಹೊರಗೆ ಕಾಲಿಟ್ಟಾಗ ಅವನ ಕಾಲಿಗೆ ಏನೋ ಚುಚ್ಚಿದಂತಾಗಿ ರಕ್ತ ಬರತೊಡಗಿತು.ಅದೇನೆಂದು ನೋಡಿದಾಗ ಅವನ ಕಾಲಿಗೆ ಚೂಪಾದ ಮೊಳೆಯೊಂದು ಚುಚ್ಚಿಕೊಂಡಿತ್ತು.ರಘು ವೇಗವಾಗಿ ಆ ಮೊಳೆಯನ್ನು ಕಿತ್ತೆಸೆದು,ಕುಂಟುತ್ತ ಓಡತೊಡಗಿದನು.ಹಾಗೆಯೇ ಓಡುತ್ತ ಆ ಮನೆಯ ಗುರ್ತುಗಳನ್ನು ನೆನಪಿಟ್ಟುಕೊಂಡನು.ಹಾಗೆಯೇ ಒಂದು ಬಸ್ ಸ್ಟಾಪಿಗೆ ಬಂದು ನೋಡಿದಾಗ ಅದು ಶೇಷಾದ್ರಿಪುರಂ ಏರಿಯಾ ಎಂದು ಗೊತ್ತಾಯಿತು.ಹಾಗೆ ಆ ಬಸ್ ಸ್ಟಾಪಿನಲ್ಲಿ ಕುಳಿತು ಸ್ವಲ್ಪ ಸುಧಾರಿಸಿಕೊಳ್ಳತೊಡಗಿದನು.ಆ ಬಸ್ ಸ್ಟಾಪಿನಲ್ಲಿದ್ದ ಎಲ್ಲರೂ ರಘುವನ್ನು ಯಾವುದೋ ಒಂದು ವಿಚಿತ್ರ ಪ್ರಾಣಿಯಂತೆ ನೋಡತೊಡಗಿದರು.ರಘು,ತಾನು ಸುನೀತಾಳನ್ನು ಭೇಟಿ ಮಾಡಲು ಹಾಸನಕ್ಕೆ ಹೊರಟಾಗ ತನ್ನ ಮೇಲೆ ಹಲ್ಲೆ ನಡೆಸಲಾಗಿದೆ.ಅಂದರೆ ಸುನಿತಾಳನ್ನು ಭೇಟಿ ಮಾಡಿದರೆ ಈ ಕೊಲೆಯ ರಹಸ್ಯ ಬಯಲಾಗುವದು.ಆದಷ್ಟು ಬೇಗ ತಾನು ಸುನಿತಾಳನ್ನು ಭೇಟಿ ಮಾಡಬೇಕೆಂದು ನಿರ್ಧರಿಸಿಕೊಂಡನು.ಅದಕ್ಕಾಗಿ ರೈಲು ಅಥವಾ ಬಸ್ಸಿನಲ್ಲಿ ಹೋದರೆ ಹೋದರೆ ತನಗೆ ಏನಾದರೂ ಅಪಾಯ ಸಂಭವಿಸೆಯೇ ಬಿಡುತ್ತದೆ.ಅದಕ್ಕಾಗಿ ಯಾವುದಾದರು ಖಾಸಗಿ ವಾಹನವನ್ನು ಬುಕ್ ಮಾಡಿ ಅದರಲ್ಲಿ ಹೋಗಬೇಕೆಂದುಕೊಂಡನು.ಆದರೆ ಅದಕ್ಕಾಗಿ ಹಣ ಬೇಕು.ರಘು ಹಣಕ್ಕಾಗಿ ತನ್ನ ಜೇಬುಗಳನ್ನು ತಡಕಾಡಿದನು.ಆದರೆ ಅವನನ್ನು ಕೂಡಿಹಾಕಿದ ವ್ಯಕ್ತಿ ಅವನ ಜೇಬುಗಳನ್ನು ಖಾಲಿ ಮಾಡಿದ್ದನು.ಆದರೆ ರಘು ಯಾವಾಗಲೂ ತನ್ನ ಪ್ಯಾಂಟಿನ ರಹಸ್ಯ ಜೇಬಿನಲ್ಲಿ ಒಂದು ಎ ಟಿ ಎಂ ಕಾರ್ಡು ಇಟ್ಟಿರುತ್ತಿದ್ದನು.ಆ ರಹಸ್ಯ ಜೇಬನ್ನು ತಡಕಾಡಿದಾಗ ಆ ಕಾರ್ಡು ಅಲ್ಲಿ ಭದ್ರವಾಗಿತ್ತು.ರಘು ಆ ಬಸ್ ಸ್ಟಾಪಿನಿಂದ ವೇಗವಾಗಿ ನಡೆದು ಅಲ್ಲಿಯೇ ಇದ್ದ ಒಂದು ಟ್ಯಾಕ್ಸಿ ಸ್ಟ್ಯಾಂಡ್ ಗೆ ಹೋಗಿ ಒಂದು ಟ್ಯಾಕ್ಸಿ ತೆಗೆದುಕೊಂಡು ಹಾಸನದ ಕಡೆಗೆ ದೌಡಾಯಿಸಿದನು.
****************************************************
ಅಧ್ಯಾಯ-6 -ಮುಗಿಯಿತು
ಅಧ್ಯಾಯ- 7-ಮುಂದಿನ ವಾರ
ಅಧ್ಯಾಯ -5 - ಕ್ಕೆ ಲಿಂಕ್
http://sampada.net/%E0%B2%B5%E0%B3%8D%E0%B2%AF%E0%B3%82%E0%B2%B9%E0%B2%AA%E0%B2%A4%E0%B3%8D%E0%B2%A4%E0%B3%87%E0%B2%A6%E0%B2%BE%E0%B2%B0%E0%B2%BF-%E0%B2%95%E0%B2%BE%E0%B2%A6%E0%B2%82%E0%B2%AC%E0%B2%B0%E0%B2%BF-%E0%B2%85%E0%B2%A7%E0%B3%8D%E0%B2%AF%E0%B2%BE%E0%B2%AF-5