ಶಂಕರಾನಂದ ಹೆಬ್ಬಾಳರ ಗಝಲ್ ಗಳ ಲೋಕ

ಶಂಕರಾನಂದ ಹೆಬ್ಬಾಳರ ಗಝಲ್ ಗಳ ಲೋಕ

ಕವನ

ಗಝಲ್-೧ 

ಕಾವ್ಯವನು ಬರೆದು ನಲಿದು

ಹಾಡುವೆನು ಸಖಿ|

ದಿವ್ಯದಲಿ ಹರಿದು ಬರಲು

ನೋಡುವೆನು ಸಖಿ||

 

ಛಂದಸ್ಸಿನ ನಿಯಮ ಅರಿತು

ಬರೆದು ತೋರಿಸುವೆ|

ಚಂದದಲ್ಲಿನ ಗಣಗಳಿಗೆ ಪ್ರಸ್ತಾರ

ಹಾಕುವೆನು ಸಖಿ||

 

ಲಯತಾಳ ಗೊತ್ತಿರದಿದ್ದರೂ ಸುಸ್ವರ

ನಾದದಲಿ ಆಲಾಪಿಸುವೆ|

‌ನಯನವನ್ನು ಪುಳಕಿಸಿ ತೆರೆದು

ನೋಡುವೆನು ಸಖಿ||

 

ರಾಗದ ಏರಿಳಿತ ಅನುಭವವಿಲ್ಲದಿದ್ದರೂ

ಮಧುರವಾಗಿ ಗುನುಗುವೆ|

ಮಾಗಿದ ಮನವನು ಗಾನದಲಿ

ತಿಳಿವೆನು ಸಖಿ||

 

ಸಂಗೀತದ ಪರಿಕರವಿಲ್ಲ ಗಾನಲಹರಿ

ಒಂದೆಸಮ ನಡೆದಿದೆ|

ರಂಗದಲಿ ಅಭಿನವ ಭಾಗವಂತಿಕೆ

ಅರಿವೆನು ಸಖಿ||

****************

ಗಝಲ್ ೨

ಬಟ್ಟಬಯಲಿನಲ್ಲಿ ಗುಡಾರ ಹಾಕಿ

ಬಾಳು ಸವೆಸಿಹೆವು ನಾವು|

ಜಗದ ಜಟ್ಟಿಯಂತೆ ಅಹರ್ನಿಶಿ

ಹೋರಾಡಿ ಬದುಕಿಹೆವು ನಾವು||

 

ವಾಸಿಸಲು ಸ್ವಂತ ಸೂರಿಲ್ಲದ

ಅಲೆಮಾರಿ ನಿರ್ಗತಿಕರು|

ಮೂರು ಕಾಸಿಗೆ ಕಬ್ಬಿಣವ ಕಿಚ್ಚಿನಲಿ

ಕಾಸುತ್ತ ಬಡಿದಿಹೆವು ನಾವು||

 

ಜೀವನದ ಉಯ್ಯಾಲೆಯ ಏರಿಳಿತದಿ

ಹಾಯಿದೋಣಿಯ ಪಯಣ|

ಲೋಕನೋಡದ ಹಸುಗೂಸುಗಳನ್ನು

ಕಂಕುಳಲ್ಲಿ ಸಾಕುತಿಹೆವು ನಾವು||

 

ಸುತ್ತಿಗೆ ,ಕಟ್ಟಿಗೆ, ಇದ್ದಿಲು ಕುಲುಮೆ

ಇವೆ ನಮಗೆ ಆಧಾರ|

ಮೈಬೆವರು ಸುರಿಸಿ ಮಕ್ಕಳ ಭವಿಷ್ಯ

ಚಿಂತಿಸಿ ಸೊರಗಿಹೆವು ನಾವು||

 

ಅಭಿನವನ ಕಾವ್ಯವದು ಬಣ್ಣಿಸಿದೆ

ವಾಸ್ತವ ಚಿತ್ರಣವನು|

ಚಿಂತೆಯಿಲ್ಲದೆ ತುತ್ತು ಕೂಳನ್ನು ಉಂಡು

ನೋವಲ್ಲಿ ಮಲಗಿಹೆವು ನಾವು||

 

ಗುಡಾರ- ಬಟ್ಟೆಯಿಂದ ಮಾಡಿದ ತಾತ್ಕಾಲಿಕ ವಸತಿ

-ಶಂಕರಾನಂದ ಹೆಬ್ಬಾಳ 

 

ಚಿತ್ರ ಕೃಪೆ: ಶಿವಕುಮಾರ ಕರಂಡಾಡಿ

 

ಚಿತ್ರ್