ಶಂಕರಾನಂದ ಹೆಬ್ಬಾಳರ ಮೂರು ಗಝಲ್ ಗಳು
ಗಝಲ್ ೧
ಒಳಗಿನ ಪ್ರೀತಿ ಹೇಳಾಕ ಕಾಯಕ ಹತ್ತಾಳ
ಇಲಕಲ್ಲ ಸೀರಿಯುಟ್ಟು|
ಅರಷಿಣ ಹಚ್ಕೊಂಡ ನಾಚ್ಕೊಂಡಾಳ
ಮೂಗಿನಮ್ಯಾಲೆ ನತ್ತಯಿಟ್ಟು||
ಹೊಳದಾವು ಜೋಡಿ ಮೀನಂಗ ನಿನ್ನ
ಕಣ್ಣ ಫಳಪಳ ಅಂತ|
ಮಧುಮಗಳಂಗ ಸಿಂಗಾರ ಮಾಡ್ಕೊಂಡ
ನಿಂತಾಳ ಕುಂಕುಮ ಹಣ್ಯಾಗಿಟ್ಟು||
ಗೆಳೆಯ ಬರತಾನಂತ ಬಾಗಲದಾಗ
ಬರುದಾರಿಯೊಳಗ ಅಡ್ಡ ನಿಲ್ಲಬ್ಯಾಡ|
ಮನಸ ಕದ್ದ ಚೆಲುವಾ ಬರೋ ಹಾದಿ
ನೋಡಕೊಂತ ಮೊಗದಾಗ ನಗುವಿಟ್ಟು||
ಹೊಸ ಹುಮ್ಮಸ್ಸಿನ್ಯಾಗ ಅಪ್ಪಿಕೊಂಡು
ನೆನೆಸಿ ನೆಲಗಡ್ಲಿಯಾಗಿನಿ ಕೇಳು|
ಹಸಿಮಣಿಮ್ಯಾಲೆ ನವವಧುವಿನಂಗ
ಸಿಂಗಾರಾಗಿ ಹಸರ ಬಳಿತೊಟ್ಟು||
ಗುಳೇದಗುಡ್ಡದ ಕುಬಸ ತೊಟಗೊಂಡು
ತುಟಿಕಚ್ಚಿ ಕರಿಯಾಕ ಹತ್ತಿನಿ |
ಉಸಿರ ಇರೋತನಕ ಅಭಿನವನ
ಹೃದಯದೊಳಗೆ ಇರತಾಳ ಮನಸ್ಸಿಟ್ಟು||
*****
ಗಝಲ್ ೨
ಗುರುವ ಎದೆಗೆ ತುಳಿದು ಸುಖವ
ಪಡುವೆಯಲ್ಲ ನೀನು|
ಹರನ ನೆನೆವ ಬಾಯಲಿ ಹೊಲಸು
ನುಡಿವೆಯಲ್ಲ ನೀನು||
ಪೊಗಳಿ ಪೇಳುತ ವಚನವ ಕೊಟ್ಟು
ಕಾಣದೆ ಹೋಗುವೆ |
ತೆಗಳಿ ನಡೆವ ಲೋಗರ ನಡುವೆಯೆ
ಮಡಿವೆಯಲ್ಲ ನೀನು||
ಪದವ ಕಲಿಸಿ ನಿಂತಿಹ ಹಿರಿಯರ
ಮಾನವನು ಕಳೆದಿರುವೆ|
ಕುದಿದ ಮನದಿ ಉಪ್ಪನು ಹಾಕುತ
ನಲಿವೆಯಲ್ಲ ನೀನು||
ಅಣಕಿಸಿ ಬಾಳುತ ಮೊಗಕೆ ಬಣ್ಣಹಚ್ಚಿ
ನಾಟಕವಾಡಿದ ನರ್ತಕ|
ಚಣದ ಆಷಾಢ ಭೂತಿಯಾಗಿ ಸೋಗನು
ಹಾಕುವೆಯಲ್ಲ ನೀನು||
ಲೋಕದ ನಿಯಮ ಸಾರುತ ಹೇಳಿಹುದು
ಅಭಿನವನ ಕವಿತೆಯದು|
ನಾಕವ ಅರಸಿ ಹೊರಡುತ್ತ ಸತ್ಯವನು
ಸುಡುವೆಯಲ್ಲ ನೀನು||
*****
ಗಝಲ್ ೩
ಕಲಿಯುವ ಸಮಯದಿ ಪ್ರೀತಿಯು
ಸೆಳೆಯುತಿದೆ ಗೆಳೆಯ|
ನಲಿಯುವ ವಯಸಲಿ ಅಕ್ಷರವು
ಮರೆಯುತಿದೆ ಗೆಳೆಯ||
ಶರವೇಗದ ಜ್ಞಾನವಿಂದು ಮಸ್ತಕದಿ
ನೆಲೆಯನ್ನು ಅರಸಿದೆ|
ಗುರುವಿನ ಸನ್ಮಾರ್ಗದಲಿ ಸದ್ಗುಣ
ಬೆಳೆಯುತಿದೆ ಗೆಳೆಯ||
ಸಹಜ ಕಾಮನೆಗಳ ದೂರವಿರಿಸಿ
ಗುರಿಯನ್ನು ಸಾಧಿಸು|
ಬಹಳ ಸಮಯವಿರದೆ ನಿದ್ರೆಯು
ಎಳೆಯುತಿದೆ ಗೆಳೆಯ||
ತರುಣಿಯ ಒಲವ ನುಡಿಗಿಂದು
ಮರುಳಾಗಬೇಡ ಮೂರ್ಖ|
ದೊರೆಯಂತೆ ಮೆರೆಯುವ ಅವಕಾಶ
ಕರೆಯುತಿದೆ ಗೆಳೆಯ||
ಮನಸಿಗೆ ಮುದನೀಡುವ ಅಭಿನವನ
ಕವಿತೆಯನು ಆಲಿಸು|
ಕನಸು ನನಸಾಗಿ ಹೃದಯದಿ ಜ್ಞಾಪಕ
ಉಳಿಯುತಿದೆ ಗೆಳೆಯ||
-ಶಂಕರಾನಂದ ಹೆಬ್ಬಾಳ
