ಶಂಕೆ ಕಳೆಯಿತು

ಶಂಕೆ ಕಳೆಯಿತು

ಕವನ

ಸುತ್ತ ದನುಜೆಯರಿರಲು ಕಾವಲು

ಚಿತ್ತ ಸೀತೆಯ ನೋವ ಬಲೆಯೊಳು

ಚಿತ್ತದೊಲ್ಲಭನೆಂದು ಬರುವನು ತನ್ನ ಪತಿರಾಯ

ಇತ್ತ ಬಂದಿಹ ಸದ್ದನಾಲಿಸಿ

ಕತ್ತು ಹೊರಳಿಸಿ ನೋಡೆ ಜಾನಕಿ

ಬಿತ್ತು ಕಣ್ಣಿಗೆ ಸನಿಹ ವಂದಿಸಿ ನಿಂತ ಕಪಿವರ್ಯ

 

ದನುಜರಾಡುವ ಕಪಟ ನಾಟಕ-

-ವೆನುತ ರೋಷದಿ ಮಾತೆ ಸೀತೆಯು

ಕನಲಿ ಜರೆದಳು ತೊಲಗು ನಿಲ್ಲದೆ ನೀನು ನನ್ನಿದಿರು

ಹನುಮ ನಿಂತನು ನಮಿಸಿ ಪುನರಪಿ

ವಿನಯದಿಂದಲೆ ನುಡಿದ ಮಾತೆಗೆ

ಮನದ ಶಂಕೆಯ ತೊರೆದು ದಯೆಯನು ತಾಯೆ ನೀ ತೋರು

 

ಕರೆದು ನನ್ನನು ರಾಮ ನುಡಿದನು

ಶರಧಿ ಲಂಘಿಸಿ ಲಂಕೆ ಸೇರಲು

ಕರವ ಮುಗಿಯುವೆ ನಾನು ಹನುಮನು ರಾಮಕಿಂಕರನು

ಇರಿಸಿ ಕರದಲಿ ರಾಮ ಕಳುಹಿದ

ಗುರುತಿಗಾಗಿಯೆ ಮುದ್ರೆಯುಂಗುರ

ತೊರೆದು ಸಂಶಯ ನೋಡಿದೆನ್ನುತ ಹನುಮ ತೋರಿದನು

 

ಸೀತೆ ಮನಸಿನ ಶಂಕೆ ಕಳೆಯಿತು

ಮಾತೆ ಜಾನಕಿ ಹರಸಿ ಹನುಮನ

ಮಾತು ಹೊರಡದೆ ಖುಷಿಯ ಲಹರಿಯು ತಂತು ಕಣ್ಣೀರು

ಕೂತು ಕಳೆದೆನು ನೋವಿನೊಂದಿಗೆ

ಸೋತು ಸೊರಗಿದೆ ಪತಿಯನಗಲುತ

ಹೂತು ಹೋಗಿದೆ ಮನದ ನೆಮ್ಮದಿ ಪತಿಗೆ ನೀನರುಹು||

 

-ಪೆರ್ಮುಖ ಸುಬ್ರಹ್ಮಣ್ಯ ಭಟ್ 

ಚಿತ್ರ್