ಶಂಖದ ನೀರನ್ನು ಸಿಂಪಡಿಸುವುದೇಕೆ..?
ಧಾರ್ಮಿಕ ಶುಭ ಸಮಾರಂಭಗಳಲ್ಲಿ ತಪ್ಪದೇ ಬಳಸುವ ಶಂಖದ ಮಹತ್ವವೇನು..? ಇದರ ನೀರನ್ನು ಸಿಂಪಡಿಸುವುದರಿಂದಾಗುವ ಪ್ರಯೋಜನವೇನು..? ಇಲ್ಲಿದೆ ಶಂಖದ ಧಾರ್ಮಿಕ ಮತ್ತು ವೈಜ್ಞಾನಿಕ ಮಹತ್ವ.
*ಹಿಂದೂ ಧರ್ಮದಲ್ಲಿ ಶಂಖಕ್ಕೆ ವಿಶೇಷವಾದ ಸ್ಥಾನ - ಮಾನವನ್ನು ನೀಡಲಾಗಿದೆ. ಪೂಜೆಯಲ್ಲಿ, ಧಾರ್ಮಿಕ ಆಚರಣೆಯಲ್ಲಿ, ಹೋಮ - ಹವನಗಳಲ್ಲಿ, ತಾಂತ್ರಿಕ ಚಟುವಟಿಕೆಗಳಲ್ಲಿ ಮತ್ತು ವಿಜಯದಂತಹ ಪ್ರತಿಯೊಂದು ಧಾರ್ಮಿಕ ಕಾರ್ಯಗಳಲ್ಲೂ ಶಂಖವನ್ನು ಬಳಸಲಾಗುತ್ತದೆ. ಶಂಖವನ್ನು ಹಿಂದೂ ಧರ್ಮದಲ್ಲಿ ಭಗವಾನ್ ವಿಷ್ಣು ಮತ್ತು ದೇವಿ ಲಕ್ಷ್ಮಿಯ ಪ್ರತೀಕವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಶಂಖವು ಅತ್ಯಂತ ಪವಿತ್ರವಾದ ವಸ್ತುವಾಗಿದೆ.
*ಧಾರ್ಮಿಕ ಕಾರ್ಯಗಳಲ್ಲಿ ಶಂಖವನ್ನು ಊದುವುದು ಅಥವಾ ನುಡಿಸುವುದು ಒಂದು ಸಂಪ್ರದಾಯವಾಗಿದೆ. ದೇವಾಲಯಗಳಲ್ಲಿ ಆರತಿಯ ನಂತರ ಶಂಖದಿಂದ ನೀರನ್ನು ಭಕ್ತರ ಮೇಲೆ ಚಿಮುಕಿಸಲಾಗುತ್ತದೆ. ಶಂಖದಿಂದ ನೀರನ್ನು ಏಕೆ ಚಿಮುಕಿಸಲಾಗುತ್ತದೆ? ದೇವಾಲಯಗಳಲ್ಲಿ ಶಂಖದಿಂದ ನೀರನ್ನು ಚಿಮುಕಿಸುವಾಗ ಎಂದಾದರೂ ನೀವು ಅದರ ಕಾರಣವನ್ನು ತಿಳಿಯಲು ಇಚ್ಛಿಸಿದ್ದೀರಾ?
1) ಶಂಖದ ನೀರನ್ನು ಚಿಮುಕಿಸುವುದರ ಪ್ರಯೋಜನವೇನು?
ಬ್ರಹ್ಮವೈವರ್ತ ಪುರಾಣದ ಪ್ರಕಾರ, ಶಂಖದಲ್ಲಿ ನೀರನ್ನು ತುಂಬಿಸಿ ಅದಕ್ಕೆ ಶ್ರೀಗಂಧವನ್ನು ಸೇರಿಸಿ ಸಿಂಪಡಿಸುವುದರಿಂದ ನಮ್ಮ ಸುತ್ತಲಿನ ವಾತಾವರಣವು ಶುದ್ಧ ಮತ್ತು ಪಾವಿತ್ರತೆಯಿಂದ ತುಂಬಿರುತ್ತದೆ. ಯಾವಾಗಲೂ ಪೂಜಾ ಸ್ಥಳದಲ್ಲಿ ಶಂಖದಲ್ಲಿ ನೀರನ್ನು ಇಡಬೇಕು ಇದರಿಂದ ಪೂಜಾ ಸ್ಥಳವು ಪವಿತ್ರವಾಗಿರುತ್ತದೆ. ಶಂಖದ ನೀರನ್ನು ಮನೆಯಲ್ಲಿ ಸಿಂಪಡಿಸುವುದರಿಂದ ಮನೆಯಲ್ಲಿನ ಋಣಾತ್ಮಕ ಶಕ್ತಿಯು ದೂರಾಗುತ್ತದೆ ಮತ್ತು ಧನಾತ್ಮಕ ಶಕ್ತಿಯು ನೆಲೆಯಾಗುತ್ತದೆ. ಭಗವಾನ್ ವಿಷ್ಣು ಇದನ್ನು ಕೈಯಲ್ಲಿ ಹಿಡಿದಿರುವುದರಿಂದ ಇದು ಶುಭಸೂಚಕವೆಂಬ ನಂಬಿಕೆಯಿದೆ.
2) ಶಂಖದಿಂದ ಹೊರಹೊಮ್ಮುವ ಶಬ್ಧದ ಪ್ರಯೋಜನವೇನು?
ನೀರಿನೊಂದಿಗೆ ಶಂಖದಲ್ಲಿದ್ದ ಸಾತ್ವಿಕ ಶಕ್ತಿಯು ಶಂಖವನ್ನು ಊದಿದಾಗ ಅದರ ಶಬ್ಧದಿಂದ ಹೊರಹೊಮ್ಮುತ್ತದೆ. ಯಾವ ಮನೆಯಲ್ಲಿ ಶಂಖವನ್ನು ಊದಲಾಗುತ್ತದೆಯೋ ಆ ಮನೆಯಲ್ಲಿ ಹಣದ ಕೊರತೆಯಿರುವುದಿಲ್ಲವೆನ್ನುವ ನಂಬಿಕೆಯಿದೆ. ಶಂಖವನ್ನು ಊದುವುದರಿಂದ ಉಸಿರಾಟದ ಸಮಸ್ಯೆಗಳು ದೂರಾಗುತ್ತದೆ. ಶಂಖವನ್ನು ಊದುವುದರಿಂದ ಶ್ವಾಸಕೋಶಕ್ಕೆ ವ್ಯಾಯಾಮ ಸಿಕ್ಕಂತಾಗುತ್ತದೆ.
3) ಶಂಖದಿಂದಾಗುವ ವಾಸ್ತು ಪ್ರಯೋಜನವೇನು?
ವಾಸ್ತುಶಾಸ್ತ್ರ ಮತ್ತು ಫೆಂಗ್ಶೂಯಿ ಕೂಡ ಮನೆಯಲ್ಲಿ ಶಂಖ ಇಡುವುದರಿಂದಾಗುವ ಪ್ರಯೋಜನವನ್ನು ವಿವರಿಸುತ್ತದೆ. ಶಂಖವನ್ನು ಮನೆಯಲ್ಲಿ ಮತ್ತು ಉದ್ಯೋಗದ ಸ್ಥಳದಲ್ಲಿ ಇಡುವುದರಿಂದ ಎಲ್ಲಾ ಕಾರ್ಯದಲ್ಲಿ, ಜೀವನದಲ್ಲಿ, ಆರ್ಥಿಕತೆಯಲ್ಲಿ ಅಭಿವೃದ್ಧಿಯನ್ನು ಹೊಂದಬಹುದು. ಒಂದು ವೇಳೆ ನೀವು ಹೆಸರು ಮತ್ತು ಖ್ಯಾತಿಯನ್ನು ಗಳಿಸಲು ಇಚ್ಛಿಸಿದರೆ ಮನೆಯ ದಕ್ಷಿಣ ದಿಕ್ಕಿನತ್ತ ಶಂಖ ಚಿಪ್ಪನ್ನು ಇಡಿ. ಶಂಖವನ್ನು ಮನೆಯಲ್ಲಿರಿಸುವುದರಿಂದ ಆರ್ಥಿಕ ಲಾಭವಾಗುತ್ತದೆಯೆಂದು ಮನಬಂದತೆ ಶಂಖವನ್ನು ಇಡಬಾರದು. ಮನೆಯಲ್ಲಿ ಶಂಖವನ್ನು ಕೇವಲ ಪೂಜಾ ಸ್ಥಳದಲ್ಲಿ ಅಥವಾ ಮುಖ್ಯ ಜಗುಲಿಯಲ್ಲಿ ಇಡಬೇಕು. ಮಕ್ಕಳ ವಿದ್ಯಾಭ್ಯಾಸ ಅಥವಾ ಶೈಕ್ಷಣಿಕ ಯಶಸ್ಸಿಗೆ ಮನೆಯ ಈಶಾನ್ಯ ದಿಕ್ಕಿನಲ್ಲಿ ಶಂಖವನ್ನು ಇಡಬೇಕು.
4) ಶಂಖ ಲಕ್ಷ್ಮಿ ದೇವಿಯ ಸಹೋದರ:
ಸಮುದ್ರ ಮಂಥನ ಸಮಯದಲ್ಲಿ ಹೊರಹೊಮ್ಮಿದ 14 ವಿವಿಧ ರತ್ನಗಳಲ್ಲಿ ಶಂಖವೂ ಕೂಡ ಒಂದು. ಶಂಖವನ್ನು ತಾಯಿ ಲಕ್ಷ್ಮಿಯ ಸಹೋದರನೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಯಾವ ಸ್ಥಳದಲ್ಲಿ ಶಂಖವನ್ನು ಇಡಲಾಗುತ್ತದೆಯೋ ಆ ಸ್ಥಳದಲ್ಲಿ ಲಕ್ಷ್ಮಿ ದೇವಿಯು ನೆಲೆಸುತ್ತಾಳೆನ್ನುವ ನಂಬಿಕೆಯಿದೆ. ಶಂಖವು ಸ್ವರ್ಗದಲ್ಲಿನ ಅಷ್ಟಸಿದ್ಧಿ ಮತ್ತು ನವನಿಧಿಯಲ್ಲಿ ಪ್ರಮುಖ ಸ್ಥಾನವನ್ನು ಹೊಂದಿದೆ.
5) ಶಂಖ ಮತ್ತು ವಿಜ್ಞಾನ:
ವಿಜ್ಞಾನವು ಹೇಳುವ ಪ್ರಕಾರ, ಶಂಖದಲ್ಲಿ ನೀರನ್ನು ಎಷ್ಟೇ ದಿನಗಳವರೆಗೆ ಶೇಖರಿಸಿಟ್ಟರು ಅದು ಹಾಳಾಗುವುದಿಲ್ಲ ಮತ್ತು ಅಶುದ್ಧವಾಗುವುದಿಲ್ಲ. ಅಷ್ಟು ಮಾತ್ರವಲ್ಲ, ಶಂಖದಲ್ಲಿ ಶೇಖರಣೆಗೊಂಡ ನೀರನ್ನು ಅಂದರೆ ಶಂಖದಲ್ಲಿಟ್ಟ ನೀರನ್ನು ಮನೆಯಲ್ಲಿ ಸಿಂಪಡಿಸುವುದರಿಂದ ಬ್ಯಾಕ್ಟೇರಿಯಾ ಸೇರಿದಂತೆ ಸೂಕ್ಷ್ಮಾಣುಜೀವಿಗಳು ನಾಶವಾಗುತ್ತದೆ. ಶಂಖದಲ್ಲಿನ ಗಂಧಕ, ಕ್ಯಾಲ್ಸಿಯಂ ಮತ್ತು ರಂಜಕದ ಅಂಶವು ನೀರಿನೊಂದಿಗೆ ಸೇರಿಕೊಳ್ಳುತ್ತದೆ. ಆದ್ದರಿಂದ ಶಂಖದ ನೀರನ್ನು ಸಿಂಪಡಿಸುವುದರಿಂದ ಮತ್ತು ಕುಡಿಯುವುದರಿಂದ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
ಶಂಖದ ನೀರನ್ನು ಎಂದಿಗೂ ಎಸೆಯಬೇಡಿ. ಒಂದು ವೇಳೆ ನೀವು ಶಂಖದಲ್ಲಿ ನೀರನ್ನು ಶೇಖರಿಸಿದ್ದರೆ ಅದನ್ನು ಮನೆಗೆ ಸಿಂಪಡಿಸಿ, ಮನೆಯ ಸದಸ್ಯರಿಗೆ ಸಿಂಪಡಿಸಿ. ಇಲ್ಲವೇ, ನಿಮ್ಮ ಮನೆಯಲ್ಲಿ ಶಂಖವಿದ್ದು ಅದನ್ನು ಖಾಲಿಯಿಟ್ಟಿದ್ದರೆ ಆ ಶಂಖಕ್ಕೆ ಇಂದಿನಿಂದಲೇ ನೀರನ್ನು ಹಾಕಿಡುವ ರೂಢಿ ಬೆಳೆಸಿಕೊಳ್ಳಿ.
(ವಾಟ್ಸಾಪ್ ಸಂಗ್ರಹ ಮಾಹಿತಿ)
ಚಿತ್ರ: ಇಂಟರ್ನೆಟ್ ತಾಣ