'ಶಂಗಂ ತಮಿಳಗಂ ಮತ್ತು ಕನ್ನಡ ನಾಡು ನುಡಿ'

'ಶಂಗಂ ತಮಿಳಗಂ ಮತ್ತು ಕನ್ನಡ ನಾಡು ನುಡಿ'

ಬರಹ

'ಶಂಗಂ ತಮಿಳಗಂ ಮತ್ತು ಕನ್ನಡ ನಾಡು ನುಡಿ'

ತಮಿಳಿಗೆ ಶಾಸ್ತ್ರೀಯ ಭಾಷಾ ಸ್ಥಾನಮಾನವನ್ನು ಕೇಂದ್ರ ಸಕಾರ ಪ್ರಕಟಿಸಿದಾಗಿನಿಂದ ವೀರ ಕನ್ನಡಿಗರ ತಳಮಳ ಹೇಳತೀರದಾಗಿದೆ. ನಾಲ್ಕು ವರ್ಷಗಳಿಂದ ಈ ಕನ್ನಡಿಗರ ಅಸಮಾಧಾನ ಒಂದೇ ಸಮನೆ ಹಲವಾರು ರೂಪಗಳಲ್ಲಿ ಭುಗಿಲೇಳುತ್ತಲೇ ಇದೆ. ಕನ್ನಡಕ್ಕೂ ಆ ಸ್ಥಾನಮಾನ ನೀಡಬೇಕೆಂಬ ಬೇಡಿಕೆ ರಾಜ್ಯಾದ್ಯಂತ ಪ್ರತಿಧ್ವನಿಸುತ್ತಿದೆ. ಇನ್ನು ಈ ಕನ್ನಡದ ಸ್ಥಾನಮಾನಕ್ಕಾಗಿ ಹೋರಾಟ ಮಾಡಲು ಮುಂದೆ ಬರದಿರುವ ರಾಜಕೀಯ ಪಕ್ಷವೇ ಇಲ್ಲವೆನ್ನುವಂತಾಗಿದೆ. ಆದರೆ, ಕಳೆದ ನಾಲ್ಕು ವರ್ಷಗಳಲ್ಲಿ ರಾಜ್ಯದ ಮೂರೂ ರಾಜಕೀಯ ಪಕ್ಷಗಳು ಅಧಿಕಾರ ನಡೆಸಿದ್ದರೂ, ಅವು ಈ ದಿಸೆಯಲ್ಲಿ ಏನೂ ಮಾಡಲಾಗದಾಗಿವೆ. ಇದರ ಜವಾಬ್ದಾರಿಯನ್ನು ಹೊತ್ತಿದ್ದಂತೆ ಅಥವಾ ಹೊರಿಸಲಾಗಿದ್ದಂತೆ ತೋರಿದ ಎಂ.ವಿ.ರಾಜಶೇಖರನ್ ಕೇಂದ್ರದಲ್ಲಿ ಮಂತ್ರಿ ಪದವಿ ಕಳೆದುಕೊಂಡು ವಿಧಾನ ಪರಿಷತ್ತಿಗೆ ಬಂದಿದ್ದಾರೆ! ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಕನ್ನಡ ಅಭಿವೃಧ್ಧಿಯ ವಿಶೇಷ ಪ್ರಸ್ತಾಪ ಮಾಡಿದ್ದ ಬಿಜೆಪಿ, ಅದಕ್ಕೆ ತಕ್ಕಂತೆ ಈಗ ಕನ್ನಡಕ್ಕೆ ಶಾಸ್ತ್ರೀಯ ಭಾಷಾ ಸ್ಥಾನಮಾನವನ್ನು ನೀಡುವಂತೆ ಪ್ರಧಾನಿಯನ್ನು ಒತ್ತಾಯಿಸಲು ಹಿರಿಯ ಸಾಹಿತಿಗಳ ನಿಯೋಗವೊಂದನ್ನು ದೆಹಲಿಗೆ ಕರೆದುಕೊಂಡು ಹೋಗಿ ಈ ಸಾಹಿತಿಗಳಿಗೆ ಪ್ರಧಾನಿಯ ಭೇಟಿ ಲಭ್ಯವಾಗದ ಮುಜುಗರದೊಡನೆ ಹಿಂತಿರುಗಿದ್ದೂ ಆಗಿದೆ! ಅಂತೂ ಕನ್ನಡಿಗರ ಕಸಿವಿಸಿಗೆ ಕೊನೆಯಿಲ್ಲದಂತಾಗಿದೆ.

ತಮಿಳರಿಗೆ ಸಿಗುವುದೆಲ್ಲ ಕನ್ನಡಿಗರಿಗೂ ಸಿಗಬೇಕು. ಇದು ಕರ್ನಾಟಕ ಏಕೀಕರಣೋತ್ತರದಲ್ಲಿ ಕಂಡುಬರುತ್ತಿರುವ 'ಕನ್ನಡತನ'ದ ಒಂದು ಸ್ಥಾಯೀಭಾವವಾಗಿಬಿಟ್ಟಿದೆ! ತಮಿಳಿಗೆ ಶಾಸ್ತ್ರೀಯ ಭಾಷಾ ಸ್ಥಾನಮಾನವನ್ನು ನೀಡುವವರೆಗೂ ಕನ್ನಡಿಗರಿಗೆ ಶಾಸ್ತ್ರೀಯ ಭಾಷೆಯ ಕಲ್ಪನೆಯಾಗಲೀ, ಆ ಸ್ಥಾನಮಾನ ಕನ್ನಡಕ್ಕೆ ಒದಗಬೇಕೆಂಬ ಆಶಯವಾಗಲೀ ಇದ್ದುದು ಎಲ್ಲೂ ದಾಖಲಾದಂತಿಲ್ಲ. ತಮಿಳಿಗೆ ಆ ಸ್ಥಾನಮಾನ ದೊರೆತ ಮೇಲೇ ಕನ್ನಡಿಗರು, ಕನ್ನಡ ವಿದ್ವಾಂಸರು ಮತ್ತು ಸಂಶೋಧಕರು ಹಾಗೆಂದರೇನು ಎಂದು ತಿಳಿದುಕೊಳ್ಳಲು ಆಸಕ್ತಿ ವಹಿಸತೊಡಗಿದ್ದು. ಇನ್ನು ಇದಕ್ಕಾಗಿ ವ್ಯಗ್ರರಾಗಿ ಆಗಾಗ್ಗೆ ಚಳುವಳಿ ಹೂಡುತ್ತಿರುವ ಹೋರಾಟಗಾರರಿಗಂತೂ ನಾಲ್ಕು ವರ್ಷಗಳ ನಂತರವೂ ಶಾಸ್ತ್ರೀಯ ಭಾಷೆ ಎಂದರೇನು ಎಂಬುದು ತಿಳಿದಂತಿಲ್ಲ. ತಿಳಿದಿದ್ದರೆ, ಅದಕ್ಕಾಗಿ ಸ್ವಾಭಿಮಾನ ತೊರೆದು ಹೀಗೆ ಕಾಡಿ ಬೇಡುವ ಕೆಲಸಗಳಲ್ಲಿ ತೊಡಗುತ್ತಿರಲಿಲ್ಲ. ಬದಲಿಗೆ ತಮಿಳಿಗೆ ಈ ಸ್ಥಾನಮಾನ ಹೇಗೆ ಮತ್ತು ಏಕೆ ದೊರಕಿತು ಎಂಬುದನ್ನು ತಿಳಿಯುವ ಕಡೆ ಗಮನ ನೀಡಿ ಕನ್ನಡ ಭಾಷೆಯನ್ನು ಅದಕ್ಕಾಗಿ ಸಿದ್ಧಪಡಿಸುವ ರೀತಿಯಲ್ಲಿ ತನ್ನ ಚಳುವಳಿಯನ್ನು ಪುನರ್ರೂಪಿಸಿಕೊಳ್ಳುತ್ತಿತ್ತು. ಆದರೆ ತಮಿಳಿಗೆ ಕೊಟ್ಟ ಮೇಲೆ ನಮಗೇಕೆ ಕೊಡಬಾರದು, ನಾವು ಅವರಿಗಿಂತ ಏನು ಕಡಿಮೆ ಎಂಬ ಮತ್ಸರಪೂರಿತ ಮನೋಭಾವನೆಯಷ್ಟೇ ಕನ್ನಡ ಹೋರಾಟಗಾರರ - ಇದರಲ್ಲಿ ಕೆಲ ಹಿರಿಯ 'ಸಾಹಿತಿ'ಗಳೂ ಸೇರಿದ್ದಾರೆ - ಚಳುವಳಿಯನ್ನು ನಿಯಂತ್ರಿಸುತ್ತಿರುವಂತೆ ತೋರುತ್ತಿದೆ.

ಹೌದು, ರಾಜ್ಯ ಸರ್ಕಾರ ಕನ್ನಡವೂ ಶಾಸ್ತ್ರೀಯ ಭಾಷೆಯ ಸ್ಥಾನಮಾನಕ್ಕೆ ಅರ್ಹವಾಗಿದೆ ಎಂದು ಸಾಬೀತುಪಡಿಸುವಂತಹ ದಾಖಲೆಗಳನ್ನು ಸಿದ್ಧಪಡಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದೆ. ಕೇಂದ್ರದ ಸಂಸ್ಕೃತಿ ಇಲಾಖೆ ಇವುಗಳ ಪರಿಶೀಲನೆಗಾಗಿ ಒಂದು ಸಮಿತಿಯನ್ನೂ ರಚಿಸಿದೆ. ಕನ್ನಡದವರ ಗಲಾಟೆಯಿಂದ ಸ್ಫೂರ್ತಿಗೊಂಡ ತೆಲುಗಿನವರೂ, ತಮ್ಮ ಭಾಷೆಗೂ ಶಾಸ್ತ್ರೀಯ ಸ್ಥಾನಮಾನ ಬೇಕೆಂದು ಮನವಿ - ದಾಖಲೆಗಳನ್ನು ಸಲ್ಲಿಸಿದ್ದಾರೆ. ಸಮಿತಿ ಬರುವ ಆಗಸ್ಟ್ನಲ್ಲಿ ಸಭೆ ಸೇರಿ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುವುದೆಂದು ಈ ಸಮಿತಿಯ ಓರ್ವ ಸದಸ್ಯರಾದ ಮೈಸೂರಿನ ಭಾಷಾ ಸಂಸ್ಥಾನದ ನಿರ್ದೇಶಕ ಉದಯನಾರಾಯಣ ಸಿಂಗ್ ಹೇಳಿದ್ದಾರೆ. ಆದರೆ ಸಮಿತಿಯೊಳಗೇ ಈ ಎರಡೂ ಭಾಷೆಗಳಿಗೆ ಶಾಸ್ತ್ರೀಯ ಸ್ಥಾನಮಾನ ನೀಡುವ ಬಗ್ಗೆ ವಿರೋಧವಿದೆ ಎಂದು ಹೇಳಲಾಗಿದೆ. ಕಾರಣ, ಶಾಸ್ತ್ರೀಯ ಸ್ಥಾನಮಾನ ನೀಡಿಕೆ ರಾಜಕೀಯ ಮೇಲಾಟದ ವಿಷಯವಾಗದೆ, ಅದು ಅಂತಾರಾಷ್ಟ್ರೀಯ - ಯುನೆಸ್ಕೋ - ಮಟ್ಟದಲ್ಲೂ ತನ್ನ ಘನತೆ ಉಳಿಸಿಕೊಳ್ಳುವ ಜಾಗತಿಕ ಭಾಷಾ ಪರಂಪರೆ ರಕ್ಷಣೆಯ ವಿಶಿಷ್ಟ ಕೆಲಸವೂ ಅನ್ನಿಸಿಕೊಳ್ಳಬೇಕಾಗಿದೆ. ಏಕೆಂದರೆ, ಶಾಸ್ತ್ರೀಯ ಭಾಷೆ ಎಂಬುದೇ ಅಂತಾರಾಷ್ಟ್ರೀಯ ಶೈಕ್ಷಣಿಕ ವಲಯದ ಒಂದು ಪರಿಕಲ್ಪನೆಯಾಗಿದ್ದು, ಅದರ ಪಾವಿತ್ರ್ಯ ನಿಕಷಕ್ಕೊಡ್ಡಲ್ಪಡುವುದು ಆ ಮಟ್ಟದಲ್ಲೇ. ಹಾಗೆ ನೋಡಿದರೆ, ತಮಿಳು ಶಾಸ್ತ್ರೀಯ ಭಾಷೆಯ ಸ್ಥಾನಕ್ಕೆ ಅರ್ಹವೆಂಬ ಧ್ವನಿ ಕೇಳಿಬಂದದ್ದು ಅಂತಾರಾಷ್ಟ್ರೀಯ ಮಟ್ಟದ - ಅದೂ ವಿದೇಶೀ - ಭಾಷಾ ಶಾಸ್ತ್ರಜ್ಞರಿಂದಲೇ ಎಂಬುದನ್ನು ನಾವು ಗಮನಿಸಬೇಕು.

ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಕೊಡಲ್ಪಡುತ್ತದೆ ಎಂದೇ ಇಟ್ಟುಕೊಳ್ಳೋಣ. ಆದರೆ ಅದಕ್ಕೆ ಕನ್ನಡ ಒಂದು ಭಾಷೆಯಾಗಿ, ಸಂಸ್ಕೃತಿಯಾಗಿ ಸಿದ್ಧವಾಗಿದೆಯೇ? ಶಾಸ್ತ್ರೀಯ ಸ್ಥಾನಮಾನ ಪಡೆದಿರುವ ತಮಿಳು ಭಾಷೆ ಈ ಸಂಬಂಧ ಎದುರಿಸುತ್ತಿರುವ ಬಿಕ್ಕಟ್ಟನ್ನು, ಮೊನ್ನೆ ಇದಕ್ಕೆ ಸಂಬಂಧಪಟ್ಟ ಯೋಜನೆಗಳ ಪರಿಚಯವಿರುವ ಕನ್ನಡದ ವಿದ್ವಾಂಸರೊಬ್ಬರು ವಿವರಿಸುತ್ತಿದ್ದರು. ಈ ಸ್ಥಾನಮಾನ ಒದಗಿಸುವ ಸವಲತ್ತುಗಳನ್ನು ನಿರ್ವಹಿಸಲು ತಮಿಳು ಶೈಕ್ಷಣಿಕ ವಲಯದಲ್ಲಿ ಆ ಗುಣಮಟ್ಟದ ವಿದ್ವಾಂಸರೇ ಇಲ್ಲವಾಗಿದ್ದಾರೆ! ಈ ವಿಷಯದಲ್ಲಿ ಕನ್ನಡದ ಸ್ಥಿತಿಗತಿಯೇನೂ ಭಿನ್ನವಾಗಿಲ್ಲ. ಇಂದು ನಮ್ಮ ವಿಶ್ವವಿದ್ಯಾಲಯಗಳಲ್ಲಿ ನಡೆಯುತ್ತಿರುವ ಭಾಷೆ ಮತ್ತು ಸಂಸ್ಕೃತಿ ಸಂಶೋಧನೆಯ ಗುಣಮಟ್ಟವನ್ನು ಗಮನಿಸಿದರೆ, ವಿದ್ವತ್ತೆಂಬುದು ಕಾಣೆಯಾಗಿ ಬಹಳ ವರ್ಷಗಳೇ ಆಗಿವೆ ಎಂಬುದು ಗೊತ್ತಾಗುತ್ತದೆ. ಅದರ ಜಾಗವನ್ನ್ಲು ಪುಢಾರಿಗಿರಿ, ವಶೀಲಿಬಾಜಿ ಆಕ್ರಮಿಸಿಕೊಂಡಿವೆ. ಇರುವ ನಾಲ್ಕಾರು ಜನ ವಿದ್ವಾಂಸರನ್ನೇ ಕೇಳಿ ನೋಡಿ. ವಿಶ್ವವಿದ್ಯಾಲಯಗಳ ಮಟ್ಟದಲ್ಲಿ ಈಗಿರುವ ಯೋಜನೆಗಳನ್ನು ಗುಣಮಟ್ಟ ಕಾಪಾಡಿಕೊಂಡು ಮುಗಿಸಿದರೇ ಸಾಕಾಗಿದೆ ಎನ್ನುತ್ತಿದ್ದಾರೆ ಅವರು.

ಆದರೆ ಇದಾವುದೂ ಗೊತ್ತಿಲ್ಲದ ಸಾಮಾನ್ಯ ಕನ್ನಡಿಗರು ಶಾಸ್ತ್ರೀಯ ಭಾಷಾ ಸ್ಥಾನಮಾನವನ್ನು ಕನ್ನಡ ಭುವನೇಶ್ವರಿಯ ಕೊರಳಿಂದ ವಂಚಿತವಾಗಿರುವ ಕಂಠೀಹಾರದಂತೆ ಪರಿಗಣಿಸಿ, ಹಾಹಾಕಾರವೆಬ್ಬಿಸುತ್ತಿದ್ದಾರೆ! ಶಾಸ್ತ್ರೀಯ ಭಾಷಾ ಸ್ಥಾನಮಾನವನ್ನು ತಮಿಳಿಗೆ ನೀಡಲು ಕಾರಣವಾಗಿದೆಯೆಂದು ಕೆಲವು ವಲಯಗಳಲ್ಲಿ ಭಾವಿಸಲಾಗಿರುವ ರಾಜಕೀಯ ಕಾರಣದ ಮೇಲೆ; ತಮಿಳಿಗೆ ಬದಲಾಗಿ, ಹಿಂದಿಗೋ, ಬಂಗಾಳಿಗೋ ನೀಡಿದ್ದರೆ, ಕನ್ನಡಿಗರು ಇಷ್ಟು ಚಿಂತಿತರಾಗಿ, ವ್ಯಗ್ರರಾಗಿ ಗಲಾಟೆ ಮಾಡುತ್ತಿದ್ದರೆ? ಏಕೀಕರಣದ ನಂತರ ಕನ್ನಡ ಸ್ವಾಭಿಮಾನಿ ಚಳುವಳಿ ಬೆಳೆದು ಬಂದಿರುವ ಬಗೆಯನ್ನು ಗಮನಿಸಿದರೆ ಇದು ಅನುಮಾನವೆನಿಸುತ್ತದೆ. ಕನ್ನಡ ಸ್ವಾಭಿಮಾನಿ ಚಳುವಳಿ ಜನಪ್ರಿಯ ನೆಲೆಯಲ್ಲಿ ತಮಿಳು ಕೇಂದ್ರಿತವಾಗಿಯೇ, ಇನ್ನೂ ಸ್ಪಷ್ಟವಾಗಿ ಹೇಳುವುದಾದರೆ, ತಮಿಳು ವಿರೋಧಿಯಾಗಿಯೇ ತನ್ನನ್ನು ಕಟ್ಟಿಕೊಳ್ಳುತ್ತಾ ಬಂದಿದೆ. ಇದಕ್ಕೆ ಕನ್ನಡ ಚಳುವಳಿ ಮೂಲತಃ ಬೆಂಗಳೂರು ಕೇಂದ್ರಿತವಾಗಿ ಆರಂಭವಾಗಿ, ಪುಢಾರಿಗಿರಿಯ ರಾಜಕೀಯ ನೆಲೆಗಳನ್ನು ಪಡೆದು ಬೆಳೆದದ್ದೇ ಕಾರಣವಾಗಿರಬಹುದು. ಅದರ ಪರಿಣಾಮವನ್ನು ನಾವಿಂದು ನೋಡುತ್ತಿದ್ದೇವೆ. ಬೆಂಗಳೂರು ಇಂದು ಯಾವ ಪ್ರಾದೇಶಿಕ ಪರಿಮಳವನ್ನೂ ಉಳಿಸಿಕೊಳ್ಳಲಾಗದೆ ಕನ್ನಡಿಗರ ಕೈಬಿಟ್ಟು ಹೋಗುತ್ತಿದೆ. ಅದಕ್ಕೆ - ಬೃಹತ್ ನಗರದ ಅಸಂಸ್ಕೃತಿಗೆ - ಕನ್ನಡಿಗರೂ ನಿಧಾನವಾಗಿ ಹೊಂದಿಕೊಳ್ಳುತ್ತಿದ್ದಾರೆ.

ಸಾಮಾನ್ಯವಾಗಿ ನಿರಭಿಮಾನಿಗಳೆಂದೇ ಹೆಸರಾಗಿರುವ, ಆದರೆ ಸ್ವಾಭಿಮಾನ ಪ್ರಕಟಿಸುವ ಸಂದರ್ಭ ಬಂದಾಗಲೆಲ್ಲ ಅದು ತಮಿಳು ವಿರೋಧಿಯಾಗಿಯೇ ಹೊರ ಹೊಮ್ಮುವಂತಿರುವ ಬೆಂಗಳೂರು ಹಾಗೂ ಅದರ ಸುತ್ತಮುತ್ತಲಿನ ಕನ್ನಡಿಗರ ಈ ವಿಚಿತ್ರ ನಡಾವಳಿಯ ಬಗ್ಗೆ ನನಗೊಂದು ಹೊಸ ಹೊಳಹು ಸಿಕ್ಕಿದ್ದು, ಇತ್ತೀಚೆಗೆ ಪ್ರಕಟವಾದ ಹಿರಿಯ ಇತಿಹಾಸಜ್ಞ ಷ.ಶೆಟ್ಟರ್ ಅವರ 'ಶಂಗಂ ತಮಿಳಗಂ ಮತ್ತು ಕನ್ನಡ ನಾಡು ನುಡಿ' (ಪ್ರ: 'ಅಭಿನವ', ಬೆಂಗಳೂರು) ಎಂಬ ಪುಸ್ತಕವನ್ನು ಓದಿದಾಗ. ಆರಂಭ ಕಾಲದ ದ್ರಾವಿಡ ಸಂಬಂಧಗಳ ಚಿಂತನೆಯನ್ನು ಪರಿಚಯಿಸುವ ಉದ್ದೇಶವುಳ್ಳ ಈ ಪುಸ್ತಕ, ಇಂದು ತಮಿಳ್ನಾಡು ಎಂದು ಕರೆಯಲಾಗುವ ಪ್ರಾಚೀನ 'ತಮಿಳಗಂ'ನ ಪ್ರಾಗೈತಿಹಾಸಿಕ ಹಿನ್ನೆಲೆ ನೀಡುತ್ತಾ, ಇದರ ಒಡಲಾಳದಿಂದಲೇ ಕನ್ನಡ ಭಾಷೆ ಮತ್ತು ಸಂಸ್ಕೃತಿಗಳು ತಮ್ಮನ್ನು ಕಟ್ಟಿಕೊಂಡ ಪರಿಯ ಬಗ್ಗೆ ಹಲವು ಹೊಸ ಒಳನೋಟಗಳನ್ನು ನೀಡುತ್ತದೆ. ಆ ಮೂಲಕ ಈವರೆಗೆ ಬೆಳಕೇ ಕಾಣದ ಕನ್ನಡ - ತಮಿಳು ಸಂಬಂಧಗಳ ಹಲವು ನೆಲೆಗಳನ್ನು, ತಮಿಳಿನ 'ಶಂಗಂ' ಸಾಹಿತ್ಯವನ್ನು ನಿರ್ಮಿಸಿದ ಸಾಂಸ್ಕೃತಿಕ ಶಕ್ತಿಗಳ ಹಿನ್ನೆಲೆಯಲ್ಲಿ ಪರಿಚಯಿಸುತ್ತದೆ. ಮುಖ್ಯವಾಗಿ, ಕನ್ನಡ ನುಡಿ ಮತ್ತು ಸಂಸ್ಕೃತಿಗಳ ವಿಕಾಸವನ್ನು ಸಂಸ್ಕೃತದ ಪ್ರಭಾವದ ನೆಲೆಯಲ್ಲಷ್ಟೇ ಅರ್ಥ ಮಾಡಿಕೊಂಡು ಕನ್ನಡ ಸಂಸ್ಕೃತಿ ಚರಿತ್ರೆಯನ್ನು ಕಟ್ಟಿಕೊಂಡಿದ್ದ ನಾವು, ಇದರಿಂದ ಪಡೆದದ್ದೆಷ್ಟು, ಕಳಕೊಂಡಿದ್ದೆಷ್ಟು ಮತ್ತು ಏನು ಎಂಬುದರ ಬಗ್ಗೆ ಚಿಂತನೆ ಮಾಡುವಂತೆ ನಮ್ಮನ್ನು ಪ್ರೇರೇಪಿಸುತ್ತದೆ.

ಕನ್ನಡಕ್ಕೆ 'ಕವಿರಾಜ ಮಾರ್ಗ'ವಿರುವಂತೆ ತಮಿಳಿಗೆ 'ತೊಳ್ಕಾಪ್ಪಿಯಮ್' ಒಂದು ಸಂಸ್ಕೃತಿ ಲಕ್ಷಣ ಗ್ರಂಥ. ಆದರೆ ಅದು ತಮಿಳು ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಗಳನ್ನು ಪ್ರಭಾವಿಸಿರುವಷ್ಟು ಆಳವಾಗಿ 'ಕವಿರಾಜ ಮಾರ್ಗ' ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಗಳನ್ನು ಪ್ರಭಾವಿಸಿಲ್ಲ ಏಕೆ ಎಂಬುದನ್ನು ಸೂಕ್ಷ್ಮವಾಗಿ ಶೋಧಿಸ ಹೊರಡುವ ಈ ಪುಸ್ತಕ, 'ಕವಿರಾಜ ಮಾರ್ಗ' ಹೇಗೆ 'ದೇಸಿ'ಗೆ ಸ್ಫೂರ್ತಿ ನೀಡದೆ 'ತಿರುಳ್ಗನ್ನಡ'ದ ಕಲ್ಪನೆಯೊಂದಿಗೆ 'ಮಾರ್ಗ'ದ ಕಡೆಗೇ ಕನ್ನಡ ಸಂಸ್ಕೃತಿಯ ನಡಿಗೆಯನ್ನು ನಿರ್ದೇಶಿಸುವಂತಾಯಿತು ಎಂಬುದರ ಹಿಂದಿನ ರಾಜಕಾರಣದ ಒಳಸುಳಿಗಳ ಪರಿಚಯ ಮಾಡಿಕೊಡುತ್ತದೆ. ಈ ದಿಸೆಯಲ್ಲಿ ನಿರ್ಣಾಯಕ ತೀರ್ಮಾನಗಳನ್ನು ಕೊಡುವಷ್ಟು ಖಚಿತ ಆಕರಗಳು ದೊರೆಯುತ್ತಿಲ್ಲವಾದ್ದರಿಂದ, ಶೆಟ್ಟರ್ ಈ ರಾಜಕಾರಣವನ್ನು 'ಯುಗಧರ್ಮ'ವೆಂದು ಕರೆಯುತ್ತಾರೆ. ಆದರೆ, ಅಶೋಕನ ಕಾಲದ ಆಸುಪಾಸಿನಲ್ಲಿ ಉತ್ತರದ ಮೌರ್ಯ ಸಾಮ್ರಾಜ್ಯ ದಕ್ಷಿಣದ 'ತಮಿಳಗಂ' ಕಡೆಗೆ ವಿಸ್ತರಿಸಲು ಮಾಡಿದ ವಿಫಲ ಪ್ರಯತ್ನಗಳಲ್ಲಿ 'ವಡುಗ'ರೆಂಬ ತಮಿಳೇತರ ದಕ್ಷಿಣ ಕುಲಗಳು ವಹಿಸಿದ 'ಮಧ್ಯವರ್ತಿ' ಪಾತ್ರವೇ, ಕನ್ನಡ ಭಾಷೆ ಮತ್ತು ರಾಜ್ಯಗಳು ಒಡಮೂಡಿದ್ದರ ಹಿಂದಿನ ರಾಜಕಾರಣವನ್ನೂ ಸೃಷ್ಟಿಸಿತು ಎಂಬುದನ್ನು ಅವರು ಪರೋಕ್ಷವಾಗಿ ಸೂಚಿಸುತ್ತಾರೆ.

ಈ ರಾಜಕಾರಣದ ಫಲವಾಗಿ, ತಮಿಳರಿಗೆ ಅರ್ಥವಾಗದ 'ಅಶುದ್ಧ' ತಮಿಳಿನಂತೆ ಕೇಳಿಸುತ್ತಿದ್ದ ಹಲವು ಭಾಷೆಗಳನ್ನಾಡುವ ಒಕ್ಕೂಟದಂತಿದ್ದ ಈ ವಡುಗರಲ್ಲಿ, ಲಿಪಿ ಪಡೆದುಕೊಂಡ ಮೊದಲ ಭಾಷೆಯಾಗಿ ಮೂಡಿದ ಕನ್ನಡ; ಇನ್ನೂ ತನ್ನದೇ ಲಿಪಿ ಪಡೆಯದ ತಮಿಳು ಭಾಷೆ, ಸಾಹಿತ್ಯ, ಸಂಸ್ಕೃತಿಗಳನ್ನ್ನಲ್ಲದೆ ರಾಜಕಾರಣವನ್ನೂ ಪ್ರಭಾವಿಸುವಷ್ಟರ ಮಟ್ಟಿಗೆ ಒಂದು ಸಮಾನಾಂತರ ರಾಜಕೀಯ ಶಕ್ತಿಯಾಗಿಯೂ ಹೇಗೆ ಒಡಮೂಡಿತು ಎಂಬುದರ ಸೂಕ್ಷ್ಮ ವಿವರಗಳನ್ನು ಶೆಟ್ಟರ್ ನೀಡುತ್ತಾರೆ. ಈ ರಾಜಕಾರಣ, ಸಂಸ್ಕೃತಿಯ ನೆಲೆಯಲ್ಲಿ ಇನ್ನಷ್ಟು ಸ್ಪಷ್ಟಗೊಳ್ಳುವುದು, ಈ ಎರಡು ಭಾಷೆಗಳು ಹೊರಗಿಂದ ಬಂದ ಸಂಸ್ಕೃತ ಶಬ್ದಗಳಿಗೆ ತೆರೆದುಕೊಳ್ಳಬೇಕಾದ ರೀತಿ ನೀತಿಗಳ ಬಗ್ಗೆ 'ಕವಿರಾಜ ಮಾರ್ಗ' ಮತ್ತು 'ತೊಲ್ಕಾಪ್ಪಿಯಮ್'ಗಳು ನಿರೂಪಿಸುವ ನಿಯಮಗಳ ಸ್ವರೂಪದಲ್ಲಿ. ಈ ಸಂಕೀರ್ಣ ರಾಜಕಾರಣವೇ ಕಾವೇರಿಯೆಂಬ ಒಂದೇ ನದಿಯ ಕಣಿವೆಯಲ್ಲಿ ಹುಟ್ಟಿದ ಭಾಷೆಗಳಾಗಿದ್ದ ತಮಿಳು ಮತ್ತು ಕನ್ನಡಗಳನ್ನು ಕಾಲಾನಂತರದಲ್ಲಿ ವಿರುದ್ಧ ಸಾಂಸ್ಕೃತಿಕ ದಿಕ್ಕುಗಳೆಡೆಗೆ ಎಳೆದುಕೊಂಡು ಹೋದದ್ದು. ಕನ್ನಡದ ಮೂಲ ನೆಲೆಯಲ್ಲಿನ ಈ ಸಾಂಸ್ಕೃತಿಕ ಪಲ್ಲಟವೇ ಕನ್ನಡಿಗರು ಮತ್ತು ತಮಿಳರ ನಡುವೆ ಇಂದಿಗೂ ಕಾಣುವ ಅಸಹಜ ಸಾಂಸ್ಕೃತಿಕ ಬಿಗುವನ್ನು ಸೃಷ್ಟಿಸಿರುವುದು.

ಇತಿಹಾಸದಲ್ಲಿ ಹೀಗೆ ಕನ್ನಡ ತನ್ನ ಕರುಳ ಬಳ್ಳಿ ಸಂಬಂಧವನ್ನು ಕಳೆದುಕೊಳ್ಳವಂತಾದ, ಪರಾಕರ್ಷಣೆಯ - 'ಆಧುನೀಕರಣ'ದ(?) - ರಾಜಕಾರಣಕ್ಕೆ ಸಿಕ್ಕ ದುರಂತವೇ, ಇಂದು ಕರ್ನಾಟಕದ ಶಾಲೆಗಳಲ್ಲಿ ಕನ್ನಡ ಮಾಧ್ಯಮವನ್ನು ಜಾರಿಗೊಳಿಸುವ ಸರ್ಕಾರದ ಕ್ರಮವನ್ನು ಅನೂರ್ಜಿತಗೊಳಿಸಿರುವ ರಾಜ್ಯ ಹೈಕೋರ್ಟ್ ತೀರ್ಪನ್ನು ಅನೇಕ ಕನ್ನಡಿಗರು ವಿಜಯ ಚಿಹ್ನೆ ತೋರಿಸುತ್ತಾ, ಸಂಭ್ರಮದಿಂದ ಹಲ್ಕಿರಿದು ಸ್ವಾಗತಿಸುವಂತೆ ಮಾಡಿರುವುದು ಕೂಡಾ ಎಂದರೆ ತಪ್ಪಾಗಲಾರದು. ಅದೇನೇ ಇರಲಿ, ಕನ್ನಡ ಮಾಧ್ಯಮ ಅನೂ‌ರ್ಜಿತಗೊಂಡಿತೆಂದು ನೆಮ್ಮದಿಯ ನಿಟ್ಟುಸಿರು ಬಿಡುವ ಕನ್ನಡಿಗರೇ ತಮ್ಮ ಭಾಷೆಗೆ ಶಾಸ್ತ್ರೀಯ ಭಾಷಾ ಸ್ಥಾನಮಾನಕ್ಕಾಗಿಯೂ ಹೊಡೆದಾಡಬಲ್ಲರು ಎಂಬುದೇ ಇಲ್ಲಿನ ವಿಪರ್ಯಾಸ! ತಮ್ಮ ಭಾಷೆಯ ಸ್ಥಾನಮಾನವನ್ನು ತಮಿಳಿನ ಸ್ಥಾನಮಾನದೊಂದಿಗಷ್ಟೇ ಹೋಲಿಸಿಕೊಂಡು ಅದನ್ನು ಸಂರಕ್ಷಿಸಿಕೊಳ್ಳುವಷ್ಟು ಮಾನಧನರಾದ ಕನ್ನಡಿಗರು, ತಮ್ಮ ಭಾಷೆಯ ಬಗ್ಗೆ ನಿಜವಾಗಿ ಎಷ್ಟು ಆಳವಾದ ಅಭಿಮಾನವನ್ನು ಹೊಂದಿದ್ದಾರೆ ಎಂಬುದನ್ನು ಷ.ಶೆಟ್ಟರ್ ಅವರು
ತಮ್ಮ ಪುಸ್ತಕದಲ್ಲಿ ಸೂಚಿಸಿರುವುದು ಹೀಗೆ:' ತಮ್ಮ ಸಾಹಿತ್ಯವನ್ನು ಪರಭಾಷೀಯರಿಗೆ ಪರಿಚಯಿಸುವ ಕಾರ್ಯವನ್ನು ತಮಿಳು ಭಾಷಾ ಪಂಡಿತರು ಬಹುಶಃ ಉಳಿದೆಲ್ಲ ಭಾಷಾ ಪಂಡಿತರಿಗಿಂತಲೂ - ಖಂಡಿತವಾಗಿಯೂ ಕನ್ನಡ ಕೃತಿಗಳನ್ನು ಪರಿಚಯಿಸಲು ಮಾಡಿದ ನಮ್ಮ ಪರಿಶ್ರಮಕ್ಕಿಂತಲೂ ಸರಿ ಸುಮಾರು ನೂರು ಪಟ್ಟು - ಹೆಚ್ಚು ಶ್ರಮ ಮತ್ತು ಶ್ರದ್ಧೆಯಿಂದ ಪೂರೈಸಿಕೊಟ್ಟಿರುವರು.

ತಮಿಳರಂತೆ ತಮ್ಮ ಭಾಷೆಯ ಬಗ್ಗೆ ನಿಜವಾದ ಶ್ರದ್ಧೆಯನ್ನಾಗಲೀ, ಪರಿಶ್ರಮವನ್ನಾಗಲೀ ಪ್ರದರ್ಶಿಸದ ಕನ್ನಡಿಗರು ತಮ್ಮ ಭಾಷೆಗೆ ತಮ್ಮದೇ ಬದುಕಿನಲ್ಲಿ ತಾವು ಕೊಡಲಾಗದ ಮಾನ್ಯತೆಯನ್ನು ಇತರರು ಕೊಡಬೇಕೆಂದು ಬಯಸುವ ಹುಸಿ ಆತ್ಮಾಭಿಮಾನದ ರೋಗಕ್ಕೆ ತುತ್ತಾಗಿ ಬಳಲುತ್ತಿದ್ದಾರೆ. ಈ ರೋಗದಿಂದ ಮುಕ್ತರಾಗದ ಹೊರತು ಕನ್ನಡಿಗರಿಗೆ ಮತ್ತು ಕನ್ನಡಿಗರಿಗೆ ಮುಕ್ತಿಯಿಲ್ಲ. ಇದೇ 'ಶಂಗಂ ತಮಿಳಗಂ' ಪುಸ್ತಕ ನೀಡುವ ಮುಖ್ಯ ಸಾಂಸ್ಕೃತಿಕ ಹೊಳಹು ಕೂಡಾ ಎಂದು ನಾನು ಭಾವಿಸಿದ್ದೇನೆ.