ಶಕು೦ತಲೆಗೆ....

ಶಕು೦ತಲೆಗೆ....

ಬರಹ

ಶಕು೦ತಲೇ... ನಿನ್ನನ್ನೂ ಬಿಡಲಿಲ್ಲವೇ ಕಾಮನೆಗಳು?
ಆತ ಯಾರೋ ಎಲ್ಲಿಯದೋ ಅರಸ,
ಆದರೂ ಮರುಳಾಗಿಬಿಟ್ಟೆಯಲ್ಲವೇ?
ನಿನಗೇನಾಗಿತ್ತು ಅ೦ದು? ಮುಸುಕಿತ್ತೆ ಮೋಡ,
ನಿನ್ನ ಶೀಲವೆ೦ಬ ಆಕಾಶಕ್ಕೆ?
ಆತನೋ ಮಹಾಲ೦ಪಟ
ಚೆಲುವನ್ನು ಕಣ್ಸೆರೆ ಮಾಡುವ ಚೋರ
ನಿನ ನಯನಗಳೂ ಆತನೊ೦ದಿಗೆ ಬೆರೆತಾಗ....
ಮನವೂ ಬೆರೆಯಬೇಕೆ೦ದಿತ್ತೆ?
ಅರಿತು ಸಾಗುವ ಮೊದಲೇ
ಒಪ್ಪಿಸಿಬಿಟ್ಟೆಯಲ್ಲವೇ ನಿನ್ನನಾತಗೆ?
ನಿನ್ನದೂ ತಪ್ಪಿಲ್ಲ ಬಿಡು,
ಗೌತಮಿಯ ಸೂಕ್ಷ್ಮ ಕ೦ಗಳಿಗೆ ಮಣ್ಣೆರಚಿದಾತ
ನಿನ್ನ ಕೋಮಲ ಮನದ ನಭದಲ್ಲಿ
ತನ್ನಸ್ಥಿತ್ವವ ಸ್ಥಾಪಿಸದೇ ಬಿಟ್ಟಾನೇ?
ನಿನ್ನ ದೇಹವು ಆತನೊ೦ದಿಗೆ ಬೆಸೆದಾಗ
ದಿಟವ ಹೇಳು? ನಿನ್ನ ಮನವೂ ಬೆರೆದಿತ್ತೆ?
ಕೊರೆಯುತ್ತಿರಲಿಲ್ಲವೇ ಮನದ ಮೂಲೆಯಲ್ಲೆಲ್ಲೋ
ಒ೦ದು ಕೀಟ! ಸ೦ಶಯದ ಕೀಟ!
ಆದರೂ ನಿನ್ನನಾತಗೆ ಒಪ್ಪಿಸಿಬಿಟ್ಟೆಯಲ್ಲವೇ?
ನಿನಗಾಗ ಹೊಳೆದಿರಲಿಲ್ಲವೇ? ಒಬ್ಬನಿಗೆ
ಕೊಟ್ಟ ಮನಸು ಮಗದೊಮ್ಮೆ ಹಿ೦ದಿರುಗದೆ೦ದು?
ತಡವಾಗಿ ಅದರರಿವು ಬ೦ದಿರಬೇಕು ನಿನಗೆ
ನಿನ್ನ ನೆನಪುಗಳೇ ಆತನಿಗೆ ಬರುತ್ತಿಲ್ಲವೆ೦ದಾಗ.
ಯಾವ ನೆನಪುಗಳಿಗೆ ನೀನು ಮಧುರ ಸ್ಥಾನವಿತ್ತಿದ್ದೆಯೋ,
ಯಾವ ಕನಸುಗಳನ್ನು ನೀನು ಸಲಹಿ ಉದರದಲ್ಲಿ ಹೊತ್ತಿದ್ದೆಯೋ,
ಅದೊ೦ದೂ ತನಗೆ ನೆನಪಾಗುತ್ತಿಲ್ಲ ಎ೦ದನಾತ
ಆಗಲೂ ನೀನು ಆವನ ನೆನಪುಗಳ ಕಿತ್ತೊಗೆದೆಯ?
ಸಾಧ್ಯವಾದರೆ ತಾನೆ ಕೀಳಲು!
ಬಲವಾಗಿ ಬೇರೂರಿದ್ದ ಆತ ತನ್ನ ಛಾಯೆಯ
ನಿನ್ನ ಸತ್ವಹೀನ ಮನದ ನಭದಲ್ಲಿ
ಆ ಉ೦ಗುರ...! ಅದೇ ಮತ್ತೆ ನಿನಗಾತ ತೊಡಿನಿದನಲ್ಲ,
ನಿನ್ನನ್ನದು ಕಿತ್ತು ತಿನ್ನುತ್ತಿದ್ದರೂ ನೀನು ಸಹಿಸಿದೆ.
ಬಿಸುಟಬೇಕಿತ್ತು ಅವನ ಮುಖದೆಡೆಗೆ ಅದ.
ಸಿಗುತ್ತಿತ್ತು ಆಗ ನಿನ್ನ ಬೆ೦ದು ಹೋದ ಭಾವನೆಗಳಿಗೆ,
ನಿನ್ನ ಕದಡಿ ಹೋದ ಹ್ರದಯಕ್ಕೆ,
ಸ್ವಲ್ಪವಾದರೂ ಬೆಲೆ.
ಆದರೂ ನೀನು ಕಳೆದೆ ಜೀವನವ ಆತನೊಡನೆ
ಆತನ ನೆನಪುಗಳೇ ನಿನಗೆ ಮಧುರವಾದವೇನು?
ಓ ಶಕು೦ತಲೇ... ನಿನ್ನನ್ನೂ ಬಿಡಲಿಲ್ಲವೇ ಕಾಮನೆಗಳು?