ಶಕ್ತಿ ದೇಹದಲ್ಲಿ ಇದ್ದರೆ ಸಾಲದು ಯುಕ್ತಿ ತಲೆಯಲ್ಲೂ ಇರಬೇಕು

ಶಕ್ತಿ ದೇಹದಲ್ಲಿ ಇದ್ದರೆ ಸಾಲದು ಯುಕ್ತಿ ತಲೆಯಲ್ಲೂ ಇರಬೇಕು

ಒಂದು ಊರಿನ ಬಯಲು. ಹಲವಾರು ಕುರಿಗಳು, ಟಗರುಗಳು ಬಯಲಲ್ಲಿರುವ ಹುಲ್ಲನ್ನು ಮೇಯುತ್ತಿದ್ದವು. ಅದೇ ಸಂದರ್ಭಕ್ಕೆ ಅಲ್ಲಿಗೆ ಹಸಿದ ತೋಳವೊಂದು ಆಹಾರ ಹುಡುಕುತ್ತಾ ಬಂತು. ಸುತ್ತಲೂ ನೋಡಿದಾಗ ಅನೇಕ ಕುರಿ, ಟಗರುಗಳು ಅಲ್ಲಿ ಹುಲ್ಲು ಮೇಯುತ್ತಿರುವುದು ಕಂಡಿತು. ಅದರಲ್ಲಿ ಒಂದು ದಷ್ಟಪುಷ್ಟವಾದ ಕುರಿ ಇತ್ತು. ಇದನ್ನು ನಾನಿವತ್ತು ಕೊಂದು ತಿಂದರೆ ಇನ್ನು ಒಂದು ವಾರಕ್ಕೆ ಹಸಿವಿರುವುದಿಲ್ಲ, ಏನಾದರಾಗಲಿ ಇಂದಿದನ್ನು ಕೊಂದೇ ಸಿದ್ಧ ಎಂದು ಮನಸ್ಸಿನಲ್ಲೆ ಮಂಡಕ್ಕಿ ತಿನ್ನುತ್ತಾ ಮೆಲ್ಲನೆ ಪೊದೆಯ ಹಿಂದೆ ಬೇಟೆಗಾಗಿ ಕಾದು ಕುಳಿತಿತು.

ಕುರಿ ಹುಲ್ಲನ್ನು ಅರಸುತ್ತಾ ಅದೇ ಪೊದೆಯ ಹತ್ತಿರ ಬಂತು. ಇದೇ ಸಮಯಕ್ಕೆ ಕಾದು ಕುಳಿತಿದ್ದ ತೋಳ ಛಂಗನೆ ಕುರಿಯನ್ನು ಹಿಡಿಯಲು ಅದರೆಡೆಗೆ ಹಾರಿತು. ಚಾಣಾಕ್ಯ ಕುರಿ ತೋಳದಿಂದ ತಪ್ಪಿಸಿ ದೂರ ನಿಂತು ಹೀಗೆ ಹೇಳಿತು .... ಎಲೈ ತೋಳವೆ, ನೀನು ನನ್ನನ್ನು ಕೊಂದು ತಿನ್ನ ಬಹುದು , ಆದರೆ ಒಂದು ಶರತ್ತು ! ಏನದು ? ಎಂದು ತೋಳ ಕೇಳಿದಾಗ “ಬಯಲಿನ ನಡುವೆ ಒಂದು ಮಾವಿನ ಮರವಿದೆ ; ಅದರಲ್ಲಿ ಯಥೇಚ್ಛ ಮಾವಿನ ಹಣ್ಣುಗಳಿವೆ . ನಿನಗೆ ಆಹಾರವಾಗುವ ಮೊದಲು ಆ ಮಾವಿನ ಹಣ್ಣುಗಳನ್ನು ತಿನ್ನುವ ಆಸೆಯಾಗಿದೆ. ನೀನು ನನಗಿಂತ ಬಲಶಾಲಿ ಒಂದಷ್ಟು ಹಣ್ಣುಗಳನ್ನು ನನಗಾಗಿ ಉದುರಿಸಿ ಕೊಡು ನಾನದನ್ನು ತಿಂದು ನನ್ನಾಸೆಯನ್ನು ತಣಿಸಿಕೊಳ್ಳುವೆ “ಎಂದಿತು . ತೋಳ ದೊಡ್ಡದಾಗಿ ಬಾಯಿ ತೆರೆದು ನಗುತ್ತಾ, ಅಷ್ಟೆಯಾ.... ! ಎನ್ನುತ್ತಾ ಕುರಿಯನ್ನು ಮಾವಿನ ಮರದ ಹತ್ತಿರ ತಾನೆ ಕರೆದೊಯ್ಯಿತು. ನಂತರ ದೂರದಿಂದ ಶರವೇಗದಲ್ಲಿ ಓಡುತ್ತಾ ಬಂದು ತಲೆಯಿಂದ ಮರಕ್ಕೆ ಜೋರಾಗಿ ಡಿಕ್ಕಿ ಹೊಡೆಯಿತು . ಹೊಡೆದ ರಭಸಕ್ಕೆ ಮಾವಿನ ಹಣ್ಣು ಬೀಳುವುದು ಬಿಟ್ಟು ತಲೆಯೇ ಎರಡು ಹೋಳಾಗಿ ತೋಳ ಸತ್ತು ಬಿದ್ದಿತು . ಹೀಗೆ ಕುರಿ ಬಂದಂತಹ ಪ್ರಾಣಾಪಾಯದಿಂದ ತಪ್ಪಿಸಿಕೊಂಡಿತು.

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೇಟ್ ತಾಣ