ಶತಮಾನದ ಸಂಭ್ರಮದಲ್ಲಿ ಕಾಶಿ ವಿದ್ಯಾಪೀಠ

ಶತಮಾನದ ಸಂಭ್ರಮದಲ್ಲಿ ಕಾಶಿ ವಿದ್ಯಾಪೀಠ

ಮಹಾತ್ಮ ಗಾಂಧೀಜಿಯವರು ಬ್ರಿಟೀಷರ ವಿದೇಶೀ ವಸ್ತುಗಳಿಗೆ ಸಡ್ಡು ಹೊಡೆದು, ಸ್ವದೇಶೀ ವಸ್ತುಗಳನ್ನೇ ಉಪಯೋಗಿಸಿ ಎಂದು ಕರೆಕೊಟ್ಟಿದ್ದರು. ಸ್ವಾತಂತ್ರ್ಯ ಹೋರಾಟದ ಈ ಹೊಸ ರೀತಿಯ ಹೋರಾಟಕ್ಕೆ ದೇಶದಾದ್ಯಂತ ಅಭೂತಪೂರ್ವ ಬೆಂಬಲ ಪ್ರಾರಂಭವಾಗಿತ್ತು. ಗಾಂಧೀಜಿಯವರ ಒಂದು ಕರೆಗೆ ಜನರು ತಮ್ಮ ಸರ್ವಸ್ವವನ್ನೂ ದೇಶಕ್ಕಾಗಿ ತ್ಯಾಗ ಮಾಡಲು ಸಿದ್ಧರಾಗಿದ್ದರು. ಬ್ರಿಟೀಷರು ತಯಾರಿಸುತ್ತಿದ್ದ ವಸ್ತುಗಳ ಜೊತೆಗೆ ಅವರು ನಡೆಸುತ್ತಿದ್ದ ಶೈಕ್ಷಣಿಕ ಕೇಂದ್ರಗಳನ್ನೂ ಬಹಿಷ್ಕರಿಸಬೇಕೆಂದು ಹಲವಾರು ಮಂದಿ ಗಾಂಧೀಜಿಯವರಿಗೆ ಸಲಹೆ ನೀಡಿದರು. ಈ ಸಲಹೆ ಅವರಿಗೆ ಬಹಳ ಪ್ರಿಯವೆನಿಸಿತು. 

ಆ ಕಾರಣದಿಂದಲೇ ಗಾಂಧೀಜಿಯವರು ೧೯೨೦ರಲ್ಲಿ ಉತ್ತರ ಪ್ರದೇಶದ ಕಾಶಿಯಲ್ಲಿ ಸ್ವದೇಶಿ ವಿದ್ಯಾಸಂಸ್ಥೆಯೊಂದು ತಲೆ ಎತ್ತಬೇಕೆಂದು ಕರೆಕೊಟ್ಟರು. ಅವರ ಈ ಕನಸಿನ ಕೂಸಿಗೆ ಹಲವಾರು ನೀರು ಎರೆದು ಪೋಷಿಸಿದರು. ಆ ಸಮಯದ ಹಲವಾರು ಮಂದಿ ಸ್ವಾತಂತ್ರ್ಯ ಹೋರಾಟಗಾರರು ಜೊತೆ ಸೇರಿ  ವಿದ್ಯಾಪೀಠ ಸ್ಥಾಪನೆಗೆ ಬೇಕಾದ ರೂಪುರೇಶೆಗಳನ್ನು ಸಿದ್ಧಪಡಿಸಿಕೊಂಡರು. ಬಾಬು ಶಿವಪ್ರಸಾದ್ ಗುಪ್ತಾ ಮತ್ತು ಭಗವಾನ್ ದಾಸ್ ಅವರು ಈ ಕೆಲಸ ಮಾಡಲು ಮುಂಚೂಣಿಯಲ್ಲಿ ನಿಂತು ಕಾರ್ಯ ನಿರ್ವಹಿಸಿದರು.

ಬ್ರಿಟೀಷರ ವಿರುದ್ಧ ಈ ರೀತಿಯ ಕೆಲಸ ಮಾಡುವುದು ಮುಳ್ಳನ್ನು ಮುಳ್ಳಿನಿಂದಲೇ ತೆಗೆಯುವ ಒಂದು ಕ್ರಮವಾಗಿತ್ತು. ವಿದೇಶಿ ಶಿಕ್ಷಣ ನೀಡುವ ಶಾಲಾ ಕಾಲೇಜುಗಳನ್ನು ಬಹಿಷ್ಕರಿಸಬೇಕೆಂಬ ಮಹಾತ್ಮರ ಕರೆಗೆ ಸಾವಿರಾರು ವಿದ್ಯಾರ್ಥಿಗಳು ಕಾಲೇಜನ್ನು ಬಿಟ್ಟು ಬಂದಿದ್ದರು. ಅವರಿಗೆ ಸ್ವದೇಶೀ ಕಾಲೇಜುಗಳು ಪ್ರಾರಂಭವಾದರೆ ನಿಜಕ್ಕೂ ಅನುಕೂಲವಾಗುತ್ತಿತ್ತು.

ಗಾಂಧೀಜಿ ಕರೆಕೊಟ್ಟ ಒಂದು ವರ್ಷದ ಬಳಿಕ ಅಂದರೆ ೧೯೨೧ರ ಫೆಬ್ರವರಿ ೧೦ ರಂದು ವಿದ್ಯಾಸಂಸ್ಥೆಯೊಂದನ್ನು ಪ್ರಾರಂಭಿಸಲಾಯಿತು. ಕಾಶಿಯಲ್ಲಿ ಪ್ರಾರಂಭವಾದ ಕಾಲೇಜು ಆದುದರಿಂದ ಅದಕ್ಕೆ ಕಾಶಿ ವಿದ್ಯಾಪೀಠವೆಂದು ನಾಮಕರಣ ಮಾಡಲಾಯಿತು. ಬ್ರಿಟೀಷರ ಸಮಯದಲ್ಲಿ ಈ ಸ್ವದೇಶಿ ವಿದ್ಯಾಸಂಸ್ಥೆ ಉತ್ತಮ ಶಿಕ್ಷಣಕ್ಕೆ ಹೆಸರುವಾಸಿಯಾಗಿತ್ತು.  ಆ ಸಮಯದ ಅತ್ಯಂತ ಮೇಧಾವಿ ಶಿಕ್ಷಣ ತಜ್ಞರಾದ ಆಚಾರ್ಯ ನರೇಂದ್ರ ದೇವ್, ಬಾಬು ರಾಜೇಂದ್ರ ಪ್ರಸಾದ್, ಕೃಪಲಾನಿ, ಸಂಪೂರ್ಣಾನಂದ, ಬಾಬು ಶಿವಪ್ರಕಾಶ್ ಮೊದಲಾದವರು ಕಾಶಿ ವಿದ್ಯಾಪೀಠದಲ್ಲಿ ಕಲಿಸಲು ಸ್ವ-ಇಚ್ಚೆಯಿಂದ ಮುಂದೆ ಬಂದರು. ಮೊದಲ ಕುಲಪತಿಗಳಾಗಿ ಭಗವಾನ್ ದಾಸ್ ಅವರು ನಿಯುಕ್ತರಾದರು. ವಿದ್ಯಾಪೀಠದ ಮಾರ್ಗದರ್ಶಕ ಮಂಡಳಿಯಲ್ಲಿ ಮಹಾತ್ಮ ಗಾಂಧೀಜಿ, ಲಾಲಾ ಲಜಪತ್ ರಾಯ್, ಜವಾಹರ್ ಲಾಲ್ ನೆಹರೂ, ಕೃಷ್ಣಕಾಂತ ಮಾಳವೀಯ ಮೊದಲಾದ ಮಹನೀಯರು ಇದ್ದರು. 

ಸಂಸ್ಥೆಯ ಮೂಲ ಪುರುಷರಾದ ಶಿವಪ್ರಸಾದ್ ಗುಪ್ತಾರವರು ಮುಂದಿನ ದಿನಗಳಲ್ಲಿ ಆರ್ಥಿಕ ಅಡಚಣೆಯಾಗಿ ವಿದ್ಯಾಸಂಸ್ಥೆ ಮುಚ್ಚಬಾರದೆಂದು ತಮ್ಮ ಸಹೋದರ ದಿವಂಗತ ಹರಿಪ್ರಸಾದ್ ಗುಪ್ತಾ ಇವರ ಹೆಸರಿನಲ್ಲಿ ನಿಧಿಯೊಂದನ್ನು ಸ್ಥಾಪಿಸಿದರು. ಇದರಿಂದ ವಿದ್ಯಾಪೀಠವು ಆರ್ಥಿಕವಾಗಿಯೂ ಬಲಿಷ್ಟವಾಯಿತು. ಆದರೆ ಶಿವಪ್ರಸಾದ್ ಗುಪ್ತಾರವರು ಹೆದರಿದಂತೆ ಏನೂ ಆಗಲಿಲ್ಲ. ಆ ನಿಧಿಯ ಕಾರಣದಿಂದ ಸಂಸ್ಥೆಯು ಮುಂದಿನ ದಿನಗಳಲ್ಲಿ ಬಲಿಷ್ಟವಾಗಿ ಬೆಳೆಯಿತಲ್ಲದೇ, ಭಾರತದ ಸ್ವಾತಂತ್ರ್ಯ ಹೋರಾಟದ ಚಳುವಳಿಗೆ ತಗುಲುತ್ತಿದ್ದ ಖರ್ಚು ವೆಚ್ಚಗಳನ್ನೂ ನಿಭಾಯಿಸಲು ಸಹಕಾರಿಯಾಯಿತು. 

ಭಾರತಕ್ಕೆ ಸ್ವಾತಂತ್ರ್ಯ ದೊರೆತ ಬಳಿಕ ಬಂದ ಸರಕಾರಗಳು ಕಾಶಿ ವಿದ್ಯಾಪೀಠಕ್ಕೆ ಅಗತ್ಯ ನೆರವು ನೀಡತೊಡಗಿದವು. ೧೯೬೩ರಲ್ಲಿ ವಿಶ್ವವಿದ್ಯಾನಿಲಯಗಳ ಅನುದಾನದ ಆಯೋಗವು ಕಾಶಿ ವಿದ್ಯಾಪೀಠಕ್ಕೆ ವಿಶ್ವವಿದ್ಯಾನಿಲಯದ ಮಾನ್ಯತೆ ನೀಡಿತು. ೧೯೭೪ರಲ್ಲಿ ಉತ್ತರ ಪ್ರದೇಶ ರಾಜ್ಯ ಸರಕಾರವು ಈ ಮಾನ್ಯತೆಯನ್ನು ದೃಡೀಕರಿಸಿತು. ಕಾಶಿ ವಿದ್ಯಾಪೀಠವು ಅದರ ವಿದ್ಯಾರ್ಥಿಗಳಿಗೆ ‘ಶಾಸ್ತ್ರಿ' ಎಂಬ ಪದವಿಯನ್ನು ನೀಡುತ್ತಿತ್ತು. ಆ ಶಾಸ್ತ್ರಿ ಪದವಿಯು ಬಿ.ಎ.ಪದವಿಗೆ ತತ್ಸಮಾನವೆಂದು ಮಾನ್ಯತೆ ದೊರೆಯಿತು. 

೧೯೯೫ರಲ್ಲಿ ಕಾಶಿ ವಿದ್ಯಾಪೀಠಕ್ಕೆ ಮಹಾತ್ಮ ಗಾಂಧಿ ಕಾಶಿ ವಿದ್ಯಾಪೀಠವೆಂದು ಪುನರ್ ನಾಮಕರಣ ಮಾಡಲಾಯಿತು. ಈ ಮೂಲಕ ಕಾಶಿ ವಿದ್ಯಾಪೀಠದ ಕನಸನ್ನು ಹುಟ್ಟುಹಾಕಿದ ಮಹಾತ್ಮರನ್ನು ಗೌರವಿಸಿತು. ಇಂದು ಸುಮಾರು ೪೦೦ಕ್ಕೂ ಅಧಿಕ ಕಾಲೇಜುಗಳು ಈ ವಿದ್ಯಾಪೀಠದ ಅಡಿಯಲ್ಲಿ ಬರುತ್ತವೆ. ಕಾಶಿ ವಿದ್ಯಾಪೀಠ ಪ್ರಾರಂಭವಾದಾಗಲೇ ಆರಂಭವಾದ ಭಗವಾನ್ ದಾಸ್ ವಾಚನಾಲಯವು ಈಗ ಎರಡುವರೆ ಲಕ್ಷಕ್ಕೂ ಅಧಿಕ ಪುಸ್ತಕಗಳನ್ನು ಹೊಂದಿರುವ ಬೃಹತ್ ಗ್ರಂಥಾಲಯ ಎಂದು ಹೆಸರುವಾಸಿಯಾಗಿದೆ. ಭಾರತದ ಮಹಾನ್ ನಾಯಕರಾದ ಲಾಲ್ ಬಹಾದ್ದೂರ್ ಶಾಸ್ತ್ರಿ, ಚಂದ್ರಶೇಖರ್ ಆಜಾದ್, ರಾಮಕೃಷ್ಣ ಹೆಗಡೆ ಇವರೆಲ್ಲರೂ ಇದೇ ವಿದ್ಯಾಪೀಠದಲ್ಲಿ ತಮ್ಮ ವ್ಯಾಸಂಗವನ್ನು ಮಾಡಿರುವರು. ಕಾಶಿ ವಿದ್ಯಾಪೀಠಕ್ಕೆ ೫೦ ವರ್ಷ ತುಂಬಿದ ಸವಿನೆನಪಿನಲ್ಲಿ ಭಾರತ ಸರಕಾರವು ಅಂಚೆ ಚೀಟಿಯನ್ನು ಹೊರತಂದಿತ್ತು. ಅದರಲ್ಲಿ ಕಾಶಿ ವಿದ್ಯಾ ಪೀಠದ ಚಿತ್ರವಿದೆ. (ಚಿತ್ರ ಗಮನಿಸಿ). ೨೦ ಪೈಸೆ ಮುಖಬೆಲೆಯ ಕಪ್ಪುಮಿಶ್ರಿತ ಕಂದು ಬಣ್ಣದ ಅಂಚೆಚೀಟಿ ಇದಾಗಿತ್ತು. ಇಂತಹ ಐತಿಹಾಸಿಕ ಹಿನ್ನಲೆ ಹೊಂದಿರುವ ಈ ಕಾಶಿ ವಿದ್ಯಾಪೀಠವು ಈಗ ನೂರು ವರ್ಷಗಳು ತುಂಬಿದ ಸಂಭ್ರಮವನ್ನಾಚರಿಸುತ್ತಿದೆ.

ಚಿತ್ರಗಳು: ಅಂತರ್ಜಾಲ ಕೃಪೆ