ಶತಾವಧಾನದಲ್ಲಿ ಡಾ.ಗಣೇಶ್ ರಚಿಸಿದ ಕೆಲವು ಪದ್ಯಗಳು

ಶತಾವಧಾನದಲ್ಲಿ ಡಾ.ಗಣೇಶ್ ರಚಿಸಿದ ಕೆಲವು ಪದ್ಯಗಳು

ಕವನ

(ದತ್ತಪದಿ ಸಮಸ್ಯೆ)"ಸಿಂಪಲ್ ಅಂಕಲ್ ಆಮ್ ಆದ್ಮಿ ಡಿಂಪಲ್ - ಈ ಪದಗಳನ್ನು ಬಳಸಿ "ಗಣಪತಿಯ ಇಲಿಗೆ ಉಂಟಾದ ಕಷ್ಟ"ದ ಬಗ್ಗೆ


ಶಿಖರಿಣೀ ಛಂದಸ್ಸಿನಲ್ಲಿ ಪದ್ಯ ಬರೆಯಿರಿ. .


ಅವಧಾನಿ: ಸದಾ ಲೇಸಿಂಪಲ್ಲಂಗಕೆಸರಿಯೆನಲ್ ನೋಂತವಿಭುವಂ ಸದಾ ಸದ್ವಿದ್ಯಾಂಕಲ್ಲಲಕೆನೆ ಸಂದಿರ್ಪ ಗಣಂಗಳ್ ಮುದಂ ವೆತ್ತಾಮಾದ್ಮಿ ಪ್ರವಹಣವಿಧೌ ಯಾಮೀನತುಂ ನದಿಪ್ಪೆಂನೋಡಿಂಪಲ್ತೆನುತೆನುವುದು ಗಣೇಶಾಖುವಕಟ"


-----


"ಶ್ರೀಕೃಷ್ಣನ ಜೀವನಸಂಧ್ಯೆಯಲ್ಲಿ ಅವಲೋಕನ" ಕುರಿತು ಸೀಸ ಪದ್ಯ ರಚಿಸಿ.


ಅವಧಾನಿ: ದೋಣಿಯೆರಡೊಳಗಿಟ್ಟೆನಾದೊಡಂ ಕಾಲ್ಗಳಂ ದಡದತ್ತಲೇ ಹುಟ್ಟುಹಾಕುತಿರ್ಪೆಂ ಪೆತ್ತ ತಾಯ್ತಂದೆಯರ್ ತೆತ್ತ ತಾಯ್ತಂದೆವಿರ್ ಬಂಧುಗಳ್ ವೈರಿಗಳ್ ಚಂದಮೀಯಲ್ ಒಲಿದು ಬಂದವರಂತೆ ಗೆಲಲೆ ಬಂದವರೆಂತು ಸಂದರೆಂಬುದೆ ನಾನು ಸಾಜಮಕ್ಕುಂ ಕಲಿತ ಬಿಜ್ಜೆಗಳೇನು ಗಳಿತ ಲಜ್ಜೆಗಳೇನು ಪೆಜ್ಜೆಹಾಕಿರ್ಪುವೈ ಲಯವ ಬಿಡದೇಂ ಬಾಣಮಂಗುಷ್ಟದೊಳ್ ಬೇಯುತಿರೆ ಜರಾಖ್ಯಂ ಬಿಟ್ಟುದಿಂದೆನ್ನ ಕಾಲಿನೊಳ್ ಹೃದಯದಲ್ಲಿ ಜನ್ಮವೀಮಾಂಸೆಯೆ ಮಥಿಸುತಮೃತದವರಂ ಭಾರತಾಖ್ಯಾನಂ ಮತ್ತೆ ಸಾರುತಿಹುದು"


---


ಡಿಸೆಂಬರ್ 4, 2012ಕ್ಕೆ ನಿಮಗೆ ಐವತ್ತು ವರ್ಷ ತುಂಬುವ ಸಂದರ್ಭದಲ್ಲಿ ಅದನ್ನು ನೀವು ಹೇಗೆ ತೆಗೆದುಕೊಳ್ಳುತ್ತೀರಿ?" ಎಂಬ ಪ್ರಶ್ನೆಗೆ-


ಅವಧಾನಿ: ಸುವರ್ಣ ಸಮಯಂ ಬದುಕಿಂಗೆ ಬರಲ್


ವಿವರ್ಣ ಗೊಳುವೆಂ ವಿಷಾದ ವಿಧಿಯಿಂ


ಸುವರ್ಣಜನನೀ ಸಪರ್ಯೆಗೊಲಿದುಂ


ಸವರ್ಣಸುಕವಿ ಪ್ರತಿಷ್ಠೆ ಬರದೆ"


---


"ಡೈಮಂಡ್ ಕಾನ್ಸ್‌ಟೇಬಲ್ ಇಲ್ಲೀಗಲ್ ಪೆಟ್ಟಿಕೋಟ್ - ನಾಲ್ಕು ಪದಗಳನ್ನು ಬಳಸಿ ಹರಿಣೀಪ್ಲುತ ಛಂದಸ್ಸಿನಲ್ಲಿ ಪದ್ಯ ರಚಿಸಿ. ಅವಧಾನಿ: ಸರಸತಿಮಗಂ ಕಂಡೈಮಂಡಂ ಕವಿತ್ವ ಪಯೋಧಿಯಾ ವಿರಚನೆಗೆಕಾನ್ ಇಸ್ಟೇಬಲ್ ಮೇ ಪ್ರಭೂತ ರಸಾನ್ನದೊಳ್ ಮೆರೆದಪನೆ ತಾನಿಲ್ಲೀಗಳ್ ನಾಂ ಕರಿಷ್ಣುವೆಜಿಷ್ಣುವೇ ಸರಿ ಝಳುಪಿಸಲ್ ಪೆಟ್ಟೀಕೋಟೀಪ್ರಯೋಗಕಲರ್ವನೇಂ"


-----


ಈ ಶತಾವಧಾನವನ್ನು ಕನ್ನಡ ತಾಯಿಗೆ ಸಮರ್ಪಣ ಮಾಡಿ, ಮುಂದಿನ ಶತಾವಧಾನಕ್ಕೆ ಆಶಯವನ್ನು ಸಲ್ಲಿಸುತ್ತ ’ಸ್ರಗ್ಧರಾ ವೃತ್ತ’ದಲ್ಲಿ ಪದ್ಯ ರಚಿಸಿ." ಅವಧಾನಿ- ತಾಯೇ ಕರ್ಣಾಟಭಾಣೀ ಕವನ ಸವನಮಂ ಪೂರಣಂ ಗೈದೆನೀಗಳ್ ಶ್ರೇಯೋಲ್ಲಾಸ ಪ್ರಪಂಚೇ ಶತಕಕೆ ಸಮಮೌ ಪದ್ಯವಿದ್ಯಾಪ್ರಕಾರಂ ಮೇಯಾಮೇಯಂಪದಾರ್ಥಂಗ್ರಥಿತಮಿದುಸದಾ ಸೃಗ್ಧರೇ ಸೃಗ್ದರಾರ್ಥಂ ಗೇಯಂ ಕೊಳ್ಳೌ ಮಹಿಷ್ಠಂ ಭರದೇ ಯುವಜನರ್ ಬರ್ಕೇ ದಿವ್ಯಾವಧಾನರ್"


-----------


""ಬೆಳಗ್ಗೆ ಹೂವು ಕೊಯ್ಯಲು ಹಿತ್ತಲಿಗೆ ಹೋದಾಗ ಕಂಡ/ಅನುಭವಿಸಿದ ಕ್ಷಣ" ಇದರ ಬಗ್ಗೆ ಪದ್ಯ ಬರೆಯಿರಿ.


ಅವಧಾನಿ ’ಪ್ರಮಿತಾಕ್ಷರ’ ಛಂದಸ್ಸನ್ನು ಬಳಸಿ ಈ ಪದ್ಯ ಹೇಳಿದರು. ರಜನೀಮಹಾಧಿಮಹಿಷೀಸುಮಮುಂ ತ್ಯಜಿಸುತ್ತೆತನ್ನ ರುಚಿಯಂ ಶುಚಿಯಂ ಸೃಜಿಸಿರ್ಪುದಲ್ತೆ ಸುವಿಭಾತದೊಳೇ ನಿಜಚಿತ್ತಸಂಸ್ಥದುರುವೇದನೆಯಂ"


(ಶ್ರೀವತ್ಸ ಜೋಷಿಯವರ ಫೇಸ್ ಬುಕ್ ನಿಂದ ಸಂಗ್ರಹಿಸಿದ್ದು)