ಶನಿಕಾಟ

ಶನಿಕಾಟ

ಬರಹ

ರಮಾಕಾಂತ ಬಿ.ಎಸ್.ಸಿ ಮುಗಿಸಿದ ನಂತರ ಕೆಲಸಕ್ಕಾಗಿ ಅಲ್ಲಿ ಇಲ್ಲಿ ಪ್ರಯತ್ನಿಸುತ್ತಿದ್ದ. ಎಲ್ಲೂ ಕೆಲಸ ಸಿಕ್ಕಿರಲಿಲ್ಲ. ಆಗ ಅವನ ಸೋದರಮಾವ ವಿಶ್ವನಾಥ ಅವನಿಗೆ ಸುಮ್ಮನೆ ಮನೆಯಲ್ಲಿ ಕುಳಿತಿರುವ ಬದಲು ಎಲ್.ಎಲ್.ಬಿ.ಯನ್ನಾದರೂ ಮಾಡು ಎಂದು ಹೇಳಿದರು. ರಮಾಕಾಂತ ಹಾಗೇ ಮಾಡಿದ. ಆದರೆ ಈ ಮಧ್ಯೆ ಅವನಿಗೆಲ್ಲೂ ಕೆಲಸ ಸಿಗಲಿಲ್ಲ. ವಿಶ್ವನಾಥರೇ ತಮ್ಮ ಸ್ನೇಹಿತ ಮಾರ್ಕಂಡೇಯ ಎಂಬ ಒಬ್ಬ ಪ್ರಸಿದ್ಧ ಲಾಯರಿನ ಹತ್ತಿರ ಅಸಿಸ್ಟೆಂಟ್ ಆಗಿ ಕೆಲಸ ಮಾಡಲು ಸೇರಿಸಿದರು. ಅದಕ್ಕೆ ಪ್ರತಿಯಾಗಿ ತನ್ನ ಮಗಳು ಮನೋರಮೆಯನ್ನು ಮದುವೆಯಾಗಲು ಕೇಳಿಕೊಂಡರು. ಈ ಪ್ರಸ್ತಾಪಕ್ಕೆ ರಮಾಕಾಂತ ಇಲ್ಲ ಎನ್ನಲಾಗಲಿಲ್ಲ.

ಮನೋರಮೆಯ ಬಗ್ಗೆ ಒಂದೆರಡು ಮಾತುಗಳು ಹೇಳುವುದು ಸೂಕ್ತ. ಮನೋರಮೆ ನೋಡಲು ಅಂದವಾಗಿಲ್ಲದಿದ್ದರೂ ಕಣ್ಣು ಮೂಗು ಎಲ್ಲಿರಬೇಕೋ ಅಲ್ಲಲ್ಲಿಯೇ ಇದ್ದವು. ಹಾಗೂ ತಮ್ಮ ಪಾಡಿಗೆ ಸರಿಯಾಗಿ ಕೆಲಸ ಮಾಡಿಕೊಂಡಿದ್ದವು. ಓದು ಮುಗಿದ ಕೂಡಲೇ ರಿಸರ್ವ್ ಬ್ಯಾಂಕಿನಲ್ಲಿ ಗುಮಾಸ್ತೆಯ ಹುದ್ದೆ ದೊರಕಿತ್ತು. ಕೈನಲ್ಲಿ ಕೆಲಸ ಮತ್ತು ಹದಕ್ಕೆ ಬಂದಿದ್ದ ಹೆಣ್ಣಾಗಿದ್ದರಿಂದಲೇನೋ ಅವಳನ್ನು ಮದುವೆಯಾಗಲು ಗಂಡುಗಳ ದಂಡೇ ಕಾಯುತ್ತಿತ್ತು. ಆದರೂ ಯಾರೆಂದರೆ ಅವರಿಗೆ ಕೊಟ್ಟು ಮದುವೆ ಮಾಡಲು ವಿಶ್ವನಾಥರು ತಯಾರಿರಲಿಲ್ಲ. ಈಗ ಎದುರಿಗೇ ಅಕ್ಕನ ಮಗ ಇದ್ದಾನೆ. ಹೇಗಿದ್ದರೂ ತಾನು ಹೇಳಿದ ಹಾಗೇ ಕೇಳಿಕೊಂಡಿದ್ದಾನೆ. ತನಗೆ ಗಂಡು ಮಕ್ಕಳೂ ಇಲ್ಲ. ಮನೆ ಅಳಿಯ ಆಗಿರೋಕ್ಕೆ ಎಲ್ಲ ರೀತಿಯಲ್ಲೂ ಸರಿಯಾಗಿದ್ದಾನೆ. ಅದೂ ಅಲ್ಲದೇ ಸತ್ತು ಸ್ವರ್ಗ ಸೇರಿದ ಅಕ್ಕನ ಆತ್ಮಕ್ಕೆ ಶಾಂತಿ ದೊರೆತಂತೆಯೂ ಆಗುವುದು ಎಂದು ಯೋಚಿಸಿ ಮನೋರಮೆಯನ್ನು ರಮಾಕಾಂತನಿಗೇ ಕೊಟ್ಟು ಮದುವೆ ಮಾಡಲು ನಿರ್ಧರಿಸಿದರು.

ಸರಿ ಒಂದೇ ತಿಂಗಳಲ್ಲಿ ರಮಾಕಾಂತ ಮತ್ತು ಮನೋರಮೆಯರ ಮದುವೆ ಆಗಿಯೇ ಹೋಯ್ತು. ಹಾಂ! ಇಲ್ಲಿ ಮನೋರಮೆಯ ಇಷ್ಟ ಅನಿಷ್ಟಗಳ ಬಗ್ಗೆ ವಿಶ್ವನಾಥರು ಯೋಚಿಸಲೂ ಇಲ್ಲ, ಅವಳನ್ನು ಕೇಳಲೂ ಇಲ್ಲ. ಪಾಪ ಅಪ್ಪನ ಮಾತು ಮೀರದಂತಹ ಮಗಳು, ಅಪ್ಪ ಮಾಡಿದ್ದೆಲ್ಲಾ ಸರಿಯೇ ಎಂದು ತಿಳಿದಿದ್ದಳು. ವಿಶ್ವನಾಥರು ನಿರ್ಧರಿಸಿದಂತೆಯೇ ಸರಳವಾಗಿ ಮನೆಯೊಳಗೇ ಮದುವೆ ನಡೆದು ಹೋಗಿತ್ತು.

ಮದುವೆಯಾದ ಮರುದಿನದಿಂದಲೇ ರಮಾಕಾಂತನಿಗೆ ಕೀಳರಿಮೆ ಉಂಟಾಗತೊಡಗಿತ್ತು. ತನಗೆ ಸರಿಯಾದ ಕೆಲಸವಿಲ್ಲ ಹಾಗೂ ತಿಂಗಳು ತಿಂಗಳಿಗೆ ನಿಖರವಾದ ವರಮಾನವಿಲ್ಲ. ಆದರೆ ತನ್ನ ಹೆಂಡತಿಗೆ ತಿಂಗಳ ಕೊನೆಗೆ ಸರಿಯಾಗಿ ಕೈ ತುಂಬಾ ಸಂಬಳ ಬರ್ತಿರೋದೇ ಇದಕ್ಕೆ ಕಾರಣ. ಮನೋರಮೆಗೆ ಇದರ ಬಗ್ಗೆ ಯೋಚನೆಯೇ ಬಂದಿರಲಿಲ್ಲ. ಅವಳ ಸ್ವಭಾವದಲ್ಲಿ ಹಣಕ್ಕೆ ಪ್ರಾಮುಖ್ಯತೆಯೇ ಇರಲಿಲ್ಲ. ಜೀವನದಲ್ಲಿ ಎಂದೂ ಸಂತೋಷದಿಂದಿರಬೇಕೆಂಬುದೊಂದೇ ಹಂಬಲ.

ರಮಾಕಾಂತನಿಗೆ ಲಾಯರಗಿರಿಯಲ್ಲಿ ಅವನ ಸೀನಿಯರ್ ಎಷ್ಟು ಕೊಟ್ಟರೆ ಅಷ್ಟು ಅಷ್ಟೇ. ಅದಕ್ಕೇನು ಇತಿ ಮಿತಿಯೇ ಇಲ್ಲ. ಒಮ್ಮೆಮ್ಮೆ ದಿನಕ್ಕೆ ೫೦ ಕೆಲವೊಮ್ಮೆ ೫೦೦. ಸೀನಿಯರ್ ಅವರಿಗೆ ಎಷ್ಟು ವರಮಾನ ಬರುತ್ತಿತ್ತೋ ಅದರಲ್ಲಿ ಕೆಲವಂಶ ಮಾತ್ರ ಇವನಿಗೆ ಕೊಡುತ್ತಿದ್ದರು. ಲೀವ್ ಅಪ್ಲಿಕೇಶನ್ ನಲ್ಲಿ ಬರುತ್ತಿದ್ದ ೫-೧೦ ರೂಪಾಯಿಗಳಲ್ಲೂ ಅವರಿಗೆ ಹೆಚ್ಚಿನ ಪಾಲು ಸಂದಾಯವಾಗಬೇಕಿತ್ತು. ತನಗೆ ಸ್ವಂತ ಪ್ರಾಕ್ಟೀಸ್ ಮಾಡಲು ಧೈರ್ಯ ಕೂಡಾ ಇಲ್ಲ.

ಹೆಂಡತಿಯೊಡನೆ ಪಿಕ್ಚರ್ ನೋಡಲು ಹೋದಾಗ ಅವಳು ಬಾಲ್ಕನಿಗೆ ಹೋಗೋಣವೆಂದರೆ, ಇವನು ಜೇಬು ತಡಕಾಡಿ, 'ಬೇಡ ಮಿಡಲ್ ಕ್ಲಾಸಿಗೇ ಹೋಗೋಣ, ಬಾಲ್ಕನಿಯಲ್ಲಿ ತಿಗಣೆ ಕಾಟ' ಅಂತ ಏನೋ ಸಬೂಬು ಹೇಳಿಬಿಡುತ್ತಿದ್ದ. ಮನೋರಮೆಗೆ ಇವನ ಪರಿಸ್ಥಿತಿಯ ಅರಿವಾಗಿತ್ತು. ಅವಳೇ ಅವನ ಕೈಗೆ ಹಣವನ್ನಿತ್ತು ಬಾಲ್ಕನಿಗೆ ತಿಕೀಟು ತೆಗೆಸುತ್ತಿದ್ದಳು. ರಮಾಕಾಂತ ಮನೆ ಅಳಿಯನಾಗಿದ್ದರಿಂದಲೇನೋ ಅವನಿಗೆ ಹಣದಡಚಣೆಯ ಬಿಸಿ ಅಷ್ಟಾಗಿ ತಟ್ಟಿರಲಿಲ್ಲ.

ಮುಂದೊಂದು ದಿನ ಸಕ್ಕರೆ ಕಾಯಿಲೆ ಉಲ್ಬಣವಾಗಿ ವಿಶ್ವನಾಥರು ಹಾಸಿಗೆ ಹಿಡಿದವರು ಮತ್ತೆ ಮೇಲೇಳಲೇ ಇಲ್ಲ. ಅಷ್ಟು ದೊಡ್ಡ ಮನೆಗೆ ರಮಾಕಾಂತನೊಬ್ಬನೇ ಗಂಡಸು. ಅವನಿಗೆ ಇದು ಹೆಮ್ಮೆಯ ವಿಷಯವಾಗಿತ್ತು.

ಈಗೀಗ ಹೆಂಡತಿಯೊಡನೆ ಸಣ್ಣ ಪುಟ್ಟ ವಿಷಯಗಳಿಗೆಲ್ಲಾ ಜಗಳ ತೆಗೆಯುತ್ತಿದ್ದನು. ಹೆಂಡತಿ ಬ್ಯಾಂಕಿಗೆ ಹೋಗುವಾಗ ಅವಳಿಗರಿವಿಲ್ಲದಂತೆ ಹಿಂಬಾಲಿಸಿ, ಅವಳು ಬಸ್ಸಿಗಾಗಿ ಕ್ಯೂನಲ್ಲಿ ಗಂಡಸರ ಹಿಂದೆ ನಿಂತರೂ ಅದರ ಬಗ್ಗೆ ಅಂದು ಸಂಜೆ ಮನೆಯಲ್ಲಿ ದೊಡ್ಡ ಜಗಳವೇ ಆಗುತ್ತಿತ್ತು. ಒಮ್ಮೊಮ್ಮೆ ಈ ಜಗಳ ತಾರಕಕ್ಕೇರಿದಾಗ ರಮಾಕಾಂತ ಮನೋರಮೆಯನ್ನು ಹೊಡೆದದ್ದೂ ಉಂಟು. ಮದುವೆಯಾದಂದಿನಿಂದ ಮನೋರಮೆಗೆ ಮನೆಯಲ್ಲಿ ಮನಶ್ಶಾಂತಿಯೇ ಸಿಗುತ್ತಿರಲಿಲ್ಲ. ಬ್ಯಾಂಕಿನಲ್ಲಿ ಸ್ವಲ್ಪ ಮಟ್ಟಿನ ಸಮಾಧಾನ ಸಿಗುತ್ತಿದ್ದುದರಿಂದ, ಅವಳು ಯಾವ ಕಾರಣಕ್ಕೂ ಬ್ಯಾಂಕಿಗೆ ಮಾತ್ರ ರಜೆ ಹಾಕುತ್ತಿರಲಿಲ್ಲ. ಅಲ್ಲಿ ಅವಳ ಸ್ನೇಹಿತೆಯರೊಡನೆ ತನ್ನ ಕಷ್ಟ ಸುಖಗಳನ್ನು ಹೇಳಿಕೊಂಡರೆ ಎಲ್ಲಿಲ್ಲದ ಸಮಾಧಾನ ಸಿಗುತ್ತಿತ್ತು. ಈಗ ವರ್ಗವಾಗಿ ಬಂದಿದ್ದ ಅವಳ ಬಾಸ್ ತೇಲಂಗ್ ಇವಳಿಗೆ ಎಲ್ಲ ರೀತಿಯ ಉತ್ತೇಜನ ನೀಡುತ್ತಿದ್ದ. ಪ್ರಮೋಶನ್ ಪರೀಕ್ಷೆ ಬರೆಯಲೂ ತಿಳಿಸಿದ್ದ.

ಈಗೀಗ ರಮಾಕಾಂತ ಲಾಯರಿ ಕೆಲಸದ ಜೊತೆ ಗೂಢಚಾರಿ ಕೆಲಸವನ್ನೂ ಮಾಡುತ್ತಿದ್ದ. ಅದ್ಯಾಕೆ ಅವನಿಗೆ ತನ್ನ ಹೆಂಡತಿಯ ಬಗ್ಗೆ ಹೀಗೆ ಅನುಮಾನ ಬಂದಿತ್ತೋ? ಹೀಗೇ ಸ್ವಲ್ಪ ದಿನ ಕಳೆಯಲು ಮನೋರಮೆ ಗರ್ಭಿಣಿ ಆದಳು. ಒಮ್ಮೆ ಅವಳು ಡಾಕ್ಟರ್ ಹತ್ತಿರ ಹೋಗಬೇಕಾಗಿ ಬ್ಯಾಂಕಿಗೆ ರಜೆ ಹಾಕಿದ್ದಳು. ಗಂಡನಿಗೆ ತನ್ನ ಜೊತೆ ಡಾಕ್ಟರ್ ಬಳಿ ಬರಲು ಕೇಳಿಕೊಂಡಳು. ಅವನು ತನಗೇನೋ ಕೆಲಸ ಇದೆ = ನೀನೇ ನಿನ್ನಮ್ಮನನ್ನು ಕರೆದುಕೊಂಡು ಹೋಗು ಎಂದು ಸಬೂಬು ಹೇಳಿದ್ದ. ಹಾಗೆ ಹೇಳಿ ತನ್ನ ಕೆಲಸಕ್ಕೆ ಹೋಗುವ ಬದಲು ಮತ್ತೆ ಗೂಢಚಾರಿ ಕೆಲಸ ಮಾಡಲು ಬ್ಯಾಂಕಿಗೆ ಹೋಗಿದ್ದ. ಅಲ್ಲಿ ಅವರಿವರನ್ನು ಮನೋರಮೆಯ ಬಗ್ಗೆ ವಿಚಾರಿಸಲು ಮಿಶ್ರ ಪ್ರತಿಕ್ರಿಯೆಗಳು ಬಂದವು. ಕೆಲವರು ತೇಲಂಗ್ ಮತ್ತು ಮನೋರಮೆಯ ಸಂಬಂಧವನ್ನೂ ಕಲ್ಪಿಸಿದ್ದರು. ಈ ವಿಷಯವನ್ನು ಅವನು ತನ್ನಲ್ಲಿಯೇ ಇಟ್ಟುಕೊಂಡು ಮನೋರಮೆಯಲ್ಲಿ ವಿಚಾರಿಸಿರಲಿಲ್ಲ. ಅಂದು ಸಂಜೆ ಸಾರಿಗೆ ಉಪ್ಪು ಹೆಚ್ಚಾಗಿದೆಯೆಂದು ಜಗಳ ತೆಗೆದವನು ಹೆಂಡತಿಗೆ ಹೊಡೆದು ಅವಳು ಪ್ರಜ್ಞೆ ತಪ್ಪಿ ಬೀಳುವಲ್ಲಿಗೆ ಕೊನೆಗೊಂಡಿತ್ತು. ಮನೋರಮೆ ಮತ್ತು ಅವಳಮ್ಮನಿಗೆ ಮನ ರೋಸಿ ಹೋಗಿತ್ತು. ಹೋಗಿ ಹೋಗಿ ಇಂತಹ ಕ್ರೂರ ಪ್ರಾಣಿ ನಮಗೆ ಗಂಟು ಬಿದ್ದಿದೆಯಲ್ಲ ಎಂದು ಮಮ್ಮಲ ಮರುಗಿದರು.

ರಮಾಕಾಂತನ ಕೈನಲ್ಲಿ ಕಾಸಿಲ್ಲದೇ ಇದ್ದಾಗ್ಯೂ ಕುಡಿತದ ಚಟ ಬೇರೆ ಅಂಟಿಸಿಕೊಂಡಿದ್ದ. ಹೆಂಡತಿಗೆ ಹೊಡೆದು ಬಡಿದು ಅವಳಿಂದ ದುಡ್ಡು ಕಸಿಯುತ್ತಿದ್ದನು. ಅವಳಾದರೋ ಹಸುವಿನಂತಹವಳು. ಇವನಿಗೆ ಸರಿಯಾದ ವರಮಾನ ವಿಲ್ಲದೇ ಇರೋದೇ ಅವಳೊಂದಿಗೆ ಹೀಗೆ ವರ್ತಿಸುತ್ತಿರುವುದಕ್ಕೆ ಕಾರಣ, ಎಂಬ ಅಂಶವನ್ನು ಅರಿತಿದ್ದು ಎಲ್ಲವನ್ನೂ ಸಹಿಸಿಕೊಂಡು ಹೋಗುತ್ತಿದ್ದಳು.

ಮುಂದೆ ಒಂದು ದಿನ ಮನೋರಮೆ ಗಂಡು ಮಗುವಿನ ತಾಯಿಯಾದಳು. ಅಂದು ಮನೆಯಲ್ಲಿ ಹಣದ ಅವಶ್ಯಕತೆ ಹೆಚ್ಚಾಗಿ ಒಂದೊಪ್ಪತ್ತು ಬ್ಯಾಂಕಿಗೆ ಹೋಗಿ ಬರಬೇಕಾಯ್ತು. ಅವಳು ಆ ಕಡೆ ಹೋಗುತ್ತಿದ್ದ ಹಾಗೆಯೇ ಈ ಕಡೆ ರಮಾಕಾಂತನ ಗೂಡಚರ್ಯೆ ಪ್ರಾರಂಭವಾಗಿತ್ತು. ಮನೋರಮೆ ಬ್ಯಾಂಕಿನಲ್ಲಿ ಹಣ ತೆಗೆದು ಅವಳ ಬಾಸ್‍ನನ್ನು ಒಮ್ಮೆ ಮಾತನಾಡಿಸಿ ಬರೋಣವೆಂದು ಹೋಗಿದ್ದಳು. ಅದನ್ನು ನೋಡಿಯೇ ಅಂದು ಸಂಜೆ ಮನೆಯಲ್ಲಿ ಕುರುಕ್ಷೇತ್ರ ನಿರ್ಮಾಣವಾಗಿತ್ತು.

ಮುಂದೆ ... ಸದ್ಯದಲ್ಲೇ ನಿರೀಕ್ಷಿಸಿ...

ಅಂದು ಸಂಜೆ ರಮಾಕಾಂತ ಚೆನ್ನಾಗಿ ಕುಡಿದು ಬಂದು ಮನೆಯಲ್ಲಿ ದೊಡ್ಡ ಗಲಾಟೆ ಆರಂಭಿಸಿದ. ಇಷ್ಟು ದಿನಗಳೂ ಸುಮ್ಮನೆ ಇದ್ದ ಮನೋರಮೆಯ ಮನ ರೋಸಿಹೋಗಿತ್ತು. ಎಷ್ಟು ದಿನ ಅಂತ ಅವಳೂ ಸುಮ್ಮನಿದ್ದಾಳು. ಅವಳು ಮತ್ತು ಅವಳಮ್ಮನೂ ರಮಾಕಾಂತನ ಮೇಲೆ ತಿರುಗಿಬಿದ್ದರು. ಕುಡಿತದ ಅಮಲಿನಲ್ಲಿ ರಮಾಕಾಂತ ಹೆಂಡತಿಯನ್ನೂ ಮತ್ತು ಅವಳಮ್ಮನನ್ನೂ ಮಡಿಕೋಲಿನಿಂದ ಚೆನ್ನಾಗಿ ಹೊಡೆದಿದ್ದನು. ಆ ಹೊಡೆತದಲ್ಲಿ ಅವಳಮ್ಮನ ತಲೆಗೆ ಪೆಟ್ಟು ಬಿದ್ದು ಪ್ರಜ್ಞೆ ಕಳೆದುಕೊಂಡಿದ್ದಳು. ಅದನ್ನು ನೋಡಿದ ರಮಾಕಾಂತ ಹೆದರಿಕೆಯಿಂದ ಓಡಿ ಹೋಗಿದ್ದನು.
ಮನೋರಮೆ ತಾಯಿಯನ್ನು ಹತ್ತಿರದ ನರ್ಸಿಂಗ್ ಹೋಂಗೆ ಸೇರಿಸುವಷ್ಟರಲ್ಲೇ ದೊಡ್ಡ ಜೀವ ಇಹಲೋಕ ಯಾತ್ರೆ ಮುಗಿಸಿಯಾಗಿತ್ತು. ದಿಕ್ಕೇ ತೋಚದಂತಾಗಿದ್ದ ಮನೋರಮೆ ತಾಯ ಶವವನ್ನು ಮನೆಗೆ ತರಲು ಅಲ್ಲಿ ಇನ್ನೊಂದು ಆಘಾತ ಕಾದಿತ್ತು. ಆತುರದಲ್ಲಿ ಮನೆ ಬಾಗಿಲಿಗೆ ಬೀಗ ಹಾಕದೇ ಹೋಗಿದ್ದಳು, ಮನೋರಮೆ. ಮನೆಯಲ್ಲಿ ಮಲಗಿದ್ದ ಮಗು ಈಗ ಕಾಣೆಯಾಗಿದೆ. ದಿಕ್ಕೇ ತೋಚದಂತೆ ಕಂಗೆಟ್ಟು ಕೂತಿದ್ದಾಗ ನೆರೆ ಹೊರೆಯವರು ಮತ್ತು ಅವಳ ಸ್ನೇಹಿತೆಯರೂ ಹಾಗೂ ಅವಳ ಬಾಸ್ ತೇಲಂಗ್ ಮನೆಗೆ ಬಂದಿದ್ದರು.

ಇಲ್ಲಿ ತೇಲಂಗ್ ಬಗ್ಗೆ ಒಂದೆರಡು ಮಾತುಗಳು. ಈತ ಮೂಲತ: ಮುಂಬಯಿಯವನು. ವರ್ಗವಾಗಿ ಬೆಂಗಳೂರಿಗೆ ಬಂದಿದ್ದ. ೪೫ ವರ್ಷ ವಯಸ್ಸಿನ ಈತನ ಮಕ್ಕಳು ಸ್ಕೂಲು ಕಾಲೇಜುಗಳಲ್ಲಿ ಓದುತ್ತಿದ್ದು, ಅವನ ಹೆಂಡತಿಯ ಮುಂಬಯಿ ಟೆಲಿಫೋನ್ಸ್‍ನಲ್ಲಿ ಕೆಲಸ ಮಾಡುತ್ತಿದ್ದಳು. ಮಕ್ಕಳ ಓದಿಗೆ ತೊಂದರೆ ಆಗಿದಿರಲೆಂದೂ, ಪತ್ನಿಯನ್ನು ಬೆಂಗಳೂರಿಗೆ ವರ್ಗ ಮಾಡಿಸುವುದು ಕಷ್ಟವೆಂದು ತಿಳಿದು ಅವನೊಬ್ಬನೇ ಇಲ್ಲಿದ್ದ. ಹೇಗೂ ೩-೪ ವರ್ಷಗಳ ತರುವಾಯ ಮರಳಿ ಮುಂಬಯಿಗೆ ಹೋಗಬಹುದೆಂಬುದು ಅವನ ಲೆಕ್ಕಾಚಾರ್‍ಅ. ಬ್ಯಾಂಕಿನ ಕೆಲಸದಲ್ಲಿ ತುಂಬಾ ಜಾಗರೂಕತೆ ಮತ್ತು ಚಾಣಾಕ್ಷತೆ ಇದ್ದುದರಿಂದ ಇವನಿಗೆ ಹಿರಿಯ ಸ್ಥಾನ ಲಭಿಸಿತ್ತು.
ತೇಲಂಗ್ ಅವರೇ ಮುಂದೆ ನಿಂತು ಶವ ಸಂಸ್ಕಾರವನ್ನು ಮಾಡಿದ್ದ. ನಂತರ ಮನೋರಮೆಯನ್ನು ಕರೆದೊಯ್ದು ಮಗು ಕಾಣೆಯಾದುದರ ಬಗ್ಗೆ ಮತ್ತು ಕೊಲೆಯ ಆಪಾದನೆ ಮೇಲೆ ಪೊಲೀಸ್ ಕಂಪ್ಲೇಂಟ್ ಕೊಡಿಸಿದ್ದರು. ದೂರು ದಾಖಲಾತಿ ಮಾಡಲು ಅದೇಕೊ ಪೊಲೀಸರು ಅಷ್ಟು ಮುತುವರ್ಜಿ ತೋರಿಸಲಿಲ್ಲ. ಈಗ ಮನೋರಮೆಯ ಮುಂದೆ ಭೂತಾಕಾರವಾಗಿ ಬಂದು ನಿಂತ ಪ್ರಶ್ನೆ - ಮುಂದೇನು ಮಾಡುವುದು? ತನ್ನವರು ಎನ್ನಲು ಯಾರಿದ್ದಾರೆ? ಮಗುವಿಲ್ಲದೇ ಇರಲಾಗುವುದೇ?
ಇದೇ ಪರಿಯಲ್ಲಿ ಯೋಚಿಸುತ್ತಿದ್ದಂತೆ ಪ್ರಜ್ಞಾಹೀನಳಾಗಿ ಬಿದ್ದಳು. ಸುತ್ತಲಿದ್ದವರೆಲ್ಲರೂ ಅವಳನ್ನು ಮನೆಗೆ ಕರೆದೊಯ್ದು ತಲೆಗೆ ನೀರು ತಟ್ಟಿ ಡಾಕ್ಟರನ್ನು ಕರೆಸಿ ಔಷೋಧೋಪಚಾರ ಮಾಡಿಸಿದ್ದರು. ಇನ್ನೂ ಹಸಿ ಬಾಣಂತಿಗೆ ಈಗ ಶಾಕ್ ಆಗಿದೆಯೆಂದೂ ಅವಳು ಅಪಸ್ಮಾರ ರೊಗಕ್ಕೆ ತುತ್ತಾಗಿದ್ದಾಳೆಂದೂ, ಅವಳನ್ನು ಈಗ ಮಗುವಿನಂತೆ ನೋಡಿಕೊಳ್ಳಬೇಕೆಂದೂ ಡಾಕ್ಟರು ತಿಳಿಸಿದ್ದರು.
ಎಲ್ಲರಿಗೂ ಅವರದ್ದೇ ತರಲೆ ತಾಪತ್ರಯಗಳು. ಇದನ್ನೆಲ್ಲಾ ಹೊತ್ತುಕೊಳ್ಳಲು ಯಾರೂ ತಯಾರಿರಲಿಲ್ಲ. ಕೊನೆಗೆ ವಿಧಿಯಿಲ್ಲದೇ ಸಿಕ್ಕಿ ಬಿದ್ದವ ತೇಲಂಗ್. ಅಂದು ರಾತ್ರಿಯಾದರೂ ಅವಳೊಂದಿಗಿರೋಣವೆಂದುಕೊಂಡು ಅಲ್ಲಿಯೇ ಉಳಿಯಲು ನಿರ್ಧರಿಸಿದ.
ಮಧ್ಯರಾತ್ರಿಯಲ್ಲಿ ಮನೋರಮೆಗೆ ಪ್ರಜ್ಞೆ ಬಂದು ನೀರು ಕೇಳಿದಳು. ತೇಲಂಗ್ ನೀರನ್ನು ಕೊಡುವಾಗ ಅವಳಿಗೆ ಹಿಂದಿನದ್ದೆಲ್ಲಾ ನೆನಪಿಗೆ ಬಂದಿತು. ಹಾಗೇ ತೇಲಂಗ್ ಯಾವ ಜನ್ಮದ ಸಂಬಂಧಿಯೋ ಎಂದು ನೆನೆಸಿಕೊಂಡಾಗ ಅವಳಿಗರಿವಿಲ್ಲದೆಯೇ ಕಣ್ತುಂಬಿ ಬಂದಿತು. ಅವಳ ಕಣ್ಣಲ್ಲಿನ ದೈನ್ಯ ನೋಟವನ್ನು ಎದುರಿಸಲಾರದಾದ ತೇಲಂಗ. ಅವಳ ಕಣ್ಣುಗಳು ಹೃದಯ ವಿದ್ರಾವಕವಾಗಿ ಅವನಲ್ಲಿ ಬದುಕಿನ ಭಿಕ್ಷೆಯನ್ನು ಬೇಡುತ್ತಿದ್ದವು. ತೇಲಂಗ ಅವಳ ಈ ಯಾಚನಾ ದೃಷ್ಟಿಯನ್ನು ನೋಡಲಶಕ್ಯನಾದ. ಆ ಕ್ಷಣದಲ್ಲಿ ಅವನ ಕಣ್ಣಿಗೆ ಅವಳು ಬಲಹೀನವಾದ ಮಗುವಿನಂತೆ ಕಂಡಿದ್ದಳು. ಅವಳಿಗೆ ನೀರು ಕೊಟ್ಟು ಮುಂದೇನು ಮಾಡುವೆ ಎಂದು ಕೇಳಿದ.
ಅದಕ್ಕವಳು ಏನನ್ನೂ ನಿರ್ಧರಿಸಿಲ್ಲ, ತನಗೇನೂ ತೋಚುತ್ತಲೇ ಇಲ್ಲ, ಮಗು ಮಗು, ಅಮ್ಮ ಅಮ್ಮ ಎಂದು ಹಾಗೇ ಮತ್ತೆ ಮೂರ್ಛೆ ಹೋದಳು. ಅವಳಿಗೇನಾಯಿತೆಂದು ತಿಳಿಯದೇ ತೇಲಂಗನಿಗೆ ತುಂಬಾ ಘಾಬರಿಯಾಯಿತು. ತಾನು ಅವಳೊಂದಿಗೆ ಈ ವಿಷಯದ ಬಗ್ಗೆ ಈಗ ಮಾತನಾಡುವುದು ಥರವಲ್ಲ, ಸ್ವಲ್ಪ ದಿನ ಕಳೆಯಲಿ ಎಂದು ನಿರ್ಧರಿಸಿದ.
ಮರುದಿನ ಬೆಳಗ್ಗೆ ಡಾಕ್ಟರೊಡನೆ ಈ ವಿಷಯವಾಗಿ ಚರ್ಚಿಸಿದ. ಅವರು ಹೇಳಿದ್ದೇನೆಂದರೆ ಸ್ವಲ್ಪ ದಿನಗಳ ಮಟ್ಟಿಗೆ ಮನೋರಮೆ ಈ ಮನೆಯಲ್ಲಿರುವುದು ಬೇಡ, ಜಾಗ ಬದಲಾದರೆ ಅವಳ ಮೇಲಾಗಿರುವ ಈ ಮನೋಗಾಯ ಗುಣವಾಗಬಹುದು, ಅಂತ. ಹಾಗಾದರೆ ಇವಳನ್ನು ಎಲ್ಲಿಗೆ ತಲುಪಿಸುವುದು ಎನ್ನುವ ಯೋಚನೆ ಆಯಿತು. ಅವಳ ನಿಕಟ ಸ್ನೇಹಿತೆಯರೊಡನೆ ವಿಚಾರವನ್ನೂ ಮಾಡಿದ. ಎಲ್ಲರ ಒಮ್ಮತ ಅಭಿಪ್ರಾಯವೆಂದರೆ ಸ್ವಲ್ಪ ದಿನಗಳ ಮಟ್ಟಿಗೆ ಅವಳು ತೇಲಂಗನ ಕ್ವಾರ್ಟರ್ಸಿನಲ್ಲಿ ಇರಲಿ ಮುಂದೇ ಏನಾಗುವುದೋ ನೋಡೋಣವೆಂದು. ಅಷ್ಟು ಹೊತ್ತಿಗೆ ತೇಲಂಗನಿಗೆ ಮೇಲಿನ ಸ್ಥಾನಕ್ಕೆ ಬಡ್ತಿಯಾಗಿ ಹೈದರಾಬಾದಿಗೆ ವರ್ಗವಾಗಿತ್ತು. ಮನೋರಮೆಯೂ ಹೈದರಾಬಾದಿಗೆ ಹೋದರೆ ಇನ್ನೂ ಒಳಿತೆಂದು ಎಲ್ಲರೂ ನಿರ್ಧರಿಸಿದರು. ಸ್ವಲ್ಪವೇ ದಿನಗಳಲ್ಲಿ ಇಬ್ಬರೂ ಹೈದರಾಬಾದಿಗೆ ಹೋದರು.
ಮೊದಲ ಎರಡು ವರ್ಷಗಳು ಮನೋರಮೆಗೆ ಯಾತನೆಯಲ್ಲಿಯೇ ಜೀವನ ಕಳೆಯಬೇಕಾಯಿತು. ಬ್ಯಾಂಕಿನಲ್ಲಿರುವ ಸಮಯ ಬಿಟ್ಟರೆ ಮಿಕ್ಕೆಲ್ಲ ಸಮಯವೂ ಅವಳಿಗೆ ತನ್ನ ಮಗುವಿನ ಬಗೆಗೇ ಯೋಚನೆ. ಈ ಮಧ್ಯೆ ಆಗಾಗ್ಯೆ ತೇಲಂಗ್ ಬೆಂಗಳೂರಿನ ಸ್ನೇಹಿತರುಗಳನ್ನು ಸಂಪರ್ಕಿಸಿ ಇವಳ ಗಂಡ, ಮಗು ಮತ್ತು ತಾವು ನೀಡಿದ್ದ ಪೊಲೀಸ್ ಕಂಪ್ಲೇಂಟ್ ಬಗ್ಗೆ ವಿಚಾರಿಸುತ್ತಿದ್ದ. ಹೆಚ್ಚಿನ ಮಾಹಿತಿಯೇನೂ ದೊರಕಿರಲಿಲ್ಲ. ಅಷ್ಟರಲ್ಲೇ ಮನೋರಮೆ ತನ್ನ ಸುಖವನ್ನೆಲ್ಲಾ ತೇಲಂಗನಲ್ಲೇ ಕಾಣ ತೊಡಗಿದ್ದಳು. ಆದರೇನು ಅವಳೆಂದೂ ಸುಖದಿಂದಿರಬಾರದೆಂಬ ಶಾಪವೋ ಏನೋ, ತೇಲಂಗನಿಗೆ ಮರಳಿ ಮುಂಬೈಗೆ ವರ್ಗವಾಗಿತ್ತು. ಮುಂದೆ ತಿಳಿದುಬಂದ ವಿಷಯವೇನೆಂದರೆ, ಬೆಂಗಳೂರಿಗೆ ಬಂದಂದಿನಿಂದ ತೇಲಂಗ್ ತನ್ನ ಸಂಸಾರದೊಂದಿಗೆ ಅಷ್ಟು ಸಂಪರ್ಕವನ್ನಿಟ್ಟಿರಲಿಲ್ಲ ಮತ್ತು ಕಳೆದ ಎರಡೂವರೆ ವರ್ಷಗಳಿಂದ ಮುಂಬೈಗೆ ಹೋಗೇ ಇರಲಿಲ್ಲ. ಇದರ ಬಗ್ಗೆ ಅವನ ಪತ್ನಿಗೆ ಅನುಮಾನ ಬಂದು ಅವಳೇ ಬ್ಯಾಂಕಿನ ಹಿರಿಯ ಅಧಿಕಾರಿಗಳಲ್ಲಿ ದೂರನ್ನಿತ್ತಿದ್ದಳು. ತದಕಾರಣ ಹಿರಿಯ ಅಧಿಕಾರಿಗಳು ಇವನಿಗೆ ತಿಳಿಯದಂತೆ ವಿಚಾರಣೆ ಮಾಡಿ ಇವನನ್ನು ಮುಂಬೈಗೆ ವರ್ಗಾಯಿಸಿದ್ದರು.
ವಿಧಿಯಿಲ್ಲದೇ ಈಗ ತೇಲಂಗ್ ಮನೋರಮೆಯನ್ನು ಬಿಟ್ಟು ತಾನೊಬ್ಬನೇ ಮುಂಬಯಿಗೆ ಮರಳಬೇಕಾಯ್ತು. ಇಷ್ಟು ದಿನಗಳು ತೇಲಂಗನ ಆರೈಕೆಯಲ್ಲಿ ಮನೆಯ ಕಡೆಯ ಗಮನ ಸ್ವಲ್ಪ ಕಡಿಮೆ ಆಗಿದ್ದ ಮನೋರಮೆಗೆ ಮತ್ತೆ ತೇಲಂಗನ ಯೋಚನೆಯಲ್ಲಿ ಮೂರ್ಛಾರೋಗ ಬರಹತ್ತಿತ್ತು. ಅಷ್ಟು ಹೊತ್ತಿಗೆ ಮುಂಬೈನಿಂದಲೇ ಬಂದಿದ್ದ ಒಬ್ಬ ಹೊಸ ಅಧಿಕಾರಿ ಶ್ರೀನಿವಾಸನ್ ಇವಳ ಬಗ್ಗೆ ಕಾಳಜಿ ವಹಿಸ ಹತ್ತಿದ್ದ. ಅವನೂ ಮತ್ತು ತೇಲಂಗ್ ಮೊದಲಿನಿಂದ ಒಬ್ಬರಿಗೊಬ್ಬರು ಬಲ್ಲವರಾಗಿದ್ದರು. ಹಾಗಾಗಿ ತೇಲಂಗ್ ಶ್ರೀನಿವಾಸನ್‍ನಿಗೆ ಮನೋರಮೆಯ ವಿಷಯದ ಬಗ್ಗೆ ಸ್ವಲ್ಪ ಕಾಳಜಿ ವಹಿಸಲು ತಿಳಿಸಿದ್ದ. ಶ್ರೀನಿವಾಸನ್‍ನಿಗೆ ಇನ್ನೇನು ೩ ವರ್ಷದ ಸರ್ವಿಸ್ ಬಾಕಿ ಇತ್ತು. ಮಕ್ಕಳೆಲ್ಲರೂ ಕೈಗೆ ಬಂದಿದ್ದರು. ಆತನ ಪತ್ನಿ ಸತ್ತುಹೋಗಿ ೫ ವರ್ಷಗಳಾಗಿದ್ದುವು. ಒಂಟಿ ಪಿಶಾಚಿ. ಅವನಿಗೂ ಮನೆಯಲ್ಲಿ ಕೂಳು ಬೇಯಿಸಿಹಾಕಲು ಒಬ್ಬರು ಬೇಕಿತ್ತು. ಇವಳಿಗೂ ಗಂಡಸಿನ ಆಶ್ರಯ ಬೇಕಿತ್ತು. ಇಲ್ಲದಿದ್ದರೆ ಕಾಣದ ಆ ಊರಿನಲ್ಲಿ ಕಿತ್ತು ತಿನ್ನುವ ಹದ್ದುಗಳೇ ಜಾಸ್ತಿ.
ಅದೇನೇ ಆದರೂ ಮನೋರಮೆಗೆ ಮನೋರೋಗ ಎಂಬುದು ಶಾಶ್ವತವೇನೋ ಎನ್ನುವಂತಾಗಿತ್ತು. ಆಗಾಗ್ಯೆ ಬ್ಯಾಂಕಿನಲ್ಲೇ ಆಗಲಿ ಅಥವಾ ಮನೆಯಲ್ಲೇ ಆಗಲಿ ಮೂರ್ಛಾರೋಗ ಕಾಣಿಸಿಕೊಳ್ಳುತ್ತಿತ್ತು. ನಿರಂತರವಾಗಿ ವೈದ್ಯಕೀಯ ತಪಾಸಣೆಯ ಅಗತ್ಯವಿತ್ತು. ಮೊದಲ ಒಂದು ವರ್ಷ ಶ್ರೀನಿವಾಸನ್ ಅವಳನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದನು. ನಂತರ ಅದೇನಾಯಿತೋ ಏನೋ ಅವನಿಗೆ ಅವಳ ಬಗ್ಗೆ ಅಷ್ಟು ಮುತುವರ್ಜಿ ಇರಲಿಲ್ಲ. ಮನೋರಮೆ ಔಷಧಿ ತೆಗೆದುಕೊಂಡಳೋ ಇಲ್ಲವೋ ಕೇಳುತ್ತಿರಲಿಲ್ಲ. ಅವಳೊಂದಿಗೆ ಅಷ್ಟಾಗಿ ಮಾತನ್ನೂ ಆಡುತ್ತಿರಲಿಲ್ಲ. ಈ ರೀತಿಯ ವರ್ತನೆಯಿಂದ ಮನೋರಮೆಯ ಮನೋರೋಗ ಇನ್ನೂ ಉಲ್ಬಣಗೊಳ್ಳುತ್ತಿತ್ತು. ಅವಳು ಎಲ್ಲೇ ಯಾವಾಗಲೇ ಮೂರ್ಛೆ ಬಿದ್ದರೂ ಸುತ್ತ ಮುತ್ತಲಿದ್ದವರು ( ಬ್ಯಾಂಕಿನಲ್ಲಿ ಅಥವಾ ಮನೆಯಲ್ಲಿ ) ಶ್ರೀನಿವಾಸನ್‍ನಿಗೆ ಸುದ್ದಿ ತಲುಪಿಸುತ್ತಿದ್ದರು. ಅವನು ಅಲ್ಲಿಗೆ ಬಂದು, ಎಲ್ಲರೆದುರಿಗೆ ಬಹಳ ಕಾಳಜಿ ಇರುವವನಂತೆ ನಾಟಕವಾಡಿ ಜನ ಕಡಿಮೆ ಆಗಲು ಅವಳ ಪರ್ಸಿನಿಂದ ಹಣವನ್ನು ಲಪಟಾಯಿಸಿ ಓಡಿ ಹೋಗುತ್ತಿದ್ದನು. ಇದೇ ರೀತಿ ಮುಂದೆ ಇನ್ನೂ ಒಂದೂವರೆ ವರ್ಷಗಳು ನಡೆಯಿತು. ನಂತರ ಸುತ್ತಮುತ್ತಲಿನ ಜನಗಳಿಗೆ ಇವನ ಕಳ್ಳಾಟ ತಿಳಿದು ಅವನ ಬಗ್ಗೆ ಬ್ಯಾಂಕಿನ ಹಿರಿಯ ಅಧಿಕಾರಿಗಳಿಗೆ ದೂರನ್ನಿತ್ತರು. ಅದೇ ಕಾರಣದ ಮೇಲೆ ಅವನನ್ನು ಮತ್ತೆ ಮುಂಬಯಿಗೆ ವರ್ಗ ಮಾಡಿದ್ದರು.

ಮನೋರಮೆಗೆ ಈಗೀಗ ಒಂಟಿತನ ಕಾಡಹತ್ತಿ, ತನ್ನ ಗಂಡ ಮಗುವಿನ ಯೋಚನೆ ಬಹಳವಾಗಿತ್ತು. ಗಂಡ ಹೇಗೇ ಇದ್ದರೂ ಪರವಾಗಿಲ್ಲ ಅವನೊಂದಿಗೆ ಹೊಂದಿಕೊಂಡು ಬಾಳ್ವೆ ನಡೆಸುವೆನೆಂದು ನಿರ್ಧರಿಸಿದಳು. ಹೇಗೋ ಅವರಿವರಿಂದ ಗಂಡನ ಬಗ್ಗೆ ವಿಷಯ ತಿಳಿದುಕೊಳ್ಳಲು ಪ್ರಯತ್ನಿಸಿದಳು. ಅವಳಿಗೆ ತಿಳಿದುಬಂದ ವರ್ತಮಾನದ ಪ್ರಕಾರ ಅವಳು ಈ ಕಡೆ ಬಂದಂದಿನಿಂದ ಅವನ ಆರೋಗ್ಯ ಹದಗೆಟ್ಟು ಬಹಳ ಕಷ್ಟ ಪಟ್ಟನು. ಜೊತೆಗೇ ಹೇಗೋ ಮಗುವನ್ನೂ ಸಾಕುತ್ತಿದ್ದನು. ಅವನ ಸೀನಿಯರೊಂದಿಗೆ ಸ್ವಲ್ಪ ವಾಗ್ವಾದವಾಗಿ ಕೆಲಸವನ್ನೂ ಕಳೆದುಕೊಂಡಿದ್ದನು. ನಂತರ ಯಾವುದೋ ಒಂದು ಕೋ-ಆಪರೇಟಿವ್ ಬ್ಯಾಂಕಿನಲ್ಲಿ ಲೀಗಲ್ ಅಡ್ವೈಸರ್ ಆಗಿ ಕೆಲಸ ಮಾಡಹತ್ತಿದನು. ಸ್ವಲ್ಪ ಶ್ರದ್ಧೆವಹಿಸಿ ಕೆಲಸ ಮಾಡಿದ್ದರಿಂದ ಒಳ್ಳೆಯ ಹೆಸರನ್ನು ಗಳಿಸಿದ್ದನು. ಮುಂದಿನ ೫ ವರ್ಷಗಳಲ್ಲಿ ಅದೇ ಬ್ಯಾಂಕಿನಲ್ಲಿ ದೊಡ್ಡ ಹುದ್ದೆಗೇರಿದ್ದನು. ಈಗ ಮಗನು ಶಾಲೆಗೆ ಸೇರಿದ್ದನು. ಇವಳು ಅವನನ್ನು ದೂರವಾಣಿಯ ಮೂಲಕ ಸಂಪರ್ಕಿಸಿದಾಗ ಅವನಿಗೂ ತನ್ನ ತಪ್ಪಿನ ಅರಿವಾಗಿ ಅವಳಿಗೆ ಬಂದು ಸೇರಲೆಂದು ಒತ್ತಾಯ ಮಾಡಹತ್ತಿದನು.
ವೈದ್ಯ ಹೇಳಿದ್ದೂ ಹಾಲೂ ಅನ್ನ ರೋಗಿ ಬಯಸಿದ್ದೂ ಹಾಲೂ ಅನ್ನ ಅನ್ನುವ ಹಾಗೆ ಇಬ್ಬರಿಗೂ ಒಬ್ಬರೊಬ್ಬರ ಸಹಾಯದ ಅವಶ್ಯಕತೆ ಇತ್ತು. ಸ್ವಲ್ಪ ದಿನಗಳಲ್ಲೇ ಮನೋರಮೆ ಅರೋಗ್ಯದ ದೃಷ್ಟಿ‍ಯಿಂದ ಬೆಂಗಳೂರಿಗೆ ವರ್ಗ ಕೇಳಿ ಸಫಲಳಾಗಿದ್ದಳು.
ಬಹಳ ಬೇಗ ಅವರಿಬ್ಬರೂ ಸೇರುವ ಕಾಲ ಬಂದೇ ಬಿಟ್ಟಿತು. ಮೊದಲ ಬಾರಿ ಅವರಿಬ್ಬರೂ ರೈಲ್ವೇ ಸ್ಟೇಷನ್ನಿನಲ್ಲಿ ಮಿಲನವಾದಾಗ ನೋಡಬೇಕಿತ್ತು, ಛೇ! ಮನುಷ್ಯನಲ್ಲಿ ಇಷ್ಟೊಂದು ಪ್ರೇಮ, ವಾತ್ಸಲ್ಯ ಇರತ್ತಾ - ಹಾಗಿದ್ದರೂ ಹೇಗೆ ಬೇರೆ ಬೇರೆಯಾಗಿರಬಯಸುವರು ಎನ್ನುವುದು ತಿಳಿಯುತ್ತಿತ್ತು. ಆ ಬಾಂಧವ್ಯದ ಬಿರುಕಿನಿಂದಲೇ ಇಬ್ಬರೂ ದೈಹಿಕವಾಗಿ ಬಹಳ ಕ್ಷೀಣವಾಗಿದ್ದರು. ಒಬ್ಬರನೊಬ್ಬರು ನೋಡಿದ ಕೂಡಲೇ ಕಣ್ಣುಗಳಿಂದ ಆನಂದ ಬಾಷ್ಪ ಅನವರತ ಸುರಿಯಹತ್ತಿತ್ತು. ಇವರಿಬ್ಬರ ಮಧ್ಯೆ ನಿಂತಿದ್ದ ಆ ಮಗುವಿಗೆ ಏನು ನಡೆಯುತ್ತಿದೆ ಎಂಬುದರ ಪರಿವೆಯೇ ಇರಲಿಲ್ಲ. ಅಂತೂ ಇಂತೂ ಇಬ್ಬರೂ ಇದುವರೆವಿಗೂ ಸುಖವಾಗಿದ್ದಾರೆ, ಇತರರಿಗೆಲ್ಲರಿಗೂ ಮಾದರಿ ದಂಪತಿಗಳಾಗಿದ್ದಾರೆ.

ಇವರುಗಳಿಗೇನಾಗಿತ್ತು ಅಂತ ಕೇಳ್ತೀರಾ? ಏಳೂವರೆ ವರ್ಷಗಳ ಕಾಲದ ಶನಿಕಾಟ. ಮೊದಲ ಎರಡೂವರೆ ವರ್ಷ ಉಚ್ಛ್ರಾಯ ಸ್ಥಿತಿಯಲ್ಲೂ ಮಧ್ಯದ ಎರಡೂವರೆ ವರ್ಷ ಮಧ್ಯಮವಾಗಿಯೂ ಮತ್ತು ಕಡೆಯ ಎರಡೂವರೆ ವರ್ಷಗಳು ಇಳಿಮುಖದಲ್ಲೂ ಇದ್ದಿತು. ಶನಿದೇವ ಎಂತಹವರನ್ನೂ ಬಿಡದೆ ಕಾಡುವ ಎನ್ನುವುದಕ್ಕೆ ಈ ಕಥೆಗಿಂದ ಉತ್ತಮ ನಿದರ್ಶನ ಬೇಕೇ? ಎಲ್ಲರೂ ಒಳ್ಳೆಯವರೇ - ಯಾರೂ ಕೆಟ್ಟವರಲ್ಲ. ಹಾಗೆ ಆಡಿಸುವುದು ಈ ಗ್ರಹಗಳು - ಇದನ್ನೇ ಗ್ರಹಚಾರ ಎನ್ನುವರು.