ಶನಿವಾರದ ಆ ಒಂದು ಸಂಜೆ...
ಸುಮಾರು 6 ಗಂಟೆ. ಮೋಡ ಮುಸುಕಿದ ವಾತಾವರಣ. ಇನ್ನೂ ಸ್ವಲ್ಪ ಬೆಳಕಿತ್ತು. ನಗರದ ಅಪಾರ್ಟ್ಮೆಂಟ್ ಕಟ್ಟಡ ನಿರ್ಮಾಣ ಕಾರ್ಯದ ಅಂದಿನ ಕೆಲಸ ಮುಗಿದು ಕೂಲಿ ಹಣದ ಬಟವಾಡೆ ನಡೆಯುತ್ತಿತ್ತು. ಮೇಸ್ತ್ರಿ ಒಬ್ಬರು ಕುರ್ಚಿ, ಟೇಬಲ್ ಹಾಕಿಕೊಂಡು ಕುಳಿತು ನಗದು ಹಣವನ್ನು ಹಂಚಿಕೆ ಮಾಡುತ್ತಿದ್ದರು. ಅಲ್ಲಿ ಸುಮಾರು 40 - 50 ವಿವಿಧ ಕೆಲಸಗಾರರು ಸೇರಿದ್ದರು. ಅದರಲ್ಲಿ ಹೆಂಗಸರು ಸಹ ಬಹುತೇಕ ಸಮ ಪ್ರಮಾಣದಲ್ಲಿ ಇದ್ದರು. ಕೆಲವರು ನೆಲದ ಮೇಲೆ, ಸ್ವಲ್ಪ ಜನ ಅಲ್ಲಿದ್ದ ಸಿಮೆಂಟ್ ಇಟ್ಟಿಗೆಗಳ ಮೇಲೆ, ಹಲವರು ಪ್ಲಾಸ್ಟಿಕ್ ಚೀಲಗಳ ಮೇಲೆ ಕುಳಿತು ತದೇಕ ಚಿತ್ತದಿಂದ ಮೇಸ್ತ್ರಿ ಎಣಿಸುವ ದುಡ್ಡನ್ನೇ ನೋಡುತ್ತಾ ಕುಳಿತಿದ್ದರು.
ಒಂದಿಬ್ಬರು ಎಲೆ ಅಡಿಕೆ, ಮತ್ತಿಬ್ಬರು ಸಿಗರೇಟು, ಇನ್ನಿಬ್ಬರು ವಿಮಲ್ ಅಡಿಕೆ ಪುಡಿ ಹಾಕುತ್ತಾ ಹಣವನ್ನೇ ದಿಟ್ಟಿಸುತ್ತಿದ್ದರು. ಹೆಣ್ಣು ಮಗಳೊಬ್ಬರು ಮಗುವಿಗೆ ಹಾಲು ಕುಡಿಸುತ್ತಿದ್ದರೆ ಮತ್ತೊಂದು ಹೆಂಗಸು ತಲೆ ಬಾಚಿಕೊಳ್ಳುತ್ತಾ ಹಣವನ್ನೇ ನೋಡುತ್ತಿತ್ತು. ಅಲ್ಲಿ ಒಬ್ಬಬ್ಬರಿಗೆ ಅಂದಾಜು ಸುಮಾರು 3 ರಿಂದ 5 ಸಾವಿರದವರೆಗೆ ಹಣ ಸಿಗುತ್ತಿತ್ತು. ಅದು ಒಂದು ವಾರದ ಕೂಲಿ ಅಥವಾ ಸಂಬಳ ಇರಬೇಕು.
ಆ ದೃಶ್ಯ ನೋಡಿದಾಗ ಗಮನ ಸೆಳೆದದ್ದು ಅವರು ಮೇಸ್ತ್ರಿ ಎಣಿಸುತ್ತಿದ್ದ ಹಣವನ್ನು ನೋಡುತ್ತಿದ್ದ ರೀತಿ, ಕಣ್ಣುಗಳಲ್ಲಿ ಇದ್ದ ವರ್ಣಿಸಲಾಗದ - ತೀಕ್ಷ್ಣವೂ ಅಲ್ಲದ, ಕುತೂಹಲವು ಅಲ್ಲದ, ಆಸೆಯೂ ಅಲ್ಲದ ಅಸಹಜ ನೋಟ, ಮುಖದಲ್ಲಿ ವ್ಯಕ್ತವಾಗುತ್ತಿದ್ದ ಗುರುತಿಸಲಾಗದ ಭಾವ ಮನಸ್ಸುಗಳಲ್ಲಿ ಮೂಡುತ್ತಿದ್ದ ಆಲೋಚನೆ ಎಲ್ಲೆಲ್ಲೋ ಕರೆದೊಯ್ಯುತ್ತಿತ್ತು. ಆ ದುಡ್ಡು ಅವರ ಪಾಲಿಗೆ ಎಷ್ಟೊಂದು ಮಹತ್ವದ್ದಾಗಿರಬಹುದು, ಆ ನಿರ್ಜೀವ ಪೇಪರ್ ನೋಟುಗಳು ಜೀವವಿರುವ ವ್ಯಕ್ತಿಗಳನ್ನು ಹೇಗೆ ನಿಯಂತ್ರಿಸುತ್ತದೆ, ಅವರ ಕೈಗೆ ಸಿಗುವ ಆ ಹಣವನ್ನು ಅವರು ಹೇಗೆಲ್ಲಾ ಖರ್ಚು ಮಾಡಬಹುದು.
ಒಬ್ಬರು ಸಾಲದ ಕಂತು ಕಟ್ಟಬಹುದು, ಇನ್ನೊಬ್ಬರು ಬಡ್ಡಿ ಕಟ್ಟಬಹುದು, ಮತ್ತೊಬ್ಬರು ಮನೆ ಬಾಡಿಗೆ, ಇತರರು ಮಕ್ಕಳ ಶಾಲಾ ಶುಲ್ಕ, ನೀರು ವಿದ್ಯುತ್ ಬಿಲ್, ದಿನಸಿ ಅಂಗಡಿ, ಗ್ಯಾಸ್, ಮಾತ್ರೆಗಳು, ಬಟ್ಟೆಗಳು ಹೀಗೆ ಎಷ್ಟೆಷ್ಟೋ ಜೀವನಾವಶ್ಯಕ ಅಥವಾ ಬದುಕಿನ ಚಲನೆಗಾಗಿ ಆ ಹಣವನ್ನೇ ಅವಲಂಬಿಸಿರುವ ಮನಸ್ಥಿತಿ ತುಂಬಾ ಕಾಡುತ್ತದೆ. ಶಾಪಿಂಗ್ ಮಾಲ್ ಗಳು, ಸಿನಿಮಾ ಥಿಯೇಟರ್ ಗಳು, ಪ್ರವಾಸಿ ತಾಣಗಳು, ಬ್ಯೂಟಿ ಪಾರ್ಲರ್ಗಳು, ವೈಭವೋಪೇತ ಹೋಟೆಲ್ಗಳು, ಅಪಾರ್ಟ್ಮೆಂಟ್ ಗಳು, ಮದುವೆ ಗೃಹ ಪ್ರವೇಶಗಳು, ನಾಮಕರಣ ಜನ್ಮದಿನಗಳು, ಪಾರ್ಟಿ ಸಮಾರಂಭಗಳು, ರೆಸಾರ್ಟ್ ಗಳು, ಕಾರುಗಳು, ದುಬಾರಿ ಶೂ ಬಟ್ಟೆ ಮೊಬೈಲುಗಳು, ಸ್ವಿಮಿಂಗ್ ಪೂಲ್ಗಳು ಇವುಗಳ ನಡುವೆ ಈ ಕೂಲಿ ಕಾರ್ಮಿಕರ 3-4 ಸಾವಿರ ರೂಪಾಯಿಗಳ ಖರ್ಚಿನ ಕಾತುರತೆ ನೆನಪಾಗುತ್ತದೆ.
ಈ ಸಣ್ಣ ಹಣಕ್ಕಾಗಿ ಒಂದು ವಾರ ಕಾಲ ಬೆವರು ಸುರಿಸಿ ದುಡಿಯುವ, ಅದೇ ಬದುಕಾಗಿ ಜೀವನ ಸವೆಸುವ ಜೀವಗಳ ನಡುವೆ ನೂರಾರು ಕೋಟಿಗಳ, ಅಪಾರ ಆಸ್ತಿಗಳ, ಕೇಜಿ ಗಟ್ಟಲೆ ಚಿನ್ನ ಬೆಳ್ಳಿ ಸಂಗ್ರಹಿಸಿರುವವರು ನೆನಪಾಗುತ್ತಾರೆ. ಹಣವೆಂಬ ವಸ್ತು ಇಡೀ ಜೀವನದ ಧ್ಯೇಯ, ಗುರಿ, ಸಾರ್ಥಕತೆಯ ಅಥವಾ ಮೋಕ್ಷದ ಮಾರ್ಗವಾಗಿ ಮಾರ್ಪಾಟಾಗಿರುವ ಸಮಾಜದಲ್ಲಿ ನಾವು ವಾಸಿಸುತ್ತಿದ್ದೇವೆ. ಹಣ ಎಲ್ಲಿಯಾದರೂ ಇರಲಿ, ಯಾರದಾದರೂ ಆಗಿರಲಿ ಅದನ್ನು ನೋಡುವಾಗ ಆಗುವ ಮನಸ್ಸುಗಳ ಭಾವ, ಅದು ಬೇರೆಯವರ ಪಾಲಾದಾಗ ಅಥವಾ ಅದು ನಮಗೆ ದೊರೆತಾಗ ಆಗುವ ಮಾನಸಿಕ ತಳಮಳ ಬಹುಶಃ ಹಣವೇ ನಮ್ಮ ಬದುಕು ಎಂದೇ ಭಾಸವಾಗುತ್ತದೆ.
ರಾಜಕೀಯ, ವ್ಯಾಪಾರ, ಧಾರ್ಮಿಕ, ಆರೋಗ್ಯ, ಶಿಕ್ಷಣ, ಸಮಾಜ ಸೇವೆ, ಆಧ್ಯಾತ್ಮ ಯಾವುದೇ ಆಗಿರಲಿ ಬಹುತೇಕ ಎಲ್ಲವೂ ಹಣ ಕೇಂದ್ರಿತವೇ ಆಗಿರುತ್ತದೆ. ಅದರ ಪ್ರಮಾಣ ಹೆಚ್ಚು ಕಡಿಮೆ ಆಗಬಹುದಷ್ಟೇ. ದಿನದ ಎಚ್ಚರದ ಪ್ರತಿ ಕ್ಷಣವೂ ಹಣ ಬೇರೆ ಬೇರೆ ರೂಪದಲ್ಲಿ ಪ್ರಭಾವ ಬೀರುತ್ತಲೇ ಇರುತ್ತದೆ.
ಕೂಲಿ ಕಾರ್ಮಿಕರು ಹಣವನ್ನು ನೋಡುತ್ತಿದ್ದ ದೃಶ್ಯಗಳು, ಹಣಕ್ಕಾಗಿ ಮಾಡುವ ಸುಫಾರಿ ಕೊಲೆಗಳು, ಹಣಕ್ಕಾಗಿ ಮಂತ್ರಿಗಳು, ಅತಿ ಗೌರವಾನ್ವಿತ ಅಧಿಕಾರಿಗಳು, ಸರ್ವಸಂಗ ಪರಿತ್ಯಾಗಿ ಧಾರ್ಮಿಕ ಮುಖಂಡರು, ಸಮಾಜ ಸೇವಕರು, ಹೋರಾಟಗಾರರು, ದರೋಡೆಕೋರರು ಎಲ್ಲರೂ ಹಣದ ಪ್ರಾಮುಖ್ಯತೆಯನ್ನು ಮತ್ತೆ ಮತ್ತೆ ದೃಢಪಡಿಸುತ್ತಾರೆ. ಆದರೆ ಒಂದಲ್ಲಾ ಒಂದು ದಿನ ಇದರಿಂದ ನಾವು ಹೊರಗೆ ಬರಲೇ ಬೇಕಿದೆ. ಇಲ್ಲದಿದ್ದರೆ ನಾಗರಿಕ ಸಮಾಜ ಮಾನವೀಯವಾಗಿ ಉಳಿಯದೆ ಕೇವಲ ಹಣದ ಗುಲಾಮಿತನದಲ್ಲಿ ಬದುಕು ಶವವಾಗುವ ಸಮಾಜದಲ್ಲಿ ನಾವು ಇರಬೇಕಾಗುತ್ತದೆ. ಹಣ ನಮ್ಮನ್ನು ನಿಯಂತ್ರಿಸುವ ವ್ಯವಸ್ಥೆ ಬದಲಾಗಿ ಮತ್ತೆ ನಾವು ಹಣವನ್ನು ನಿಯಂತ್ರಿಸುವ ಕಾಲದ ನಿರೀಕ್ಷೆಯಲ್ಲಿ...
-ವಿವೇಕಾನಂದ. ಎಚ್. ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ