ಶನಿ ಮಹಾತ್ಮೆ
‘ಶನಿ ಮಹಾತ್ಮೆ ಮತ್ತು ಬಜ್ಪೆ ಶನೈಶ್ಚರ ದೇವಸ್ಥಾನ' ಪುಸ್ತಕದ ಲೇಖಕರು ಡಿ.ಎಸ್.ಬೋಳೂರು ಇವರು. ತಮ್ಮ ಮಾತಿನಲ್ಲಿ ಇವರು ಹೀಗೆ ಬರೆಯುತ್ತಾರೆ “ಈ ಕೃತಿಯಲ್ಲಿ ಎರಡು ವಿಭಾಗಗಳಿವೆ. ಒಂದನೇ ಭಾಗದಲ್ಲಿ ಮೂರು ಅಧ್ಯಾಯಗಳನ್ನು ರಚಿಸಿದ್ದೇನೆ. ಒಂದನೇ ಅಧ್ಯಾಯವು ಜ್ಯೋತಿಷ್ಯದ ಸಂಕ್ಷಿಪ್ತ ವಿವರಣೆಗಳೊಂದಿಗೆ ನವಗ್ರಹಗಳ ಪರಿಚಯ, ಏಳುವರೆ ಶನಿ, ಅಷ್ಟಮ ಶನಿ, ಶನಿದೆಸೆ ಮತ್ತು ಇತರ ದೆಶೆಗಳು ಹಾಗೂ ಆ ದೆಶೆಗಳಲ್ಲಿ ಅಂತರ್ಗತವಾಗಿರುವ ಭುಕ್ತಿಗಳ ಕುರಿತಾಗಿ ಸಂಕ್ಷಿಪ್ತವಾಗಿ ನಿರೂಪಿಸಿರುತ್ತೇನೆ.
ಎರಡನೇ ಅಧ್ಯಾಯದಲ್ಲಿ ಶನಿ ಮಹಾತ್ಮರು ಯಾರು? ಮತ್ತು ಪುರಾಣ ಗ್ರಂಥಗಳಲ್ಲಿ ದೊರೆಯುವ ಶನಿ ಮಹಾತ್ಮೆಯ ಕೆಲವೊಂದು ಆಯ್ದ ಕಥಾ ಪ್ರಸಂಗಗಳ ಸಾರವನ್ನು ಸಂಗ್ರಹಿಸಿ ವಿವರಿಸಲು ಯತ್ನಿಸಿದ್ದೇನೆ. ಮೂರನೇ ಅಧ್ಯಾಯವು ಬಜಪೆ ಶ್ರೀ ಶನೈಶ್ವರ ದೇವಸ್ಥಾನವು ಸ್ಥಾಪನೆಗೊಂಡು, ಆ ದೇವಸ್ಥಾನದಲ್ಲಿ ನಿತ್ಯ ನಡೆಯುವ ಪೂಜಾ ವಿಧಾನಗಳ ಕುರಿತಾಗಿದೆ.
ಈ ಪುಸ್ತಕದ ಎರಡನೇ ಭಾಗದಲ್ಲಿ ನವಗ್ರಹ ಜಪವಿಧಿಯ ಮಂತ್ರ, ಕವಚ, ಸ್ತ್ರೋತ್ರ, ಅಷ್ಟೋತ್ತರ, ಶತನಾಮ ಶ್ಲೋಕಗಳನ್ನು ಆಸ್ತಿಕರ ಉಪಯೋಗಕ್ಕಾಗಿ ಪುರಾಣಗ್ರಂಥಗಳಿಂದ ಸಂಗ್ರಹಿಸಿ ಅಳವಡಿಸಿಕೊಳ್ಳಲಾಗಿದೆ. ಚಿಕ್ಕದಾಗಿರುವ ಈ ಪುಸ್ತಕದಲ್ಲಿ ಮಹತ್ತಾದ ಕೆಲವಂಶಗಳನ್ನು ಒಟ್ಟುಗೂಡಿಸಿದ್ದೇನೆ ಎಂಬುದು ನನ್ನ ಅನಿಸಿಕೆ.”
ಅಧ್ಯಾಯ ಒಂದರಲ್ಲಿ ಜ್ಯೋತಿಷ್ಯದ ಬಗ್ಗೆ ಬಹಳಷ್ಟು ಮಾಹಿತಿಯನ್ನು ಲೇಖಕರು ನೀಡಿದ್ದಾರೆ. ಜ್ಯೋತಿಷ್ಯ ಎಂದರೇನು? ಜನ್ಮಜಾತಕ ಅಂದರೆ ಏನು? ಜಾತಕದಲ್ಲಿ ರಾಶಿಸ್ಥಿತರಾಗುವ ಗ್ರಹಗಳು ಯಾರು? ಮತ್ತು ಅವರ ಸಂಕ್ಷಿಪ್ತ ಪರಿಚಯ, ಪಂಚಾಂಗ ಎಂದರೇನು? ಮತ್ತು ಅದರ ಸಂಕ್ಷಿಪ್ತ ವಿವರ, ಜನ್ಮ ರಾಶಿ ಎಂದರೇನು ಮತ್ತು ರಾಶಿಗಳ ಸಂಕ್ಷಿಪ್ತ ಪರಿಚಯ, ರಾಶಿಚಕ್ರ ಮತ್ತು ರಾಶಿಯ ಹೆಸರು, ರಾಶಿ ಮತ್ತು ನಕ್ಷತ್ರ, ಜನ್ಮ ಕುಂಡಲಿ ಎಂದರೇನು? ಗೋಚಾರ, ಪಂಚಮ ಶನಿ, ಅಷ್ಟಮ ಶನಿ, ಸಾಡೇಸಾತಿ (ಏಳುವರೆ ಶನಿ) ದಶಾಫಲ ಎಂದರೇನು? ದಶಾ ನಿರ್ಣಯ ಹೇಗೆ? ಈ ಎಲ್ಲಾ ವಿಷಯಗಳನ್ನು ಚುಟುಕಾಗಿ ವಿವರಿಸಲಾಗಿದೆ.
ಎರಡನೇ ಅಧ್ಯಾಯದಲ್ಲಿ ಶನೀಶ್ವರ ಮಹಾತ್ಮೆಯ ಬಗ್ಗೆ ಸವಿವರವಾಗಿ ತಿಳಿ ಹೇಳಲಾಗಿದೆ. ಶನಿ ಮಹಾತ್ಮರು ಯಾರು? ರಾಜಾ ವಿಕ್ರಮನ ಕಥೆ, ಶನಿ ಮಹಾತ್ಮರು ಕೈಲಾಸಪತಿ ಗಿರಿಜಾಶಂಕರನ ರಾಶಿಯನ್ನು ಪ್ರವೇಶಿಸಿದ್ದು, ರಾಜಾ ಹರಿಶ್ಚಂದ್ರನ ಕಥೆ, ಶಮಂತಕ ಮಣಿಯ ಕಥೆ, ಮಹಾಭಾರತ ಯುದ್ಧದ ಕಥೆ, ನಳದಮಯಂತಿಯ ಕಥೆ ಇತ್ಯಾದಿಗಳನ್ನು ಸರಳವಾಗಿ ವಿವರಿಸಲಾಗಿದೆ.
ಹಾಗೆಯೇ ಮೂರನೇ ಅಧ್ಯಾಯದಲ್ಲಿ ಮಂಗಳೂರಿನ ಸಮೀಪವಿರುವ ಬಜಪೆ ಎಂಬ ಊರಿನಲ್ಲಿರುವ ಶನೀಶ್ವರ ದೇವಸ್ಥಾನದ ಭೌಗೋಳಿಕ ಹಿನ್ನಲೆ, ದೇವಾಲಯದ ಸ್ಥಾಪನೆ, ಜರಗುವ ಪೂಜೆಗಳು, ವಿಶೇಷತೆಗಳು ಎಲ್ಲವನ್ನೂ ಸವಿಸ್ತಾರವಾಗಿ ತಿಳಿಸಲಾಗಿದೆ. ಪುಸ್ತಕದ ಭಾಗ ಎರಡರಲ್ಲಿ ನವಗ್ರಹ ಜಪವಿಧಿಯನ್ನು ತಿಳಿಸಿಕೊಡಲಾಗಿದೆ. ಮಹತ್ವದ ಶ್ಲೋಕಗಳನ್ನು ವಿವರಿಸಲಾಗಿದೆ. ಸೊಗಸಾದ ವರ್ಣಚಿತ್ರಗಳನ್ನು ನೀಡಲಾಗಿದೆ. ಸುಮಾರು ೧೨೫ ಪುಟಗಳ ಈ ಪುಸ್ತಕ ಪೌರಾಣಿಕ ಕಥೆಗಳನ್ನು ಓದುವವರಿಗೆ, ಭವಿಷ್ಯದ ಬಗ್ಗೆ ತಿಳಿದುಕೊಳ್ಳುವವರಿಗೆ ಅನುಕೂಲವಾಗಿದೆ ಎನ್ನಬಹುದು.