ಶಬರಿಮಲೆ ಯಾತ್ರೆ ಸುಸೂತ್ರವಾಗಲಿ

ಪವಿತ್ರ ಶಬರಿಮಲೆ ದೇವಸ್ಥಾನದ ಕುರಿತಾಗಿಯಾಗಲಿ, ಶಬರಿಮಲೆ ಯಾತ್ರೆಯ ಕುರಿತಾಗಿಯಾಗಲಿ ಕೇರಳದ ಎಡರಂಗ ಕೂಟಕ್ಕೆ ಯಾವತ್ತೂ ಅಸಡ್ಡೆಯೇ. ಎಡರಂಗವು ಅಧಿಕಾರಕ್ಕೇರಿದ ಮೇಲೂ ದೇವಳದ ಪಾವಿತ್ರ್ಯದ ಕುರಿತಂತೆ ಹಾಗೂ ಶಬರಿಮಲೆ ಯಾತ್ರೆಯ ಕುರಿತಂತೆ ಅಸಡ್ಡೆಯನ್ನು ಮುಂದುವರೆಸುತ್ತಾ ಬಂದಿದೆ. ಶಬರಿಮಲೆ ಯಾತ್ರಿಕರಿಂದ ವಾರ್ಷಿಕವಾಗಿ ಅತ್ಯಧಿಕ ಆದಾಯ ಒದಗಿಬರುತ್ತಿದ್ದರೂ ಯಾತ್ರಿಕರಿಗೆ ಮೂಲಸೌಲಭ್ಯಗಳನ್ನು ಒದಗಿಸುವ ಕುರಿತಂತೆ ಎಡರಂಗ ಸರಕಾರವು ಯಾವತ್ತೂ ಕಾಳಜಿ ವಹಿಸಿದ್ದಿಲ್ಲ. ಈ ವರ್ಷವಂತೂ ಶಬರಿಮಲೆಯಲ್ಲಿ ಆಡಳಿತ ನಿರ್ವಹಣೆಯಲ್ಲಿ ಸರಕಾರವು ಘೋರ ನಿರ್ಲಕ್ಷ್ಯ ತೋರಿರುವುದರ ಕಾರಣವಾಗಿ ಶಬರಿಮಲೆ ಯಾತ್ರಿಕರಿಗೆ ಅಪಾರ ಸಂಕಟ ಹಾಗೂ ತ್ರಾಸವೊದಗಿದೆ. ಬಹಳಷ್ಟು ಮಂದಿ ಯಾತ್ರಿಕರು ತಮ್ಮ ಯಾತ್ರೆಯನ್ನು ಪೂರ್ಣಗೊಳಿಸಲಾಗದೆ ಮರಳುವಂತಾಗಿದೆ. ಯಾತ್ರೆಗೆ ತೆರಳಿದ ಮಕ್ಕಳು ಅಲ್ಲಿನ ಅಸಂಬದ್ಧ ವ್ಯವಸ್ಥೆಯಿಂದಾಗಿ ನರಳುವಂತಾಗಿದೆ ಹಾಗೂ ಅಸ್ವಸ್ಥರಾಗುವಂತಾಗಿದೆ. ಇಷ್ಟೊಂದು ಬಗೆಯಲ್ಲಿ ಅವಾಂತರ, ಗೊಂದಲ, ನಿರ್ಲಕ್ಷ್ಯ ತೋರಿಬಂದಿರುವುದು ಇದೇ ಮೊದಲು ಎಂಬಂತಾಗಿದೆ.
ಕೇರಳ ಪೋಲೀಸರು ಮತ್ತು ತಿರುವಾಂಕೂರು ದೇವಸ್ವಂ ಬೋರ್ಡ್ (ಟಿಡಿಬಿ) ಗಳು ಈ ಅವ್ಯವಸ್ಥೆಗೆ ಪರಸ್ಪರರ ಮೇಲೆ ದೋಷಾರೋಪ ಹೊರಿಸುತ್ತಿವೆ. ಪೋಲೀಸರು ಜನರನ್ನು ನಿಯಂತ್ರಿಸುವಲ್ಲಿ ಹಾಗೂ ಸರತಿ ಸಾಲನ್ನು ನಿಭಾಯಿಸುವಲ್ಲಿ ಸೋತಿದ್ದಾರೆ ಎಂಬುದಾಗಿ ಟಿಡಿಬಿ ಆರೋಪಿಸುತ್ತಿದೆ. ಪೋಲೀಸರ ಡ್ಯೂಟಿಯಲ್ಲಿ ಬದಲಾವಣೆ ಮಾಡಿರುವುದೇ ಇದಕ್ಕೆ ಕಾರಣವೆಂದು ಅದು ಹೇಳುತ್ತಿದೆ. ಆದರೆ ಕೇರಳ ಪೋಲೀಸರು ಇದನ್ನು ನಿರಾಕರಿಸಿ, ಟಿಡಿಬಿ ದಿನವೊಂದಕ್ಕೆ ಲೆಕ್ಕಕ್ಕಿಂತ ಹೆಚ್ಚು ಯಾತ್ರಿಕರಿಗೆ ದೇವಳ ಪ್ರವೇಶಕ್ಕೆ ಅನುಮತಿ ನೀಡುತ್ತಿರುವುದೇ ಈ ಗೊಂದಲಗಳಿಗೆ ಕಾರಣವೆಂದು ಹೇಳುತ್ತಿದ್ದಾರೆ. ದಿನವೊಂದಕ್ಕೆ ನಿಯಮಪ್ರಕಾರ ಕೊಡಬೇಕಾದ ಅನುಮತಿಗಿಂತಲೂ ೩೦,೦೦೦ ಹೆಚ್ಚು ಯಾತ್ರಿಕರಿಗೆ ಅವಕಾಶ ಕೊಡುತ್ತಿರುವುದೇ ಅವ್ಯವಸ್ಥೆಗೆ ಕಾರಣವೆಂದು ಹೇಳುತ್ತಿದ್ದಾರೆ.
ಈ ಆರೋಪ ಪ್ರತ್ಯಾರೋಪಗಳೇನೇ ಇರಲಿ, ಶಬರಿಮಲೆ ಯಾತ್ರಿಕರಿಗೆ ಸುಸಜ್ಜಿತ ವ್ಯವಸ್ಥೆ ಹಾಗೂ ಮೂಲಸೌಕರ್ಯ ಒದಗಿಸುವಲ್ಲಿ ಕೇರಳದ ಪಿಣರಾಯಿ ಸರಕಾರವು ವಿಫಲವಾಗಿದೆಯೆಂಬುದು ವಾಸ್ತವದ ಸಂಗತಿ. ಪ್ರತಿವರ್ಷ ಯಾತ್ರಿಕರ ಸಂಖ್ಯೆ ಹೆಚ್ಚುತ್ತಲೆ ಇದೆಯೆನ್ನುವುದು ಕೇರಳ ಸರಕಾರಕ್ಕೂ ಟಿಡಿಬಿಗೂ ತಿಳಿದಿರುವ ಸಂಗತಿಯೇ ಆಗಿದೆ. ಅದರಿಂದ ಹೆಚ್ಚೆಚ್ಚು ವರಮಾನವೂ ಬರುತ್ತಿದೆಯೆಂಬುದೂ ತಿಳಿದಿದೆ. ಹಾಗಿರುವಾಗ ಯಾತ್ರಿಗಳು ಸುಸೂತ್ರವಾಗಿ ತಮ್ಮ ಯಾತ್ರೆಯನ್ನು ಪೂರೈಸುವಂತಹ ಸೌಕರ್ಯಗಳನ್ನು ಕಲ್ಪಿಸುವುದು ಅವುಗಳ ಹೊಣೆಗಾರಿಕೆಯಾಗಿದೆ. ಇದಕ್ಕಿಂತ ಹೆಚ್ಚು ಯಾತ್ರಿಗಳು ಬರುವ ದೇಶದ ಹಲವಾರು ದೇವಾಲಯಗಳಲ್ಲಿ ಮಾಡಿರುವ ಸುಸಜ್ಜಿತ ವ್ಯವಸ್ಥೆಗಳನ್ನು ಕಂಡಾದರೂ ಕೇರಳ ಸರಕಾರವು ಎಚ್ಚೆತ್ತುಕೊಳ್ಳಬೇಕಾಗಿದೆ.
ಕೃಪೆ: ಹೊಸ ದಿಗಂತ, ಸಂಪಾದಕೀಯ, ದಿ: ೧೪-೧೨-೨೦೨೩
ಚಿತ್ರ ಕೃಪೆ: ಅಂತರ್ಜಾಲ ತಾಣ