ಶಬ್ದ ಮಾಲಿನ್ಯ ಹೆಚ್ಚಾಗುತ್ತಿದೆ. ಎಚ್ಚರ !

ಹೌದು, ಮನೆಯಿಂದ ಹೊರಬಿದ್ದರೆ ಸಾಕು ಶಬ್ದಗಳೇ ಶಬ್ದಗಳು. ಹಾರ್ನ್ ಶಬ್ದ, ಗಂಟೆಗಳ ಶಬ್ದ, ಪಟಾಕಿ ಶಬ್ದ, ಮೈಕುಗಳ ಆರ್ಭಟ, ವಾಹನಗಳ ಶಬ್ದ, ಆಂಬ್ಯುಲೆನ್ಸ್, ಅಗ್ನಿಶಾಮಕ ವಾಹನದ ಶಬ್ದ ಹೀಗೆ ಹತ್ತು ಹಲವಾರು ಶಬ್ದಗಳು ನಮ್ಮ ಬಾಳಿನ ಅನಿವಾರ್ಯ ಕರ್ಮಗಳೇ ಆಗಿಹೋಗಿವೆ. ‘ಸಂತೆಯೊಳಗೆ ಮನೆ ಮಾಡಿ ಶಬ್ದಗಳಿಗೆ ಅಂಜಿದರೆ ಹೇಗೆ' ಎಂದು ಸರ್ವಜ್ಞ ಕವಿ ಹೇಳಿದ ನೆನಪು. ನಮ್ಮೆಲ್ಲರ ಬಾಳು ಈಗ ಹಾಗೇ ಆಗಿದೆ. ನಮಗೆಲ್ಲಾ ಈ ಶಬ್ದಗಳು ಎಷ್ಟು ಅಭ್ಯಾಸ ಆಗಿದೆ ಎಂದರೆ ಅವುಗಳು ಕೊಂಚ ಕಡಿಮೆಯಾದರೂ ಏನೋ ಕಳೆದುಕೊಂಡ ಹಾಗೆ ಆಗುತ್ತಿದೆ. ಮನೆಯ ಫ್ಯಾನ್ ಶಬ್ದದ ಹಾಗೆ. ಮನೆಯ ಫ್ಯಾನ್ ಸದ್ದು ಮೊದಲಿಗೆ ಕಿರಿಕಿರಿ ಅನಿಸಿದ್ದು ನಮಗೆ ಕ್ರಮೇಣ ಅಭ್ಯಾಸವಾಗುತ್ತದೆ. ಫ್ಯಾನ್ ನಿಂದ ಗಾಳಿ ಬಾರದೇ ಇದ್ದರೂ ಆ ಶಬ್ದ ಕೇಳಿದೊಡನೆ ನಮಗೆ ನಿದ್ರೆ ಬರುತ್ತದೆ. ಇದು ನಮ್ಮ ಮನಸ್ಸಿನ ಭ್ರಮೆಯೋ ಅಥವಾ ಶಬ್ದಕ್ಕೆ ನಾವು ಒಗ್ಗಿಕೊಂಡಿದ್ದೇವೆಯೋ ಒಂದೂ ತಿಳಿಯುತ್ತಿಲ್ಲ.
ನೀವು ಒಮ್ಮೆ ಗಮನಿಸಿ, ಸಿಗ್ನಲ್ ನಲ್ಲಿ ಕೆಂಪು ದೀಪ ಆರಿ ಹಸಿರು ದೀಪ ಉರಿದೊಡನೆಯೇ ಹಿಂದಿನ ವಾಹನಗಳು ಮುಂದಿರುವ ವಾಹನಗಳಿಗೆ ಬೇಗ ಚಲಿಸುವಂತೆ ಹಾರ್ನ್ ಹಾಕಲು ಶುರು ಮಾಡುತ್ತವೆ. ಒಂದೇ ಒಂದು ಸೆಕುಂಡು ಕಾಯುವಷ್ಟು ವ್ಯವಧಾನ ಯಾರಿಗೂ ಇಲ್ಲ. ಎಲ್ಲರಿಗೂ ಅವಸರ. ಪಕ್ಕದಲ್ಲಿ ಆಸ್ಪತ್ರೆಯಿದೆಯೇ, ಪೂಜಾ ಸ್ಥಳವಿದೆಯೇ, ಶಾಲೆಯಿದೆಯೇ ಯಾವುದನ್ನೂ ಗಮನಿಸಿದೇ ಹಾರ್ನ್ ಹಾಕಿ ಶಬ್ದ ಮಾಲಿನ್ಯ ಮಾಡಿ ಬಿಡುತ್ತಾರೆ. ಸಿಗ್ನಲ್ ನಲ್ಲಿ ನಿಂತ ಪ್ರತಿಯೊಬ್ಬರಿಗೂ ಮುಂದಕ್ಕೆ ಚಲಿಸಬೇಕೆಂಬ ಉದ್ದೇಶವೇ ಇರುತ್ತದೆ. ಆ ಕಾರಣದಿಂದ ವೃಥಾ ಹಾರ್ನ್ ಮಾಡಿ ಯಾಕೆ ಶಬ್ದದ ಗದ್ದಲ ಮಾಡುವುದು? ಈ ಸಮಸ್ಯೆ ದೇಶವ್ಯಾಪಿಯಾಗಿದೆ.
ಇದರಿಂದ ಮಾನಸಿಕ ಕಿರಿಕಿರಿಯಲ್ಲದೇ ಹಲವಾರು ಆರೋಗ್ಯ ಸಂಬಂಧಿ ಸಮಸ್ಯೆಗಳೂ ತಲೆದೋರುತ್ತಿವೆ. ಒಂದು ಮಟ್ಟವನ್ನು ಮೀರಿದ ಶಬ್ದಗಳಿಂದ ನಮ್ಮ ಕಿವಿಯ ಶ್ರವಣ ಸಾಮರ್ಥ್ಯ ಹಾಳಾಗುತ್ತದೆ. ಕೇಳುವ ಶಕ್ತಿ ಕಮ್ಮಿಯಾಗುತ್ತದೆ. ತಲೆನೋವು ಪ್ರಾರಂಭವಾಗಬಹುದು. ಕಿವಿಗಳು ಕಿತ್ತುಹೋಗುವ ರೀತಿಯಲ್ಲಿ ಮೈಕ್ ಗಳನ್ನು ಬಳಸುವುದು, ಸಿನೆಮಾ ಮಂದಿರಗಳಲ್ಲಿ ಹೊಸ ತಂತ್ರಜ್ಞಾನ ಎಂದು ಹೇಳಿಕೊಂಡು ಗೋಡೆಯ ಸುತ್ತೆಲ್ಲಾ ಧ್ವನಿವರ್ಧಕಗಳನ್ನು ಅಳವಡಿಸುವುದು. ಇದರಿಂದ ಹಲವಾರು ಸಲ ನಮಗೆ ಉತ್ತಮ ತಂತ್ರಜ್ಞಾನದ ಫಲ ಸಿಗುವುದೇ ಇಲ್ಲ. ಕೇವಲ ಕರ್ಕಶವಾದ ಧ್ವನಿ ಮಾತ್ರ ಕೇಳುತ್ತದೆ. ಹೀಗೆ ನಿರಂತರವಾಗಿ ಶಬ್ಧವಾಗುತ್ತಿರುವ ಸ್ಥಳದಲ್ಲಿ ಅಧಿಕ ಸಮಯವನ್ನು ಕಳೆಯುವುದರಿಂದ ನಮ್ಮ ಕಿವಿಯ ತಮಟೆಗೆ ಹಾನಿಯಾಗುವ ಸಾಧ್ಯತೆ ಇದ್ದೇ ಇರುತ್ತದೆ. ಉತ್ಸವ ಅಥವಾ ಜಾತ್ರೆಗಳು ನಡೆಯುವ ಸಂದರ್ಭದಲ್ಲಿ ಸಿಡಿಸುವ ಪಟಾಕಿ ಮತ್ತು ವಾದ್ಯಗಳ ಶಬ್ದಕ್ಕೂ ಕಿವಿಯ ಶ್ರವಣ ಸಾಮರ್ಥ್ಯದ ಹಾನಿಯಾಗುತ್ತದೆ. ಅದಕ್ಕಾಗಿಯೇ ಇತ್ತೀಚೆಗೆ ಪಟಾಕಿಯಲ್ಲಿನ ಶಬ್ದದ ಮಿತಿಗೆ ನಿಯಂತ್ರಣ ತಂದಿದ್ದಾರೆ.
ಶಬ್ಧಗಳನ್ನು ‘ಡೆಸಿಬಲ್’ ಎಂಬ ಮಾಪನದಲ್ಲಿ ಅಳೆಯುತ್ತಾರೆ. ಮನುಷ್ಯರು ಗ್ರಹಿಸುವ ಶಬ್ಧದ ಪ್ರಮಾಣ ಸುಮಾರು ೭೦-೮೦ ಡೆಸಿಬಲ್. ಇದ್ದಕಿಂತ ಜಾಸ್ತಿಯಾದರೆ ಬಹಳ ಕಿರಿಕಿರಿಯ ಅನುಭವವಾಗುತ್ತದೆ. ನಾವು ಸಾಮಾನ್ಯವಾಗಿ ಮಾತನಾಡುವ ನುಡಿಗಳು ೪೦-೫೦ ಡೆಸಿಬಲ್ ಮಿತಿಯಲ್ಲಿರುತ್ತವೆ. ಜನದಟ್ಟನೆಯ ಪ್ರದೇಶಗಳಲ್ಲಿ ಇದರ ಪ್ರಮಾಣ ೮೫ ಡೆಸಿಬಲ್ ಮೀರಬಹುದು. ಬಹಳ ತೀವ್ರತೆಯ ಶಬ್ದ ನಮ್ಮ ಕಿವಿಯ ಮೇಲೆ ಬಿದ್ದಾಗ ನಮಗೆ ಅದರ ಅನುಭವ ಆಗದೇ ಇರಲೂ ಬಹುದು. ಏಕೆಂದರೆ ಆ ಶಬ್ಧದ ಪ್ರಮಾಣ ನಮ್ಮ ಕಿವಿಯ ಗ್ರಹಣ ಸಾಮರ್ಥ್ಯಕ್ಕಿಂತ ಅಧಿಕವಾಗಿರುತ್ತದೆ. ೯೦ ಡೆಸಿಬಲ್ ಶಬ್ಧವಿದ್ದರೆ ನಮ್ಮ ಕಿವಿ ಕಿವುಡಾಗುವ ಸಾಧ್ಯತೆ ಇರುತ್ತದೆ. ಸದಾ ಶಬ್ದ ಮಾಡುವ ಕಾರ್ಖಾನೆಯ ಉಪಕರಣಗಳು, ಪಟಾಕಿಯ ಶಬ್ದ ಇವುಗಳಿಂದ ನಿಧಾನವಾಗಿ ಕಿವುಡು ನಮ್ಮನ್ನು ಕಾಡಬಹುದು. ಅತ್ಯಧಿಕ ಶಬ್ದ ಬರುತ್ತಿರುವ ಪ್ರದೇಶದಲ್ಲಿ ನಿರಂತರವಾಗಿ ವಾಸ ಮಾಡುವುದರಿಂದ ಗರ್ಭಿಣಿ ಸ್ತ್ರೀಯರ ಹಾಗೂ ಚಿಕ್ಕ ಮಕ್ಕಳಲ್ಲೂ ಶ್ರವಣ ದೋಷಗಳು ಕಂಡು ಬರುವ ಸಾಧ್ಯತೆ ಇದೆ. ಶಬ್ದದ ಪ್ರಮಾಣ ೧೩೦ ಡೆಸಿಬಲ್ ಮೀರಿದರೆ ಮನುಷ್ಯ ಬುದ್ಧಿಭ್ರಮಣೆಗೆ ಒಳಗಾಗಬಹುದು.
ನಾವು ಈಗ ಸಂವಹನಕ್ಕಾಗಿ ಮೊಬೈಲ್ ಫೋನ್ ಗಳನ್ನು ಬಹಳವಾಗಿ ಉಪಯೋಗಿಸುತ್ತೇವೆ. ಕೆಲವರಂತೂ ಗಂಟೆಗಟ್ಟಲೇ ಮೊಬೈಲ್ ನಲ್ಲಿ ಮಾತನಾಡುತ್ತಾರೆ. ಕಿವಿಗೆ ಅತ್ಯಂತ ಹತ್ತಿರವಾಗಿ ಫೋನ್ ಬಳಸುವುದರಿಂದ ಹಾಗೂ ಅದರ ಶಬ್ದದ ಕಾರಣಗಳಿಂದ ಕಿವಿಯ ದೋಷ ಕಾಣಿಸಿಕೊಳ್ಳಬಹುದು. ಆದುದರಿಂದ ಮೊಬೈಲ್ ಬಳಕೆಯಲ್ಲಿ ಮಿತಿಯಿರಲಿ. ೧೦೦ ಡೆಸಿಬಲ್ ಮೀರುವ ಎಲ್ಲಾ ಶಬ್ದಗಳಿಂದ ನಾವು ದೂರವಿರುವುದು ಉತ್ತಮ.
ಪ್ರಾಕೃತಿಕವಾಗಿ ಕೆಲವು ಶಬ್ದಗಳು ಹುಟ್ಟಿಕೊಳ್ಳುತ್ತವೆ. ಅವುಗಳನ್ನು ತಡೆಯುವುದು ನಮ್ಮ ಕೈಯಲ್ಲಿರುವುದಿಲ್ಲ. ಉದಾಹರಣೆಗೆ ಗುಡುಗು, ಭೂಕಂಪ, ಜ್ವಾಲಾಮುಖಿ ಸ್ಫೋಟ. ಇವುಗಳು ನೈಸರ್ಗಿಕವಾಗಿ ಶಬ್ದ ಹುಟ್ಟಿಸುವ ಕ್ರಿಯೆಗಳು. ಇವುಗಳ ಶಬ್ದಗಳನ್ನು ನಾವು ಕೇಳಿಸಿಕೊಳ್ಳುವುದು ಅನಿವಾರ್ಯ. ಭೂಕಂಪ ಹಾಗೂ ಜ್ವಾಲಾಮುಖಿ ಸ್ಪೋಟಗಳು ಅಪರೂಪಕ್ಕೆ ಸಂಭವಿಸುವ ಕ್ರಿಯೆಗಳು. ಮಳೆಗಾಲದ ಸಂದರ್ಭದಲ್ಲಿ ವಿಪರೀತವಾಗಿ ಸಿಡಿಲು ಬರುತ್ತಿರುವ ಸಂದರ್ಭದಲ್ಲಿ ಆದಷ್ಟು ಮನೆಯ ಒಳಗೇ ಇರುವುದು ಉತ್ತಮ. ಇದರಿಂದಾಗಿ ಸಿಡಿಲಿನ ನಂತರ ಬರುವ ಗುಡುಗಿನ ಶಬ್ದಕ್ಕೆ ನೇರವಾಗಿ ಸಿಲುಕಿಕೊಳ್ಳುವುದು ತಪ್ಪುತ್ತದೆ.
ನಾವು ವಾಸಿಸುವ ಪರಿಸರದಲ್ಲಿ ಸಾಧ್ಯವಾದಷ್ಟು ಗದ್ದಲ ರಹಿತ ವಾತಾವರಣವನ್ನು ನಿರ್ಮಿಸಲು ಪ್ರಯತ್ನಿಸುವ. ವಾಹನದ ಹಾರ್ನ್ ಅನ್ನು ಅಪರೂಪಕ್ಕೆ, ತೀರಾ ಅಗತ್ಯವಿದ್ದಾಗ ಮಾತ್ರ ಬಳಸಿ. ಆಸ್ಪತ್ರೆ, ಶಾಲೆ ಹಾಗೂ ಪ್ರಾರ್ಥನಾ ಸ್ಥಳಗಳಲ್ಲಿ ಹಾರ್ನ್ ಬಳಕೆಯನ್ನು ನಿಯಂತ್ರಿಸಿ. ಮನೆಯಲ್ಲಿ ಅಥವಾ ಸಭಾಭವನಗಳಲ್ಲಿ ಕಾರ್ಯಕ್ರಮಗಳಾದಾಗ ನೀವು ಅಳವಡಿಸುವ ದ್ವನಿವರ್ಧಕಗಳು ಗದ್ದಲವೆಬ್ಬಿಸುವ ಶಬ್ದವಾಗದಂತೆ ನೋಡಿಕೊಳ್ಳಿ. ತಡ ರಾತ್ರಿಗಳಲ್ಲಿ ಧ್ವನಿವರ್ಧಕ ಬಳಸಿ ಸುತ್ತಮುತ್ತಲಿನವರ ನಿದ್ರೆಯ ಜೊತೆ ನೆಮ್ಮದಿಯನ್ನೂ ಹಾಳು ಮಾಡಬೇಡಿ. ಸಾಧ್ಯವಾದಷ್ಟು ಶಬ್ದ ಮಾಲಿನ್ಯವನ್ನು ತಡೆಯುವುದರಿಂದ ಮುಂದಾಗುವ ಆರೋಗ್ಯ ಸಂಬಂಧಿ ಸಮಸ್ಯೆಗಳನ್ನು ತಡೆಯುವತ್ತ ಗಮನ ಹರಿಸೋಣ.
ಚಿತ್ರ ಕೃಪೆ: ಅಂತರ್ಜಾಲ ತಾಣ