ಶರತ್ಪ್ರಭಾತ
ಬಂತು ಬಂತು
ಶರತ್ಪ್ರಭಾತವು
ರಾಗ ರಶ್ಮಿ ಅಜಸ್ರದಿ
ಅರಳಿಸುತ ಶತ
ಹೃದಯ ಶತದಲ
ಕಿರಣ ಕೋಮಲ ವರ್ಷದಿ!
ಹೊಮ್ಮಿತೆಲ್ಲೆಡೆ
ಬಣ್ಣ ಬೆಳಕಿನ
ಕಡಲು ಧರೆಯೊಳಗೊಮ್ಮೆಲೆ!
ಪೈರು ಪಚ್ಚೆಯ
ಮೇಲೆ ಚಿಮ್ಮಿಸಿ
ನಗೆಯ ನಲ್ಮೆಯ ಹೂಮಳೆ!
ಇಳೆಯ ಪುಳಕಿತ
ಹೃದಯ ಹಂಸವೆ
ಧುಮುಕಿತೋ ನಭ ನೀಲಕೆ
ಕಿರಣ ಕಿರಣದ-
ನಂತ ಸಂತಸ
. ಸಾಗರದ ಒಡಲಾಳಕೆ!
ಬೆಳಕ ಹಾಡಿತು
ಬೆಳಕೊಳಾಡಿತು
ಬೆಳಕ ಜಳಕವ ಮಾಡಿತು
ಬೆಳಕಿನಲಿ
ಬೆಳಕಾಗಿ ಅರಳುತ
ಬಾಳ ಬೆಳಕಿನೆ ಕೂಡಿತು!
ಬಾನು ಬುವಿಯಲಿ
ತೆರೆದ ಬೆಳಕಿನ
ನಾಟ್ಯ ಲೀಲಾಜಾಲಕೆ
ಎದ್ದು ಜಗವೇ
ಹೆಜ್ಜೆ ಹಾಕಿದೆ
ಅಂತರಂಗದ ತಾಳಕೆ!
ಬಯಲು ತೆರೆದಿದೆ
ಬೆಳಕು ಕರೆದಿದೆ
ನಮ್ಮ ಬಾಳೊಡನಾಟಕೆ
ಬಣ್ಣ ಬಣ್ಣದ
ಬದುಕು ಬೆರಗಿಗೆ
ಅಂತರಾಳದ ನೋಟಕೆ!
ಬೆಳ್ಳಿ ಮುಗಿಲಲಿ
ಬಾನಸೀಮದಿ
ನಲ್ಮೆ ಯಾನಕೆ ಬನ್ನಿರಿ!
ತಾನ ತಾನದಿ
ಒಸಗೆ ಮಿಡಿದಿದೆ
ಶರದದೊಲುಮೆಯ ಕಿನ್ನರಿ
ನೋಡಿ ನಲಿಯುವ
ತೆರೆದು ನಮ್ಮೆದೆ
ನೆಲದ ಬಾನಿನ ಒಲುಮೆಗೆ
ಎಲ್ಲೆ ಇಲ್ಲದ
ಎಲ್ಲು ಚಿಮ್ಮುವ
. ಹಸಿರು ಹಿಗ್ಗಿನ ಚಿಲುಮೆಗೆ!
ಯಾವುದೀ ಮೈ
ಮನವ ಮರೆಸುವ-
. ಜ್ಞಾತ ಸೌರಭ ಎಲರಲಿ!
ಅಂತರಾಳಕು
ಪುಳಕದೋಕುಳಿ
ಬೆಳಗಿನೀ ಹೊಂಬೆಳಕಲಿ!
ಶರದ ಶುಭ್ರಾ-
ಲೋಕ ಚಿನ್ಮಯ
ಚಿಲುಮೆಯೇ ನಮ್ಮೆದೆಯಲಿ!
ಬಗೆ ಮುಗಿಲ ಕರಿ
ತಿಮಿರ ಕರಗಲು
ಹೆಬ್ಬಳಕು ಬದುಕೊಡಲಲಿ!
ತೆರೆದೆದೆಗೆ ಚಿರ
ಚಿರ ಸುಪ್ರಭಾತವು
ಅಂತರಂಗ ದಿಗಂತದಿ!
ನಿಜದ ನೆಮ್ಮದಿ
ಹೊಂಬೆಳಕ ಸಿರಿ
ಬಾಳ ಪಂಥ ಅನಂತದಿ!
ಚಿತ್ರ ಕೃಪೆ: ಅಂತರ್ಜಾಲ ತಾಣ
