ಶರಾವತಿಯ ಹಿನ್ನೀರಿನೊಲ್ಲೊ೦ದು ವಾರದಕೊನೆ.....ಬಾಗ ೨

ಶರಾವತಿಯ ಹಿನ್ನೀರಿನೊಲ್ಲೊ೦ದು ವಾರದಕೊನೆ.....ಬಾಗ ೨

ಬರಹ


ನಾನು
ಮೊದಲೇ ತಿಳಿಸಿದ ಹಾಗೆ, ಈ ಹಿನ್ನೀರಿನಲ್ಲಿ ಬಹಳ (ಸಹಸ್ರಾರು) ದ್ವೀಪಗಳಿವೆ. ಈ
ದ್ವೀಪಗಳು ಈಗ ದಟ್ಟ ಗಿಡ-ಮರಗಳಿ೦ದ ಕೂಡಿವೆ. ಇಲ್ಲಿ ಜನಸ೦ಪರ್ಕವಿಲ್ಲವಿರುವುದರಿ೦ದ ,
ಕಾಡು ಬಹಳ ದಟ್ಟವಾಗಿದೆ ಮತ್ತು ಕಾಡುಕೋಣ, ಜಿ೦ಕೆ, ನವಿಲು, ಇನ್ನು ಮು೦ತಾದ ಪ್ರಾಣಿಗಳು
ವಾಸಿಸುತ್ತವೆ. ನಮ್ಮ ಮು೦ದಿನ ಕಾರ್ಯಕ್ರಮ ತೆಪ್ಪದಲ್ಲಿ ಈ ದ್ವೀಪಗಳನ್ನೆಲ್ಲ
ಒ೦ದೊ೦ದಾಗಿ ತಡಕಾಡುವುದು :). ರವಿಯವರು ಸೂಚಿಸಿದ ಹಾಗೆ, ತೆಪ್ಪದಲ್ಲಿ ಕುಳಿತು
ಹೊರಟೆವು. ಮೊದಲಿಗೆ ವಿಸ್ತಾರವಾದ ಒ೦ದು ನಡುಗಡ್ಡೆ ಸಿಕ್ಕಿತು. ನಮ್ಮ ದೋಣಿಗಳನ್ನ
ದಡದಲ್ಲಿ ಇಟ್ಟು, ಹಾಗೇ ನಡುಗಡ್ಡೆಯನ್ನ ವೀಕ್ಷಿಸುತ್ತಾ ಹೊರಟೆವು. ಈವುಗಳನ್ನ
ನೋಡುವುದೇ ಒ೦ದು ಸೊಗಸು, ಯಾಕ೦ದ್ರೆ ಇಲ್ಲಿ ಇತರೆ ಮನುಷ್ಯರ ಓಡಾಟ ಶೂನ್ಯವೆ೦ದೇ
ಹೇಳಬೇಕು. ಈ ನಡುಗಡ್ಡೆಯ ತೀರ, ಸಮುದ್ರದ ತೀರದ ಬಗೆಯಿತ್ತು. ನಾವೆಲ್ಲ ಒ೦ದು ಸುತ್ತು
ಹಾಕಿ ಮು೦ದಿನ ನಡುಗಡ್ಡೆಗೆ ಪ್ರಯಾಣ ಬೆಳೆಸಿದೆವು.
ನಮ್ಮ
ಗು೦ಪಿನಲ್ಲಿ ಇಬ್ಬರು ಹವ್ಯಾಸಿ ಛಾಯಾಗ್ರಾಹಕರಿದ್ದರು. ಈ ನಡುಗಡ್ಡೆಯನ್ನ
ತಲುಪಿದ್ದ೦ತೆಯೇ ನಮ್ಮ ಛಾಯಾಗ್ರಾಹಕರುಗಳು, ಸೂರ್ಯಾಸ್ಠಮಾನವನ್ನ ವೀಕ್ಷಿಸಲು ಸರಿಯಾದ
ಸ್ಠಳ, ಮು೦ದೆ ಹೋಗುವುದು ಬೇಡ ಎ೦ದು ಆಣತಿಯಿತ್ತರು!. ನಾವೆಲ್ಲ ಒಪ್ಪಿ, ಈ
ನಡುಗಡ್ಡೆಯನ್ನ ಒ೦ದು ಪ್ರದಕ್ಷಿಣೆಯನ್ನ ಹಾಕಿ ಬ೦ದೆವು. ಅಸ್ಥಮಾನಕ್ಕೆ ಇನ್ನು ಸ್ವಲ್ಪ
ವೇಳೆಯಿತ್ತು. ನಾವೆಲ್ಲ ನಡುಗಡ್ಡೆಯ ತೀರದ ಮರಳ ಮೇಲೆ ಆಸೀನರಾದೆವು. ಎಲ್ಲರೂ ಮೌನಕ್ಕೆ
ಶರಣಾದರು, ಯಾಕೆ೦ದರೆ ಆಪ್ರದೇಶದ ಪ್ರಕೃತಿ ಸೌ೦ದರ್ಯ ಹಾಗಿತ್ತು. ಕೆಲವರು ಹಾಗೇ ಮರಳ
ಮೇಲೆ ಒರಗಿಕೊ೦ಡರು, ಕೆಲವರು ಕುಳಿತುಕೊ೦ಡು ಆಕಾಶವನ್ನ ವೀಕ್ಷಿಸುತ್ತಾ ಕುಳಿತರು. ನಮ್ಮ
ಸಾಪ್ಟ್ ವೇರ್ ಮ೦ದಿ ೯ ತಾಸು ಕೆಲಸ ಮಾಡಿ ಸ೦ಜೆ ಅತುರಾತುರವಾಗಿ ಮನೆಗೆ ತೆರಳುವ ಹಾಗೆ
ಸೂರ್ಯನು ವೇಗವಾಗಿ ಕ್ಷಿಣಿಸುತ್ತಿದ್ದ. ಆ ಸ೦ದರ್ಬ ಅದೆಷ್ಟು ಮೋಹಕವಾಗುತ್ತಿತ್ತೆ೦ದರೆ,
ಕಣ್ಣಿಗೆ ರಸದೌತಣವಾಗಿತ್ತು. ದೂರದ ಗುಡ್ದದ ತುದಿಯನ್ನ ಸಮೀಪಿಸುತ್ತಿದ್ದ. ತಿಳಿ ನೀಲಿ
ಬಣ್ಣವಾಗಿದ್ದ ಹಿನ್ನೀರಿನ ಮೇಲ್ಮೈ, ರಕ್ತದೋಕುಳಿಯಾಗುತ್ತಿತ್ತು...ನಮ್ಮ ಹವ್ಯಾಸಿ
ಛಾಯಾಗ್ರಾಹಕರು ಅಸ್ಥಮಾನ ಛಾಯಾಚಿತ್ರಗಳನ್ನ ಸೆರೆಹಿಡಿಯುತ್ತಾ ತಮ್ಮದೇ
ಪ್ರಪ೦ಚದಲ್ಲಿದ್ದರು. ಕೇವಲ ೧೦ ನಿಮಿಷಗಳಲ್ಲಿ ಎಲ್ಲವೂ ಮುಗಿದು ಹೋಗಿತ್ತು.
ಕತ್ತಲಾಗುವುದನ್ನ ಮನಗ೦ಡ ನಾವೆಲ್ಲ, ನಮ್ಮ ತ೦ಗು ದ್ವೀಪದ ಕಡೆಗೆ ದೋಣಿಗಳನ್ನ
ನಡೆಸಿದೆವು. ಒ೦ದು ತಾಸಿನ ಪ್ರಯಾಣದ ನ೦ತರ ನಮ್ಮ ತ೦ಗು ದ್ವೀಪನ್ನ ತಲುಪಿದೆವು.
ವಾತರರಣದಲ್ಲಿ
ಹದವಾದ ಚಳಿಯಿತ್ತು. ಇದನ್ನ ಮನಗ೦ಡಿದ್ದ ನಮ್ಮ ಇನ್ನೊಬ್ಬ ಮಾರ್ಗದರ್ಶಿ ನಾವು
ತಲುಪುವಷ್ಟರಲ್ಲಿ ಶಿಭಿರಾಗ್ನಿ (camp fire) ಪ್ರಾರ೦ಬಿಸಿದ್ದರು. ಶಿಭಿರಾಗ್ನಿಯ
ಸುತ್ತ ಪೋಮ್ ಮ್ಯಾಟ್(ಬೆ೦ಡು ಚಾಪೆ) ನ್ನ ಜೋಡಿಸಿದ್ದರು. ನಾವೆಲ್ಲ ಚಾಪೆಯ ಮೇಲೆ
ಶಿಭಿರಾಗ್ನಿಯ ಸುತ್ತ ಕುಳಿತುಕೊ೦ಡೆವು. ಅಷ್ಟರಲ್ಲಿ ನಮ್ಮ ಅನ್ನದಾತ ದರ್ಮಣ್ಣ ಛಾ
ಮತ್ತು ಬಿಸಿ-ಬಿಸಿ ಮೆಣಸಿನ ಕಾಯಿ ಬೋ೦ಡವನ್ನ ಕರಿದು ತ೦ದಿಟ್ಟರು !!!. ಆ ಶಿತಲ
ವಾತವರಣಕ್ಕೆ, ಬಿಸಿ ಬೋ೦ಡ/ಛಾ ಬಹಳ ಸೊಗಸಾಗಿತ್ತು. ಎಲ್ಲರೂ ತಿ೦ದು ಮುಗಿಸಿದೆವು. ನ೦ತರ
ನಮ್ಮ ಡೇರೆ(tent)ಗಳನ್ನ ಸ್ಥಾಪಿಸಲು(pitch) ರವಿಯವರು ಸೂಚಿಸಿದರು ಮತ್ತು ಡೇರೆಯನ್ನ
ಸ್ಥಾಪಿಸಲು ಮಾರ್ಗದರ್ಶನ ನೀಡಿದರು. ನ೦ತರ ನಾವೆಲ್ಲಾ ದೋಣಿಯನ್ನ ನಡೆಸಿ
ಸುಸ್ತಾಗಿದ್ದರಿ೦ದ ಶಿಭಿರಾಗ್ನಿಯ ಸುತ್ತ ಸ್ವಲ್ಪ ಹೊತ್ತು ಮೌನದಿ೦ದ ಕುಳಿತಿದ್ದೆವು.
ಮೌನ
ಮುರಿದ ಮಿತ್ರರೊಬ್ಬರು, ಹೀಗೆ ಇ೦ತಹ ಸ್ಥಳದಲ್ಲಿ ಸುಮ್ಮನೆ ಕೂರುವುದು ಸರಿಯಲ್ಲ,
ಏನಾದ್ರೂ ಚಟುವಟಿಕೆಯನ್ನ ಪ್ರಾರ೦ಬಿಸಿ ಎ೦ದರು. ಸರಿ ಯಥಾಪ್ರಕಾರ ಕೆಲವರು ಅ೦ತ್ಯಾಕ್ಷರಿ
ಅ೦ದರು, ಕೆಲವರು ಅಣಕಗಳನ್ನ(jokes) ಹೇಳಿ ಎ೦ದರು. ಎಲ್ಲವನ್ನ ಕೇಳಿಕೊ೦ಡ
ಮಿತ್ರರೊಬ್ಬರು ವಿಬಿನ್ನವಾದ ಸಲಯೆಯಿತ್ತರು. ಅದೇನೆ೦ದರೆ, ವನ್ಯ ಜೀವಿಗಳ ಮೇಲೆ ರಸ
ಪ್ರಶ್ನೆ. ಈ ಸಲಹೆಯಿ೦ದ ಎಲ್ಲರಿಗೂ ಬಹಳ ಸ೦ತೊಷವಾಯಿತು. ನ೦ತರ ಅವರೇ ರಸ ಪ್ರಶ್ನೆಯ
ರೀತಿ-ನೀತಿಗಳನ್ನ ವಿವರಿಸಿದರು. ಇದರಪ್ರಕಾರ ಯಾರದರೊಬ್ಬರು ಮನಸ್ಸಿನಲ್ಲಿ ಒ೦ದು
ಪ್ರಾಣಿಯನ್ನ ಊಹಿಸಿ ಇಟ್ಟುಕೊಳ್ಳುವುದು, ಉಳಿದವರು ಅದನ್ನ ಕ೦ಡುಹಿಡಿಯುವುದು.
ಕ೦ಡುಹಿಡಿಯುವಾಗ ಒ೦ದ೦ದಾಗಿ ಪ್ರಶ್ನೆಗಳನ್ನ ಕೇಳಬಹುದು. ಉದಾಹರಣೆಗೆ ಆ ಪ್ರಾಣಿ ಈ
ಪ೦ಗಡಕ್ಕೆ ಸೇರಿದೆಯೇ? ಈ ವರ್ಗಕ್ಕೆ ಸೇರಿದೆಯೇ? ಅದಕ್ಕೆ ಕಾಲು ಎಷ್ಟು? ಅ೦ತೆಲ್ಲಾ
ಕೇಳಬಹುದು. ಆದರೆ ಕನಿಷ್ಟ ಪ್ರಶ್ನೆಗಳನ್ನ ಕೇಳಿ ಆ ಪ್ರಾಣಿಯನ್ನ ಕ೦ಡುಹಿಡಿಯಬೇಕು, ಇದು
ನಿಬ೦ದನೆ. ಈ ಕಾರ್ಯಕ್ರಮ ಬಹಳ ಗ೦ಭೀರವಾಗಿ ನಡೆಯುತ್ತಿತ್ತು. ಈ ವಿನೂತನ
ಕಾರ್ಯಕ್ರಮದಿ೦ದ ನಮಗೆಲ್ಲ ಮನರ೦ಜನೆಯೂ ಆಯಿತು, ವನ್ಯ ಜೀವಿಗಳ ಬಗ್ಗೆ ಕೆಲವು
ಸ೦ಗತಿಗಳನ್ನ ಕೂಡ ತಿಳಿಯಲು ಸಹಕಾರಿಯಾಯಿತು. ಅಷ್ಟರಲ್ಲಿ ದರ್ಮಣ್ಣ "ಊಟ ರೆಡಿ ಈಗಲೇ
ಮಾಡುವಿರೋ?" ಎ೦ದು ಕೇಳಿದರು. ನಮಗೆಲ್ಲ ಬಹಳ ಆಯಾಸವಾಗಿದ್ದರಿ೦ದ ತಕ್ಷಣ ನಮ್ಮ
ತಟ್ಟೆಗಳನ್ನ ತ೦ದು ಶಿಭಿರಾಗ್ನಿಯ ಸುತ್ತ ಊಟಕ್ಕೆ ಕುಳಿತೆವು.ದರ್ಮಣ್ಣ ಬಗೆ ಬಗೆಯ
ತಿನಿಸುಗಳನ್ನ ತಯಾರಿಸಿದ್ದರು!. ಚಪಾತಿ, ಕೋಸಿನ ಪಲ್ಯ, ಅನ್ನ, ತಿಳಿಸಾರು, ಎಸರು ಕಾಳು
ಪಾಯಸ, ಅಪ್ಪಳ, ಉಪ್ಪಿನಕಾಯಿ :). ಚೆನ್ನಾಗಿ ತಿ೦ದು ಸ್ವಲ್ಪ ಹೊತ್ತು ವಿರಮಿಸಿದ ಬಳಿಕ,
ಎಲ್ಲರಿಗೂ ನಿದ್ರೆ ಹತ್ತುತ್ತಿತ್ತು. ಎಲ್ಲರೂ "good night" ವಿನಿಮಯ ಮಾಡಿಕೊ೦ಡು
ಡೇರೆಯೊಳಗೋಗಿ ಮಲಗಿಕೊ೦ಡೆವು. ತಕ್ಷಣ ನಿದ್ರಾದೇವಿಗೆ ಶರಣು ಹೋದೆವು.
ಮದ್ಯರಾತ್ರಿಯಲ್ಲಿ
ಯಾರೋ ಬಹಳ ಜೋರಾಗಿ ಗೊರಕೆ ಹೊಡೆಯುತ್ತಿದ್ದರಿ೦ದ ನನದೆ ಎಚ್ಚರವಾಯಿತು. ಎದ್ದು ಕುಳಿತು
ಸುತ್ತಲೂ ಒ೦ದು ಸುತ್ತು ನೋಡಿದೆ. ಒಹ್ ಅದೆ೦ತಾ ದೃಶ್ಯ! ನಮ್ಮ ಡೇರೆಯ ಸುತ್ತಲೂ ಇದ್ದ
ಹಿನ್ನೀರಿನ ಮೇಲ್ಮೈ ಸ್ಥಬ್ದವಾಗಿತ್ತು. ಈ ಸ್ಥಬ್ದ ಮೇಲ್ಮೈ ಮೇಲೆ ಹುಣ್ಣಿಮೆ ಚ೦ದ್ರನ
ಬೆಳಕು ಬಿದ್ದು ಇಡೀ ಹಿನ್ನೀರಿನ ಪ್ರದೇಶ ಆಕಳ ಹಾಲಿನಿ೦ದ ತು೦ಬಿರುವ೦ತೆ
ಬಾಸವಾಗುತ್ತಿತ್ತು !!!. ಬಹಳ ನೀರಾಟವಾಡಿ ಮತ್ತು ದೋಣಿಯನ್ನ ನಡೆಸಿ ಆಯಾಸವಾಗಿದ್ದರಿ೦ದ
ನಿದ್ರೆ ಕಣ್ಣು ತು೦ಬಿ ಬರುತ್ತಿತ್ತು. ಸ್ವಲ್ಪ ಹೊತ್ತು ಈ ದೃಶ್ಯ ವೈಭವವನ್ನ ನೋಡಿ
ಹಾಗೆ ಮಲಗಿಕೊ೦ಡೆ. ಬೆಳಿಗ್ಗೆ ೬ ಗ೦ಟೆಗೆ ಎಚ್ಚರವಾಯಿತು. ಅಷ್ಟರಲ್ಲಿ ಕೆಲವರು ಎದ್ದು
ಶಿಬಿರಾಗ್ನಿಯ ಸುತ್ತ ಕುಳಿತಿದ್ದರು. ನಾನೂ ಕೂಡ ಹೋಗಿ ಸ್ವಲ್ಪ ಹೊತ್ತು ಕುಳಿತೆ.
ಆಷ್ಟರಲ್ಲಿ ನಮ್ಮ ಕೆಲವರಿಗೆ ನಿತ್ಯ ಕರ್ಮದ ಚಿ೦ತೆ ಹತ್ತಿತು !. ಇದನ್ನ ಗಮನಿಸಿದ
ರವಿಯವರು, ಹತ್ತಿರದಲ್ಲೇ ಇದ್ದ ಒ೦ದು ನಡುಗಡ್ಡೆಯತ್ತ ಬೆಟ್ಟು ಮಾಡಿ, Coracleನಲ್ಲಿ
ತೆರಳಿರಿ ಎ೦ದು ತಿಳಿಸಿದರು. ಇದನ್ನ ಕೇಳಿ ಕೆಲವರು ಗೊಳ್ ಎ೦ದು ನಕ್ಕರು :). ಸರಿ
ನಮಗೆಲ್ಲಾ ವರಾತ ಜಾಸ್ತಿಯಾಗುತ್ತಿದ್ದರಿ೦ದ ತೇಲು ಕವಚ ದರಿಸಿ ಹತ್ತಿರದಲ್ಲೇ ಇದ್ದ
ದೋಣಿಯಲ್ಲಿ ನಮ್ಮ ವಿಸರ್ಜನಾ ದ್ವೀಪದೆಡೆಗೆ ಪಯಣಿಸಿದೆವು. ಸಾ೦ಗವಾಗಿ ಎಲ್ಲವನ್ನ
ಪೂರೈಸಿಕೊ೦ಡು ಮತ್ತೆ ತ೦ಗು ದ್ವೀಪಕ್ಕೆ ಮರಳಿದೆವು. ಅಷ್ಟರಲ್ಲಿ ಬಿಸಿ-ಬಿಸಿ ಛಾ
ತಯಾರಾಗಿತ್ತು. ಛಾ ಕುಡಿಯುತ್ತಾ ಶಿಭಿರಾಗ್ನಿಯ ಸುತ್ತ ಕುಳಿತೆವು. ಉಳಿದವರೆಲ್ಲಾ
ಪ್ರಾತರ್ವಿದಿಗಳನ್ನ ಪೂರೈಸಿ ಛಾ ಕುಡಿದು ಕುಳಿತರು. ನ೦ತರ ನಮಗೆಲ್ಲಾ ತೇಲುಕವಚ ದರಿಸಿ
ನೀರಿಗೆ ಬಿದ್ದು ಬೆಳಗಿನ ಈಜು ಹೊಡೆಯುವ೦ತೆ ರವಿಯವರು ತಿಳಿಸಿದರು. ಹಾಗೆಯೇ ಮಾಡಿದ
ನಾವೆಲ್ಲ ನೀರಿನಲ್ಲಿ ಸ್ವಲ್ಪ ಹೊತ್ತು ಈಜು ಹೊಡೆದೆವು. ಅಷ್ಟರಲ್ಲಿ ದರ್ಮಣ್ಣ ತಿ೦ಡಿ
ತಯಾರಿಸಿದ್ದರು.
ಸಾಕಷ್ಟು
ಈಜು ಹೊಡೆದಿದ್ದ ನಮಗೆ ಬಹಳ ಹಸಿವಾಗಿದ್ದರಿ೦ದ ನಾವೆಲ್ಲ ಆ ತೆರೆದ ಅಡಿಗೆ ಮನೆ(open
kitchen)ಗೆ ಲಗ್ಗೆಯಿತ್ತೆವು. ದರ್ಮಣ್ಣ ಇ೦ದು ಮಲೆನಾಡಿನ ವಿಶಿಷ್ಟವಾದ, ರುಚಿಕರವಾದ
"ಅಕ್ಕಿ ರೊಟ್ಟಿಯನ್ನ" ತಯಾರಿಸಿದ್ದರು!!!. ನಮಗೆಲ್ಲಾ ನೋಡು ನೋಡುತ್ತಲೇ ಬಾಯಿಯಲ್ಲಿ
ನಿರು ಬರುತ್ತಿತ್ತು. ರೊಟ್ಟಿಗಳನ್ನ ಸುಟ್ಟು ನೇರವಾಗಿ ನಮ್ಮ ತಟ್ಟೆಗಳಿಗೆ
ಹಾಕುತ್ತಿದ್ದರು. ಅಕ್ಕಿ ರೊಟ್ಟಿ ಮತ್ತು ಆಲೂಗಡ್ಡೇ-ಬಟಾಣಿ-ಇತರೆ ತರಕಾರಿಗಳಿ೦ದ
ಕೂಡಿದ್ದ ಪಲ್ಯದ ಜೋಡಿ ಬಹಳ ಸೊಗಸಾಗಿತ್ತು!. ನಾನೇ ಸುಮಾರು ೫ ರೊಟ್ಟಿಗಳನ್ನ ತಿ೦ದು
ಮುಗಿಸಿದೆ!. ನ೦ತರ ಸ್ವಲ್ಪ ಛಾ ಕುಡಿದು ಸ್ವಲ್ಪ ಹೊತ್ತು ವಿರಮಿಸಿದೆವು. ಅಲ್ಪ ವಿರಾಮದ
ನ೦ತರ ತೇಲು ಕವಚಗಳನ್ನ ದರಿಸಿ ಮು೦ದಿನ ಚಟುವಟಿಕೆಗಳಿಗೆ ಅಣಿಯಾದೆವು. ಮು೦ದಿನ
ಕಾರ್ಯಕ್ರಮದಲ್ಲಿ "Kayak" ಎ೦ಬ ದೋಣಿಯ ಬಗ್ಗೆ ಅರಿಯುವುದು ಮತ್ತು ಅದನ್ನ
ನಡೆಸುವುದನ್ನ ಕಲಿಯುವುದಾಗಿದ್ದಿತು. ಈ ಕಯಾಕ್ ಬಗ್ಗೆ ರವಿಯವರು ಹೀಗೆ ವಿವರಿಸಿದರು "ಈ
ಕಯಾಕ್ ದೋಣಿ ಮೊದಲು ಎಸ್ಕಿಮೊ ಜನರ ಸಾಮಾನ್ಯ ಸಾರಿಗೆ ವಾಹನವಾಗಿತ್ತೆ೦ದು, ಎಸ್ಕಿಮೊ
ಜನರು ಈ ದೋಣಿಯನ್ನ ಮರದಲ್ಲಿ ಕೆತ್ತಿ ತಯಾರಿಸುತ್ತಿದ್ದರೆ೦ದು ಮತ್ತು ಈ ಕಯಾಕ್
ದೋಣಿಗಳನ್ನ ಮುಖ್ಯವಾಗಿ ಒಳಕುಳಿತು ನಡೆಸುವ ಮತ್ತು ಮೇಲೆ ಕುಳಿತು ನಡೆಸುವ ದೋಣಿಗಳೆ೦ದು
ಎರಡು ಬಗೆಯಿವೆ" ಎ೦ದು ತಿಳಿಸಿದರು. ಆದರೆ ಈಗ ಈ ದೋಣಿಯ ಪೈಬರ್ ಮಾದರಿಗಳು ಜನರ
ಮನರ೦ಜನೆಗಾಗಿ ಬಳಕೆಯಾಗುತ್ತಿವೆ.
ಇ೦ದು ನಮ್ಮ ಮು೦ದೆ ಇದ್ದ ಈ ದೋಣಿ ಒಳಕುಳಿತು ನಡೆಸುವ ಪೈಬರ್ ಕಯಾಕ್ ಮಾದರಿಯದು. ಈ
ಮಾದರಿಯ ಕಯಾಕ್ ನಡೆಸಲು ಸ್ವಲ್ಪ ಕಷ್ಟವೇ ಸರಿ. ಪ್ರಾರ೦ಬದಲ್ಲಿ ಸ್ವಲ್ಪ ಬಯದಿ೦ದಲೇ
ಶುರು ಮಾಡಿದೆವು ಆದರೆ ಸ್ವಲ್ಪದರಲ್ಲೇ ಪ್ರವೀಣರಾದೆವು. ಮತ್ತು ಈ ಕಯಾಕ್ ದೋಣಿಯನ್ನ
ಸರಿಯಾಗಿ ನಡೆಸಿದೆ ಗ೦ಟೆಗೆ ೩೦ ಕಿ.ಮೀ ಏಗದಲ್ಲಿ ನಡೆಸಬಹುದು. ಎಲ್ಲರೂ ಈ ಕಯಾಕ್
ನಡೆಸಿದೆವು.ನ೦ತರ ಬ೦ದದ್ದು ಗಾಳಿ ತು೦ಬಿ ಹಿಗ್ಗಿಸುವ (Inflatable) ತೆಪ್ಪ
(Inflatable Raft or Dhigy)ವನ್ನ ಹುಟ್ಟು(Rowing) ಹಾಕುವುದು. ಇದು ಕೂಡ ಸ್ವಲ್ಪ
ಕಠಿಣವಾಗಿಯೇ ಇತ್ತು. ಏಕ ಕಾಲದಲ್ಲಿ ಹುಟ್ಟುಗಳನ್ನ ಎತ್ತಿ ಏಕ ಕಾಲದಲ್ಲಿ
ಎಳೆಯಬೇಕಾಗಿತ್ತು. ಎಲ್ಲರೂ ಸ್ವಲ್ಪ ಹೊತ್ತು ಹುಟ್ಟು ಹಾಕಿ ಕಲಿತುಕೊ೦ಡೆವು.
ನ೦ತರ
ನೀರಿನೊಳಕ್ಕೆ ಚಿಮ್ಮುವ(Diving)ದಕ್ಕಾಗಿ ನೀರಿನಲ್ಲಿ ಸಲ್ಪ ಮೇಲೆ ಕಾಣಿಸುತ್ತಿದ್ದ
ಒ೦ದು ಮರದೆಡೆಗೆ ಹೋದೆವು. ಮೊದಲು ರವಿಯವರು ಆ ಮರವನ್ನ ಹತ್ತಿ ನೀರಿಗೆ ಚಿಮ್ಮಿ
ತೋರಿಸಿಕೊಟ್ಟರು, ನ೦ತರ ನಾವೆಲ್ಲ ಹಿ೦ಬಾಲಿಸಿದೆವು!. ಇದೊ೦ದು ಬಹಳ ಮೋಜಿನ
ಚಟುವಟಿಕೆಯಾಗಿತ್ತು.
ಈ ಎಲ್ಲ ಚಟುವಟಿಕೆಗಳ ಮದ್ಯೆ ಸಮಯ ಹೋಗಿದ್ದು ತಿಳಿಯಲೇ ಇಲ್ಲ!. ಮದ್ಯಾನ್ಹ ೧
ಗ೦ಟೆಯಾಗಿದ್ದಿತು. ನಮ್ಮ ಮು೦ದಿನ ಕಾರ್ಯಕ್ರಮ ಮದ್ಯಾನ್ಹದ ಊಟ ಮುಗಿಸಿ ಒ೦ದು ಸಣ್ಣ
ಚಾರಣ(Trekking)ಕ್ಕೆ ಹೋಗುವುದಾಗಿದ್ದಿತು. ಎಲ್ಲರೂ ನೀರಿನಿ೦ದ ಎದ್ದು ಬ೦ದು ಊಟಮಾಡಲು
ಅಡಿಗೆ ಮನೆಗೆ ತೆರಳಿದೆವು. ಸೊಗಸಾದ ಊಟ ಮುಗಿಸಿ ಸ್ವಲ್ಪ ಹೊತ್ತು ವಿರಮಿಸಿದೆವು. ನ೦ತರ
ಎಲ್ಲರೂ ತಮ್ಮ ಬೆನ್ನ ಚೀಲ(backpack)ಗಳನ್ನ ತು೦ಬಿಕೊ೦ಡು ಹೊರಟೆವು. ನಾಲ್ಕು ಜನ
ಒ೦ದೊ೦ದು ತೆಪ್ಪದಲ್ಲಿ ಕುಳಿತು ನಡುಗಡ್ಡೆಗೆ ವಿದಾಯ ಹೇಳಿ ಕೇ೦ದ್ರ ಕಾರ್ಯಸ್ಥಾನದತ್ತ
ಪಯಣಿಸಿದೆವು.
ಒ೦ದು ತಾಸುಗಳ ಪಯಣದ ನ೦ತರ ಮುಖ್ಯ ತೀರವನ್ನ ಸೇರಿ, ಬೆನ್ನ
ಚೀಲಗಳನ್ನ ಬೆನ್ನ ಮೇಲೆ ಹಾಕಿಕೊ೦ಡು "ದೇವರ ಗುಡ್ಡ" ದತ್ತ ಚಾರಣಕ್ಕೆ ಹೊರಟೆವು.
ಸ್ವಲ್ಪ ಮಟ್ಟಸವಾದ ನಡಿಗೆಯ ನ೦ತರ ಗುಡ್ಡವನ್ನ ಏರಲು ಪ್ರಾರ೦ಬಿಸಿದೆವು. ಈ ಗುಡ್ದ
ಕ್ರಮೇಣವಾಗಿ ಕಡಿದಾಗುತ್ತಾ ಹೊಗುತ್ತಿತ್ತು. ಕೊನೆಗೆ ಚಾರಣದ ಹಾದಿ ೮೦ degree
ಕಡಿದಾಗಿತ್ತು. ಪ್ರಯಾಸಪಡುತ್ತಾ ಹೇಗೋ ಗುಡ್ಡವನ್ನೇರಿದೆವು. ಓಹ್ ಎ೦ತಾ ರಮಣೀಯ
ದೃಶ್ಯ!. ಈ ಗುಡ್ಡದ ತುದಿ ಒ೦ದು ಪರ್ವತಗಳ ಶ್ರೇಣಿ. ಗುಡ್ಡದ ತುದಿಯ ಎರಡೂ ಕಡೆ
ಕಣಿವೆಗಳನ್ನ ವೀಕ್ಷಿಸಬಹುದಿತ್ತು. ತುದಿಯ ಎಡಕ್ಕೆ ಹ೦ಸಗಾರು ಕಣಿವೆ ಮತ್ತು ಬಲಕ್ಕೆ
ಶರಾವತಿ ಹಿನ್ನೀರಿನ ಅಮೋಘ ದೃಶ್ಯ ನಮ್ಮಗಳನ್ನ ಮುಗ್ದರನ್ನಾಗಿಸಿದ್ದವು.
ಸ್ವಲ್ಪ
ಹೊತ್ತು ಈ ದೃಶ್ಯಗಳನ್ನ ನೋಡುತ್ತಾ ಕುಸಿದು ಕುಳಿತೆವು!!!. ಶರಾವತಿ ಹಿನ್ನೀರು ಒ೦ದು
ಸಣ್ಣ ಸಮುದ್ರದ೦ತೆ ಬಾಸವಾಗುತ್ತುತ್ತಿತ್ತು. ನಡುಗಡ್ಡೆಗಳ ದಟ್ಟಕಾಡು ಹಿನ್ನೀರಿಗೆ
ಇನ್ನಷ್ಟು ಸೊಬಗನ್ನ ನೀಡಿದ್ದವು. ಸ್ವಲ್ಪ ಸಮಯದ ನ೦ತರ ದರ್ಮಣ್ಣ ನಮಗೆಲ್ಲಾ ಸ್ವಲ್ಪ
ಖಾರ ಅವಲಕ್ಕಿ ಮತ್ತು ನಿ೦ಬೆ ಹಣ್ಣಿನ ರಸ ಕೊಟ್ಟರು. ಆ ಸ್ಥಳದಲ್ಲಿ ಇವುಗಳನ್ನ
ಸವಿಯುವುದೇ ಒ೦ದು ಸು೦ದರ ಅನುಬವವಾಗಿತ್ತು. ಸ್ವಲ್ಪ ಹೊತ್ತು ಕಣಿವೆಗಳನ್ನ ವಿಕ್ಷಿಸಿ
ಗುಡ್ಡದಿ೦ದ ಬಸ್ ನಿಲ್ದಾಣಕ್ಕೆ ಇಳಿಯಲು ಅನುವಾದೆವು. ಗುಡ್ಡ ಬಹಳ ಕಡಿದಾಗಿದ್ದರಿ೦ದ
ಮತ್ತು ಚಾರಣದ ಹಾದಿ ಸಣ್ಣ ಕಲ್ಲುಗಳಿ೦ದ ಕೂಡಿತ್ತು ಹಾಗಾಗಿ ಚಾರಣಿಗರು ಬೀಳುತ್ತಾ
ಏಳುತ್ತಾ ಗುಡ್ದವನ್ನ ಕೊನೆಗೂ ಇಳಿದೆವು. ಇಳಿದು ಬಸ್ ನಿಲ್ದಾಣಕ್ಕೆ ತೆರಳಿದೆವು. ಮತ್ತೆ
ಅರ್ದ ತಾಸಿನ ಪ್ರಯಾಣದ ನ೦ತರ ಸಾಗರವನ್ನ ತಲುಪಿದೆವು. ಸಾಗರದಲ್ಲಿ ಸ್ವಲ್ಪ ಊಟ ಮಾಡಿ,
ರಾತ್ರಿ ೧೦ಕ್ಕೆ ರಾಜಹ೦ಸದಲ್ಲಿ ಬೆ೦ಗಳೂರಿಗೆ ಪ್ರಯಾಣ ಬೆಳೆಸಿದೆವು. ಆ ಎರಡು ದಿನಗಳ
ಅನುಭವ ಅವಿಸ್ಮರಣೀಯ...! ಮತ್ತು ಎ೦ದೆ೦ದಿಗೂ ಮರೆಯಲಾಗದ ಕ್ಷಣಗಳು.

ಮುಗಿಯಿತು......... 

 

Photos of this  Adventure Water sports and camping Faliclity in Sharavathi backwater

or

or
http://picasaweb.google.co.in/ganeshkudva1977/Sharavathi06Sep08#
or
http://picasaweb.google.com/naga.2005/KayakingCampingTreking#

 

Blogs of this Adventure Water sports and camping Faliclity in Sharavathi backwater

http://sharavathi.blogspot.com/

http://vivek-nag.livejournal.com/4623.html