ಶಸ್ತ್ರಾಸ್ತ್ರಗಳನ್ನೇ ಬೆನ್ನುಮೂಳೆಯನ್ನಾಗಿಸಿದ ದಧೀಚಿ
ದಧೀಚಿ ಬಹಳ ಖ್ಯಾತಿಯನ್ನು ಪಡೆದ ಋಷಿ. ಇವರು ಅಥರ್ವ ವೇದವನ್ನು ಬರೆದ ಅಥರ್ವಣ ಹಾಗೂ ಕ್ಷಿತಿ ಇವರ ಸುಪುತ್ರ. ದಧೀಚಿ ಎಂದರೆ ಮೊಸರಿನಿಂದ ಶಕ್ತಿಯನ್ನು ಪಡೆದುಕೊಳ್ಳುವ ದೇಹದ ಭಾಗಗಳು ಎಂಬ ಅರ್ಥ ಬರುತ್ತದೆ. ದಧೀಚಿಯು ಬಹಳ ವರ್ಷಗಳ ಕಾಲ ತಪಸ್ಸು ಮಾಡಿ ಅನೇಕ ಸಿದ್ಧಿಗಳನ್ನು ಪಡೆದುಕೊಳ್ಳುತ್ತಾರೆ. ಆದರೆ ಅವರಿಗೆ ಬ್ರಹ್ಮ ವಿದ್ಯೆ ಹಾಗೂ ಪ್ರವರ್ಗ ವಿದ್ಯೆಯನ್ನು ಕಲಿಯಲು ಸಾಧ್ಯವಾಗಲಿಲ್ಲ. ಈ ಹಂಬಲವನ್ನು ದೇವರಾಜ ಇಂದ್ರನಲ್ಲಿ ಭಿನ್ನವಿಸಿಕೊಂಡಾಗ ಆತನು ಒಂದು ಷರತ್ತಿನ ಮೇಲೆ ಅದನ್ನು ಕಲಿಸಲು ಒಪ್ಪಿಕೊಂಡ. ಆ ಷರತ್ತೆಂದರೆ ದಧೀಚಿಗೆ ಕಲಿಸಿದ ಬ್ರಹ್ಮವಿದ್ಯೆಯನ್ನು ಆತ ಬೇರೆ ಯಾರಿಗೂ ಉಪದೇಶಿಸುವಂತಿಲ್ಲ. ಹಾಗೂ ಇಂದ್ರನ ಮಾತು ಮೀರಿ ಕಲಿಸಿದಲ್ಲಿ ತಲೆಯನ್ನು ಕತ್ತರಿಸಲಾಗುವುದು. ಈ ಷರತ್ತಿಗೆ ದಧೀಚಿ ಮುನಿಗಳು ಒಪ್ಪಿಕೊಳ್ಳುತ್ತಾರೆ. ಇಂದ್ರನು ಅವರಿಗೆ ಈ ವಿದ್ಯೆಯನ್ನು ಕಲಿಸುತ್ತಾನೆ.
ಈ ವಿಷಯ ದೇವತೆಗಳಾದ ಅಶ್ವಿನಿ ಕುಮಾರರಿಗೆ ತಿಳಿದು ತಾವೂ ಈ ವಿದ್ಯೆಯನ್ನು ಕಲಿಯಬೇಕೆಂಬ ಹೆಬ್ಬಯಕೆಯಿಂದ ದಧೀಚಿ ಮುನಿಗಳ ಬಳಿ ಬರುತ್ತಾರೆ. ಮುನಿಗಳು ಕಲಿಸುವುದು ನನಗೂ ಇಷ್ಟ. ಆದರೆ ನಾನು ಕಲಿಸಿದ್ದಲ್ಲಿ ನನ್ನ ತಲೆಯನ್ನು ಕತ್ತರಿಸುತ್ತೇನೆಂದು ಇಂದ್ರನು ಹೇಳಿರುವನು ಎನ್ನುತ್ತಾರೆ. ನಂತರ ದಧೀಚಿ ಮುನಿಗಳು ತಮ್ಮಲ್ಲೇ ಯೋಚಿಸುತ್ತಾರೆ “ ಗುರುಗಳು ಎಂದ ಬಳಿಕ ತಾವು ಕಲಿತ ವಿದ್ಯೆಯನ್ನು ಬೇರೆಯವರಿಗೆ ಉಪದೇಶಿಸಬೇಕು. ಇಲ್ಲವಾದರೆ ಆ ವಿದ್ಯೆಯ ಉಪಯೋಗವೇನು? ನಾನು ಕಲಿತ ಬ್ರಹ್ಮ ವಿದ್ಯೆ ಇತರರಿಗೂ ಉಪಕಾರ ಆಗಲೇ ಬೇಕು. ಆಗಲೇ ಅದಕ್ಕೆ ಸಾರ್ಥಕ್ಯ ಸಿಗುವುದು". ಹೀಗೆ ಆಲೋಚಿಸಿದ ಮುನಿಗಳು ಅಶ್ವಿನಿ ದೇವತೆಗಳಿಗೆ ವಿದ್ಯೆಯನ್ನು ಕಲಿಸಲು ಒಪ್ಪುತ್ತಾರೆ. ತಮ್ಮ ಕೋರಿಕೆಯಿಂದ ಮುನಿಗಳ ತಲೆ ಕಡಿಯಲ್ಪಡುವುದು ಅಶ್ವಿನಿ ದೇವತೆಗಳಿಗೆ ಇಷ್ಟವಿರಲಿಲ್ಲ. ಅದಕ್ಕಾಗಿ ಅವರು ಒಂದು ಉಪಾಯ ಮಾಡುತ್ತಾರೆ.
ಅವರು ಮುನಿಗಳಲ್ಲಿ ಹೇಳುತ್ತಾರೆ “ ನಿಮ್ಮಂತಹ ನಿಸ್ವಾರ್ಥ ಮುನಿಗಳು ನಮಗೆ ಗುರುವಾಗಿ ದೊರೆತದ್ದು ನಮ್ಮ ಪುಣ್ಯ. ಆದರೆ ನಮಗೆ ವಿದ್ಯೆ ಕಲಿಸುವ ನೆಪದಲ್ಲಿ ನಿಮ್ಮ ಪ್ರಾಣಹರಣವಾಗುವುದು ನಮಗೆ ಒಪ್ಪಿತವಲ್ಲ. ಅದಕ್ಕಾಗಿ ನಾವು ಒಂದು ಉಪಾಯ ಮಾಡಿದ್ದೇವೆ.” ಎನ್ನುತ್ತಾರೆ. ಅದರಂತೆ ಮೊದಲಿಗೆ ಮುನಿಗಳ ಬಳಿ ಬ್ರಹ್ಮ ವಿದ್ಯೆಯನ್ನು ಕಲಿಯುತ್ತಾರೆ. ನಂತರ ಮುನಿಗಳ ತಲೆಯನ್ನು ಸುರಕ್ಷಿತ ಜಾಗದಲ್ಲಿ ಅಡಗಿಸಿಟ್ಟು, ಅವರ ತಲೆಯ ಬದಲಾಗಿ ಅಶ್ವ (ಕುದುರೆ) ಒಂದರ ತಲೆಯನ್ನು ಜೋಡಿಸುತ್ತಾರೆ. ತನ್ನ ಮಾತನ್ನು ಮೀರಿದ ವಿಷಯ ಇಂದ್ರನಿಗೆ ತಿಳಿದು ಕ್ರೋಧಿತನಾಗಿ ಮುನಿಗಳ ಆಶ್ರಮಕ್ಕೆ ಬಂತು ಆತನ ತಲೆಯನ್ನು ಕಡಿಯುತ್ತಾನೆ. ಕುದುರೆಯ ತಲೆ ಕಡಿಯಲಾಗುತ್ತಿದ್ದಂತೆ ಅಶ್ವಿನಿ ಕುಮಾರರು ಅಲ್ಲಿ ತಾವು ಅಡಗಿಸಿಟ್ಟಿದ್ದ ಮುನಿಗಳ ತಲೆಯನ್ನು ಜೋಡಿಸಿ ಬಿಡುತ್ತಾರೆ. ನಂತರ ಅವರಿಗೆ ಪುನರ್ಜೀವ ನೀಡಲಾಗುತ್ತದೆ. ಅಶ್ವಿನಿ ದೇವತೆಗಳಿಗೆ ವಿದ್ಯೆಯನ್ನು ಕಲಿಸಿದ ಬಳಿಕ ಮಹರ್ಷಿಗಳು ತಮ್ಮ ದೈನಂದಿನ ಕಾರ್ಯದಲ್ಲಿ ಮಗ್ನರಾಗುತ್ತಾರೆ.
ದಧೀಜಿ ಮಹರ್ಷಿಯ ಮೇಲೆ ದೇವತೆಗಳಿಗೆ ವಿಪರೀತ ವಿಶ್ವಾಸವಿತ್ತು. ಒಮ್ಮೆ ದೇವತೆಗಳೆಲ್ಲಾ ಸೇರಿ ದಧೀಜಿ ಮುನಿಯ ಆಶ್ರಮಕ್ಕೆ ಬರುತ್ತಾರೆ. “ಮಹರ್ಷಿ, ನಿಮ್ಮೆಲ್ಲಾ ಸಾಧುಸಂತರ ಆಶೀರ್ವಾದದಿಂದಾಗಿ ಈಗ ರಾಕ್ಷಸರ ಹಾವಳಿ ತುಂಬಾ ಕಡಿಮೆಯಾಗಿದೆ. ದೇವಲೋಕದೆಲ್ಲೆಡೆ ಶಾಂತಿ ನೆಲೆಸಿದೆ. ಈ ಕಾರಣದಿಂದ ನಮಗೆ ಈಗ ನಮ್ಮ ಶಸ್ತ್ರಾಸ್ತ್ರಗಳು ಅಗತ್ಯವಿಲ್ಲ. ಇವುಗಳು ಬಹು ಪ್ರಬಲವಾದ ಅಸ್ತ್ರಗಳಾದುದರಿಂದ ಎಲ್ಲೆಲ್ಲೋ ಇಡಲಾಗದು. ಈ ಕಾರಣದಿಂದ ನಾವು ನಿಮ್ಮ ಬಳಿಗೆ ಬಂದಿದ್ದೇವೆ. ತಾವು ಈ ಅಸ್ತ್ರಗಳ ರಕ್ಷಣೆ ಮಾಡಬೇಕು. ಭವಿಷ್ಯದಲ್ಲಿ ನಮಗೆ ಬೇಕಾದಾಗ ಪಡೆದುಕೊಳ್ಳುತ್ತೇವೆ.” ಎಂದರು. ಮಹರ್ಷಿಗಳು ನಿಮ್ಮ ಇಚ್ಛೆಯಂತೆಯೇ ಆಗಲಿ ಎಂದರು. ಕಾಲ ಕಳೆದಂತೆ ಮುನಿಗಳಿಗೆ ಈ ಶಸ್ತ್ರಗಳನ್ನು ರಕ್ಷಿಸುವುದು ಒಂದು ತಲೆನೋವಾಯಿತು. ಅದಕ್ಕಾಗಿ ಅವರು ಒಂದು ಉಪಾಯ ಮಾಡಿದರು. ಆ ಅಸ್ತ್ರಗಳನ್ನೆಲ್ಲಾ ತಮ್ಮ ಮಂತ್ರದ ಪ್ರಭಾವದಿಂದ ಗಂಗಾ ನದಿಯ ತೀರ್ಥದಲ್ಲಿ ಮುಳುಗಿಸಿ, ಕರಗಿಸಿ ಕುಡಿದು ಬಿಟ್ಟರು. ಇನ್ನು ಯಾರೂ ಕದಿಯುವಂತೆಯೂ ಇಲ್ಲ, ಮುನಿಗಳ ನೆಮ್ಮದಿಗೆ ಭಂಗ ಬರುವಂತೆಯೂ ಇಲ್ಲ.
ಸ್ವಲ್ಪ ಸಮಯದ ನಂತರ ರಾಕ್ಷಸ ರಾಜ ವೃತಾಸುರನ ಹಾವಳಿ ದೇವಲೋಕದಲ್ಲಿ ಬಹಳ ಹೆಚ್ಚಾಯಿತು. ಆತನಿಗೆ ಮೂರೂ ಲೋಕದಲ್ಲಿರುವ ಯಾವುದೇ ನಿರ್ಮಿತ ಅಸ್ತ್ರದಿಂದ ಮರಣ ಸಂಭವಿಸದಂತೆ ವರ ದೊರೆತಿತ್ತು. ದೇವತೆಗಳು ರಕ್ಷಣೆಗಾಗಿ ಬ್ರಹ್ಮನ ಮೊರೆ ಹೋದಾಗ ಬ್ರಹ್ಮನು ಇದೇ ವಿಷಯವನ್ನು ಅವರಿಗೆ ಮನದಟ್ಟು ಮಾಡಿ, “ನೀವು ದಧೀಜಿ ಮುನಿಗಳ ಬಳಿ ಹೋಗಿ ನಿಮ್ಮ ಅಸ್ತ್ರಗಳನ್ನು ಕೇಳಿ, ಆಗ ಅವರು ವೃತಾಸುರನ ಸಮಸ್ಯೆಗೆ ಖಂಡಿತಾ ಪರಿಹಾರ ತಿಳಿಸುತ್ತಾರೆ” ಎಂದರು.
ಅದರಂತೆ ದೇವತೆಗಳು ದಧೀಜಿ ಮುನಿಗಳ ಬಳಿ ಬಂದರು. ”ದೇವತೆಗಳು ನೀಡಿದ ಅಸ್ತ್ರಗಳನ್ನು ಕುಡಿದೇ ಬಿಟ್ಟಿರುವುದರಿಂದ ಅವುಗಳು ತಮ್ಮ ಬೆನ್ನು ಮೂಳೆಗಳಲ್ಲಿ ನೆಲೆ ನಿಂತಿವೆ. ಆದುದರಿಂದ ತಮ್ಮ ಬೆನ್ನು ಮೂಳೆಯನ್ನು ಬಳಸಿ ಆಯುಧ ತಯಾರಿಸಿದರೆ ಅದರಿಂದ ವೃತನ ಅಂತ್ಯ ಸಾಧ್ಯ. ಏಕೆಂದರೆ ಈ ಆಯುಧವು ಹೊರ ಪ್ರಪಂಚದ ಯಾವುದೇ ವಸ್ತುವನ್ನು ಬಳಸಿ ತಯಾರಾಗಿಲ್ಲ" ಎಂದು ಅಭಯವನ್ನು ನೀಡಿದರು ದಧೀಚಿ.
ಜೀವಂತವಿರುವಾಗಲೇ ಮುನಿಗಳ ಬೆನ್ನುಮೂಳೆಯನ್ನು ತೆಗೆಯುವುದು ಹೇಗೆ? ಎಂಬ ಜಿಜ್ಞಾಸೆ ಎಲ್ಲಾ ದೇವತೆಗಳಲ್ಲಿ ಕಾಡತೊಡಗಿತು. ಅವರ ಚಿಂತೆಯನ್ನು ತಿಳಿದುಕೊಂಡ ದಧೀಚಿ “ನನ್ನನ್ನು ಕೊಂದು ಬೆನ್ನು ಮೂಳೆಗಳನ್ನು ಹೇಗೆ ತೆಗೆಯುವುದು ಎಂಬ ಚಿಂತೆಯಲ್ಲಿರುವಿರಾ? ಚಿಂತಿಸಬೇಡಿ. ನಾನು ಯೋಗ ಶಕ್ತಿಯಿಂದ ಈ ಲೋಕವನ್ನು ತ್ಯಜಿಸುತ್ತೇನೆ. ಬಳಿಕ ತಾವುಗಳು ನನ್ನ ಮೂಳೆಗಳನ್ನು ಬಳಸಿ ಶಸ್ತ್ರವನ್ನು ತಯಾರಿಸಿ" ಎಂದರು.
ದಧೀಚಿ ಮುನಿಗಳು ಲೋಕ ಕಲ್ಯಾಣಕ್ಕಾಗಿ ಯೋಗಶಕ್ತಿಯಿಂದ ಪ್ರಾಣವನ್ನು ತ್ಯಜಿಸಿ ಭಗವಂತನಲ್ಲಿ ಲೀನವಾದರು. ಆದರೆ ಮಹರ್ಷಿಯ ಶರೀರದಿಂದ ಮಾಂಸವನ್ನು ಬೇರ್ಪಡಿಸಿ ಮೂಳೆಗಳನ್ನು ಹೊರತೆಗೆಯುವುದು ಹೇಗೆ? ಎಂಬ ಪ್ರಶ್ನೆ ಹುಟ್ಟಿಕೊಂಡಿತು. ಕಡೆಗೆ ಇಂದ್ರದೇವನು ಕಾಮಧೇನು ಗೋವನ್ನು ಕರೆದು ಈ ವಿಷಯ ಭಿನ್ನವಿಸಿಕೊಂಡಾಗ ಅದು ಮುನಿಯ ಮೈಯನ್ನು ನೆಕ್ಕುತ್ತಾ, ನೆಕ್ಕುತ್ತಾ ಮೂಳೆಯನ್ನು ಮಾಂಸದಿಂದ ಬೇರ್ಪಡಿಸಿತು. ನಂತರ ದೊರೆತ ದಧೀಚಿಯ ಬೆನ್ನು ಮೂಳೆಯಿಂದ ವಜ್ರಾಯುಧವನ್ನು ತಯಾರಿಸಿ, ಇಂದ್ರನು ವೃತಾಸುರನನ್ನು ಹತ ಮಾಡಿದ.
(ಆಧಾರ)
ಚಿತ್ರ ಕೃಪೆ: ಅಂತರ್ಜಾಲ ತಾಣ