ಶಸ್ತ್ರಾಸ್ತ್ರಗಳ ರಫ್ತಿನಲ್ಲಿ ತ್ರಿವಿಕ್ರಮ

ಶಸ್ತ್ರಾಸ್ತ್ರಗಳ ರಫ್ತಿನಲ್ಲಿ ತ್ರಿವಿಕ್ರಮ

ಭಾರತದ ಬತ್ತಳಿಕೆಯಲ್ಲಿರುವ ಯುದ್ಧವಾಹನಗಳು, ಸಮರ ಉಪಕರಣಗಳನ್ನು ಜಾಲಾಡಿದರೆ ಅವುಗಳಲ್ಲಿ  ವಿದೇಶ ಮೂಲದ್ದೇ ಅತ್ಯಧಿಕ ಎಂಬ ಮಾತುಗಳು ಚಾಲ್ತಿಯಲ್ಲಿದ್ದವು. ಅಮೇರಿಕ, ಜರ್ಮನಿ, ಫ್ರಾನ್ಸ್, ಇಸ್ರೇಲ್, ಜಪಾನ್, ರಷ್ಯಾದಂಥ ಬಲಿಷ್ಟ ಮತ್ತು ಮುಂದುವರಿದ ರಾಷ್ಟ್ರಗಳು ನಿರ್ಮಿಸಿದ ಮತ್ತು ಬಳಸಿದ ರಕ್ಷಣಾ ಸರಕುಗಳನ್ನು ಹಿಡಿದು, ನಮ್ಮ ಯೋಧರು ಗಡಿ ಪ್ರದೇಶಗಳಲ್ಲಿ ಕಾವಲು ಕಾಯುವ ಪರಿಸ್ಥಿತಿ ಹಿಂದೆ ಇತ್ತು. ಸಾಧನಗಳ ವಿದೇಶಿ ಮಾರಾಟದಲ್ಲಿ ಹೊಸ ಶಕೆಯೊಂದು ಉದಯಿಸಿದೆ. ಶಸ್ತ್ರಾಸ್ತ್ರಗಳ ರಫ್ತಿನಲ್ಲಿ ಭಾರತ ವಿಕ್ರಮ ಸಾಧಿಸಿದ್ದು ಕಳೆದ ಆರ್ಥಿಕ ವರ್ಷಗಳಲ್ಲಿ ೧೩ ಸಾವಿರ ಕೋಟಿ ಗಳಿಕೆ ಕಂಡಿರುವುದು ಹೆಮ್ಮೆಯ ವಿಚಾರ.

ಸ್ವಾತಂತ್ರ್ಯ ಸಿಕ್ಕ ಆರಂಭದಲ್ಲಿ ದೇಶ ಎದುರಿಸಿದ ಕೆಲವು ಯುದ್ಧಗಳಲ್ಲಿ ರಷ್ಯಾದಂತಹ ರಾಷ್ಟ್ರಗಳು ಬಳಸಿದ ಸೆಕೆಂಡ್ ಹ್ಯಾಂಡ್ ಸಾಧನಗಳೇ ಹೆಚ್ಚಿನ ಪ್ರಮಾಣದಲ್ಲಿದ್ದವು. ಆಗಿನ್ನೂ ಎಚ್ ಎ ಎಲ್. ಡಿ ಆರ್ ಡಿ ಒ ಸಂಸ್ಥೆಗಳು ಅಷ್ಟು ಪ್ರವರ್ಧಮಾನಕ್ಕೂ ಬಂದಿರಲಿಲ್ಲ. ಕಾಲಕ್ರಮೇಣ ಯುಎಸ್ ಎಸ್ ಆರ್ (ಈಗಿನ ರಷ್ಯಾ), ಬ್ರಿಟನ್ ನಂಥ ಅನ್ಯರಾಷ್ಟ್ರಗಳ ಸಹಕಾರದಿಂದ, ಲೈಸೆನ್ಸ್ ಆಧಾರದಲ್ಲಿ ಅಲ್ಲಿನ ಉತ್ಪನ್ನಗಳನ್ನು ಇಲ್ಲಿಗೆ ತಂದು ಜೋಡಿಸಿ, ಯುದ್ಧವಾಹನ ನಿರ್ಮಿಸುವ ಚಾಣಾಕ್ಷತೆಯನ್ನು ನಮ್ಮ ರಕ್ಷಣಾ ಸಂಸ್ಥೆಗಳು ಸಿದ್ದಿಸಿಕೊಂಡವು. ಇದೇ ಪದ್ಧತಿ ರೂಢಿಯಾಗಿ ನಮ್ಮ ರಕ್ಷಣಾ ಬಜೆಟ್ ಗೆ ಭಾರವೂ ಆಯಿತು. ಆದಾಗ್ಯೂ ಹಿಂದಿನ ಸರಕಾರಗಳು ಈ ಬಗ್ಗೆ ಅಹ್ಟಾಗಿ ಗಮನ ಕೊಡಲೇ ಇಲ್ಲ.

ಎನ್ ಡಿ ಎ ಸರಕಾರ ಕೂಡ ಆರಂಭದಲ್ಲಿ ಈ ಬಗ್ಗೆ ಚಿತ್ತಹರಿಸಿರಲಿಲ್ಲ. ಆದರೆ, ಕೋವಿಡ್ ಸಂದರ್ಭದಲ್ಲಿ ವಿದೇಶಿ ವಸ್ತುಗಳ ಪೂರೈಕೆ ನಿಂತು ಹೋದಾಗ ಅದರ ಬಿಸಿ ಸಹಜವಾಗಿ ರಕ್ಷಣಾ ರಂಗಕ್ಕೂ ತಟ್ಟಿತು. ಇನ್ನೊಂದೆಡೆ, 'ಬಗಲ್ ಮೇ ಶತ್ರು ಹೈ' ಎನ್ನುವಂತೆ ಚೀನಾ ಕಾಲ್ಕೆರೆದು ಜಗಳಕ್ಕೆ ಬಂದಾಗ ರಕ್ಷಣಾ ಉತ್ಪನ್ನಗಳ ಸ್ವಾವಲಂಬನೆ ಅಗತ್ಯ ಮತ್ತಷ್ಟು ತೀವ್ರವಾಯಿತು. ಈ ಅನಿವಾರ್ಯತೆಯೇ ಆತ್ಮ ನಿರ್ಭರದ ಒಂದು ಭಾಗವಾಗಿ, ಇಂದು ರಕ್ಷಣಾ ಇಲಾಖೆಯನ್ನು ಮೇಲ್ಪಂಕ್ತಿಗೇರಿಸಿದೆ ಎಂಬುದು ಉತ್ಪ್ರೇಕ್ಷೆಯಲ್ಲ. ಯುದ್ಧೋಪಕರಣ ಕಾರ್ಖಾನೆಗಳು 'ನೈನ್ ಟು ಫೈವ್' ಸಿದ್ಧ ಸೂತ್ರದಂತೆ ಕೆಲಸ ಮಾಡುವುದು ಬಿಟ್ಟು ವೇಗದಿಂದ ಮತ್ತು ದಿನದ ಹೆಚ್ಚಿನ ತಾಸುಗಳವರೆಗೆ ಕಾರ್ಯನಿರ್ವಹಿಸುವಂತೆ ಮಾಡುವಲ್ಲಿ ರಕ್ಷಣಾ ಸಚಿವರ ಕೊಟ್ಟ ಸೂಚನೆಗಳೂ ಕಾರಣವಾಗಿವೆ. ಖಾಸಗಿ ಉದ್ಯಮಗಳು, ಸ್ಟಾರ್ಟ್ ಅಪ್ ಗಳೂ ರಕ್ಷಣಾ ವಸ್ತುಗಳ ಉತ್ಪಾದನಾ ರಂಗ ಪ್ರವೇಶಿಸಿದ್ದು, ಸಾರ್ವಜನಿಕ ಉದ್ದಿಮೆಗಳನ್ನು ಚುರುಕುಗೊಳಿಸಿವೆ. ಇದೆಲ್ಲದರ ಫಲವಾಗಿ ೧೩ ಸಾವಿರ ಕೋಟಿ ಮೊತ್ತದ ರಫ್ತು ವಹಿವಾಟು ರಕ್ಷಣಾ ರಂಗದಲ್ಲಿ ಆಗಿದೆ. ಈ ಪೈಕಿ ಶೇ.೭೦ರಷ್ಟು ಅಗತ್ಯ ವಸ್ತುಗಳನ್ನು ಖಾಸಗಿ ಕಂಪೆನಿಗಳು ಪೂರೈಸಿದ್ದರೆ, ಶೇ ೩೦ರಷ್ಟು ಉತ್ಪನ್ನಗಳನ್ನು ಸಾರ್ವಜನಿಕ ಉದ್ದಿಮೆಗಳು ಪೂರೈಸಿವೆ.

ರಕ್ಷಣಾ ಸ್ಟಾರ್ಟ್ ಅಪ್ ಗಳಿಗೆ ಸರಕಾರ ನೀಡಿದ ಉತ್ತೇಜನ, ಖಾಸಗಿ ಕಂಪೆನಿಗಳ ಸಹಭಾಗಿತ್ವವನ್ನು ಸ್ವಾಗತಿಸಿದ್ದರಿಂದಾಗಿಯೂ ಇಲಾಖೆಯಲ್ಲಿ ಆತ್ಮನಿರ್ಭರ ಕನಸು ಬಲು ಬೇಗನೆ ಕೈಗೂಡಿರಬಹುದು. ಇದರಿಂದ ಉದ್ಯೋಗಗಳೂ ಸೃಷ್ಟಿಯಾಗಿವೆ. ಆದರೆ, ಕೇಂದ್ರ ಸರಕಾರ ಇಷ್ಟಕ್ಕೇ ಉಬ್ಬಿಹೋಗಲೂ ಬಾರದು. ರಕ್ಷಣಾ ಸಲಕರಣೆಗಳ ಉತ್ಪಾದನೆಯಲ್ಲಿ ಗುಣಮಟ್ಟ ಕಾಯ್ದುಕೊಳ್ಳುವಿಕೆ ಅತ್ಯಂತ ಮಹತ್ವದಾಯಕ. ದೇಶಕ್ಕೆ ಇದು ಪ್ರತಿಷ್ಟೆಯ ವಿಚಾರ ಕೂಡ. ಭಾರತದ ರಕ್ಷಣಾ ಉತ್ಪನ್ನಗಳು ನಂಬಿಕೆ ಅರ್ಹ ಎನ್ನುವ ವಿಶ್ವಾಸಾರ್ಹತೆ ಸೃಷ್ಟಿಯಾಗಿ ಅಮೇರಿಕ, ರಷ್ಯಾ, ಫ್ರಾನ್ಸ್, ಇಸ್ರೇಲ್ ನಂಥ ಮುಂಚೂಣಿ ರಫ್ತುದಾರ ರಾಷ್ಟ್ರಗಳ ಸಾಲಿನಲ್ಲಿ ನಿಲ್ಲುವಂತಾಗಬೇಕು. ಆ ನಂಬಿಕೆ ಉಳಿಸಿಕೊಂಡರಷ್ಟೇ 'ಆತ್ಮ ನಿರ್ಭರ' ಮಾತಿಗೂ ಅರ್ಥ.

ಕೃಪೆ: ವಿಜಯ ಕರ್ನಾಟಕ, ಸಂಪಾದಕೀಯ, ದಿ: ೧೧-೦೭-೨೦೨೨  

ಚಿತ್ರ ಕೃಪೆ: ಅಂತರ್ಜಾಲತಾಣ